ಕಲಬುರಗಿ:
ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು.


ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ ಶಿವಯೋಗಿಗಳ ಗದ್ದುಗೆಗೆ ಅಭಿಷೇಕದ ಬದಲಾಗಿ ವಚನಾಭಿಷೇಕ ಮಾಡಿ ಈ ವಿನೂತನ ವಚನ ಮಾಂಗಲ್ಯಕ್ಕೆ ಚಾಲನೆ ನೀಡಲಾಯಿತು.

ನಂತರ ಸುರುಗಿ ದಾರದ ಬದಲಾಗಿ ರುದ್ರಾಕ್ಷಿ ಕಂಕಣ ಕಟ್ಟುವ ಮೂಲಕ ಮತ್ತೆ ವಚನ ಪ್ರತಿಜ್ಞಾವಿಧಿ ಸ್ವೀಕರಿಸಿರುವ ಇದು ಸಂಪೂರ್ಣ ಬಸವತತ್ವಮಯವಾಗಿತ್ತು. ಇಲಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತಸ್ವಾಮಿಗಳ ಆಶೀರ್ವಚನವಿತ್ತು, ವಚನಗಾಯನವಿತ್ತು, ದೇಸಿ ವಾದ್ಯಮೇಳವಿತ್ತು.
ಚಿಂತಕರು, ವಿಚಾರವಾದಿಗಳು, ಬಸವತತ್ವ ಪ್ರಸಾರಕರು ಮತ್ತು ಪಾಲಕರು, ನಾಡಿನ ವಿವಿಧ ಗಣ್ಯಮಾನ್ಯರು, ರಾಜಕೀಯ ನಾಯಕರ ಉಪಸ್ಥಿತಿಯಿತ್ತು.

ಆಗಮಿಸಿದ ಎಲ್ಲರಿಗೂ ಶ್ರೀ ಷಣ್ಮುಖ ಶಿವಯೋಗಿಗಳ ವಚನ ಸಾಹಿತ್ಯ ತಾಂಬೂಲ ಕೊಡುಲಾಯಿತು. ಒಟ್ಟಿನಲ್ಲಿ ಯಾವುದೇ ಅಬ್ಬರ ಆಡಂಬರಕ್ಕೆ ಅವಕಾಶವಿಲ್ಲದೇ ಅತ್ಯಂತ ಅರ್ಥಪೂರ್ಣವಾಗಿ, ಸರಳ ರೀತಿಯಲ್ಲಿ ನಡೆದ ಈ ಕಲ್ಯಾಣ ಮಹೋತ್ಸವವು ಸಮಾಜಕ್ಕೊಂದು ಉತ್ತಮ ಸಂದೇಶ ಸಾರಿತು.

ಆದರ್ಶಪ್ರಾಯವಾದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹೇಶ ಕಲ್ಲಾ ಮತ್ತು ರಂಜನಾ ಬಾಳಿ ನೂತನ ಶರಣ ದಂಪತಿಗಳಿಗೆ ಆಗಮಿಸಿದವರೆಲ್ಲ ಶುಭಕೋರಿ ಸಂತಸಪಟ್ಟರು.
ಶ್ರೀದೇವಿ ಮತ್ತು ಶರಣಬಸಪ್ಪ ಕಲ್ಲಾ ಮತ್ತು ನಿರ್ಮಲಾ ಮತ್ತು ಅಣ್ಣಾರಾವ ಬಾಳಿ ಕುಟುಂಬವರ್ಗ, ಬಂಧುಗಳು, ಮಿತ್ರರು, ಬಸವ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.
ವಚನಗಳೊಂದಿಗೆ ಸೊಸೆಗೆ ಸ್ವಾಗತ
ಕಲ್ಲಾ ಪರಿವಾರದ ಸೊಸೆ ರಂಜನಾ ಮೊದಲ ಬಾರಿ ಪತಿ ಮನೆಗೆ ಬಂದಾಗ ವಚನ ಹಾರೈಕೆಗಳ ಹೇಳಿ ಮನೆಗೆ ಸ್ವಾಗತಿಸಲಾಯಿತು. ಬಸವೇಶ್ವರ ಭಾವಚಿತ್ರಕ್ಕೆ ಅವರು ನಮಿಸುವುದು, ನಂತರ ಅವರು ಸೆರಗೊಡ್ಡಿದಾಗ ವಚನ ಸಾಹಿತ್ಯ ಗ್ರಂಥವನ್ನು ಉಡಿ ತುಂಬಲಾಯಿತು. ನಂತರ ಬಸವ ರಕ್ಷಾ ಕವಚದ ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.
