ಬೆಂಗಳೂರಲ್ಲಿ ಬಸವ ಜಯಂತಿಗೆ ಸಾವಿರಾರು ಜನ ಸೇರಿಸಲು ಸಂಘಟನೆಗಳ ಸಭೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬೆಂಗಳೂರು

ಬರುವ ಬಸವ ಜಯಂತಿಯನ್ನು ರಾಜಧಾನಿಯ ಎಲ್ಲಾ ಬಸವ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.

ನಗರದ ಇನ್ಫ್ಯಾಂಟ್ರಿ ಹೋಟೆಲಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಲವಾರು ಸಂಘಟನೆಗಳ ಸದಸ್ಯರು ಭಾಗವಹಿಸಿದರು.

ಇಲ್ಲಿಯವರೆಗೆ ವಿವಿಧ ಬಡಾವಣೆಗಳಲ್ಲಿ ಪ್ರತ್ಯೇಕವಾಗಿ ಬಸವ ಜಯಂತಿ ಆಚರಿಸುತ್ತಿದ್ದ ಸಂಘಟನೆಗಳು ಮೊದಲ ಬಾರಿಗೆ ಒಟ್ಟಿಗೆ ನಗರದ ಮಟ್ಟದಲ್ಲಿ ಉತ್ಸವವನ್ನು ಆಯೋಜಿಸಲು ಕೈ ಜೋಡಿಸಿರುವುದು ವಿಶೇಷ ಬೆಳವಣಿಗೆಯಾಗಿದೆ.

“ಲಿಂಗಾಯತ ಸಮಾಜದಲ್ಲಿ ಜಾಗೃತವಾಗುತ್ತಿರುವ ಬಸವ ಪ್ರಜ್ಞೆ ಮತ್ತು ಅದರ ಮೇಲೆ ನಡೆಯುತ್ತಿರುವ ವೈದಿಕತೆಯ ದಾಳಿಯ ಹಿನ್ನಲೆಯಲ್ಲಿ ಎಲ್ಲರೂ ಒಗ್ಗೂಡುವ ಅನಿವಾರ್ಯತೆ ಬಂದಿದೆ. ಬಸವ ಸಂಸ್ಕೃತಿ ಅಭಿಯಾನದ ನಂತರ ಲಿಂಗಾಯತರ ಮೇಲೆ ಹೆಚ್ಚಿರುವ ದಾಳಿಯನ್ನು ಪ್ರತಿರೋಧಿಸಲು ಎಲ್ಲರೂ ಒಂದುಗೂಡಿದ್ದೇವೆ,” ಎಂದು ವೀರ ಗಣಾಚಾರಿ ಪಡೆಯ ಅಧ್ಯಕ್ಷ ಕೆ.ಬಿ. ಮಹದೇವಪ್ಪ ಹೇಳಿದರು.

ಈ ನಿಟ್ಟಿನಲ್ಲಿ ನಡೆದ ಮೊದಲ ಸಭೆಯಲ್ಲಿ ಭಾಗವಹಿಸಿದರು ಹಲವಾರು ಸಲಹೆಗಳನ್ನು ನೀಡಿದರು:

ಒಂದು ಲಕ್ಷ ಜನ
ಸುತ್ತಾ 150 ಕಿಮಿ ವ್ಯಾಪ್ತಿಯಿಂದ ಒಂದು ಲಕ್ಷ ಜನರನ್ನು ಸೇರಿಸಿ ಇಡೀ ಬೆಂಗಳೂರು ಕಣ್ಣರಳಿಸಿ ನೋಡುವಂತೆ ಬಸವ ಜಯಂತಿ ಮಾಡಬೇಕು. ಮಹಿಳೆಯರ, ಯುವಕರ ಭಾಗವಹಿಸುವಿಕೆಗೆ ಒತ್ತು ಕೊಡಬೇಕು.

ಮ್ಯಾರಾಥಾನ್ ಓಟ
“ದಯವೇ ಧರ್ಮದ ಮೂಲ” ಎಂಬ ಹೆಸರಿನಲ್ಲಿ ಮ್ಯಾರಾಥಾನ್ ಓಟ ರೂಪಿಬೇಕು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಜನರಿಗೆ ತಲುಪಿಸಲು ಇದು ಪರಿಣಾಮಕಾರಿಯಾಗಿರುತ್ತದೆ. ಇದು ಜಾತ್ಯತೀತವಾಗಿ, ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಕಾರ್ಯಕ್ರಮವಾಗಬೇಕು.

ವಚನ ಗಾಯನ
ಬಸವ ಜಯಂತಿ ಅಂಗವಾಗಿ ವಿವಿಧ ಬಡಾವಣೆಗಳಲ್ಲಿ ವಚನ ಗಾಯನ ಕಾರ್ಯಕ್ರಮ ಆಯೋಜಿಸಬೇಕು. ವಚನ ಕಂಠಪಾಠ ಸ್ಪರ್ಧೆ, ವಚನಗಳಿಗೆ ಚಿತ್ರರಚನೆ ಸ್ಪರ್ಧೆ, ಚಿತ್ರ ಪ್ರದರ್ಶನಗಳನ್ನೂ ಆಯೋಜಿಸಬೇಕು.

ಬಸವ ದಾಸೋಹ ಕೇಂದ್ರ
ನಗರದಲ್ಲಿ ವಿವಿಧ ಕಡೆ ಬಸವ ದಾಸೋಹ ಕೇಂದ್ರ ಸ್ಥಾಪಿಸುವುದು. ಆಸ್ಪತ್ರೆಯಗಳಲ್ಲಿ ಹಣ್ಣು ವಿತರಿಸುವ ಕಾರ್ಯಕ್ರಮ ಹಾಕಿಕೊಳ್ಳುವುದು. ಸಿಖ್ ಧರ್ಮೀಯರಂತೆ ಸೇವೆಗೆ ಒತ್ತು ಕೊಡುವುದು.

ಕರಪತ್ರ ಹಂಚಿಕೆ
ಕರಪತ್ರಗಳನ್ನು ಮುದ್ರಿಸಿ ಬೆಂಗಳೂರಿನ ಉದ್ಯಾನವನಗಳಲ್ಲಿ ಜನರಿಗೆ ಹಂಚುವ ಮೂಲಕ ಬಸವತತ್ವದ ಬಗ್ಗೆ ಜಾಗೃತಿ ಮೂಡಿಸುವುದು.

ಕಾಯಕ
ಬಸವ ಜಯಂತಿ ದಿನ ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಅರ್ಧಗಂಟೆ ಹೆಚ್ಚು ಕೆಲಸ ಮಾಡಿ ಬಸವಾದಿ ಶರಣರ ಕಾಯಕ ಸಿದ್ಧಾಂತದ ಬಗ್ಗೆ ಅರಿವು ಮೂಡಿಸುವುದು.

ಕನ್ನಡ ಸಂಘಟನೆ
ಕನ್ನಡ ಸಂಘಟನೆಗಳನ್ನು ಸೇರಿಸಿಕೊಂಡು ಜಯಂತಿಯನ್ನು ಆಚರಿಸಬೇಕು. ಕನ್ನಡದ ಏಕೈಕ ಧರ್ಮ ‘ಲಿಂಗಾಯತ’ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಬೇಕು.

ಒಟ್ಟಾರೆ, ಬೆಂಗಳೂರಲ್ಲಿರುವ 50ಕ್ಕೂ ಹೆಚ್ಚು ಬಸವ ಸಂಘಟನೆಗಳು ಕೈ ಜೋಡಿಸಿ ನಗರದ ಎಲ್ಲಾ ಲಿಂಗಾಯತರನ್ನು ಸೇರಿಸಿ ಹಬ್ಬದಂತೆ ಬಸವ ಜಯಂತಿ ಆಚರಿಸಬೇಕೆಂದು ನಿರ್ಣಯವಾಯಿತು.

ಕಾರ್ಯಕ್ರಮ ರೂಪುರೇಷೆಗಳನ್ನು ಚರ್ಚಿಸಲು, ಅಗತ್ಯವಾದ ಸಮಿತಿಗಳನ್ನು ರಚಿಸಲು ಇದೇ 21 ಮತ್ತೊಂದು ಸಭೆ ನಡೆಸಲು ತೀರ್ಮಾನ ಮಾಡಲಾಯಿತು.

ಲಿಂಗಾಯತರ ಮೇಲೆ ದಾಳಿ

ಸಭೆಯಲ್ಲಿ ಲಿಂಗಾಯತರ ಮೇಲೆ ವೈದಿಕರು ನಡೆಸುತ್ತಿರುವ ವ್ಯವಸ್ಥಿತ ದಾಳಿಯನ್ನೂ ಚರ್ಚಿಸಲಾಯಿತು. ಇದನ್ನು ಪ್ರತಿರೋಧಿಸಲು ಬಸವ ತತ್ವ, ಸಿದ್ದಾಂತ ಜನರಿಗೆ ತಲುಪಿಸುವ ಕಾರ್ಯವಾಗಬೇಕು. ಬಸವ ಸಂಘಟನೆಗಳನ್ನು ಬಲಪಡಿಸಿ, ಬಸವಣ್ಣನವರ ಮೂಲ ನಂಬಿಕೆಗಳನ್ನು ಆಚರಣೆಗೆ ತಂದಾಗ ಮಾತ್ರ ವಿರೋಧಿಗಳು ಸುಮ್ಮನಾಗುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ರಾಷ್ಟ್ರೀಯ ವೀರ ಗಣಾಚಾರಿ ಪಡೆ, ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಸಂಘಟನೆ, ಬಸವ ಬ್ರಿಗೇಡ್, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ, ಸಿದ್ದಗಂಗಾ ಚಾರಿಟಬಲ್ ಟ್ರಸ್ಟ್, ಬಸವ ಬಳಗ, ಶರಣ ಸಾಹಿತ್ಯ ಪರಿಷತ್ತು ಮತ್ತಿತರ ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವು.

ಸಂಘಟನೆಗಳ ಪ್ರಮುಖರಾದ ಟಿ. ಆರ್. ಚಂದ್ರಶೇಖರ, ಕೆ.ಬಿ. ಮಹದೇವಪ್ಪ, ಶ್ರೀಶೈಲ ಮಸೂತೆ, ಸಂಜೀವ ಕಡಗದ, ಓಂಕಾರ್ ಚೊಂಡಿ, ಕೆ.ಸಿ. ಪಾಟೀಲ, ಪ್ರೊ. ವೀರಭದ್ರಯ್ಯ, ಜಗದೀಶಚಂದ್ರ ಸಿ, ಕೃಪಾಶಂಕರ, ವಿಶ್ವೇಶ್ವರಯ್ಯ, ನಿಜಗುಣಮೂರ್ತಿ, ಶಿವಕುಮಾರಸ್ವಾಮಿ, ಸತೀಶ ಮೂಡಿ, ಸಚ್ಚಿದಾನಂದ, ಎನ್. ಆರ್. ಅಬಲೂರ, ವಿಜಯಕುಮಾರ, ನಾಗರಾಜ, ಸುನೀಲ ಕಾಂದೆ, ಜ್ಞಾನಪ್ರಭು, ಶ್ರೀನಾಥ, ಚಂದ್ರಶೇಖರ ಟಿ. ಎಂ. ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
12 Comments
  • ಅತ್ಯುತ್ತಮ ನಿರ್ಧಾರ, ಒಂದು ಒಳ್ಳೆಯ ಬೆಳವಣಿಗೆ,ವೈಧಿಕರ ಬಸವ ತತ್ವದ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಪ್ರತಿ ದಾಳಿ ನಡೆಸುವ ಸುಸಮಯ.ಎಲ್ಲಾ ಬಸವ ಪರ ಸಂಘಟನೆಗಳಿಗೆ ಶರಣುಶರಣಾರ್ಥಿಗಳು.

    • ತುಂಬಾ ಒಳ್ಳೆಯ ನಡೆ ಯಾಗಿದೆ, ಇದರಿಂದ ನಮ್ಮ ಲಿಂಗಾಯತ ಧರ್ಮದಲ್ಲಿ ಜಾಗೃತಿ ಬರುತ್ತದೆ , ಅಭಿವೃದಿ ಯಾಗುತ್ತಿದೆ, ಬಸವಾದಿ ಶರಣರ ಸತ ಸಂಕಲ್ಪ ಇಡೇರುತ್ತದೆ, ಅನಂತ ಧನ್ಯವಾದಗಳು ಶರಣು ಶರಣಾರ್ಥಿಗಳು ಎಲ್ಲರಿಗೂ

  • ಪ್ರಸ್ತುತ ಕಾಲಘಟ್ಣಟದಲ್ಲಿ ಲಿಂಗಾಯಿತ ಶರಣರಲ್ಲಿ ಕಾಣಿಸುತ್ತಿರುವ ಪ್ರಜ್ಞಾವಂತಿಕೆಯು ಹನ್ನೆರಡನೇ ಶತಮಾನದ ವಚನಚಳುವಳಿಯ ಮನುಷ್ಯತ್ವವನ್ನು ಪ್ರತ್ಯಕ್ಧಷವಾಗಿ ಕಂಡಂತೆ ಭಾಸವಾಗುತ್ರಿದೆ. ಈಗ ಮಿತಿ ಮೀರಿ ಬೆಳೆಯುತ್ತಿರುವ ಜಾತೀಯತೆ ಧರ್ಮಾಂಧತೆ ಮತಾಂಧತೆ ಮೌಢ್ಯ ಹಿಂಸೆ ದೌರ್ಜನ್ಯ ಶೋಷಣೆ ಪಕ್ಷಪಾತ ಅನ್ಯಾಯಗಳಿಗೆ ಇರುವ ಏಕೈಕ ಪರಿಹಾರದ ಆಶಾಕಿರಣ ಎಂದರೆ ಅದು ಬಸವಮಾರ್ಗ ಮಾತ್ರ.ವೇ. ಈ ನೆಲೆಯಲ್ಲಿ ಹೊರಟಿರುವ ಎಲ್ಲಾ ಶರಣರಿಗೆ ಶುಭವಾಗಲಿ ಇವರಿಗೆ ಪ್ರಜ್ಞಾವಂತ ಜನರಿಂದ ಎಲ್ಲಾ ರೀತಿಯ ಸಹಕಾರ ದೊರೆಯಲಿ ಶರಣು ಶರಣಾರ್ಥಿಗಳು 🙏🙏💐💐

  • ಇದರ ಅವಶ್ಯಕತೆ ಬಹಳ ಇದೆ. ಅತ್ಯುತ್ತಮ ಬೆಳವಣಿಗೆ ಮತ್ತು ನಿರ್ಧಾರ. ಬಸವ ಲಿಂಗವಂತರು ಈ ರೀತಿ ಒಗ್ಗಟ್ಟಾದರೆ ಲಿಂಗಾಯತ ಧರ್ಮವು ಸ್ವತಂತ್ರವಾಗಲು ಬಹಳ ದೂರ ಇಲ್ಲ.

    • ತಡವಾದರೂ ಸರಿಯಾದ ನಿರ್ದಾರ,ಸಂಘಟನೆಯ ಅಧಾರ ನಂಬಿಕೆಯಾಗಿದೆ ದಯಮಾಡಿ ಯಾವ ಬಸವ ಸಂಘಟನೆಯು ಅಲ್ಪ ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗ ಬಾರದೆಂದು ನನ್ನ ಕಳಕಳಿಯ ವಿನಂತಿ.
      ಶರಣುಗಳು 🙏

  • ಬಹಳ ಒಳ್ಳೆಯ ಕೆಲಸ ಇದು ಈಗ ಅವಶ್ಯಕವಾಗಿ ಆಗಬೇಕಾದದ್ದೇ.ಎಲ್ಲವೂ ವ್ಯವಸ್ಥಿತವಾಗಿ ಆಗಲಿ.

  • ಸಂತೋಷದ ವಿಷಯ. ಆದರೆ ಮತ್ತದೇ ಗಂಟೆ ಗಟ್ಟಲೇ ಪುರಾಣ ಭಾಷಣ ಮಾಡುವ ವೇದಿಕೆ ಪ್ರಿಯ ನಾಯಕರಿಗೆ ವೇದಿಕೆಯನ್ನು ಕೊಟ್ಟು ಬೋರು ಹೊಡೆಸಬಾರದಷ್ಟೆ

  • ಒಳ್ಳೆಯ ಬೆಳವಣಿಗೆ ಈಗ ಲಿಂಗಾಯತರುಎಚ್ಚರವಾಗಿದ್ದಾರೆ. ಯಾವುದು ಸತ್ಯ ಯಾವುದು ಮಿತ್ಯ ಎಂಬುದು ಅರ್ಥವಾಗಿದೆ.
    ಮೂಢನಂಬಿಕೆ, ಅಂಧಾನುಕರಣೆ, ಜೊತಿಷ್ಯಗಳ ಶೋಷಣೆಗೆ ವಿರುದ್ದ ಜನ ರೊಚ್ಚಿಗೆದ್ದಿರುವರು. ಎಲ್ಲ ಲಿಂಗಾಯತರು ಬಸವಾಭಿಮಾನಿಗಳು, ಬಸವ ಭಕ್ತರು ಒಂದುಗೂಡಿದರೆ ಮತ್ತೊಮ್ಮೆ ಕಲ್ಯಾಣ ರಾಜ್ಯ ಕಟ್ಟಲು ಈಗ ಸುವರ್ಣವಕಾಶ.
    ಏಳಿ ಶರಣರೇ ಎದ್ದೇಳಿ ಮತ್ತೇ ಬಸವ ರಾಜ್ಯ ಕಟ್ಟೋಣ
    ನಾಡಿನಾದ್ಯಾಂತ ಬಸವ ಜ್ಯೋತಿ ಬೆಳಗಲಿ.
    ಶರಣು ಶರಣಾರ್ಥಿಗಳು.
    ಬಸಪ್ಪ, ನಿಂಗಪ್ಪಾ, ಗಾಣಿಗೇರ.
    ಮು||.ತಾ|| ಹಳಿಯಾಳ.581329.
    ಜಿಲ್ಲೆ,|| ಉತ್ತರ ಕನ್ನಡ
    ಮು- ತಾಲೂಕ -ಹಳಿಯಾಳ, ಉತ್ತರ ಕನ್ನಡ ಜಿಲ್ಲೆ.

Leave a Reply

Your email address will not be published. Required fields are marked *