ಬೆಂಗಳೂರು
ಕಳೆದ ಚುನಾವಣೆಯಲ್ಲಿ ಲಿಂಗಾಯತ ಮತಗಳು ಶಿಫ್ಟ್ ಆಗಿವೆ, ಎಂದು ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ಇತ್ತೀಚೆಗೆ ಪತ್ರಕರ್ತರ ಜೊತೆಯಲ್ಲಿ ಮಾತನಾಡುತ್ತಾ ೨೦೨೩ರ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ೫೭ ಲಿಂಗಾಯತರಿಗೆ ಟಿಕೆಟ್ ನೀಡಿದ್ದು, ಅವರಲ್ಲಿ ೩೪ ಜನರು ಗೆದ್ದಿದ್ದಾರೆ (ಶೇ.೫೯.೬೫). ಬಿಜೆಪಿಯು ೭೨ ಲಿಂಗಾಯತರಿಗೆ ಟಿಕೆಟ್ ನೀಡಿತ್ತು, ಅವರಲ್ಲಿ ಕೇವಲ ೧೭ ಜನರು ಗೆದ್ದಿದ್ದಾರೆ (ಶೇ.೨೩.೬೧), ಎಂದರು.
‘ಗುತ್ತಿಗೆ’ ನೀಡಿಲ್ಲ
ಕಳೆದ ಚುನಾವಣೆಯ ಇನ್ನೂ ಹಲವಾರು ಅಂಕಿ ಅಂಶಗಳು ‘ಲಿಂಗಾಯತರ ಮತಗಳು ಶಿಫ್ಟ್ ಆಗಿವೆ’ ಎಂದು ಸೂಚಿಸುತ್ತವೆ. ಅದಕ್ಕಿಂತ ಮುಖ್ಯವಾಗಿ ಇದು ಲಿಂಗಾಯತರು ತಮ್ಮ ಮತಗಳನ್ನು ಯಾವ ಪಕ್ಷಕ್ಕೂ ‘ಗುತ್ತಿಗೆ’ ನೀಡಿಲ್ಲ ಎಂದು ತೋರಿಸುತ್ತದೆ.
ಇದರಿಂದ ಬಿಜೆಪಿಯ ಪಿತೃ ಸಮಾನ ಆರ್ಎಸ್ಎಸ್ಗೆ ಆತಂಕ ಶುರುವಾಗಿದೆ. ಕರ್ನಾಟಕದಲ್ಲಿ ಅದಕ್ಕೆ ರಾಜಕೀಯ ಅಧಿಕಾರ, ಪ್ರಭಾವ ಬಂದಿರುವುದು ಲಿಂಗಾಯತ ಮತಗಳಿಂದ. ಈ ಮತ ಬ್ಯಾಂಕಿನ ಮೇಲೆ ಹಿಡಿತ ತಪ್ಪಿದರೆ ಹಿಂದುತ್ವವಾದಿಗಳಿಗೆ ಬಹಳ ಹಿನ್ನಡೆಯಾಗುತ್ತದೆ.
ಜೊತೆಗೆ ಈಗ ಲಿಂಗಾಯತರಲ್ಲಿ ತಮ್ಮ ಭಿನ್ನ ಇತಿಹಾಸ, ಪರಂಪರೆ, ಧರ್ಮದ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಇದು ಆರ್ಎಸ್ಎಸ್ಗೆ ಮತ್ತೊಂದು ತಲೆನೋವಾಗಿದೆ.
ಸೈದ್ಧಾಂತಿಕ ದಾಳಿ
ಇದರಿಂದ ಕಂಗೆಟ್ಟ ಹಿಂದುತ್ವವಾದಿಗಳು ಲಿಂಗಾಯತರನ್ನು ಸೈದ್ಧಾಂತಿಕವಾಗಿ ಮರಳು ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
‘ವಚನ ಸಾಹಿತ್ಯಕ್ಕೆ ಪ್ರವೇಶ ವೇದಾಗಮಗಳ ಮೂಲಕವೇ ಅಗಬೇಕು’ ಎಂಬ ದಬ್ಬಾಳಿಕೆಯ ಸಂದೇಶವನ್ನು ಸಾರುವ “ವಚನ ದರ್ಶನ” ಎಂಬ ಕೃತಿಯನ್ನು ಸಂಘಪರಿವಾರ ಪ್ರಕಟಿಸಿತು. ಅನೇಕ ಕಡೆ ಲಿಂಗಾಯತ ಮತಗಳಲ್ಲಿ ಆಯ್ಕೆಯಾದವರೇ ಇದನ್ನು ಬಿಡುಗಡೆ ಮಾಡಿದ್ದರು.
ಪ್ರಯಾಗ್ರಾಜ್ನ ಕುಂಭಮೇಳಕ್ಕೆ ಲಿಂಗಾಯತರನ್ನು ದೊಡ್ಡ ಸಂಖ್ಯೆಯಲ್ಲಿ ಕರೆದುಕೊಂಡು ಹೋಗುವ ಪ್ರಯತ್ನವಾಯಿತು. ಅದು ಬಹಳ ಯಶಸ್ವಿಯಾಗಲಿಲ್ಲ. ಕದ್ದುಮುಚ್ಚಿ ಕೆಲವು ಲಿಂಗಾಯತ ಸ್ವಾಮಿಗಳು ಗಂಗೆಯಲ್ಲಿ ಮುಳುಗಿ ಬಂದಿದ್ದರು.
ಅನುಭವ ಮಂಟಪ ಎನ್ನುವುದು ೧೨ನೆಯ ಶತಮಾನದಲ್ಲಿರಲಿಲ್ಲ ಎಂದು ಬ್ರಾಹ್ಮಣ ಮಹಿಳೆಯೊಬ್ಬರು ಮಾತನಾಡಿದ್ದರು.
ವಚನಗಳು ಅನುವಾದವೇ?
ವಚನಗಳು ವೇದಾಗಮ ಉಪನಿಷತ್ತುಗಳ ಅನುವಾದವೇ ವಿನಾ ಅದರಲ್ಲಿ ಸ್ವಂತದ್ದು ಏನಿಲ್ಲಾ ಎಂದು ಅನೇಕ ಬ್ರಾಹ್ಮಣ ಸ್ವಾಮಿಗಳು ಮಾತನಾಡಿದ್ದರು. ಅಂತಹ ಸಮಾರಂಭಗಳಲ್ಲಿದ್ದ ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕೆಲವರು ಚಪ್ಪಾಳೆ ತಟ್ಟಿದ್ದರು.
ಇವೆಲ್ಲಾ ಬಸವ ತತ್ವವನ್ನು, ವಚನ ಸಾಹಿತ್ಯವನ್ನು ವಿಕೃತಗೊಳಿಸುವ ಪ್ರಯತ್ನಗಳು ಎಂದು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು. ಇವರ ವಾದಗಳಲ್ಲಿ ಕಣ್ಣು ಕುಕ್ಕುವ ಆಭಾಸಗಳಿವೆ.
ವಚನಗಳಲ್ಲಿ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ದಲಿತ ವಚನಕಾರ್ತಿ ಕಾಳವ್ವೆ, ಶ್ವಪಚಯ್ಯ ಮತ್ತೆ ಮತ್ತೆ ಉಲ್ಲೇಖವಾಗುತ್ತಾರೆ. ಆದರೆ ಯಾವುದೇ ವೈದಿಕ ಸಾಹಿತ್ಯದಲ್ಲಿ ಇವರ ಬಗ್ಗೆ ಉಲ್ಲೇಖವಿಲ್ಲ. ವಚನಗಳು ವೇದಗಳ ಅನುವಾದ ಎಂದು ಬೊಬ್ಬಿಡುವ ಬ್ರಾಹ್ಮಣ್ಯದ ಮಂದಿ ಇದರ ಬಗ್ಗೆ ಏನು ಹೇಳುತ್ತಾರೆ? ವಚನಗಳು ವೇದಗಳ ಅನುವಾದವಾಗಿದ್ದರೆ ಅಲ್ಲೂ ದಲಿತರ, ಮಹಿಳೆಯರ, ಒಬಿಸಿಗಳ ಹೆಸರೇಕಿಲ್ಲ?
ಸಿದ್ಧರಾಮಣ್ಣನವರು ೧೨ನೆಯ ಶತಮಾನದಲ್ಲಿಯೇ ತಮ್ಮ ಒಂದು ವಚನದಲ್ಲಿ ‘ಶರಣ ಮಾದಾರ ಚೆನ್ನಯ್ಯನ ನಡೆ ಯಾವ ಆಗಮದಲ್ಲಿತ್ತು? ಶರಣ ಡೋಹರ ಕಕ್ಕಯ್ಯನ ನಡೆ ಯಾವ ವೇಧದಲ್ಲಿತ್ತು?’ ಎಂದು ಕೇಳುತ್ತಾರೆ.
‘ಇಟ್ಟಿಗೆ’ ಹೊರುವ ಲಿಂಗಾಯತರಲ್ಲ
ಲಿಂಗಾಯತವನ್ನು ಹಳಿಯುವ, ಬಸವಣ್ಣನವರನ್ನು ಆಚಾರ್ಯರನ್ನಾಗಿ ಮಾಡುವ, ವಚನ ಸಾಹಿತ್ಯವು ವೇದಾಗಮಗಳ ಅನುವಾದ ಅನ್ನುವ ಬ್ರಾಹ್ಮಣ್ಯದ ಆಕ್ರಮಣವನ್ನು ಬಸವಾದಿ ಶರಣರ ಅನುಯಾಯಿಗಳು ಇಂದು ಸಹಿಸಿಕೊಳ್ಳುತ್ತಿಲ್ಲ. ಇವತ್ತಿನ ಲಿಂಗಾಯತರು ‘ಇಟ್ಟಿಗೆ’ ಹೊರುವರಾಗಿ ಉಳಿದಿಲ್ಲ. ಲಿಂಗಾಯತದಲ್ಲಿ ಬಸವ ಜಾಗೃತಿಯ ಸ್ಪೋಟವಾಗುತ್ತಿದೆ.
ಬಸವ ಸಂಸ್ಕೃತಿ ಅಭಿಯಾನದ ಮೂಲಕ ಮತ್ತಷ್ಟು ಬೆಳೆದಿರುವ ಲಿಂಗಾಯತ ಜಾಗೃತಿ, ಸಂಘಟನೆಯನ್ನು ಈಗ ಗಟ್ಟಿಗೊಳಿಸಬೇಕಾಗಿದೆ.
ಬಸವ ಶಕ್ತಿ ಶಿಬಿರ, ಸಮಾವೇಶ
ಅದಕ್ಕಾಗಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ನಾವೆಲ್ಲ ಸೇರಿ ಮಾಡಬೇಕಾದ ಕಾಲ ಬಂದಿದೆ.
ಲಿಂಗಾಯತರ ಹೆಸರಿನಲ್ಲಿ ಮತ ಪಡೆದು ರಾಜಕಾರಣಿಗಳು ಶಾಸಕರಾಗುತ್ತಾರೆ, ಲಿಂಗಾಯತರ ಕೋಟಾದಲ್ಲಿ ಮಂತ್ರಿಗಳಾಗುತ್ತಾರೆ, ಮುಖ್ಯಮಂತ್ರಿಗಳೂ ಆಗುತ್ತಾರೆ. ಆದರೆ ಲಿಂಗಾಯತದ ಮೇಲೆ, ಲಿಂಗಾಯತ ಸ್ವಾಮೀಜಿಗಳ ಮೇಲೆ, ವಚನ ಸಾಹಿತ್ಯದ ಮೇಲೆ, ಬಸವಣ್ಣನವರ ಮೇಲೆ ದಾಳಿಯಾದಾಗ ಇವರಾರು ಬಾಯಿ ಬಿಡುವುದಿಲ್ಲ. ಏಕೆ?
ಕಾರಣ ಚುನಾವಣೆಯಾದ ಮೇಲೆ ಇವರನ್ನು ಲಿಂಗಾಯತ ಸಂಘಟನೆಗಳು ಪ್ರಶ್ನೆ ಮಾಡುತ್ತಿಲ್ಲ. ಲಿಂಗಾಯತರು ಒಂದು ಪ್ರಬಲ ಒತ್ತಡ ಗುಂಪಾಗಿ ಕೆಲಸ ಮಾಡುತ್ತಿಲ್ಲ.
ಲಿಂಗಾಯತ ಸ್ವಾಮಿಗಳನ್ನು ಆಶ್ಲೀಲ ಭಾಷೆಯಲ್ಲಿ ನಿಂದಿಸಿದಾಗ ಯಾವ ಲಿಂಗಾಯತ ರಾಜಕಾರಣಿಯೂ ಅದನ್ನು ವಿರೋಧಿಸಲಿಲ್ಲ.
ಬದಲಾಗಿ ಬಸವನ ಬಾಗೇವಾಡಿಯ ಶಾಸಕ ಮಂತ್ರಿ ಶಿವಾನಂದ ಪಾಟೀಲ್ ಲಿಂಗಾಯತ ಸ್ವಾಮೀಜಿಗಳಿಗೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ ಕನ್ನೇರಿ ಸ್ವಾಮಿಗೆ ಬೆಂಬಲವಾಗಿ ನಿಂತಿದ್ದಾರೆ.
ಇಂತವರನ್ನು ಲಿಂಗಾಯಯತ ಮತದಾರರು ಪ್ರಶ್ನಿಸುತ್ತಿಲ್ಲ. ಕಾರಣ ಅವರ ರಾಜಕೀಯ ಪ್ರಜ್ಞೆಯು ನಿದ್ರಾವಸ್ಥೆಯಲ್ಲಿದೆ.
ಅವರನ್ನು ಜಾಗೃತಗೊಳಿಸಿ ಲಿಂಗಾಯತ ಧರ್ಮಕ್ಕೆ ವಂಚನೆ ಮಾಡುತ್ತಿರುವ ಲಿಂಗಾಯತ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ನಾವು ಕಲಿಯಬೇಕು.
೨೦೨೮ರಲ್ಲಿ ಲಿಂಗಾಯತರು ಪಕ್ಷಾತೀತವಾಗಿ ಬಸವ ಮೌಲ್ಯಗಳಿಗೆ, ಬಸವ ಸಿದ್ಧಾಂತಕ್ಕೆ, ಲಿಂಗಾಯತ ಧರ್ಮಕ್ಕೆ ಬದ್ಧರಾಗಿರುವವರನ್ನು ಬೆಂಬಲಿಸಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವುದು ಬಸವ ಶಕ್ತಿ ಶಿಬಿರ, ಸಮಾವೇಶಗಳ ಮುಖ್ಯ ಉದ್ದೇಶ.

ಮುಂಬರುವ ಚುನಾವಣೆಯಲ್ಲಿ ಲಿಂಗಾಯತ ಅಭ್ಯರ್ಥಿ ಮುಖ್ಯವಲ್ಲ. ಲಿಂಗಾಯತರ ಮತ್ತು ಲಿಂಗಾಯತ ಧರ್ಮದ ಪರ ನಿಷ್ಠೆಯಿಂದ ಕೆಲಸ ಮಾಡುವುವರು ಮುಖ್ಯ.