ಇಂದು ಸಿದ್ಧಲಿಂಗ ಸ್ವಾಮೀಜಿ ಅವರ 77ನೇ ಜಯಂತಿ, ಭಾವೈಕ್ಯತಾ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಇಂದು ಬೆಳಗ್ಗೆ  ೧೦.೩೦ಕ್ಕೆ ತ್ರಿವಿಧ ದಾಸೋಹಿ, ಬಸವತತ್ವದ ದಂಡನಾಯಕರು, ಭಾರತ ಸರ್ಕಾರದಿಂದ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶದ ಏಕತಾ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ೭೭ನೇ ಜಯಂತಿ ಮತ್ತು ಭಾವೈಕ್ಯತಾ ದಿನವನ್ನು ಆಚರಿಸಲಾಗುವುದು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ಬೈಲೂರು ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಭೈರನಹಟ್ಟಿ-ಶಿರೋಳದ ಶಾಂತಲಿಂಗ ಮಹಾಸ್ವಾಮಿಗಳು, ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು, ಸಂಡೂರಿನ ಪ್ರಭು ಮಹಾಸ್ವಾಮಿಗಳು, ಅರಸೀಕೆರೆಯ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಸಮ್ಮುಖ ವಹಿಸಲಿದ್ದಾರೆ.

ಬೆಳಗ್ಗೆ ೮.೩೦ಕ್ಕೆ ಭೀಷ್ಮಕೆರೆಯ ಮಹಾತ್ಮ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತೆ ಯಾತ್ರೆ ನಡೆಯಲಿದೆ. ಭಾವೈಕ್ಯತೆ ಯಾತ್ರೆಯನ್ನು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ, ಡಿ.ಆರ್. ಪಾಟೀಲ ಉದ್ಘಾಟನೆ ಮಾಡಲಿದ್ದಾರೆ.

ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಜಿ.ಎಸ್. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ನೂತನ ವಚನ ಪಾಠಶಾಲೆ ಉದ್ಘಾಟನೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸರ್ವಜನಾಂಗದ ಸದ್ಭಕ್ತರು, ಪೂಜ್ಯರ ಅಭಿಮಾನಿಗಳು, ಬಸವಪರ ಸಂಘಟನೆಗಳ ಸರ್ವಸದಸ್ಯರು ಎಲ್ಲರೂ ಭಾಗವಹಿಸಬೇಕೆಂದು ಶ್ರೀಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಸಾಹಿತಿಗಳಾದ ಧಾರವಾಡದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಸಂಮಾನ ಜರುಗಲಿದೆ. ಕಾರ್ಯಕ್ರಮದಲ್ಲಿ ಡಾ. ವಿದ್ಯಾವತಿ ಅಕ್ಕಿ ರಚಿಸಿದ ತೋಂಟದಾರ್ಯ ಸಂಸ್ಥಾನಮಠ ಸಾಹಿತ್ಯ ಪ್ರಕಟನೆಗಳು: ತಾತ್ವಿಕ ಸ್ವರೂಪ, ಡಾ. ಸರೋಜಿನಿ ಐ. ಪಾವಟೆ ರಚಿಸಿದ ಚಲವಾದಿ ಗೌರಮ್ಮನ ಕಥೆಗಳು, ಪ್ರೊ. ಶಶಿಧರ ತೋಡಕರ್ ಸಂಪಾದಿಸಿದ ಮಾಯದಂಥಾ ಬೆಳದಿಂಗಳ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *