ಶ್ರಾವಣ ವಿಶೇಷ: ಧಾರವಾಡದ 550 ಮನೆಗಳಲ್ಲಿ ಏಕಕಾಲಕ್ಕೆ ವಚನ ಚಿಂತನೆ

ಬಸವ ಮೀಡಿಯಾ
ಬಸವ ಮೀಡಿಯಾ

17 ಬಡಾವಣೆಗಳಲ್ಲಿ ವಚನೋತ್ಸವ, ಪ್ರತಿ ರವಿವಾರ ವಿಶೇಷ ಕಾರ್ಯಕ್ರಮ

ಧಾರವಾಡ:

ಶ್ರಾವಣ ಮಾಸ ಆಗಸ್ಟ್ 12ರಿಂದ ಆರಂಭಗೊಳ್ಳಲಿದ್ದು, ಪ್ರಯುಕ್ತ ಒಂದು ತಿಂಗಳವರೆಗೆ ಪ್ರತಿನಿತ್ಯ ವಚನೋತ್ಸವ ಕಾರ್ಯಕ್ರಮ ಶಹರದ 17 ಬಡಾವಣೆಯ 550ಕ್ಕೂ ಹೆಚ್ಚು ಮನೆಗಳಲ್ಲಿ ಏಕಕಾಲಕ್ಕೆ ವಚನ ವಿಶ್ಲೇಷಣೆ ಹಾಗೂ ಪ್ರತಿ ರವಿವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಸೆಪ್ಟಂಬರ್ 13 ಕ್ಕೆ ಮಂಗಲೋತ್ಸವ ನಡೆಯಲಿದೆ ಎಂದು ಬಸವ ಕೇಂದ್ರದ ಗೌರವಾಧ್ಯಕ್ಷರಾದ ಡಾ. ವೀರಣ್ಣ ರಾಜೂರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಿಚಾರಧಾರೆಯನ್ನು ಮನೆ ಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರಾವಣ ಮಾಸದ ಅವಧಿಯಲ್ಲಿ ಎಲ್ಲಾ ಬಡಾವಣೆಗಳ ಮನೆಯಲ್ಲಿ ನಿತ್ಯ ಸಂಜೆ 6 ರಿಂದ 7 ರವರೆಗೆ ವಚನೋತ್ಸವ ನಡೆಸುತ್ತಾ ಬಂದಿದ್ದು, ಈ ಬಾರಿ ವಿಶೇಷ ಸಮಾರಂಭ ಏರ್ಪಡಿಸುವ ಮೂಲಕ ಮಕ್ಕಳು, ಯುವಜನ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.

ಮಕ್ಕಳಿಗೆ ವಚನ ಲೇಖನ ಸ್ಪರ್ಧೆ ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡುವ ಯೋಜನೆ ಹೊಂದಿದೆ. ಮಹಿಳೆಯರಿಗೆ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಜಾತಿ, ಧರ್ಮ, ಲಿಂಗಭೇದವಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಆಗಸ್ಟ್ 12 ರ ಸಂಜೆ 5ಕ್ಕೆ ಲಿಂಗಾಯತ ಟೌನ್ ಹಾಲ್ ನಲ್ಲಿ ನಡೆಯಲಿರುವ ವಚನ ಪರಿಮಳ ಭಾಗ 9 ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಜಿ.ಎ. ತಿಗಡಿ ಅತಿಥಿಯಾಗಿ ಪಾಲ್ಗೊಳ್ಳುವರು. ಬಸವ ಪಂಚಮಿ ನಿಮಿತ್ತ 16ರಂದು ಬೆಳಿಗ್ಗೆ 10 ಗಂಟೆಗೆ ರಾಯಪುರ ನಿರಾಶ್ರಿತ ಕೇಂದ್ರದಲ್ಲಿ ಹಾಲು, ಉಂಡಿ ವಿತರಣೆ ಮಾಡಲಾಗುವುದು.

23 ರಂದು ಬೆಳಿಗ್ಗೆ 10 ಗಂಟೆಗೆ ಶಾರದಾ ಆರ್ ಎಲ್ ಎಸ್ ಶಾಲೆಯಲ್ಲಿ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಬರೆಯುವ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ಹಾಗು ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು, ಪ್ರಮಾಣ ಪತ್ರ ನೀಡಲಾಗುವುದು.

30 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ವಚನ ಗಾಯನ ಸ್ಪರ್ಧೆ ಜರುಗಲಿದ್ದು, ಸೆಪ್ಟೆಂಬರ್ 6 ರ ಸಂಜೆ 6ಕ್ಕೆ ಶ್ರೀ ಬನಶಂಕರಿ ಭವನದಲ್ಲಿ ಶರಣ ಸಂಗಮ ನಡೆಯಲಿದೆ.

13ಕ್ಕೆ ಸಂಜೆ 5 ಗಂಟೆಗೆ ಕವಿವ ಸಂಘದಲ್ಲಿ ವಚನೋತ್ಸವ ಸಮಾರೋಪ ಸಮಾರಂಭ ಹಾಗೂ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಸಮಾರಂಭ ಜರುಗಲಿದೆ. ಶಿವಮೊಗ್ಗದ ಡಾ. ಬಸವ ಮರಳುಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಬಸವಕೇಂದ್ರದ ಅಧ್ಯಕ್ಷ ಸಿದ್ದರಾಮಯ್ಯ ನಡಕಟ್ಟಿ ಅಧ್ಯಕ್ಷತೆ ವಹಿಸುವರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಆಸಕ್ತರು, ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಣ್ಣ ನಡಕಟ್ಟಿ, ಬಸವಂತಪ್ಪ ತೋಟದ, ಶಿವಣ್ಣ ಶರಣ್ಣವರ, ಶೇಖರ ಕುಂದಗೋಳ, ಶ್ಯಾಮಲಿಂಗ ಜವಳಗಿ, ಶಕುಂತಲಾ ಮನ್ನಂಗಿ, ಅನೀಲ ಅಂಗಡಿ, ಪ್ರಮೀಳಾ ಜಕ್ಕಣ್ಣವರ, ಲತಾ ಮಂಟಾ, ಶಿವರುದ್ರಗೌಡ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
1 Comment

Leave a Reply

Your email address will not be published. Required fields are marked *