‘ಸ್ತ್ರೀಕುಲದ ಅಸ್ಮಿತೆ ಉಳಿಸಲು ವ್ಯವಸ್ಥೆಯನ್ನೇ ಧಿಕ್ಕರಿಸಿ ಹೋರಾಡಿದ ಅಕ್ಕ’

ನಾಲತವಾಡ:

ವರ್ಣಾಶ್ರಮ ಹಾಗೂ ಪುರುಷ ಪ್ರಧಾನದಂತಹ ಕಠಿಣ ವ್ಯವಸ್ಥೆಯಲ್ಲಿ ಸ್ತ್ರೀಕುಲದ ಅಸ್ಮಿತೆಯನ್ನು ಉಳಿಸುವ ಆದರ್ಶಕ್ಕಾಗಿ ಸಾಮಾಜಿಕ ಮತ್ತು ರಾಜಪ್ರಭುತ್ವ ವ್ಯವಸ್ಥೆಯನ್ನೇ ಧಿಕ್ಕರಿಸಿದ ಅಕ್ಕನ ಇಡಿ ಬದುಕೇ ಹೋರಾಟದ ಹಾದಿಯಾಗಿತ್ತು’ ಎಂದು ನಿವೃತ್ತ ಯೋಧ ಪಿ.ಜಿ. ಬಿರಾದಾರ ಹೇಳಿದರು.

ಪಟ್ಟಣದ ಪ್ರಭುರಾಜ ದುದ್ದಗಿ ಅವರ ಮನೆಯಲ್ಲಿ ಭಾನುವಾರ ಸಂಜೆ ಜರುಗಿದ ಅಕ್ಕಮಹಾದೇವಿ ಜಯಂತಿ ಹಿನ್ನೆಲೆಯಲ್ಲಿ ಅಕ್ಕನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಈ ವರ್ಣವ್ಯವಸ್ಥೆ , ಲಿಂಗತಾರತಮ್ಯ ಹೋರಾಟ ಕೇವಲ ತನಗಾಗಿ ಅಲ್ಲ. ಇಡೀ ಹೆಣ್ಣು ಸಂಕುಲಕ್ಕಾಗಿಯೇ ಆಕೆಯ ಹೋರಾಟ ಮೀಸಲಿತ್ತು.

ಅಧಿಕಾರ, ಸಂಪತ್ತು, ಆಡಂಬರ, ವೈಭವ, ಐಭೋಗದ ಜೀವನ ತ್ಯಜಿಸಿ, ಅರಸೊತ್ತಿಗೆ ವಿರೋಧಿಸಿ ವೀರ ವಿರಾಗಿಣಿಯಾದ ಅಕ್ಕ, 16ರ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಅನುಭಾವ ಹೊಂದಿದ್ದರು. ಅನುಭವ ಮಂಟಪ ಪ್ರವೇಶಿಸಿ ಅಲ್ಲಮನ ಪ್ರಶ್ನೆಗಳಿಗೆ ನಿರ್ಭೀಡೆಯಿಂದ ಉತ್ತರಿಸಿ ಲಿಂಗಬೇಧ ಅಳಿಸಿ, ಸಮಾನತೆಯ ಚಳವಳಿಯಲ್ಲಿ ಭಾಗವಹಿಸಿದ ಪ್ರಸಂಗಗಳು ವಿಶಿಷ್ಟವಾಗಿವೆ. ವಚನ ಸಾಹಿತ್ಯ ಸಂದರ್ಭದಲ್ಲಿ ಅಕ್ಕನ ವಚನಗಳು ವಿಶಿಷ್ಟತೆಯಿಂದ ಕೂಡಿರುವುದನ್ನು ಗಮನಿಸಬಹುದು ಎಂದರು.

ಬಸವ ಕೇಂದ್ರದ ಗೌರವಾಧ್ಯಕ್ಷ ಎ.ಎಸ್. ಪಟ್ಪಣಶೆಟ್ಟಿ ಮಾತನಾಡಿ, ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಗೆ ಇನ್ನು ಅನೇಕ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ದೊರೆಯದೇ ಇದ್ದರೂ ಸಹಿತ, ನಾವು ಕಳೆದ ಒಂಬೈನೂರು ವರ್ಷಗಳ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಪುರುಷ ಪ್ರಾಬಲ್ಯದ ಕಾಲದಲ್ಲಿನ ಹೆಣ್ಣಿನ ಸ್ಥಿತಿ ಹೇಗಿರಬೇಡ. ಊಹಿಸಿಕೊಳ್ಳಲು ಆಗದು.

ಆದರೆ 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಮದುವೆಯಾದರೂ ಲೌಕಿಕ ಪ್ರಪಂಚದ ಗೊಡವೆ ಬೇಡ ಎಂದು ಧಿಕ್ಕರಿಸಿ ತನ್ನ ಪತಿ ಚೆನ್ನಮಲ್ಲಿಕಾರ್ಜುನ ಎನ್ನುವ ಪಾರಮಾರ್ಥಿಕ ಗಂಡನನ್ನು ಹುಡುಕುತ್ತ ಕಲ್ಯಾಣದ ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವನ್ನು ಪ್ರವೇಶಿಸುವಾಗ ಅಲ್ಲಿನ ಶರಣ ತಿಂಥಿಣಿಯೊಳಗೆ ಉತ್ತರವನ್ನು ಯಾವ ರೀತಿ ಕೊಟ್ಟಿರಬಹುದು. ಸನ್ನಿವೇಶ ನೆನಪಿಸಿಕೊಂಡರೆ ಭಯವಾಗುತ್ತದೆ. ಆ ಧೈರ್ಯ ಬರಲು ಅಕ್ಕನಂಥವರಿಗೆ ಮಾತ್ರ ಸಾಧ್ಯ ಎಂದರು.

ಅಕ್ಕನ ಬಳಗದ ಅನಿತಾ ದುದ್ದಗಿ, ಶ್ರೀದೇವಿ ಶೆಟ್ಟರ, ಬಸಮ್ಮ ಶೆಟ್ಟರ, ಪೂರ್ಣಿಮಾ ನೂಲಿನವರ, ಬಸವ ಕೇಂದ್ರದ ಬಸವರಾಜ ಪೂಜಾರಿ, ದಾಸಿಮಯ್ಯ ಬಂಟನೂರ, ನೀಲಕಂಠರಾವ ದೇಶಮುಖ, ಶಿವಪುತ್ರಪ್ಪ ತಾಳಿಕೋಟಿ, ಮಲ್ಲಿಕಾರ್ಜುನ ಹುಣಸಗಿ, ಜಾಲಹಳ್ಳಿ, ಗಂಗಣ್ಣ ಜಾವಳಗೇರಿ, ಮಲ್ಲಣ್ಣ ಗಡೇದ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *