ಭಾಲ್ಕಿ:
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯವು ಅತಿದೊಡ್ಡ ಸಮುದಾಯವಾಗಿದೆ. ಸಮುದಾಯದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಒಳಪಂಗಡಗಳ ಏಕತೆ ಸಾಧಿಸುವ ಮೂಲಕ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ಮತ್ತು ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಾನಗಲ್ ಕುಮಾರೇಶ್ವರರಿಂದ ಸ್ಥಾಪಿತಗೊಂಡು ೧೨೨ ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಲಿಂಗಾಯತ ಮಹಾಸಭೆ ಇದುವರೆಗೆ ೨೩ ಮಂದಿ ಅಧ್ಯಕ್ಷರನ್ನು ಕಂಡಿದೆ. ಸಿರಸಂಗಿ ಲಿಂಗರಾಜ, ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ, ಶರಣಬಸಪ್ಪ ಅಪ್ಪ, ಡಾ. ಭೀಮಣ್ಣ ಖಂಡ್ರೆ, ಡಾ. ಶಾಮನೂರು ಶಿವಶಂಕರಪ್ಪ ಮುಂತಾದ ಗಣ್ಯರು ತಮ್ಮ ಸೇವಾವಧಿಯಲ್ಲಿ ಮಹಾಸಭೆಯನ್ನು ಬಲಪಡಿಸಿದ್ದಾರೆ.

ಇಂತಹ ಗೌರವಾನ್ವಿತ ಮಹಾಸಭೆಯ ೨೪ನೇ ಅಧ್ಯಕ್ಷರಾಗಿ ಜವಾಬ್ದಾರಿ ನೀಡಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಖಂಡ್ರೆ, ಮಠಾಧೀಶರ ಮಾರ್ಗದರ್ಶನ ಮತ್ತು ಹಿರಿಯರ ಸಲಹೆ ಪಡೆದು ಸಮುದಾಯದ ಶಕ್ತಿವರ್ಧನೆಗೆ ಶ್ರಮಿಸುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಸತಿ ನಿಲಯಗಳ ನಿರ್ಮಾಣದ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಸಂಕಲ್ಪ ವ್ಯಕ್ತಪಡಿಸಿದರು.
ತಮ್ಮ ತಂದೆ ಡಾ. ಭೀಮಣ್ಣ ಖಂಡ್ರೆ ಅವರು ಸಮಾಜಸೇವೆಯ ಉದ್ದೇಶದಿಂದ ರಾಜಕೀಯ ಪ್ರವೇಶಿಸಿದ ಹಿನ್ನೆಲೆ, ಅವರ ಮಾರ್ಗದರ್ಶನದಲ್ಲಿ ತಾವು ರಾಜಕೀಯಕ್ಕೆ ಬಂದಿರುವುದಾಗಿ ಹೇಳಿದರು. ಎರಡು ಬಾರಿ ಸಚಿವರಾಗಿ ಹಾಗೂ ನಾಲ್ಕು ಬಾರಿ ಶಾಸಕರಾಗಿ ಜನಸೇವೆ ಸಲ್ಲಿಸಿರುವುದಾಗಿ ತಿಳಿಸಿದರು.

ಸಾನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರು, ಸಚಿವರು ಆಗಿರುವ ಈಶ್ವರ ಖಂಡ್ರೆ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ರಾಜ್ಯವನ್ನು ಪ್ರತಿನಿಧಿಸಲಿ.
ರಾಜ್ಯದಲ್ಲಿ ಸಚಿವರಾಗಿ ಖಂಡ್ರೆ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ಆಗುವ ಎಲ್ಲ ಅರ್ಹತೆ ಅವರಲ್ಲಿದೆ. ಹಾಗಾಗಿ ಈಶ್ವರ ಖಂಡ್ರೆ ಅವರನ್ನು ಸಿಎಂ ಆಗಿ ನೋಡುವ ಈ ಭಾಗದ ಜನರ ಕನಸು ಆದಷ್ಟು ಬೇಗ ಈಡೇರಲಿ ಎಂದು ಆಶಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಶತಮಾನೋತ್ಸವ ಪೂರೈಸಿದ ಮಹಾಸಭೆಗೆ ಖಂಡ್ರೆ ಅವರಂತಹ ನಾಯಕರು ರಾಷ್ಟ್ರಾಧ್ಯಕ್ಷರಾಗಿರುವುದು ಸಂತಸದ ಸಂಗತಿಯೆಂದು ಹೇಳಿದರು. ಅವರ ಕಾರ್ಯಕಾಲದಲ್ಲಿ ಸಮುದಾಯವು ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.

ಅಭಿನಂದನಾ ಸಮಿತಿ ಅಧ್ಯಕ್ಷ ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಗೀತಾ ಈಶ್ವರ ಖಂಡ್ರೆ ಉಪಸ್ಥಿತರಿದ್ದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿಗಳು ವಚನಸ್ತೋತ್ರ ಮತ್ತು ಪ್ರಾರ್ಥನಾ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಸ್ವಾಗತಿಸಿದರು. ದೀಪಕ ಠಮಕೆ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಬಿ.ಜಿ. ಪಾಟೀಲ ವಂದಿಸಿದರು.
