ನಿರ್ವಚನ: ಲಿಂಗ ಮಾರ್ಗವ ಅರಿಯದೆ, ಆಸೆಯ ಬದುಕ ಸವೆಸಿದ ಹಿರಿಯರು

ಗುಳೇದಗುಡ್ಡ:

ಗುಳೇದಗುಡ್ಡದ ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಶನಿವಾರ ಗಣೇಶ ಮೆಂತೇದ ಅವರ ಮನೆಯಲ್ಲಿ ನಡೆಯಿತು.

ಅಂದು ವಚನ ಚಿಂತನೆಗಾಗಿ ಆಯ್ದುಕೊಂಡ ವಚನ ಹೀಗಿದೆ –

ಆಶೆಯೆಂಬ ಶೂಲದ ಮೇಲೆ,

ವೇಷವೆಂಬ ಹೆಣನ ಕುಳ್ಳಿರಿಸಿ,

ಧರೆಯ ಮೇಲುಳ್ಳ ಹಿರಿಯರು ಹೇಂಗೆ ಸವೆದರು ನೋಡಾ!

ಆಸೆಯ ಮುಂದಿಟ್ಟುಕೊಂಡು ಸುಳಿದ ಹಿರಿಯರು ಕಂಡು,

ಹೇಸಿಕೆಯಾಯಿತ್ತು, ಗುಹೇಶ್ವರಾ

ವಚನ ಚಿಂತನೆಯನ್ನು ಪ್ರಾರಂಭಿಸಿದ ಪ್ರೊ. ಶ್ರೀಕಾಂತ ಗಡೇದ ಅವರು ‘ಈ ವಚನವು ವ್ಯೋಮ ಮೂರುತಿ ಅಲ್ಲಮಪ್ರಭುದೇವ ತಂದೆಗಳವರದು. ಅಲ್ಲಮಪ್ರಭುಗಳು ಶರಣ ಸಂಕುಲದಲ್ಲಿಯೇ ಶ್ರೇಷ್ಠರೆನಿಸಿಕೊಂಡವರು ಹಾಗೂ ಅವರೇ ಅನುಭವ ಮಂಟಪದ ಅಧ್ಯಕ್ಷರಾಗಿದ್ದವರು. ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಕ್ಕೆ ಮಾರುಹೋಗಿ ಇಡೀ ಭಾರತವನ್ನೆಲ್ಲ ಸುತ್ತಿ ಶರಣ ತತ್ವವನ್ನು ಬಿತ್ತರಿಸಿದರು. ಇಂಥ ಪ್ರಭುಗಳು ಗುಹೇಶ್ವರ ಎಂಬ ಅಂಕಿತದಲ್ಲಿ ಸ್ವತಃ ವಚನಗಳನ್ನು ರಚಿಸಿದರು. ಜನರ ನಡೆ-ನುಡಿಯನ್ನು ವಿಡಂಬಿಸಿ ಅರಿವನ್ನು ಉಂಟುಮಾಡಿದರು.

ಅಂಥದೊಂದು ವಚನ ಇಲ್ಲಿದೆ.  ಹಿಂದೆ ಬಾಳಿ ಬದುಕಿದ ಅನೇಕರು ಆಸೆಯವಳಿಯದೇ ಒಡಲ ಹಿಂಗಿಸಿಕೊಂಡು ವ್ಯರ್ಥವಾಗಿ ಸತ್ತು ಹೋದರು.  ಸತ್ಯದ ನಿಲವನೇ ಅರಿಯದೇ ಹೋದರು. ಅವರ ಬದುಕು ಸಮ್ಮತವಲ್ಲ ಎಂದು ಮುಂತಾಗಿ ತಿಳಿಸಿದರು.

ಸ್ಥಳೀಯರಾದ ಜವಳಿ ವ್ಯಾಪಾರಿ ಮಹಾಂತೇಶ ಸಿಂದಗಿಯವರು ವಚನವನ್ನು ವಿವರಿಸುತ್ತ, ಮನುಷ್ಯರು ಆಸೆಯಿಂದಲೇ ಸವೆದು ಹೋದರು. ಇಂಥ ಆಸೆ ಮುಂದೆ ದುರಾಸೆಯಾಗಿ ಗಳಿಸಬೇಕು, ಉಳಿಸಬೇಕು ಎಂಬ ಭ್ರಮೆಯಲ್ಲಿ ಅನೇಕ ಕ್ಷುದ್ರ ದೇವತೆಗಳ ಭ್ರಮೆಗೆ ಸಿಲುಕಿ ತಮ್ಮನ್ನು ತಾವು ಅರಿಯದೇ ಸುಪಥವನ್ನು ಹಿಡಿಯದೇ ವಾಮ ಮಾರ್ಗ ಹಿಡಿದರು. ಇದಕ್ಕೆ ಬದಲಾಗಿ ಶರಣರು ಸಹಜ ಬದುಕನ್ನು ದುಡಿಯುವ ಮೂಲಕ ಕಾಯಕವನ್ನು ಮಾಡಿ ಇತರರನ್ನು ಕರೆದುಕೊಂಡು ಉಣ್ಣುವ ಕಾಯಕವನ್ನು ಮಾಡಿ ಅರಿವಿನ ಹಾದಿಯನ್ನು ಹಿಡಿದು  ಶರಣರೆನ್ನಿಸಿಕೊಂಡರು.

ಇದಕ್ಕೆ ಪೂರಕವಾಗಿ ಇಷ್ಟಲಿಂಗ ಯೋಗ ಮಾರ್ಗ ಹಿಡಿದು ಸತ್ಯಶುದ್ಧ ಜೀವನವನ್ನು ನಡೆಸಿದಾಗ ಆಶಾಪಾಶ ಕಳಚಿ ಬೀಳುತ್ತದೆ.  ಆದರೆ ಇದನ್ನೊಂದೂ ಮಾಡದೇ ವ್ಯರ್ಥವಾಗಿ ಬದುಕಿದವರನ್ನು ಇಲ್ಲಿ ಅಲ್ಲಮ ಪ್ರಭುಗಳು ಹೆಣವೆಂದು ಕರೆದಿದ್ದಾರೆ. ಇಂಥ ಶವ ಸದೃಶ್ಯ ವ್ಯಕ್ತಿಗಳು ವಿಷಯಗಳ ಬೆನ್ನು ಬಿದ್ದುದರಿಂದಲೇ ಹೀಗಾಗಿರುವುದು.  ಇಂಥವರನ್ನು ಕಂಡು ಪ್ರಭುಗಳು ಹೇಸಿಕೆ ಪಡುತ್ತಾರೆ.  ಹಾಗಾಗಿ ಅಲ್ಲದ ಬದುಕನ್ನು ಬದುಕದೇ ಆಸೆ ತಾಮಸಗಳಿಲ್ಲದ ಸುಂದರ ಬದುಕನ್ನು ಬದುಕಿ ಈ ಭುವಿಯನ್ನು ಸುಂದರಗೊಳಿಸಬೇಕು ಎಂದರು.

ಮುಂದೆ ಮಾತನಾಡಿದ ಸಹೋದರಿ ಪ್ರೊ. ಗಾಯತ್ರಿ ಕಲ್ಯಾಣಿ ಅವರು, ಇಲ್ಲಿ ಆಸೆ ಎಂಬುದನ್ನು ಹೀಗೂ ಅರ್ಥೈಸಬಹುದು ‘ಆ’ ಎಂದರೆ ಆನೆ, ‘ಸೆ’ಎಂದರೆ ನೀರು.  ಆನೆಯನ್ನು ನೀರಲ್ಲಿ ಬಿಟ್ಟರೆ ಅದಕ್ಕೆ ಹೇಗೆ ಸಾಕು ಎನ್ನಿಸುವುದಿಲ್ಲವೋ ಹಾಗೆ ಆಸೆಯೆನ್ನುವುದು. ಮನುಷ್ಯನಿಗೆ ಆಸೆ ಇದ್ದರೆ ಅದನ್ನು ಉಳಿದೆಲ್ಲ ವಿಷಯಂಗಳು ಬೆನ್ನು ಹತ್ತುತ್ತವೆ. ಕಾಮ, ಕ್ರೋದ ಮೊದಲಾದವುಗಳು ಆಸೆಯನ್ನು ಬಿಡದೆ ಬರುವ ಇತರ ಸ್ನೇಹಿತರು ಇದರಿಂದ ಮನುಷ್ಯ ನಾಶವಾಗುತ್ತಾನೆ.  ಇಂಥ ಮನುಷ್ಯನೇನಾದರೂ ಶರಣರ ವಚನಗಳನ್ನು ಅರ್ಥೈಸಿಕೊಂಡರೆ ಆತ ನಿಜಕ್ಕೂ ಶರಣನೇ ಆಗುತ್ತಾನೆ.

ಕಾಯಕ ಮತ್ತು ದಾಸೋಹ ತತ್ವಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದರೆ ಆತನ ನಡೆ-ನುಡಿಗಳು ಶುದ್ಧವಾಗಿ, ಲಿಂಗ ಮಾರ್ಗ ಹಿಡಿದು ಶುಚಿಯಾಗಿ ಶರಣನಾಗುತ್ತಾನೆ.  ಇಂಥವರಿಗೆ ಸಾವಿಲ್ಲ. ಅವರು ಹೆಣವಾಗಲಾರರು; ಲಿಂಗದಲ್ಲಿ ಸಮರಸವಾಗಿ, ಲಿಂಗವೇ ಆಗಿ ಅಮರರಾಗುತ್ತಾರೆ ಎಂಬ ಸಂದೇಶ ಈ ವಚನದಲ್ಲಿದೆ ಎಂದರು. 

ವಚನದ ಸಮಾರೋಪ ಗೈಯುತ್ತ ಮಿತಭಾಷಿ ಪ್ರೊ. ಸುರೇಶ ರಾಜನಾಳ ಅವರು, ನಿಜಜಂಗಮ ಅಲ್ಲಮರ ಈ ವಚನ ವಿಡಂಬನೆಯೊಂದರ ಮೂಲಕ ನಮ್ಮನ್ನು ಅರಿವಿನ ಬೆಳಕಿನ ಕಡೆಗೆ ಹಾಗೂ ಶರಣ ಮಾರ್ಗದೆಡೆಗೆ ಕೊಂಡೊಯ್ಯುತ್ತದೆ. ಇಲ್ಲಿ ಜಗದ ಜನರ ಇರುವಿಕೆಯನ್ನು ಕಂಡು ಅಲ್ಲಮರಿಗೆ ಹೇಸಿಕೆ ಉಂಟಾಗಿದೆ. ಕಾರಣವೆಂದರೆ ಅನುಭಾವಿಗಳು ಬದುಕಿದ ಬದುಕಿಗೆ ವಿರೋಧವಾಗಿ ಅವರು ಬದುಕುತ್ತಿದ್ದಾರೆ.

ಸಾರ್ಥಕ ಬದುಕನ್ನು ಬದುಕದೆ ನಡೆವೆಣಗಳಾಗಿ ಬದುಕಿದ್ದಾರೆ.  ಹಿರಿಯರೆಂದರೆ ಪೂರ್ವಿಜರು ಹೇಗೋ ಬದುಕಿದವರು.  ಲಿಂಗ ಮಾರ್ಗವನ್ನು ಅರಿಯದೇ ಹೋದವರು.  ಇಂಥ ಹಿರಿಯರ ಇತರ ಯಾವ ಪ್ರಾಣಿಗಳಿಗೂ ಇಲ್ಲದ ಆಸೆಗೆ ಬೆನ್ನು ಹತ್ತಿದ್ದಾರೆ. ಈ ಆಸೆ ಮನುಷ್ಯನನ್ನು ಅನೀತಿ, ಅನಾಚಾರಗಳ ಪ್ರಪಾತಕ್ಕೆ ತಳ್ಳುತ್ತದೆ. ಆತ ಅದರಲ್ಲಿಯೇ ಸುಖ ಕಂಡವನಾಗಿ ಮೇಲಕ್ಕೆದ್ದು ಬಾರದ ಸ್ಥಿತಿಯಲ್ಲಿರುತ್ತಾನೆ. ಖಡ್ಗಕ್ಕೆ ಸವರಿದ ತುಪ್ಪವನ್ನು ನೆಕ್ಕುವ ಸೊಣಗನಂತೆ ಆತನ ಸ್ಥಿತಿಯಾಗುತ್ತದೆ. ಇಹದ ಮೇಲಿನ ಈ ಜೀವನ ಆಸೆಯೆಂಬ ಶೂಲದಂತಿದೆ.  ಅದನ್ನು ಆತ ಅರಿಯಲಾರ.

ಸುಖದ ಸುಪ್ಪತ್ತಿಗೆಯ ಮೇಲೆ ಕುಳಿತಿದ್ದೇನೆ ಎಂಬ ಮಿಥ್ಯಾ ಭ್ರಮೆಯಲ್ಲಿದ್ದಾನೆ. ಈ ಜಗತ್ತೇ ಗಂಡು-ಹೆಣ್ಣು, ಅಣ್ಣ-ತಮ್ಮ, ಅಕ್ಕ-ತಂಗಿ, ರಾಜ-ಮಂತ್ರಿ ಮೊದಲಾದ ಅಸಂಖ್ಯಾತ ವೇಷಗಳನ್ನು ಧರಿಸಿದ್ದಾನೆ.  ಇವರೆಲ್ಲ ಅರಿವಿಗೆ ಒಳಗಾಗದ ಹೆಣಗಳು ಇವರಿಗೆ ಕೂಡಲ ಸಂಗಮದೇವರನ್ನು ಒಲಿಸಲು ಬಂದುದು ಈ ಪ್ರಸಾದ ಕಾಯ ಎಂಬ ಅರಿವಿಲ್ಲ. ಹೇಮ, ಭೂಮಿ, ಕಾಮಿನಿ ತನ್ನವು ಎಂದೇ ನಂಬಿದ್ದಾನೆ. ಇಂದಿಂಗೆ ಬೇಕು, ನಾಳಿಂಗೆ ಬೇಕು ಎಂದು ಕುದಿಯುತ್ತಲಿದ್ದಾನೆ.

ಇವರೆಲ್ಲ ಜಾತಿ, ಧರ್ಮ, ಭಾಷೆ, ಜನಾಂಗ ವಿವಿಧ ಹೆಸರಿನಲ್ಲಿ ಸವೆದು ಹೋಗಿದ್ದಾರೆ. ತಾನು ಶಿವಾಂಶಿಕ ಎಂಬುದನ್ನೇ ಮರೆತಿದ್ದಾರೆ. ಹೀಗಾಗಿ ಇವರು ಮಾರ್ಗಬಾಹಿರರೇ ವಿನಃ ಬೇರೇನಲ್ಲ ಎಂದು ಅಲ್ಲಮ ಪ್ರಭುಗಳು ಹೇಸಿಕೆ ಪಟ್ಟುಕೊಂಡಿದ್ದಾರೆ. ಇವರೆಲ್ಲ ಜಗವು ಇಷ್ಟ ಪಡುವಂತಾಗಬೇಕಾದರೆ ಅಂಗ ಗುಣಗಳನ್ನು ಕಳೆದು ಲಿಂಗಗುಣ ಸಂಪನ್ನರಾಗಿ ಲಿಂಗವೆ ಆಗಬೇಕು ಇದು ಸರಿಯಾದ ಮಾರ್ಗ ಎಂಬುದು ಶ್ರೀಮದ್‍ ಅಲ್ಲಮಪ್ರಭುಗಳ ವಚನದ ಒಳಾರ್ಥ, ಎಂದು ಪ್ರೊ. ಸುರೇಶ ರಾಜನಾಳ ಅವರು ಅಭಿಪ್ರಾಯಪಟ್ಟರು.

ಸಾಮೂಹಿಕ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.

ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಬಸಯ್ಯ ಕಂಬಾಳಿಮಠ,  ಕುಮಾರ ಅರುಟಗಿ, ರೇವಣಸಿದ್ಧೇಶ್ವರಮಠ, ಬಸವರಾಜ ಖಂಡಿ, ಬಸವರಾಜ ಕಲ್ಯಾಣಿ, ಈರಣ್ಣ ಶಿವಪ್ಪ ಚಾರಖಾನಿ, ಗಣೇಶ ಅರುಟಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಡಾ. ಗೀರಿಶ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *