ಕೇಂದ್ರ ಸರಕಾರ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲಿ: ಗೊ.ರು.ಚ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಿಗೆ ಶರಣರ ಹೆಸರು ಇಡಲು ಆಗ್ರಹ

ಬೆಂಗಳೂರು

ಲಿಂಗಾಯತ ಧರ್ಮಕ್ಕೆ ಕೇಂದ್ರ ಸರಕಾರವು ಶಾಸನಬದ್ಧವಾಗಿ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಬೇಕು ಮತ್ತು ಅದರ ಅನುಯಾಯಿಗಳಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಲ್ಲಿ ಮನ್ನಣೆ ಸಿಗಬೇಕು,’ ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಮಂಗಳವಾರ ಆಗ್ರಹಿಸಿದರು.

ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 14ನೆ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ‘ಸಮ್ಮೇಳನಾಧ್ಯಕ್ಷತೆ’ ವಹಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯನವರ ಸರಕಾರದಲ್ಲಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಒಳ್ಳೆಯ ಕ್ರಮವಾಗಿದೆ.

ಆದರೆ ಇದರ ನಂತರ ಏನೂ ಕೆಲಸವಾಗಿಲ್ಲ. ಮುಖ್ಯವಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಿಗೆ ಶರಣಾದಿಗಳ ಹೆಸರನ್ನು ಇಡಬೇಕು ಎಂದು ಅವರು ಹೇಳಿದರು.

ವಚನ ವಿರೋಧಿ ಸನಾತನ ಹಿತಾಸಕ್ತಿಗಳು

ವಚನ ಸಾಹಿತ್ಯದ ಕುರಿತು ನಡೆದಿರುವಷ್ಟು ಸಂಶೋಧನೆ, ಪ್ರಕಟನೆ, ಚರ್ಚೆ-ಸಂವಾದ, ವಾದ-ವಿವಾದ, ಉಪನ್ಯಾಸಗಳು ಬೇರೆ ಯಾವ ಸಾಹಿತ್ಯ ಪ್ರಕಾರಕ್ಕೂ ನಡೆದಿಲ್ಲ.

ಈ ಬೆಳವಣಿಗೆಯನ್ನು ಸಹಿಸಲಾಗದಂತಹ ಸನಾತನ ಹಿತಾಸಕ್ತಿಗಳು, ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಾಗದೇ ಗುಪ್ತ ವಿನಾಶಿತ ಕೃತ್ಯಗಳಲ್ಲಿ ತೊಡಗಿರುವುದನ್ನು ನಾವು ಗಮನಿಸಬೇಕು ಎಂದು ಹೇಳಿದರು.

ವಚನಕಾರರು ಹಿಂದೂ ಧರ್ಮದ ಪ್ರಮಾಣಾಧಾರಗಳಾದ ವೇಧಾಗಮನ, ಶಾಸ್ತ್ರ-ಪುರಾಣ, ಪೂಜಾರಿ-ಪುರೋಹಿತ್ಯ ಪದ್ಧತಿಗಳನ್ನು ವಿರೋಧಿಸಿದ ಕಾರಣ ವಚನ ಸಾಹಿತ್ಯವನ್ನು ಹಿಂದೂ ವಿರೋಧಿ ಎಂದೇ ಬಿಂಬಿಸುತ್ತಾ ಬರಲಾಗಿದೆ.

ಆದರೆ ವಚನಕಾರರ ವಿಚಾರಧಾರೆ ಅರ್ಥಹೀನ ಸಂಪ್ರದಾಯಗಳ ವಿರೋಧವೇ ಹೊರತು ಬೇರೆ ಯಾವ ಧರ್ಮದ ವಿರೋಧವಲ್ಲ ಎಂದು ತಿಳಿಸಿದರು.

ವೈಚಾರಿಕ, ವೈಜ್ಞಾನಿಕವಾಗಿ ಸೋಜಿಗ ಪಡುವಷ್ಟು ಮುಂದುವರಿದಿರುವ ಇಂದಿನ ಕಾಲದಲ್ಲಿಯೂ ಸಲ್ಲುವ ಶರಣರ ವಿಚಾರಧಾರೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ.

ಜನಸಮುದಾಯಗಳ ಬದುಕು ಭಯ-ಭೀತಿ ಅನಿಶ್ಚಿತತೆ ಮತ್ತು ಆತಂಕಗಳನ್ನು ಎದುರಿಸುತ್ತಿದೆ. ಇಂತಹ ಕಳವಳಕಾರಿ ಸನ್ನಿವೇಶದಲ್ಲಿ 12ನೇ ಶತಮಾನದ ವಿಚಾರಧಾರೆಯನ್ನು ಇಂದಿನ ತಲೆಮಾರಿಗೆ ತಲುಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರ ಮುಂಚೆ ನಾವೂ ಶೂದ್ರರಾಗಿದ್ದೆವು

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಲಿಂಗಾಯತ ಧರ್ಮವನ್ನು ಇವತ್ತು ನಾವು ಜಾತಿಯನ್ನಾಗಿ ಮಾಡಿಕೊಂಡಿದ್ದೇವೆ.

ಭೌಗೋಳಿಕವಾಗಿ ನಾವೆಲ್ಲರೂ ಭಾರತೀಯರು, ಹಿಂದೂಗಳೇ. ಭಾರತದಲ್ಲಿ ಜೈನ, ಸಿಖ್, ಬೌದ್ಧ ಧರ್ಮದಿಂದ ಹಿಂದೂ ಧರ್ಮಕ್ಕೆ ಏನಾದರೂ ಅಪಾಯವಾಗಿದೆಯೇ? ಆದರೆ ಬಸವ ಧರ್ಮ ಎಂದ ಮೇಲೆ ನಾವೇ ಸಂಕೋಚದಿಂದ ನಡೆದುಕೊಳ್ಳುತ್ತೇವೆ ಎಂದರು.

ವೃತ್ತಿಗೆ ತಕ್ಕ ಘನತೆ ಎನ್ನುವ ತತ್ತ್ವವನ್ನು ಬಸವಣ್ಣನವರು ಕಾರ್ಲ್ ಮಾರ್ಕ್ಸ್ ಗಿಂತ ನಾಲ್ಕು ಶತಮಾನ ಮೊದಲೇ ಹೇಳಿ, ಇಡೀ ಸಮಾಜಕ್ಕೆ ಕಾಯಕ-ದಾಸೋಹ ಸಂದೇಶ ನೀಡಿದರು.

ಬಸವಣ್ಣನ ಆಗಮನಕ್ಕೆ ಮುಂಚೆ ನಾವು ಕೂಡ ಶೂದ್ರರಾಗಿದ್ದೆವು ಎನ್ನುವುದನ್ನು ಮರೆಯಬಾರದು. ಆದರೆ ಸಂಸ್ಕೃತದ ಯಜಮಾನಿಕೆಯನ್ನು ಮುರಿದು, ದೇವರ ಜತೆ ಕನ್ನಡದಲ್ಲೇ ಮಾತನಾಡಿದ ಮತ್ತು ಕನ್ನಡದ ಧರ್ಮ ಲಿಂಗಾಯತವೊಂದೇ ಎಂದು ಹೇಳಿದರು.

ಆದರೆ, ಲಿಂಗಾಯತ ಧರ್ಮಕ್ಕೆ ಮೊದಲಿನಿಂದಲೂ ಸಮುದಾಯದ ಒಳಗೇ ವಿಪರೀತ ಶತ್ರುಗಳಿದ್ದಾರೆ. ಹೀಗಾಗಿ ಬಸವಾದಿ ಶರಣರು ಮತ್ತು ಲಿಂಗಾಯತ ಧರ್ಮಗಳ ಸೀಮೋಲ್ಲಂಘನೆ ಆಗದೆ, ಕರ್ನಾಟಕದಲ್ಲೇ ಸೀಮಿತವಾಗಿ ಉಳಿದುಕೊಂಡವು ಎಂದು ಅವರು ಹೇಳಿದ್ದಾರೆ.

ಲಿಂಗಾಯತರು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಬಸವಣ್ಣನನ್ನೇ ಕಾಲ್ಪನಿಕ ಅಂತಲೂ ಕೆಲವರು ಹೇಳಬಹುದು ಎಂದು ಇತ್ತೀಚೆಗೆ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ. ಇದು ನಮ್ಮ ಪರಿಸ್ಥಿತಿ. ಇನ್ನಾದರೂ ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು.

ಸಮ್ಮೇಳನದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರುವಾಗ ಜಾನಪದ ಕಲಾತಂಡಗಳು ಆಕರ್ಷಿಸಿದರೆ, ವಚನ ಗಾಯನ, ವಿಚಾರ ಗೋಷ್ಠಿಗಳು ಗಮನ ಸೆಳೆದವು.

ಸಮ್ಮೇಳನದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಎಂ.ಕೃಷ್ಣಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್, ಸಿದ್ಧರಾಮ ಬೆಲ್ದಾಳ, ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ, ಮಾಜಿ ಉಪ ಮೇಯರ್ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಮುಖ ಒತ್ತಾಯಗಳು

•ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದಕ್ಕಾಗಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ, ಸಮಾಲೋಚನೆಗಾಗಿ ಕ್ಷೇತ್ರ ತಜ್ಞರ ಸಹಾಯ ಪಡೆಯಬೇಕು.

•ಬಸವ ಕಲ್ಯಾಣದಲ್ಲಿ ನಡೆಯುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.

•ವಚನ ಸಾಹಿತ್ಯವನ್ನು ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರದ ಹಂತದ ವರೆಗೆ ಪಠ್ಯವನ್ನಾಗಿಸಬೇಕು.

•ವಚನ ವಿಶ್ವವಿದ್ಯಾಲಯ ಶೀಘ್ರವಾಗಿ ಆರಂಭವಾಗಬೇಕು.

•ದಿಲ್ಲಿಯಲ್ಲಿ ಎಲ್ಲ ರಾಜ್ಯಗಳ ಭವನಗಳಿವೆ. ಅದರಂತೆ ಬೆಂಗಳೂರಿನಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ಭವನಗಳು ನಿರ್ಮಾಣವಾಗಬೇಕು.

•ಬೇರೆ ಬೇರೆ ಜಿಲ್ಲೆಗಳಲ್ಲಿರುವ ಪ್ರಮುಖ ಉದ್ಯಾನವನಗಳಿಗೆ ಶರಣರ ಹೆಸರುಗಳನ್ನು ಇಡಬೇಕು.

ಸಮ್ಮೇಳನದ ಸ್ಮರಣ ಸಂಚಿಕೆ ‘ಕಲ್ಯಾಣ ಸಂಗಮ’, ‘ಮಹಾಮನೆ’ ಬಿಡುಗಡೆ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *