ಹಳಕಟ್ಟಿ ಜಯಂತಿಯಲ್ಲಿ ಬೆಳಗಾವಿ ಜೊತೆಗಿನ ಒಡನಾಟದ ಸ್ಮರಣೆ

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ:

20ನೇ ಶತಮಾನದ ಪೂರ್ವಾರ್ಧದಲ್ಲಿ ಮಾನವ ಸಮಾಜಕ್ಕೆ ಅತ್ಯಂತ ದೊಡ್ಡಸೇವೆ ಮಾಡಿರುವ ಶ್ರೇಷ್ಠವ್ಯಕ್ತಿಗಳು ಯಾರಾದರು ಇದ್ದರೆ ಅವರು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರಾಗಿದ್ದಾರೆ. ಎಂದು ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಸಾನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಸಮಾಜದ ಹಿರಿಯರು ಮಾಡಿರುವ ತ್ಯಾಗ ಹಾಗೂ ಸೇವೆಯು ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ. ವಚನಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಹಳಕಟ್ಟಿ ಅವರು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಹಳಕಟ್ಟಿ ಅವರು ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ನೀಡಿದ ಕೊಡುಗೆಗಳು ಸ್ಮರಣಾರ್ಹ.

ಹಳಕಟ್ಟಿಯವರು ಕಷ್ಟಕರ ಜೀವನದಲ್ಲಿಯೂ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ, ಅವರು ನಂಬಿದ ತತ್ವಸಿದ್ಧಾಂತಗಳು ಇಂದಿನ ಸಮಾಜಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಅವರು, ಡಾ.ಫ. ಗು. ಹಳಕಟ್ಟಿ ಅವರು ಬೆಳಗಾವಿಯಲ್ಲಿ ನ್ಯಾಯವಾದಿ ಆಗಿ ಕಾರ್ಯನಿರ್ವಹಿಸಿದ್ದನ್ನು, ಹಾಗೂ ವಚನಸಾರ ಭಾಗ ೧ನ್ನು ಬೆಳಗಾವಿಯಲ್ಲಿ ಮುದ್ರಣ ಮಾಡಿರುವದನ್ನು, ಆಗಿನ ರುದ್ರಾಕ್ಷಿಮಠದ ಪೂಜ್ಯರಾಗಿದ್ದ ಡಾ. ಶಿವಬಸವ ಸ್ವಾಮಿಗಳೊಂದಿಗೆ ಇದ್ದ ಒಡನಾಟವನ್ನು ಹಾಗೂ ಹಳಕಟ್ಟಿ ಅವರಿಗಿದ್ದ ಬೆಳಗಾವಿ ನಂಟನ್ನು ಸ್ಮರಿಸಿಕೊಂಡರು.

ಬೀಮ್ಸ್ ವೈದ್ಯಾಧಿಕಾರಿ ಡಾ. ಭವ್ಯ ಸಂಪಗಾರ ಉಪನ್ಯಾಸ ನೀಡುತ್ತ, ಡಾ. ಫ.ಗು. ಹಳಕಟ್ಟಿ ಅವರು ವಕೀಲ ವೃತ್ತಿಯನ್ನು ಆರಂಭಿಸಿದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿನ ಶೈಕ್ಷಣಿಕ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ವಿಧ್ಯಾಭ್ಯಾಸ ಹಾಗೂ ಬಡವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಪ್ರೋತ್ಸಾಹಿಸಿದರು.

ಮುಂದಿನ ಪೀಳಿಗೆಗೆ ನಮ್ಮ ಸಾಹಿತ್ಯದ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ತಾಳೆಗರಿಯಲ್ಲಿರುವ ಸಾಹಿತ್ಯವನ್ನು ಕೈಬರಹದಲ್ಲಿ ಬರೆದು ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಣೆ ಮಾಡಿದರು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿಧ್ಯಾವತಿ ಭಜಂತ್ರಿ, ರಾಜಶೇಖರ ಭೋಜ, ಅಶೋಕ ಮಳಗಲಿ, ಮುರಗೇಶ ಶಿವಪೂಜಿ, ಮೋಹನ ಗುಂಡ್ಲೂರ, ಸಿ.ಎಂ. ಬೂದಿಹಾಳ, ಮುರಿಗೆಪ್ಪ ಬಾಳಿ, ಪ್ರವೀಣಕುಮಾರ ಚಿಕಲಿ, ಎ.ಕೆ. ಪಾಟೀಲ, ಚನ್ನಪ್ಪ ನರಸನ್ನವರ ಹಾಗೂ ಬಸವ ಸಂಘಟನೆಗಳ ಸದಸ್ಯರು, ನೂರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಈ ವರ್ಷ ಜಾಗತಿಕ ಲಿಂಗಾಯತ ಮಹಾಸಭಾ, ಗುರುಬಸವ ಬಳಗ ಹಾಗೂ ಸಂಚಾರಿ ಗುರುಬಸವ ಬಳಗದಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತರನ್ನು ಗೌರವಿಸಲಾಯಿತು.

ನೈನಾ ಗಿರಿಗೌಡರ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *