ಬೆಳಗಾವಿ
ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ನಿಮಿತ್ತ ಭಾನುವಾರ ಭವ್ಯ ಮೆರವಣಿಗೆ ನಡೆಯಿತು.
ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾವಿರಾರು ಬಸವಭಕ್ತರು ಸೇರಿದ್ದ ಮೆರವಣಿಗೆಯಲ್ಲಿ ವಚನ ಕಟ್ಟುಗಳ ಪಲ್ಲಕ್ಕಿ ಮೆರವಣಿಗೆಯು ಮುಂಚೂಣಿಯಲ್ಲಿತ್ತು.


ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆಯು ಕಾಕತಿ ವೇಸ್ ಮೂಲಕ ಹಾಯ್ದು ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ ಮೂಲಕ ಸಾಗಿ ಲಿಂಗರಾಜ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಂಡಿತು.

ಉಡುಪಿಯಿಂದ ಬಂದಿದ್ದ ಚಂಡೇ ಮದ್ದಳೆ ತಂಡ, 16 ಅಡಿ ಎತ್ತರದ ಭವ್ಯ ಬಸವಣ್ಣನವರ ಮೂರ್ತಿ, ಎರಡು ಝಾಂಜ್ ಪಥಕಗಳು, ಬಸವಣ್ಣನವರ ಮೂರ್ತಿಯನ್ನು ಹೊತ್ತ ಡಿಜಿಟಲ್ ಆನೆ, ಆಕರ್ಷಕ ನೃತ್ಯ ಪ್ರದರ್ಶನ ನೀಡುತ್ತಿದ್ದ ಶಿವಶರಣೆಯರ ತಂಡ, ಸೌಂಡ್ ಸಿಸ್ಟಮ್ಸ್ ತಂಡ, ಒಂದು ಭವ್ಯವಾದ ಟ್ಯಾಬ್ಲೋ, ದಾವಣಗೆರೆಯ ಭಜನಾ ಮಂಡಳಿ, ರೂಪಕ ವಾಹನ, ಆಕರ್ಷಕ ಕೋಲಾಟ ಪ್ರದರ್ಶನ ನೀಡುತ್ತಿದ್ದ ತಂಡ, ಎಸ್ ಜಿ ಬಿ ಐ ಟಿ ಕಾಲೇಜಿನ ರೂಪಕ ವಾಹನ ಹಾಗೂ ಇನ್ನಿತರ ಹಲವಾರು ರೂಪಕ ವಾಹನಗಳು ಮೆರವಣಿಗೆಯ ವಿಶೇಷ ಆಕರ್ಷಣೆ ಆಗಿದ್ದವು.

ಮೆರವಣಿಗೆಯ ತುಂಬೆಲ್ಲ ಬಸವಣ್ಣನವರು, ಬಸವಾದಿ ಶರಣರ ಕುರಿತು ಜೈ ಜೈಕಾರಗಳು ಮತ್ತು ವಚನಗಳ ಪಠಣ ನಡೆದಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬಸವಭಕ್ತರು, ಅನುಯಾಯಿಗಳಿಗೆ ಲಿಂಗರಾಜ ಕಾಲೇಜು ಆವರಣದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಸೈನಿಕರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ರಮೇಶ ಚೌಗಲಾ ಮತ್ತು ಅಧ್ಯಕ್ಷ ಜಗದೀಶ ಪೂಜಾರಿ ಅವರುಗಳ ನೇತೃತ್ವದಲ್ಲಿ ನೂರಾರು ಸದಸ್ಯರು ಮೆರವಣಿಗೆ ಉದ್ದಕ್ಕೂ ಮೆರವಣಿಗೆಯ ಎಲ್ಲ ವ್ಯವಸ್ಥೆಗಳನ್ನು ಶಿಸ್ತುಬದ್ಧವಾಗ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಮೆರವಣಿಗೆಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿಮಠದ ಶ್ರೀಗುರುಸಿದ್ದೇಶ್ವರ ಸ್ವಾಮಿಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸೇರಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಕೆಎಲ್ಇ ಗೌರವ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಜಗದೀಶ ಶೆಟ್ಟರ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಬಸವ ಜಯಂತಿ ಉತ್ಸವ ಸಮಿತಿಯ ಮುಖ್ಯ ಸಂಚಾಲಕ ಬಸವರಾಜ ರೊಟ್ಟಿ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಶಾಸಕ ಆಸೀಫ್ ಶೇಟ್, ಮಹಾಪೌರರಾದ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಲಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಸಚಿವ ಎ.ಬಿ. ಪಾಟೀಲ ಸೇರಿದಂತೆ ಹಲವಾರು ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ್ , ಡಾ.ಎಚ್ .ಬಿ. ರಾಜಶೇಖರ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಶಶಿಕಾಂತ ನಾಯಕ, ಮಾಜಿ ಶಾಸಕ ವಿ ಐ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಹಲವಾರು ನಗರ ಸೇವಕರುಗಳು, ಬಸವಪರ, ಲಿಂಗಾಯತಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಬಸವ ಬೆಳಕು ಬೆಳಗಾವಿ ಶಕ್ತಿ ಸೇರಿ ಲಿಂಗಾಯತ ಧರ್ಮ 2017ನ್ನು ನೆನಪಿಸುತ್ತಿದೆ 💐✌🏻👏🏻ಶರಣು 🙏🏻