ಬೆಂಗಳೂರು
ಸಚಿವ ಈಶ್ವರ ಖಂಡ್ರೆ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ.
ಇಂದು ನಗರದ ಮಹಾಸಭಾದ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೆರೆದಿದ್ದ 56 ಸದಸ್ಯರು ಖಂಡ್ರೆಯವರನ್ನು ಅವಿರೋಧವಾಗಿ ಆಯ್ಕೆಮಾಡಿದರು.
12.40ಕ್ಕೆ ಶುರುವಾಗಿ 2.30 ಮುಕ್ತಾಯವಾದ ಸಭೆಯಲ್ಲಿ ಪ್ರಭಾಕರ ಕೋರೆ, ಅಣಬೇರು ರಾಜಣ್ಣ, ಚರಂತಿಮಠ ಮುಂತಾದ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಶಾಮನೂರು ಶಿವಶಂಕರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಖಂಡ್ರೆ ಹಿರಿಯ ಉಪಾಧ್ಯಕ್ಷರಾಗಿದ್ದರು. ಶಾಮನೂರು ಅವರು ಲಿಂಗೈಕ್ಯರಾದ ನಂತರ ತೆರವಾದ ಸ್ಥಾನಕ್ಕೆ ಈಗ ಅವರಿಗೆ ಭಡ್ತಿ ಸಿಕ್ಕಂತಾಗಿದೆ.
ಕೆಲವು ವೈದಿಕ ಮಾಧ್ಯಮಗಳು ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆಯ ನಡೆಯಲಿದೆ ಎಂದು ವರದಿ ಮಾಡಿದ್ದವು. ಖಂಡ್ರೆ, ಕೋರೆಯವರ ಜೊತೆ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ, ಕೊನೆಗೆ ದಿಂಗಾಲೇಶ್ವರ ಸ್ವಾಮೀಜಿಯ ಹೆಸರನ್ನೂ ಅವು ಸೂಚಿಸಿದ್ದವು.
ಆದರೆ ಸ್ಪರ್ಧೆಯ ಮುಂಚೂಣಿಯಲ್ಲಿರುವ ಸಚಿವ ಈಶ್ವರ ಖಂಡ್ರೆ ಹಾಗೂ ಪ್ರಬಲ ಸ್ಪರ್ಧಿಯೆಂದು ಬಿಂಬಿತವಾಗಿರುವ ಉದ್ಯಮಿ ಪ್ರಭಾಕರ ಕೋರೆ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಕರೆ ಕೊಟ್ಟಿದ್ದರು.
ಆಯ್ಕೆಯ ನಂತರ ಸುದ್ದಿಗೋಷ್ಠಿ ನಡೆಸಿದ ಖಂಡ್ರೆ ತಮ್ಮನ್ನು ಮಹಾಸಭಾದ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾರ್ಯಕಾರಿ ಸಮಿತಿಗೆ ಧನ್ಯವಾದ ಅರ್ಪಿಸಿದರು. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಹೀಗಾಗಿ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸಲು ತಾವು ಶ್ರಮಿಸುವುದಾಗಿ ತಿಳಿಸಿದರು.
ನಮ್ಮ ಸಮಾಜದಲ್ಲೂ ಶೇ.40ರಿಂದ 50ರಷ್ಟು ಬಡವರಿದ್ದು, ಶೇ.30ಕ್ಕಿಂತ ಹೆಚ್ಚು ಜನರು ತೀವ್ರ ಹಿಂದುಳಿದಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಹೀಗಾಗಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಲು ಸಭಾ ವತಿಯಿಂದ ನೂತನ ಅಧ್ಯಕ್ಷನಾಗಿ ಶ್ರಮಿಸುವುದಾಗಿ ಹೇಳಿದರು.
ಬೆಂಗಳೂರಿನಲ್ಲಿ ಹಾಸ್ಟೆಲ್
ಬೆಂಗಳೂರು ನಗರದಲ್ಲಿ 1000 ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಲು ಮುಂದಿನ ಮಾರ್ಚ್ ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಿ, ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.
ಈಗಾಗಲೇ ಹಲವು ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಭವನ ಇದ್ದು, ಭವನ ಇಲ್ಲದ ಜಿಲ್ಲೆಗಳಲ್ಲಿ ಭವನ ನಿರ್ಮಾಣ ಮಾಡಲೂ ಶ್ರಮಿಸುವುದಾಗಿ, ಈ ಭವನದಲ್ಲಿ ಸಮುದಾಯದ ಪ್ರತಿಭಾವಂತರಿಗೆ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುವುದು ಎಂದರು.
ತಮ್ಮ ಸಮಾಜಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸ ಇದೆ, ಭವ್ಯತೆ ಇದೆ, ಶ್ರೇಷ್ಠತೆಯೂ ಇದೆ. ಮಾನವ ಧರ್ಮಕ್ಕೆ ಜಯವಾಗಲೀ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ನಮ್ಮ ಹಿರಿಯರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದಾರೆ.
1904ರಲ್ಲಿ ಹಾನಗಲ್ ಕುಮಾರೇಶ್ವರ ಮಹಾಸ್ವಾಮೀಜಿ ಶುರು ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರುಗಳಾಗಿ ಸಿರಸಂಗಿ ಲಿಂಗರಾಜದೇಸಾಯರು, ರಾಜಾ ಲಖಮನಗೌಡರು, ಫ.ಗು. ಹಳಕಟ್ಟಿಯವರು, ಬಂಥನಾಳ ಸಂಗನ ಬಸವ ಸ್ವಾಮಿಗಳು, ಡಾ. ಶಿವಕುಮಾರ ಮಹಾಸ್ವಾಮೀಜಿ, ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮೊದಲಾದವರು ಸೇವೆ ಸಲ್ಲಿಸಿದ್ದಾರೆ. ಈ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಗಣೇಶ್ ಶಾಮನೂರು, ಪ್ರಭಾಕರ ಕೋರೆ, ರಾಜಣ್ಣ, ವೀರಣ್ಣ ಚರಂತಿ ಮಠ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಘಟಕದ ಅಧ್ಯಕ್ಷರು, ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಖಂಡ್ರೆ ಅವರಿಗೆ ಶುಭಾಶಯಗಳು. ಅವಿರೋಧ ಆಯ್ಕೆ ವೀರಶೈವ ದಲ್ಲಿ ಒಕ್ಕಟ್ಟನ್ನು ಸೂಚಿಸಿದೆ. ಸಂಸ್ಕೃತಿಕ, ಧಾರ್ಮಿಕ ಹಾಗು ರಾಜಕಾರಣಕ್ಕೆ ಎಲ್ಲ ವೀರಶೈವ ಮತ್ತು ಲಿಂಗಾಯತ ಒಕ್ಕಟ್ಟಾಗಿ ನಡೆದರೆ ಪ್ರಬಲ ಶಕ್ತಿ ಆಗುವದರಲ್ಲಿ ಸಂದೇಹ ಇಲ್ಲ