ಫೆಬ್ರವರಿ 24ರ ಹೋರಾಟಕ್ಕೆ ಬಸವಾದಿ ಶರಣರ ಅನುಯಾಯಿಗಳು ಬರಲು ಕರೆ
ಸಾಣೇಹಳ್ಳಿ:
ಕೊಪ್ಪಳದಲ್ಲಿ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆದ ನೂರನೇ ದಿನದ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಭಾಗವಹಿಸಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಬೆಂಬಲ ಸೂಚಿಸಿದರು.
ನಗರದ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ವೇದಿಕೆ ಸಹಯೋಗದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಧರಣಿಯ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿ, “100 ದಿನಗಳ ಕಾಲ ಹೋರಾಟ ನಡೆಸಿದರೂ ಸಹಿತ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮು೦ಬರುವ ಚುನಾವಣೆ ಸಂದರ್ಭದಲ್ಲಿ ಕಾರ್ಖಾನೆ ಬಾಧಿತ ಹಳ್ಳಿಗಳು ಸೇರಿ ಕೊಪ್ಪಳದ ಜನತೆ ಕಾರ್ಖಾನೆ ಬಂದ್ ಮಾಡುವವರೆಗೂ ಮತ ಹಾಕುವುದಿಲ್ಲ ಎಂದು ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿ ಕೊಪ್ಪಳದ ಜನತೆ ಪಕ್ಷಾತೀತವಾಗಿ ಜಾತಿ, ಧರ್ಮ ಮರೆತು ಹೋರಾಟದಲ್ಲಿ
ಪಾಲ್ಗೊಳ್ಳಬೇಕು,” ಎಂದರು.
“ಕೊಪ್ಪಳದ ಸುತ್ತ ಮುತ್ತ ಸುಮಾರು 200 ಕಾರ್ಖಾನೆಗಳಿವೆ. ಎಲ್ಲ ಕಂಪನಿಗಳ ಮಾಲಿನ್ಯ ಜೀವಜಾಲಕ್ಕೆ ದೊಡ್ಡ ಸವಾಲಾಗಿದೆ. ಇವುಗಳ ವಿರುದ್ಧ ನೂರು ದಿನಗಳ ಕಾಲ ಸತ್ಯಾಗ್ರಹ ನಡೆದಿದೆ. ಆದರೂ ಸರ್ಕಾರ, ಕಂಪನಿ ಮಾಲಿಕರು ಕಣ್ಣು, ಕಿವಿ ಮುಚ್ಚಿಕೊಂಡಿರುವುದು ನಿಜವಾದ ದುರಂತ. ಬುದ್ಧ, ಬಸವ, ಗಾಂಧಿ ತತ್ವಗಳಿಗೆ ತಿಲಾಂಜಲಿ. ಈಗಲಾದರೂ ಸರ್ಕಾರ ಮತ್ತು ಕಂಪನಿಗಳ ಮಾಲಿಕರು ಕಣ್ಣು, ಕಿವಿ ತೆರೆಯದಿದ್ದರೆ ಮುಂದೆ ಬಹು ದೊಡ್ಡ ದುರಂತ ಕಾಯ್ದಿದೆ,” ಎಂದು ಎಚ್ಚರಿಸಿದರು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಸಾಹಿತಿ ಸೂರ್ಯಕಾಂತ ಗುಳಗಿಮಠ ಹಿರೇಬಗನಾಳದಲ್ಲಿ ಕಾರ್ಖಾನೆಗಳ ಧೂಳಿನಿಂದ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಈಗಿರುವ ಪರಿಸ್ಥಿತಿಯೇ ನಾವು ಸಹಿಸಲಾಗುತ್ತಿಲ್ಲ. ಕೂಡಲೇ ವಿಸ್ತರಣೆ ನಿಲ್ಲಬೇಕು. ಕಾರ್ಖಾನೆ ಶಾಶ್ವತ ಬಂದ್ ಮಾಡಬೇಕು.
ಕಾರ್ಖಾನೆ ಬಾಧಿತ ರೈತ ಮಂಜುನಾಥ ಕೆಂಚರಡ್ಡಿ ಮಾತನಾಡಿ, ಜಗತ್ತಿನ 250 ಕಲುಷಿತ ನಗರಗಳ ಪಟ್ಟಿಯಲ್ಲಿ ಕೊಪ್ಪಳವೂ ಸೇರಿದೆ. ಕೊಪ್ಪಳ ವ್ಯಾಪ್ತಿಯ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ಈ ಭಾಗದಲ್ಲಿ ಚರ್ಮರೋಗ, ವಿವಿಧ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿವೆ ಎಂದು ಹೇಳಿದರು.

ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಕಾರ್ಖಾನೆ ಬಾಧಿತ ಹಳ್ಳಿಗಳಲ್ಲಿ ನೋಡಬಾರದ ಪರಿಸ್ಥಿತಿ ಇದೆ. ಜನಪ್ರತಿನಿಧಿಗಳು ಭೇಟಿ ನೀಡುತ್ತಿಲ್ಲ. ಫೆಬ್ರವರಿ 24ರಂದು ಬಸವಾದಿ ಶರಣರ ಅನುಯಾಯಿಗಳೂ ಸೇರಿದಂತೆ ಎಲ್ಲರೂ ಹೋರಾಟಕ್ಕೆ ಬರಬೇಕು, ಎಂದು ಕರೆ ನೀಡಿದರು.
ಹೋರಾಟ ಸಮಿತಿಯ ಶಿವಕುಮಾರ ಕುಕನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಚಂದ್ರು ಕವಲೂರು, ಎಚ್.ಎಸ್.ಪಾಟೀಲ್, ಎ.ವಿ. ಕಣವಿ, ಡಿ.ಎಂ. ಬಡಿಗೇರ, ಅಸ್ಲಾಂ ದರ್ಗಾ, ಗವಿಸಿದ್ದಪ್ಪ ಚಿನ್ನೂರು, ಜ್ಯೋತಿ ಗೊಂಡಬಾಳ, ಡಿ.ಎಚ್.ಪೂಜಾರ, ದಾನಪ್ಪ ಕವಲೂರು, ಸಂಗಪ್ಪ ವಕ್ಕಳದ, ಸುಜಾತ ಹಲಗೇರಿ, ಮಲ್ಲಿಕಾರ್ಜುನ ಗೋನಾಳ, ಶರಣು ಶೆಟ್ಟರ್, ಎ.ಎಂ. ಮದರಿ, ಬಿ.ಜಿ. ಕರಿಗಾರ, ಜಿ.ವಿ. ಪಾಟೀಲ್, ಕಾವ್ಯಾ ಗಡಾದ, ಬಸವರಾಜ ಬಳ್ಕೊಳ್ಳಿ, ದಾನಪ್ಪ ಮಸ್ಕಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು
ಫೆಬ್ರವರಿ 24ರಂದು ಕೊಪ್ಪಳ–ಭಾಗ್ಯನಗರ ವ್ಯಾಪ್ತಿಯಲ್ಲಿ ಸ್ವಯಂಸ್ಫೂರ್ತ ಬಂದ್ ಆಚರಣೆ.
ಗವಿಮಠದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದು.
ಬಲ್ಡೋಟ ಸಿಎಸ್ಆರ್ ನಿಧಿ ಸಹಾಯದಿಂದ ನಿರ್ಮಿಸಲಾದ ಗಾರ್ಡ್ ಮತ್ತು ಸಿಮೆಂಟ್ ಆಸನಗಳನ್ನು ಮರಳಿಸುವ ಅಭಿಯಾನಕ್ಕೆ ಚಾಲನೆ ನೀಡುವುದು.
20 ಗ್ರಾಮಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಿ, ಪರಿಸರ ಹಾಗೂ ಸಾರ್ವಜನಿಕ ಆರೋಗ್ಯ ಪುನರ್ ನಿರ್ಮಾಣಕ್ಕೆ ತಜ್ಞರ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು.
ತುಂಗಭದ್ರಾ ನದಿಯನ್ನು ವಿಷಗೊಳಿಸುತ್ತಿರುವ ಕಾರ್ಖಾನೆಗಳನ್ನು ತಕ್ಷಣ ಮುಚ್ಚಬೇಕು.
ಅಲ್ಲಿಯವರೆಗೆ ಶುದ್ಧೀಕರಿಸಿದ ನೀರನ್ನು ಜನರು ಹಾಗೂ ಜಾನುವಾರುಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕು.
ಬಸಾಪುರ–ದಾಪುರ ಸಾರ್ವಜನಿಕ ಕೆರೆಯನ್ನು ಕೂಡಲೇ ಮರಳಿ ಜನರಿಗೆ ಒಪ್ಪಿಸಬೇಕು.
ಭದ್ರಶ್ರೀ ಕಾರ್ಖಾನೆಯ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದು.
ಭಾದಿತ ಗ್ರಾಮಗಳಿಗೆ ಭೇಟಿ

ಕೊಪ್ಪಳ ಜಿಲ್ಲೆಯ ಕೆಲವು ಹಳ್ಳಿ ಹಾಗೂ ಶಾಲೆಗಳಿಗೆ ಭೇಟೆ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಸಾಣೇಹಳ್ಳಿ ಸ್ವಾಮೀಜಿ ಅವಲೋಕಿಸಿದರು. ನಂತರ ಕೊಪ್ಪಳದ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ ಹಿಟ್ನಾಳ್ ಅವರೊಂದಿಗೆ ಸಮಾಲೋಚಿಸಿ ಅಲ್ಲಿನ ಜನರ ಆರೋಗ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತುರ್ತಾಗಿ ಸಮೀಕ್ಷೆ ಮಾಡಿ ವೈದ್ಯರ ತಂಡ ಕರೆಸಿ ಸುತ್ತಮುತ್ತಲ ಗ್ರಾಮದ ಜನರ ಆರೋಗ್ಯ ತಪಾಸಣೆ ಮಾಡಿಸುವುದಾಗಿ ತಿಳಿಸಿದರು.
