ಹುಬ್ಬಳ್ಳಿ ಬಸವ ಸಂಘಟನೆಗಳಿಂದ ಅಕ್ಕಮಹಾದೇವಿ ಜಯಂತಿ, ಸಂಭ್ರಮದ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣೆಯರ ಚಿಂತನೆ, ಸಂದೇಶ ಅತ್ಯಂತ ಪ್ರಸ್ತುತ

ಹುಬ್ಬಳ್ಳಿ:

ನಗರದ ತೋಳನಕೆರೆ ವೃತ್ತದಲ್ಲಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಬಸವ ಕೇಂದ್ರ ಹಾಗೂ ವಿವಿಧ ಬಸವಪರ ಸಂಘಟನೆಗಳ ಆಶ್ರಯದಲ್ಲಿ ವೀರವಿರಾಗಿಣಿ ಅಕ್ಕಮಹಾದೇವಿ ಜಯಂತಿ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮಗಳು ಸೋಮವಾರ ವಿಜೃಂಭಣೆಯಿಂದ ನಡೆದವು.

ಸಮಾರಂಭದ ಅತಿಥಿಯಾಗಿದ್ದ ಹೃದಯರೋಗ ತಜ್ಞೆ, ಸಾಹಿತಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡುತ್ತ, ಇಂದಿನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ, ಹಕ್ಕುಗಳು ಹಾಗೂ ಆತ್ಮಗೌರವದ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅಕ್ಕಮಹಾದೇವಿ ಸೇರಿದಂತೆ ಶರಣರ ಚಿಂತನೆಗಳು ಮತ್ತು ಮಹಿಳೆಯರ ಕುರಿತು ಅವರು ನೀಡಿದ ಸಂದೇಶಗಳು ಅತ್ಯಂತ ಪ್ರಸ್ತುತವಾಗಿವೆ.

ವಿಶೇಷವಾಗಿ ಶರಣೆ ಅಕ್ಕಮಹಾದೇವಿ ಮತ್ತು ಅಕ್ಕನಾಗಮ್ಮ ಅವರ ಆದರ್ಶ ಜೀವನ, ಧೈರ್ಯ, ತ್ಯಾಗ ಹಾಗೂ ಆಧ್ಯಾತ್ಮಿಕ ಮೌಲ್ಯಗಳು ಇಂದಿನ ಮಹಿಳೆಯರಿಗೆ ದಿಕ್ಕು ತೋರುವಂತಿವೆ ಎಂದು ಹೇಳಿದರು.

ಅಕ್ಕಮಹಾದೇವಿ ತಮ್ಮ ವೈರಾಗ್ಯ, ಭಕ್ತಿ ಮತ್ತು ಸತ್ಯನಿಷ್ಠೆಯ ಮೂಲಕ ಸಮಾಜಕ್ಕೆ ಮಾದರಿಯಾದರೆ, ಅಕ್ಕನಾಗಮ್ಮ ಬಸವಣ್ಣನವರಲ್ಲಿ ಉನ್ನತ ಚಿಂತನೆಗಳನ್ನು ತುಂಬಿ, ಅವರ ಮೂಲಕ ವಿಶ್ವಕ್ಕೆ ಶರಣ ಧರ್ಮದ ಸಂದೇಶವನ್ನು ಹರಡಲು ಕಾರಣರಾದರು ಎಂದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯೆ ವೀಣಾ ಬರದ್ವಾಡ, ಬಸವಪರ ಸಂಘಟನೆಗಳ ಪ್ರಮುಖರಾದ ದಾಕ್ಷಾಯಣಿ ಕೋಳಿವಾಡ, ಡಾ. ಲಿಂಗರಾಜ ಅಂಗಡಿ, ಪ್ರೊ. ಎಸ್.ಎ. ಪಟ್ಟಣಶೆಟ್ಟಿ, ಶಂಕರ ಕೋಳಿವಾಡ, ಸವಿತಾ ನಡಕಟ್ಟಿ, ಡಾ. ಎಂ.ವಿ. ಗೊಂಗಡಶೆಟ್ಟಿ, ಸುಶೀಲಾ ಬ್ಯಾಹಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅದ್ಧೂರಿ ಮೆರವಣಿಗೆ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಕ್ಕಮಹಾದೇವಿ ಅವರ ಭಾವಚಿತ್ರದೊಂದಿಗೆ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಮಹಾನಗರ ಪಾಲಿಕೆ ವಲಯ ಕಚೇರಿ-5ರ ಮುಂಭಾಗದಿಂದ ಆರಂಭವಾದ ಮೆರವಣಿಗೆ ಟೆಂಡರ್‌ಶೂರ್ ರಸ್ತೆ ಮಾರ್ಗವಾಗಿ ಸಂಚರಿಸಿ ತೋಳನಕೆರೆ ವೃತ್ತ ತಲುಪಿತು.

ಮೆರವಣಿಗೆಯುದ್ದಕ್ಕೂ ಮಹಿಳೆಯರು ಅಕ್ಕ ಸೇರಿದಂತೆ ಬಸವಾದಿ ಶರಣರಿಗೆ ಜಯಘೋಷಗಳನ್ನು ಹಾಕಿದರು. ಅಕ್ಕಮಹಾದೇವಿ ಹಾಗೂ ಶರಣರ ವಚನಗಳನ್ನು ಗಾಯನ ರೂಪದಲ್ಲಿ ಪ್ರಸ್ತುತಪಡಿಸಿದರು. ವಿವಿಧ ವಾದ್ಯಮೇಳಗಳು, ಸಾಂಸ್ಕೃತಿಕ ಕಲಾತಂಡಗಳ ಭಾಗವಹಿಸುವಿಕೆಯಿಂದ ಮೆರವಣಿಗೆಗೆ ವಿಶೇಷ ಮೆರುಗು ಮೂಡಿತು. ಬಸವಪರ ಸಂಘಟನೆಗಳ ಸದಸ್ಯರು ಪಾಲ್ಗೊಂಡು ಜಯಂತಿ ಅದ್ಧೂರಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
1 Comment

Leave a Reply

Your email address will not be published. Required fields are marked *