ನಿಜಾಚರಣೆ: ಲಿಂಗಾಯತ ತತ್ವದಲ್ಲಿ ಪುಷ್ಪವತಿ ಆರತಕ್ಷತೆಯ ಮಹತ್ವ

ಕೊಪ್ಪಳ:

ಹೆಣ್ಣುಮಗುವಿನಲ್ಲಿ ೧೨-೧೬ನೇ ವಯಸ್ಸಿನಲ್ಲಿ ದೊಡ್ಡವಳಾಗುವುದು ’‘ಮೈನರೆಯುವುದು’ ‘ಪುಷ್ಪವತಿಯಾಗುವುದು’ ‘ ನೈಸರ್ಗಿಕವಾದ ಮತ್ತು ಸಹಜವಾದ ಒಂದು ಜೀವನದ ಪ್ರಸಂಗವಾಗಿದೆ.

ಈ “ಪುಷ್ಪವತಿ ಆರತಕ್ಷತೆ” ಪ್ರಸಂಗದಲ್ಲಿ ಕಾರ್ಯಕ್ರಮವನ್ನು ವೈಜ್ಞಾನಿಕವಾಗಿ ಅರ್ಥಪೂರ್ಣವಾಗಿ ಆಚರಿಸಬೇಕಾದುದು ಇಂದಿನ ಸಮಾಜದ ಜವಾಬ್ದಾರಿ ಎಂದು ಶರಣತತ್ವ ಚಿಂತಕರು ಮತ್ತು ಅನುಭಾವಿಗಳಾದ ಡಾ. ಸಂಗಮೇಶ ಕಲಹಾಳ ಸಂದೇಶ ನೀಡಿದರು.

ಅವರು ಕೊಪ್ಪಳದ ನಿವಾಸಿಗಳಾದ ಬಸನಗೌಡರು ಮತ್ತು ಗಿರಿಜಾದೇವಿ ಪಾಟೀಲ, ವಣಗೇರಿ ಹಿರಿಯ ದಂಪತಿಗಳ ಕುಟುಂಬದಲ್ಲಿ ಇತ್ತೀಚೆಗೆ ನಡೆದ ಅವರ ಮೊಮ್ಮಗಳು “ಸನ್ಮತಿ”ಯ ಪುಷ್ಪವತಿ ಆರತಕ್ಷತೆ ಕಾರ್ಯಕ್ರಮದಲ್ಲಿ ಅನುಭಾವ ನೀಡುತ್ತ ಮಾತನಾಡುತ್ತಿದ್ದರು.

ಈ ಪುಷ್ಪವತಿ ಆರತಕ್ಷತೆಯನ್ನು ಲಿಂಗಾಯತ ಧರ್ಮ ನಿಜಾಚರಣೆ ಮಾದರಿಯಲ್ಲಿ ಆಚರಿಸಲಾಯಿತು. ಪುಷ್ಪವತಿ ಕಾರ್ಯಕ್ರಮವು ಮನೆಯವರೆಲ್ಲಾ ಸೇರಿಕೊಂಡು ಅತ್ಯಂತ ಆಪ್ತವಾಗಿ, ಕುಟುಂಬದ ಬಂಧು-ಬಾಂಧವರೊಂದಿಗೆ ಸರಳವಾಗಿ ನೆರವೇರಿಸಿದರು.

 ಡಾ. ಸಂಗಮೇಶ ಕಲಹಾಳ ಅವರ ಮಾರ್ಗದರ್ಶನದಲ್ಲಿ, ಅಂದು ಬೆಳಗಿನ ಸಮಯದಲ್ಲಿ ಮೊಮ್ಮಗಳು ‘ಸನ್ಮತಿ’ಗೆ ಇಷ್ಟಲಿಂಗ ದೀಕ್ಷೆಯನ್ನು ಶಿವಬಸವ ವೀರಾಪೂರ ನೀಡಿದರು.

ನಂತರ ಮನೆಯ ಹಾಲ್ ನಲ್ಲಿ ಗುರು ಬಸವಣ್ಣನವರ ಭಾವಚಿತ್ರ, ವಚನಸಾಹಿತ್ಯ ಗ್ರಂಥ ಇಟ್ಟು ಸರಳ ಪೂಜಾ ವಿಧಾನಗಳೊಂದಿಗೆ ಉಡಿತುಂಬಿ, ಹರಸಿ ಹಾರೈಸಿ ಮತ್ತು ಪುಷ್ಪವೃಷ್ಟಿ ಮಾಡುವ ಮೂಲಕ ನಡೆಸಲಾಯಿತು.

ಮಗುವಿನ ಅತ್ತೆ ವಿಜಯಲಕ್ಷ್ಮಿ ಬಸವರಾಜ ದೇಸಾಯಿ ಪ್ರಾರ್ಥನೆಗೈದು ಮಂಗಲ ಕಾರ್ಯಗಳನ್ನು ನಡೆಸಿದರು. ಮಗುವಿನ ತಾಯಿ ಕೀರ್ತಿ ಶಿವನಗೌಡ ಪಾಟೀಲರ ತಂದೆ ತಾಯಿಗಳು (ಹೆಣ್ಣು ಅಜ್ಜಿ-ಅಜ್ಜಾ) ಮತ್ತು ಕುಟುಂಬದವರೆಲ್ಲಾ ಸೇರಿ ಮಂಗಲ ಕಾರ್ಯಗಳನ್ನು ನೆರವೇರಿಸಿದರು.

ಮಗುವಿನ ತಂದೆ ಡಾ. ಶಿವನಗೌಡ ಪಾಟೀಲ ಅವರು ಸ್ವಾಗತಿಸುತ್ತ, ಲಿಂಗಾಯತ ತತ್ವಗಳ ಆಚರಣೆ ಸುಲಭವೂ, ನಿರಾಡಂಬರವೂ ಮತ್ತು ಖರ್ಚೇ ಇಲ್ಲದಂತೆ ಮಾಡುವಂತಹವು ಆಗಿವೆ ಎಂದರು.

ನಮ್ಮ ಮಗಳ ಕಾರ್ಯಕ್ರಮವನ್ನು ಹೆಮ್ಮೆಯಿಂದ ಲಿಂಗಾಯತ ನಿಜಾಚರಣೆ ಮೂಲಕ ನೆರವೇರಿಸುತ್ತಿದ್ದೇವೆ. ನಿಜಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿರುವ ಮಹಿಳೆಯರೆಲ್ಲರೂ ನಿಶ್ಚಿತವಾಗಿ ಪ್ರಭಾವಿತರಾಗುತ್ತಾರೆ ಮತ್ತು ಎಲ್ಲರೂ ನಿಜಾಚರಣೆ ವಿಧಾನಗಳನ್ನು ಹೆಚ್ಚು ಹೆಚ್ಚು ಆಚರಿಸುವಂತಾಗಲೆಂದು ಹಾರೈಸಿದರು.

ಡಾ. ಸಂಗಮೇಶ ಕಲಹಾಳರವರ ಅನುಭಾವ ನೀಡುತ್ತ, ಒಂದು ಹೆಣ್ಣುಮಗು ಪುಷ್ಪವತಿಯಾದಾಗ ತಂದೆ-ತಾಯಿಗಳ ಮತ್ತು ಕುಟುಂಬದವರ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು.

ಬಾಲ್ಯದಿಂದ ಪ್ರೌಢಾವಸ್ಥೆಗೆ ಹೋಗುವ ಮಹತ್ವದ ಹಂತವಿದು. ಸಂತಾನೋತ್ಪತ್ತಿ ಕ್ರಿಯೆಯ ಮೊದಲ ಹಂತವೂ ಆಗಿದೆ. ಮಗುವಿನ ದೇಹ, ಮನಸ್ಸು, ಭಾವನೆಗಳ ಮೇಲೆ ವಿಶೇಷ ಪ್ರಭಾವ ಬೀರುವ ಸಂದರ್ಭವೂ ಆಗಿದೆ. ಸಾಮಾಜಿಕ ಬದುಕಿನಲ್ಲಿ ಸಹ ಹಲವಾರು ಪ್ರಭಾವಗಳು ಆಗುತ್ತವೆ ಎಂದರು.

ಮೆದುಳಿನ ಹೈಪೋಥಲಮಸ್ ಸಂಕೇತ ನೀಡಿದಾಗ ಪಿಟ್ಯುಟರಿ ಗ್ರಂಥಿಯು ಬಿಡುಗಡೆ ಮಾಡುವ ಇಸ್ಟ್ರೋಜೆನ್ ಹಾರ್ಮೋನುಗಳು ಯೌವನಾವಸ್ಥೆ ಬದಲಾವಣೆಗಳಿಗೆ ಕಾರಣವಾಗುತ್ತವೆ. ಇದರಿಂದ ಹೆಣ್ಣುಮಗುವಿನಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಪ್ರಭಾವಗಳಾಗುತ್ತವೆ. ಆದ್ದರಿಂದ ತಂದೆ-ತಾಯಿಗಳು, ಕುಟುಂಬದವರು ಪ್ರೀತಿ, ವಿಶ್ವಾಸ, ಸಮಾಧಾನದಿಂದ ಮಗುವಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸರಿಯಾದ, ವೈಜ್ಞಾನಿಕವಾದ ಮಾಹಿತಿಗಳನ್ನು ತಿಳಿದಿರಬೇಕಾದುದು ಅತ್ಯವಶ್ಯಕವಾಗಿರುತ್ತದೆಯೆಂದರು. ಇದರಿಂದ ಮಗು ಸುಲಭವಾಗಿ ಯಾವುದೇ ತೊಂದರೆಗಳಿಲ್ಲದೇ ಬೆಳೆಯುವುದು. ಭವಿಷ್ಯದಲ್ಲಿ ಸಂತಾನಾಭಿವೃದ್ಧಿ ಪ್ರಸಂಗದಲ್ಲಿ ಆರೋಗ್ಯಪೂರ್ಣ ವಾತಾವರಣಕ್ಕೆ ಸಹಾಯವಾಗುವುದು.

ಪುಷ್ಪವತಿಯಾಗುವುದು ಹೆಣ್ಣುಮಗುವಿಗೆ ಆತಂಕ, ಮುಜುಗರದ ಪ್ರಸಂಗವಾದರೆ, ಹಿರಿಯರಲ್ಲಿ ಮಗಳು ಜವಾಬ್ದಾರಿ ಹೊತ್ತುಕೊಳ್ಳುವ ಮಟ್ಟಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆದಿದ್ದಾಳೆ ಎಂಬ ಆಂತರಿಕ ಸಡಗರವಿರುತ್ತದೆ. ಹೆಣ್ಣುಮಕ್ಕಳ ಬೆಳವಣಿಗೆಯಲ್ಲಿ ಇದು ಸಹಜ ಪ್ರಕ್ರಿಯೆಯಾಗಿದೆ.

ದೈಹಿಕ ಪ್ರಭಾವಗಳು (Physical changes) :

ಹೆಣ್ಣುಮಗು ಸಂತಾನಾಭಿವೃದ್ಧಿ ಸಾಮರ್ಥ್ಯಕ್ಕೆ ಸಿದ್ಧಳಾಗುವ ಮೊದಲ ಮೆಟ್ಟಿಲು ಇದಾಗಿದೆ. ಸಂತಾನೋತ್ಪತ್ತಿಗಾಗಿ ಅಗತ್ಯ ನೈಸರ್ಗಿಕ ದೈಹಿಕ ಬೆಳವಣಿಗೆಗಳಾಗುತ್ತವೆ. ದೇಹದ ಎತ್ತರ ಮತ್ತು ತೂಕದಲ್ಲಿ ಹೆಚ್ಚಳವಾಗುವುದು. ಭುಜ ಕಂಕುಳದಲ್ಲಿ, ಮೂತ್ರ ಜನನಾಂಗ ಮೇಲ್ಭಾಗ ಕೂದಲುಗಳು ಬೆಳೆಯುವುದು. ದೈಹಿಕವಾಗಿ ಮೊಡವೆಗಳು ಆಗುವುದು, ಸ್ತನಗಳ ಬೆಳವಣಿಗೆ ಪ್ರಾರಂಭವಾಗುವುದು. ಧ್ವನಿಯಲ್ಲಿ ಬದಲಾವಣೆಯಾಗುವುದು, ಸೊಂಟದ ಭಾಗದಲ್ಲಿ ಅಗಲವಾಗುವುದು, ತೊಡೆಗಳಲ್ಲಿ ಕೊಬ್ಬಿನಾಂಶ ಹೆಚ್ಚುವುದು, ಋತುಚಕ್ರ ಪ್ರಾರಂಭವಾಗುವುದು.

ಬೆವರಿನ ಗ್ರಂಥಿಗಳು ಹೆಚ್ಚು ಸಕ್ರಿಯವಾಗುವುದರಿಂದ ಮೈ ವಾಸನೆ ಉಂಟಾಗಬಹುದು. ಹಾರ್ಮೋನುಗಳ ಕಾರಣದಿಂದ ರಾತ್ರಿ ತಡವಾಗಿ ನಿದ್ರೆ ಬರುವುದು ಮತ್ತು ಬೆಳಿಗ್ಗೆ ಹೆಚ್ಚು ನಿದ್ರೆ ಮಾಡಬೇಕೆನಿಸುವುದು ಸಾಮಾನ್ಯವಾಗಿರುತ್ತವೆ.

ಮಾನಸಿಕ ಪ್ರಭಾವಗಳು (Mental changes) :

ಹೆಣ್ಣುಮಗು ಮಾನಸಿಕವಾಗಿ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತಾಳೆ. ಹೊಸ ವಿಚಾರಗಳನ್ನು ತಿಳಿಯುವ ಕುತೂಹಲ ಹೆಚ್ಚಾಗುವುದು. ಸ್ವತಂತ್ರವಾಗಿ ಯೋಚಿಸುವ ಮನೋಭಾವ ಮೂಡುವದು. ಕೆಲವೊಮ್ಮೆ ಗೊಂದಲ ಮತ್ತು ಅಸ್ಥಿರತೆ ಉಂಟಾಗುವುದು. ತನ್ನನ್ನು ತಾನೇ ಅರಿಯುವ ಚಿಂತನೆಗಳು ಬರುವವು.

ಭಾವನಾತ್ಮಕ ಪ್ರಭಾವಗಳು (Emotional changes) :

ತಂದೆ-ತಾಯಿ, ಕುಟುಂಬದವರು ಭಾವನಾತ್ಮಕ ಪ್ರಭಾವಗಳ ಬಗ್ಗೆ ಇನ್ನೂ ಹೆಚ್ಚು ಗಮನ ಕೊಡಬೇಕು. ಅವರ ಭಾವನೆಗಳಲ್ಲಿ ತೀವ್ರತೆ ಉಂಟಾಗುವುದು. ಹಠಾತ್ ಕೋಪ, ಕಿರಿಕರಿ, ನೊಂದುಕೊಳ್ಳುವದು. ತ್ವರಿತವಾಗಿ ಭಾವನೆಗಳಲ್ಲಿ ಬದಲಾವಣೆಗಳು. ಉಲ್ಲಾಸ, ಸಂತೋಷ, ಸಂಭ್ರಮ ಉಂಟಾಗುವುದು. ಪ್ರೀತಿ, ಆಕರ್ಷಣೆಯ ಭಾವನೆಗಳು, ಆತ್ಮವಿಶ್ವಾಸ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಆಗಬಹುದು. ತನ್ನ ರೂಪದ ಬಗ್ಗೆ ಅತಿಯಾದ ಕಾಳಜಿ ಅಥವಾ ಇತರರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಆತಂಕ ಕಾಡಬಹುದು.

ಕೌಟುಂಬಿಕ ಪ್ರಭಾವಗಳು (Family-related Changes) :

ಮಗುವಿನಲ್ಲಿ ಸ್ವಾತಂತ್ರ್ಯದ ಬೇಡಿಕೆ ಹೆಚ್ಚಾಗುವುದು. ತನ್ನ ಸ್ವತಂತ್ರತೆಗೆ ಅಡಚಣೆಯೆನಿಸಿದರೆ ಪೋಷಕರೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಎಲ್ಲರೂ ತನ್ನ ಮಾತನ್ನೇ ಕೇಳಬೇಕೆಂಬ ಧೋರಣೆ ಮೂಡುವುದು.

ಸಾಮಾಜಿಕ ಪ್ರಭಾವಗಳು (Social Changes) :

ಸ್ನೇಹಿತರ ಪ್ರಭಾವ ಹೆಚ್ಚಾಗುವುದು. ಹೊಸ ಸ್ನೇಹ ಸಂಬಂಧಗಳು ನಿರ್ಮಾಣ. ಸಮಾಜದಲ್ಲಿ ತನ್ನ ಸ್ಥಾನ ಕಂಡುಕೊಳ್ಳುವ ಪ್ರಯತ್ನ. ಸಾಮಾಜಿಕ ಮಾಧ್ಯಮಗಳು ಹಾಗೂ ಪರಿಸರದ ಪ್ರಭಾವಗಳಿಗೆ ಬೇಗ ಸೆಳೆತ ಉಂಟಾಗುವುದು.

ಗಮನಿಸಿ :

ಹೆಣ್ಣುಮಗುವಿನಲ್ಲಿ ಕಂಡು ಬರುವ ಬದಲಾವಣೆಗಳನ್ನು ಮಗು ಸಂಕೋಚವಿಲ್ಲದೇ ಹೇಳಬೇಕು. ತಾಯಿ-ತಂದೆ ಮನೆಯವರು ಕೇಳಿಸಿಕೊಳ್ಳಬೇಕು. ಮಗುವಿನ ಸ್ವಾಭಾವಕ್ಕೆ ತಕ್ಕಂತೆ ಸೌಮ್ಯವಾಗಿ, ತಾಳ್ಮೆಯಿಂದ ವರ್ತಿಸಬೇಕು. ಆಗುತ್ತಿರುವ ಮುಜುಗುರಗಳ ಬಗ್ಗೆ ಸರಿಯಾದ ತಿಳುವಳಿಕೆ ಕೊಡಬೇಕು. ಕುಟುಂಬದ ಬೆಂಬಲ ಅತ್ಯಂತ ಮುಖ್ಯವಾಗುತ್ತದೆ. ಪೋಷಕರು ಹಾಗೂ ಶಿಕ್ಷಕರು ಸಮಾಧಾನದಿಂದ ಮಾರ್ಗದರ್ಶನ ನೀಡಬೇಕು. ಆರೋಗ್ಯಕರ ಜೀವನಶೈಲಿ ಅನುಸರಿಸಬೇಕಾದುದು ಅತ್ಯಗತ್ಯವಾಗಿರುತ್ತದೆ ಎಂದರು.

ಮಗಳು ಯೌವ್ವನಾವಸ್ಥೆಗೆ ಬಂದಾಗ ಆಚರಿಸುವ ಸೂತಕಾಚರಣೆಗಳು :

1.        ಸಾಮಾನ್ಯವಾಗಿ “ಶುದ್ಧ-ಅಶುದ್ಧ” ಎಂಬ ಧಾರ್ಮಿಕ, ಸಾಂಪ್ರದಾಯಿಕ/ಸಾಂಸ್ಕೃತಿಕ ನಂಬಿಕೆಯಿಂದ ಆಚರಿಸುತ್ತಾರೆ.

2.       ಕೆಲವೊಮ್ಮೆ ವೈಜ್ಞಾನಿಕತೆ ಮತ್ತು ಆರೋಗ್ಯದ ಹೆಸರಿನಲ್ಲಿ ಮೂಢನಂಬಿಕೆಗಳನ್ನೇ ಅನುಸರಿಸುವರು.

3.       ಮಗಳನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಿ ಅವಳು ಬಳಸುವ ತಟ್ಟೆ, ಲೋಟ ಮತ್ತು ಹಾಸಿಗೆಯನ್ನು ಪ್ರತ್ಯೇಕವಾಗಿ   ಇಡಲಾಗುತ್ತದೆ.

4.       ದೇವಸ್ಥಾನಗಳಿಗೆ ಹೋಗಬಾರದು ಎಂದು ಹೇಳುವುದು.

5.         ಅಡುಗೆ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು.

6.       ಅಡುಗೆ ಮನೆ, ದೇವರ ಕೋಣೆಗೆ ಹೋಗುವುದನ್ನು ತಡೆಯುವುದು.

7.        ಇನ್ನಿತರ ಮಕ್ಕಳೊಂದಿಗೆ ಬೆರೆಯಬಾರದು ಮತ್ತು ಅವರು ಈಕೆಯನ್ನು ಮುಟ್ಟಬಾರದು.

8.       ಕೆಲವು ದಿನ ಪ್ರತ್ಯೇಕವಾಗಿ ಇರಲು ಹೇಳುವುದು.

ಹೀಗೆ ಹತ್ತಾರು ರೀತಿಯ ಸೂತಕಾಚರಣೆಗಳು ಸಮಾಜದಲ್ಲಿ ಕಂಡು ಬರುತ್ತವೆ.

ಸೂತಕಾಚರಣೆಗೆ ಪರಿಹಾರಗಳು ಮತ್ತು ಆರೋಗ್ಯಕರ ಜೀವನಶೈಲಿ :

1. ಕುಟುಂಬ ಜವಾಬ್ದಾರಿ : ಬರುವ ಬದಲಾವಣೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಪ್ರತಿಕ್ಷಣವೂ ಮಗಳನ್ನು ಆಕೆಗೆ ಕಿರಿಕಿರಿಯಾಗದಂತೆ ಗಮನಿಸಬೇಕು. ಹೆದರಿಕೆ ಅಥವಾ ಲಜ್ಜೆ ಹುಟ್ಟಿಸದೇ, ಮುಕ್ತವಾಗಿ ಮಾತನಾಡಬೇಕು. ಮಾಸಿಕ ಋತುಸ್ರಾವವು ನೈಸರ್ಗಿಕ ದೈಹಿಕ ಕ್ರಿಯೆ ಎಂಬುದನ್ನು ವೈಜ್ಞಾನಿಕವಾಗಿ ಮನವರಿಕೆ ಮಾಡಬೇಕು.

2. ಸ್ವಚ್ಛತೆ ಮತ್ತು ಆರೋಗ್ಯದ ಕಡೆ ಗಮನ : ಮಾಸಿಕ ಋತುಸ್ರಾವ ಸಮಯದಲ್ಲಿ ಸ್ವಚ್ಛತೆ ಕಲಿಸಿಕೊಡಬೇಕು. ಸರಿಯಾದ ಆಹಾರ, ವಿಶ್ರಾಂತಿ ಮತ್ತು ವ್ಯಾಯಾಮ ನೀಡಬೇಕು. ಸುಧಾರಿತ ಸ್ಯಾನಿಟರಿ ಪ್ಯಾಡ ಬಳಕೆ ಇತ್ಯಾದಿ ಕ್ರಮಗಳನ್ನು ಹೇಳಿಕೊಡಬೇಕು.

3. ಶಾಲೆಯಲ್ಲಿ ಶಿಕ್ಷಕರಿಂದ ಜಾಗೃತಿ ಮತ್ತು ಶಿಕ್ಷಣ : ೫ ನೇ ತರಗತಿಯಿಂದಲೇ ಶಾಲೆಯಲ್ಲಿ ಸರಿಯಾದ ಮಾಹಿತಿ ನೀಡಬೇಕು

4. ಮೂಢನಂಬಿಕೆ ನಿವಾರಣೆ : ತಪ್ಪು ನಂಬಿಕೆಗಳನ್ನು ಮಕ್ಕಳ ಮೇಲೆ ಹೇರಬಾರದು. ವೈಜ್ಞಾನಿಕ ಆಧಾರ ಇಲ್ಲದ “ಅಶುದ್ಧತೆ” ಎಂಬ ಕಲ್ಪನೆಯನ್ನು ಬಿಡಬೇಕು.

5.  ಆತ್ಮವಿಶ್ವಾಸ ಬೆಳೆಸುವುದು : ಮಗಳಿಗೆ ಅವರ ದೇಹದ ಬದಲಾವಣೆಗಳ ಬಗ್ಗೆ ತಿಳಿಸಿಕೊಟ್ಟು ಅವಳಲ್ಲಿ ಆಗುವ ಆತಂಕಗಳನ್ನು ದೂರ ಮಾಡಬೇಕು.

6.       ಸಮಾನತೆ ಮತ್ತು ಗೌರವ :  ಮಗಳನ್ನು ದೂರ ಇಡುವ ಮತ್ತು ಮನೆಯ ಮಕ್ಕಳಿಂದ ಬೇರ್ಪಡಿಸಬಾರದು. ಮಡಿವಂತಿಕೆ ಮಾಡುವ ಪದ್ಧತಿಗಳನ್ನು ತಪ್ಪಿಸಬೇಕು. ಆತ್ಮಗೌರವಕ್ಕೆ ಅಡಚಣಿ ಆಗದಂತೆ ನೋಡಿಕೊಂಡು ಅವಳಲ್ಲಿ  ತಾರತಮ್ಯವಿಲ್ಲದಂತೆ ಸಮಾನತೆಯ ಭಾವ ಮೂಡುವಂತೆ ಕಾಳಜಿ ವಹಿಸಬೇಕು.

7.        ಗಮನಿಸಬೇಕಾದ ಮಹತ್ವದ ಅಂಶ : ಒಂದು ವೇಳೆ ೮ ವರ್ಷಕ್ಕಿಂತ ಮೊದಲೇ ದೇಹದ ಬದಲಾವಣೆಗಳು ಕಂಡರೆ ಅಥವಾ ೧೪ ವರ್ಷ ದಾಟಿದರೂ ಯಾವುದೇ ಬದಲಾವಣೆ ಕಾಣದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಲಿಂಗಾಯತರು ಬಹುತೇಕ ಕಟ್ಟುನಿಟ್ಟಿನ ಆಚರಣೆಗಳನ್ನು ಕಡಿಮೆ ಮಾಡುತ್ತಿದ್ದಾರೆ. ಯೌವ್ವನಾವಸ್ಥೆ ಬದಲಾವಣೆಗಳನ್ನು ಸ್ವಾಭಾವಿಕವಾಗಿ ನೋಡುತ್ತಿದ್ದಾರೆ. ಸ್ವಚ್ಛತೆ, ಪೌಷ್ಠಿಕ ಆಹಾರ, ಮತ್ತು ಮಾನಸಿಕ ಸಮತೋಲನದತ್ತ ಗಮನ ಹರಿಸುತ್ತಿದ್ದಾರೆ. ಇರುವ ಅಲ್ಪಸ್ವಲ್ಪ ಮೂಢನಂಬಿಕೆಗಳನ್ನು ಪೂರ್ತಿ ಬಿಡಬೇಕಾಗಿದೆ ಎಂದು ಕಲಹಾಳ ಹೇಳಿದರು.

ಎಂಭತ್ತು ವಯಸ್ಸಿನ ಹರೆಯದವರಾದ ವಣಗೇರಿ ಬಸನಗೌಡ ಮತ್ತು ಗಿರಿಜಮ್ಮ ಪಾಟೀಲ ದಂಪತಿಗಳ ಕುಟುಂಬವೆಂದರೆ ಒಂದು ಮಾದರಿ ಬಸವತತ್ವ ಕುಟುಂಬವಾಗಿದೆ. ಇವರಿಗೆ ಜೇಷ್ಠ ಪುತ್ರರಾದ ಶಂಕರಗೌಡ ಹಾಗೂ ಪ್ರತಿಭಾ ದಂಪತಿಗಳಿಗೆ ಅಕ್ಷಯ, ಅಪೇಕ್ಷಾ ಮಕ್ಕಳಿದ್ದಾರೆ. ಎರಡನೇ ಪುತ್ರ ಡಾ. ಶಿವನಗೌಡ ಹಾಗೂ ಕೀರ್ತಿ ದಂಪತಿಗಳಿಗೆ ಶ್ರಾವಣಿ, ಸನ್ಮತಿ ಮಕ್ಕಳಿದ್ದಾರೆ. ಏಕೈಕ ಪುತ್ರಿ ವಿಜಯಲಕ್ಷ್ಮಿ ಹಾಗೂ ಬಸವರಾಜ ದೇಸಾಯಿ ದಂಪತಿಗಳಿಗೆ ಪ್ರಿಯಾ, ಪೃಥ್ವಿ, ಭಾರತಿ, ಪ್ರಿತಮ್ ಎಂಬ ಮಕ್ಕಳಿದ್ದಾರೆ.  ಕೊನೆಯ ಪುತ್ರ ಬಾಪೂಗೌಡ ಹಾಗೂ ಮಂಜುಳಾ ದಂಪತಿಗಳಿಗೆ ಬನಶ್ರೀ, ಬಿಂದು ಮಕ್ಕಳು ಇದ್ದು ಪ್ರತಿಯೊಬ್ಬರು ವಚನಗಳನ್ನು ಪಠಿಸುತ್ತಾರೆ ಹಾಗೂ ವಚನಗಾಯನ ಮಾಡುತ್ತಾರೆ. ಕೆಲವರು ಬಸವತತ್ವಗಳ ಬಗ್ಗೆ ಅನುಭಾವಗಳನ್ನೂ ಮಾಡುತ್ತಾರೆ. ಇವರೆಲ್ಲರೂ ಕೂಡಿದಾಗ ನೋಡುವುದೇ ಒಂದು ಸಂಭ್ರಮ ಎನಿಸುತ್ತದೆಯೆಂದು ಡಾ. ಸಂಗಮೇಶ ಕಲಹಾಳವರು ತಮ್ಮ ಅಮೂಲ್ಯ ಅನುಭಾವವನ್ನು ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
1 Comment
  • ಪುಷ್ಪವತಿ ಆಚರಣೆ ಜೊತೆಗೆ ಹೆಣ್ಣುಮಕ್ಕಳು ಪುಷ್ಪವತಿ ಆಗುವದರ ಬಗ್ಗೆ ತುಂಬ ಚೆನ್ನಾಗಿ ವಿವರವಾದ ಮಾಹಿತಿ ನೀಡಿರುವಿರಿ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಒಳ್ಳೆಯ ಸಂದೇಶವಾಗಿದೆ ಶರಣುಶರಣಾರ್ಥಿಗಳು 🙏🙏

Leave a Reply

Your email address will not be published. Required fields are marked *