“ವಚನ ಚಳುವಳಿ ಮತ್ತು ಮಹಿಳೆಯರು” ವಿಷಯದ ಮೇಲೆ ಶಿವಗಂಗಾ ರುಮ್ಮಾ ಅವರ ಹೃದಯಸ್ಪರ್ಶಿ ಉಪನ್ಯಾಸ
ಕಲಬುರಗಿ:
ನಗರದ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ ರವಿವಾರ ಬಸವ ಜ್ಯೋತಿ ಕಾರ್ಯಕ್ರಮ ನಡೆಯಿತು. “ವಚನ ಚಳುವಳಿ ಮತ್ತು ಮಹಿಳೆಯರು”ಎಂಬ ವಿಷಯದ ಕುರಿತಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿಯ ಪ್ರಾಧ್ಯಾಪಕರಾದ ಶಿವಗಂಗಾ ರುಮ್ಮಾ ಅವರು ಆಳವಾದ ತಾತ್ವಿಕ, ಹೃದಯಸ್ಪರ್ಶಿ ಮತ್ತು ಅನುಭಾವಪೂರ್ಣ ಉಪನ್ಯಾಸವನ್ನು ನೀಡಿದರು.
ಉಪನ್ಯಾಸವನ್ನು ಅವರು ಜೇಡರ ದಾಸಿಮಯ್ಯನವರ ವಚನದೊಂದಿಗೆ ಆರಂಭಿಸಿದರು. ಶರಣರ ದೃಷ್ಟಿಯಲ್ಲಿ ಮಹಿಳೆಯರ ಕುರಿತು ಎರಡು ರೀತಿಯ ದೃಷ್ಟಿಕೋನಗಳಿದ್ದವು ಎಂದು ವಿವರಿಸಿದರು.
ಒಂದು ಸಹಚರ ಪದ್ಧತಿ ಹಾಗೂ ಇನ್ನೊಂದು ಅನುಚರ ಪದ್ಧತಿ. ಅನುಚರ ಪದ್ಧತಿಯಲ್ಲಿ ಮಹಿಳೆ ಗಂಡನು ಹೇಳಿದಷ್ಟನ್ನು ಮಾತ್ರ ಅನುಸರಿಸಿ ಮನೆಯೊಳಗೆ ಸೀಮಿತವಾಗಿರಬೇಕೆಂಬ ಮನೋಭಾವವಿದ್ದರೆ, ಸಹಚರ ಪದ್ಧತಿಯಲ್ಲಿ ಗಂಡು-ಹೆಣ್ಣು ಸಮಾನವಾಗಿ ಬದುಕಿನ ಪಯಣದಲ್ಲಿ ಜೊತೆಯಾಗಿ ಸಾಗುವ ಪರಸ್ಪರ ಗೌರವದ ಸಂಬಂಧವಿದೆ ಎಂದು ಹೇಳಿದರು.
ಜೇಡರ ದಾಸಿಮಯ್ಯನವರು ತಮ್ಮ ಹೆಂಡತಿಯನ್ನು ಎಂತಹ ಸಹಚರಿಯಾಗಿ ಕಂಡಿದ್ದರು ಎಂಬುದನ್ನು ಉಲ್ಲೇಖಿಸಿ, “ಹೆಂಡತಿ ದುಗ್ಗಳೆಯ ತಂದು ನಾನು ಬದುಕಿದೆನು”ಎಂಬ ವಚನದ ಮೂಲಕ ಅವರು ಹೆಂಡತಿಯನ್ನು ಆರಾಧ್ಯ ದೈವದಂತೆ ಕಂಡ ಅಪೂರ್ವ ಉದಾಹರಣೆಯನ್ನು ವಿವರಿಸಿದರು. ಶರಣರ ಜೀವನ ದರ್ಶನದಲ್ಲಿ ಗಂಡು-ಹೆಣ್ಣು ಸಮಾನತೆ ಮತ್ತು ಪರಸ್ಪರ ಗೌರವಕ್ಕೆ ಮಹತ್ವ ನೀಡಲಾಗಿದೆ ಎಂದು ತಿಳಿಸಿದರು.

ಮುಂದುವರೆದು ಅವರು “ವಧು” ಮತ್ತು “ವರ” ಎಂಬ ಪದಗಳ ಅರ್ಥವನ್ನು ಬಹಳ ಮಾರ್ಮಿಕವಾಗಿ ವಿವರಿಸಿದರು. “ವಧು” ಎಂಬ ಪದವು ಮೂಲದಲ್ಲಿ “ವಧೆಗೆ ಅರ್ಹಳಾದವಳು” ಎಂಬ ಅರ್ಥ ಹೊಂದಿದೆ ಎಂದು ಹೇಳಿ, ಸತಿ ಸಹಗಮನ ಮುಂತಾದ ಅನಿಷ್ಟ ಪದ್ಧತಿಗಳ ಪ್ರಾರಂಭದ ಹಿಂದೆ ಇರುವ ಕ್ರೂರ ಸಾಮಾಜಿಕ ಮನೋಭಾವವನ್ನು ವಿವರಿಸಿದರು. ಆದರೆ ಶರಣರು 12ನೇ ಶತಮಾನದಲ್ಲಿಯೇ ಇಂತಹ ಅನಿಷ್ಟ ಆಚರಣೆಗಳನ್ನು ತಿರಸ್ಕರಿಸಿದ ಬಗ್ಗೆ ಹಲವು ವಚನಗಳನ್ನು ಉಲ್ಲೇಖಿಸಿ ವಿವರಿಸಿದರು.
ಅವರು ಮನುಸ್ಮೃತಿ ಮೊದಲಾದ ವೈದಿಕ ಗ್ರಂಥಗಳಲ್ಲಿ ಗಂಡಸರಿಗೆ ಮುಕ್ತಿ ಹೇಗೆ ಮತ್ತು ಹೆಂಗಸರಿಗೆ ಮುಕ್ತಿ ಹೇಗೆ ಎಂಬುದನ್ನು ಬೇರೆಬೇರೆ ರೀತಿಯಲ್ಲಿ ನಿರೂಪಿಸಿರುವ ಅಸಂಗತಗಳನ್ನು ಉಲ್ಲೇಖಿಸಿದರು. ಹಿಂದಿನ ಜನ್ಮದ ಪಾಪದ ಫಲವೇ ಹೆಣ್ಣಿನ ಜನ್ಮ, ಗಂಡಿಗೆ ಅಧೀನವಾಗಿ ಸೇವೆ ಮಾಡುವುದೇ ಹೆಣ್ಣಿನ ಕರ್ತವ್ಯ ಮತ್ತು ಅದೇ ಮೋಕ್ಷಕ್ಕೆ ದಾರಿ ಎಂಬಂತೆ ರೂಪುಗೊಂಡಿರುವ ಕೆಟ್ಟ ಸಾಮಾಜಿಕ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದರು. ಇದಕ್ಕೆ ವಿರುದ್ಧವಾಗಿ ಮದುವೆಯಾಗದೆ ಇದ್ದರೂ ಆತ್ಮಸಾಕ್ಷಾತ್ಕಾರವನ್ನು
ಪಡೆದ ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣೆಯರನ್ನು ಉದಾಹರಿಸಿ ಶರಣ ಪರಂಪರೆ ಮಹಿಳೆಯ ಆತ್ಮಸ್ವಾತಂತ್ರ್ಯವನ್ನು ಹೇಗೆ ಗೌರವಿಸಿದೆ ಎಂಬುದನ್ನು ವಿವರಿಸಿದರು.
“ವರ” ಎಂಬ ಪದದ ಅರ್ಥ “ಬೇಕಾದುದನ್ನು ನೀಡುವವನು” ಅಥವಾ “ವಧೆಯನ್ನು ಕೊಡುವವನು” ಎಂಬುದಾಗಿ ರೂಪುಗೊಂಡಿದ್ದು, ವೈದಿಕ ವ್ಯವಸ್ಥೆಯ ಮೂಲಕ ಇಂತಹ ಪದ್ಧತಿಗಳನ್ನು ಸಮಾಜದ ಮೇಲೆ ಹೇಗೆ ಹೇರಲಾಗಿದೆಯೆಂಬುದನ್ನು ಅವರು ವಿಶ್ಲೇಷಿಸಿದರು. ಶರಣರು ಈ ಕ್ರೂರ ವೈದಿಕ ವ್ಯವಸ್ಥೆಯನ್ನು ನಿರಾಕರಿಸಿ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು ಎಂದು ಹೇಳಿದರು.
ಇದಕ್ಕೂ ಮುಂದಾಗಿ ಮಂಗಳಸೂತ್ರದ ಬಗ್ಗೆ ಮಾತನಾಡಿದ ಅವರು, ಮೂಲದಲ್ಲಿ “ಗಳ ಸೂತ್ರ” ಎನ್ನುವುದು ಹೇಗೆ “ಮಂಗಳಸೂತ್ರ”ವಾಗಿ ರೂಪಾಂತರಗೊಂಡಿತು ಮತ್ತು ಅದರ ಹಿಂದೆ ಅಡಗಿರುವ ಗುಲಾಮಗಿರಿಯ ಸಂಕೇತವನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಶರಣರ ದೃಷ್ಟಿಯಲ್ಲಿ ಕುಟುಂಬವು ಯಜಮಾನಿಕೆ ಆಧಾರಿತ ವ್ಯವಸ್ಥೆಯಾಗಿರದೆ ಸಹಚರ ಪದ್ಧತಿಯ ಸಮಾನತೆಯ ಕುಟುಂಬವಾಗಿತ್ತು ಎಂದು ಹೇಳಿದರು.

ಬಸವಣ್ಣನವರು ತಮ್ಮ ಹೆಂಡತಿ ನೀಲಾಂಬಿಕೆಯನ್ನು ಸೇರಿದಂತೆ ಎಲ್ಲಾ ಶರಣರು ತಮ್ಮ ಹೆಂಡತಿಯನ್ನು “ವಿಚಾರಪತ್ನಿ” ಎಂದು ಕರೆದಿರುವುದು ಅವರಿಗೆ ನೀಡಿದ ಗೌರವದ ಸಂಕೇತವಾಗಿದೆ ಎಂದು ತಿಳಿಸಿದರು. ಆದರೆ ಭಾರತೀಯ ವೈದಿಕ ಮನಸ್ಥಿತಿಯಲ್ಲಿ ಹೆಣ್ಣು ಗಂಡಿಗಿಂತ ಕಡಿಮೆ ಜ್ಞಾನಿಯೇ ಆಗಿರಬೇಕು ಎಂಬ ತಪ್ಪು ಕಲ್ಪನೆ ಹೇರಲ್ಪಟ್ಟಿದೆ ಎಂದು ಅವರು ಹೇಳಿದರು. ಇಂತಹ ಮನೋಭಾವದಿಂದ ಮಹಿಳೆಯರ ಮೇಲೆ ದೌರ್ಜನ್ಯ, ಬಲಾತ್ಕಾರ ಮತ್ತು ಅತ್ಯಾಚಾರಗಳಂತಹ ಅನೇಕ ಘಟನೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದರು. ಈ ಕುತ್ಸಿತ ಮನೋಭಾವದಿಂದ ಹೊರಬರಲು ಶರಣರ ಜೀವನದರ್ಶನವನ್ನು ಅರಿತು ಅನುಸರಿಸುವುದು ಅಗತ್ಯ ಎಂದು ಹೇಳಿದರು.
ಮುಂದುವರೆದು “ಹೆಣ್ಣು ಚಂಚಲೆ” ಎಂಬ ವೈದಿಕ ಮನೋಭಾವವನ್ನು ಪ್ರಶ್ನಿಸಿ, ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸ್ಥಿರತೆ ಹಾಗೂ ಕಾರ್ಯಕ್ಷಮತೆಯನ್ನು ಹೊಂದಿರುವುದು ಕಂಡುಬಂದಿದೆ ಎಂದು ತಿಳಿಸಿದರು. ಪುರುಷರು ಒಂದೇ ಕೆಲಸ ಮಾಡಿದರೆ ಮಹಿಳೆಯರು ಮಲ್ಟಿ-ಟಾಸ್ಕಿಂಗ್ ಮೂಲಕ ಮೂರುಪಟ್ಟು ಹೆಚ್ಚು ಕೆಲಸ ನಿರ್ವಹಿಸುತ್ತಾರೆ ಎಂದು ವಿವರಿಸಿದರು. ಅದಕ್ಕಾಗಿಯೇ “ಯಶಸ್ವಿ ಪುರುಷರ ಹಿಂದೆ ಒಬ್ಬ ಮಹಿಳೆ ಇದ್ದಾಳೆ” ಎಂಬ ಮಾತು ಪ್ರಚಲಿತವಾಗಿದೆ ಎಂದರು.
ಗಂಡು-ಹೆಣ್ಣು ಸಹಯೋಗದ ಮೂಲಕವೇ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿ, ಶರಣರ ಸಹಚರ ಪದ್ಧತಿಯನ್ನು ನಾವು ಜೀವನದಲ್ಲಿ ಅನುಸರಿಸಬೇಕೆಂದು ಕರೆ ನೀಡಿದರು. ಮಹಿಳೆಯರು ವಿವಿಧ ಮೌಢ್ಯಗಳ ಬೆನ್ನತ್ತಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದೂ, “ಕಾಯಕದಿಂದ ಸೌಂದರ್ಯ ಹೆಚ್ಚಾಗುತ್ತದೆ, ಮೌಢ್ಯಗಳಿಂದಲ್ಲ” ಎಂದು ಹೇಳಿದರು. ಸಹಜವಾಗಿ ಮತ್ತು ನೈಸರ್ಗಿಕವಾಗಿ ಬದುಕಲು ಕಲಿಯಬೇಕು ಎಂದು ಸಲಹೆ ನೀಡಿದರು. ಹಿಂದಿನ ಕಾಲದ ಮೌಢ್ಯಗಳ ಜೊತೆಗೆ ಆಧುನಿಕ ಕಾಲದಲ್ಲಿ ಮೂಡಿಬಂದಿರುವ ಹೊಸ ಮೌಢ್ಯಗಳನ್ನು ಕೂಡ ನಿರಾಕರಿಸಬೇಕೆಂದು ಹೇಳಿದರು.

ಪರಿಸರ ಮಾಲಿನ್ಯದ ಕುರಿತು ಮಾತನಾಡಿದ ಅವರು, ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ವಿವರಿಸಿದರು. ಹಿಂದೆ ಸಹಜ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುತ್ತಿದ್ದರೆ, ಇಂದು ಫ್ರಿಜ್ ಸಂಸ್ಕೃತಿ, ಪೆಸ್ಟಿಸೈಡ್ಸ್ ಹಾಗೂ ಫಾಸ್ಟ್ ಫುಡ್ ಕ್ರಮಗಳಿಂದ ಆರೋಗ್ಯ ಹಾನಿಯಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶರಣರ “ಆಹಾರವ ಕಿರಿದು ಮಾಡಿರಣ್ಣ” ಎಂಬ ಸೂಕ್ತಿಯನ್ನು ಉಲ್ಲೇಖಿಸಿದರು. ಆಹಾರ ಪದ್ಧತಿ, ನೈತಿಕತೆ, ಗಂಡು-ಹೆಣ್ಣು ಸಮಾನತೆ, ಬಡ-ಶ್ರೀಮಂತ ವ್ಯತ್ಯಾಸ ಸೇರಿದಂತೆ ಹಲವು ಸಾಮಾಜಿಕ ವಿಚಾರಗಳನ್ನು ಅವರು ವಿವರಿಸಿದರು. “ಹಬ್ಬದ ಕರಿ” ಎಂಬ ಸಂಪ್ರದಾಯದ ಅರ್ಥವನ್ನು ತಿಳಿಸಿ, ಹಿಂದೆ ಹಬ್ಬದ ನಂತರ ಮಾತ್ರ ವಿಶೇಷ ಆಹಾರ ಸೇವನೆಯ ಪದ್ಧತಿ ಇತ್ತಾದರೆ, ಇಂದು ಪ್ರತಿದಿನವೂ ಕರಿದ ಆಹಾರ ಸೇವಿಸುವುದು ಆರೋಗ್ಯಕರವಲ್ಲ ಎಂದು ಹೇಳಿದರು.
ಕುಟುಂಬವು ಗಂಡು-ಹೆಣ್ಣು ಇಬ್ಬರೂ ಸೇರಿ ನಿರ್ಧಾರ ತೆಗೆದುಕೊಳ್ಳುವ “ಮಹಾಮನೆ” ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಹೆಣ್ಣು ಗಂಡಿನ ನಂತರ ಊಟ ಮಾಡಬೇಕು, ಬೆಳಿಗ್ಗೆ ಗಂಡಿಗಿಂತ ಮೊದಲೇ ಎದ್ದೇಳಬೇಕು ಎಂಬಂತಹ ಅಸಂಗತ ಸಾಮಾಜಿಕ ನಿಯಮಗಳನ್ನು ಪ್ರಶ್ನಿಸಿದರು.
ಇನ್ನೂ ಮುಂದುವರೆದು, ಹೊಟ್ಟೆತಿಪ್ಪಲಿಗಾಗಿ ದೇಹ ಮಾರಿಕೊಂಡು ಬದುಕುತ್ತಿದ್ದ 23 ಪಣ್ಯಸ್ತ್ರೀಯರನ್ನು ಪುಣ್ಯಸ್ತ್ರೀಯರನ್ನಾಗಿ ಪರಿವರ್ತಿಸಿದ ಶರಣರ ಉದಾತ್ತ ಮನೋಭಾವವನ್ನು ಅವರು ಉಲ್ಲೇಖಿಸಿದರು. ಇಂತಹ ಮಾನವೀಯ ಮೌಲ್ಯಗಳನ್ನು ಹೊಂದಿದ ಸಮಾಜ ನಿರ್ಮಾಣವೇ ಶರಣರ ಆಶಯವಾಗಿತ್ತು ಎಂದು ಹೇಳಿದರು.
ಅಂತಿಮವಾಗಿ, “ಶರಣರನ್ನು ನೆನೆಯುವುದು ಎಂದರೆ ಸಹಸಮಾಜವನ್ನು ನೆನೆಯುವುದೇ” ಎಂದು ಅವರು ತಮ್ಮ ಉಪನ್ಯಾಸವನ್ನು ಸಮಾಪ್ತಿಗೊಳಿಸಿದರು.
ಕಾರ್ಯಕ್ರಮದಲ್ಲಿ ಬಸವ ತತ್ವಾಸಕ್ತರು, ಗಣ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಪನ್ಯಾಸವನ್ನು ಆಸಕ್ತಿಯಿಂದ ಆಲಿಸಿದರು.
