ಯಲಬುರ್ಗಾ:
ತಾಲೂಕಿನ ಮರಕಟ್ಟ ಗ್ರಾಮದ ಶಿವಾನಂದ ಮಠದಲ್ಲಿ ಗುರುವಾರ ಬಸವ ಕೇಂದ್ರದ ವತಿಯಿಂದ ೧೩೮ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಮಹಾನುಭಾವಿ ಅಲ್ಲಮಪ್ರಭು ಜಯಂತ್ಯೋತ್ಸವ ಕಾಯ೯ಕ್ರಮ ನಡೆಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹನಮಗೌಡ ಬಳ್ಳಾರಿ ವಹಿಸಿದ್ದರು.

ಮುಖ್ಯ ಅತಿಥಿಗಳಾದ ಬಸವರಾಜಪ್ಪ ಇಂಗಳದಾಳ ಮಾತನಾಡುತ್ತ, ಈ ಜಗತ್ತು ಕಂಡ ಮಹಾನುಭಾವಿಗಳಲ್ಲಿ ಶ್ರೇಷ್ಠ ಮಹಾನುಭಾವಿಗಳು ಅಲ್ಲಮರು. ಅವರು ಆಧ್ಯಾತ್ಮಿಕ ರಂಗದಲ್ಲಿ ದೇವರು ಮತ್ತು ಧಮ೯ದ ಬಗ್ಗೆ ಸ್ಪಷ್ಠ ಅರಿವಿಲ್ಲದೆ ಇದ್ದ ಸಾಧಕರಿಗೆ ಮಾಗ೯ದಶ೯ನ ನೀಡಿದರು. ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಅನುಭವ ಮಂಟಪದ ಕಾಯ೯ಕ್ಕೆ ಬೆನ್ನೆಲುಬಾಗಿ ನಿಂತರು ಎಂದು ಬಣ್ಣಿಸಿದರು.

ಪ್ರಾಸ್ತಾವಿಕವಾಗಿ ಬಸವ ಕೇಂದ್ರದ ಅದ್ಯಕ್ಷರಾದ ಅಮರೇಶಪ್ಪ ಬಳ್ಳಾರಿ ಅವರು ಮಾತನಾಡುತ್ತಾ, ಶರಣರ ಜಯಂತಿಗಳನ್ನು ಆಚರಿಸುವುದೇ ನಮ್ಮೆಲ್ಲರ ಸೌಭಾಗ್ಯ. ಶರಣರು ನಮಗಾಗಿ ನೀಡಿದ ಅತ್ಯಮೂಲ್ಯ ವಚನ ಸಾಹಿತ್ಯ ಸಂದೇಶಗಳನ್ನು ಅರಿತು, ಅದರಂತೆ ನಡೆಯುವ ಪ್ರಯತ್ನ ಮಾಡೋಣ ಎಂದು ನುಡಿದರು.

ಶಿವಾನಂದ ಸೇವಾ ಸಮಿತಿ ಉಪಾಧ್ಯಕ್ಷರಾದ ಹನಮಂತಪ್ಪ ಮೇಟಿ ಇವರು ಉಪಸ್ಥಿತರಿದ್ದರು. ಬಸವ ಕೇಂದ್ರದ ಎಲ್ಲಾ ಪದಾಧಿಕಾರಿಗಳು, ಶರಣ ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
