ಅಣ್ಣಿಗೇರಿ:
ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ 2025ರ ಸಾಲಿನ ರಾಜ್ಯ ಪ್ರಶಸ್ತಿಗೆ ಹೋರಾಟಗಾರ, ಚಿಂತಕ ಡಾ. ಸಿದ್ದನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಪಾಟೀಲ ಅವರನ್ನು ಆಯ್ಕೆಗೊಳಿಸಲಾಗಿದೆ.
ಫೆಬ್ರವರಿ 25ರಂದು ಸಂಜೆ 6 ಗಂಟೆಗೆ ಅಣ್ಣಿಗೇರಿಯ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ಕಾಲೇಜು ಆವರಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದ್ದು, ಪಾಟೀಲ ಅವರಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿಯ ಜೊತೆ 25 ಸಾವಿರ ರೂ. ನೀಡಿ ಗೌರವಿಸಲಾಗುವುದು.
ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಅತಿಥಿಗಳಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಭಾಗವಹಿಸುವರು ಎಂದು ರಾಜ್ಯ ಪ್ರಶಸ್ತಿ ಸಮಿತಿಯ ಸಂಚಾಲಕ ಪ್ರೊ. ಎಸ್.ಎಸ್. ಹರ್ಲಾಪೂರ ಅವರು ತಿಳಿಸಿದ್ದಾರೆ.
