ರಾಯಚೂರು :
ಅಕ್ಕಮಹಾದೇವಿ ಜಯಂತೋತ್ಸವದ ಎರಡನೇ ದಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ, ಇಲಕಲ್ಲನ ಪೂಜ್ಯ ಗುರುಮಹಾಂತ ಸ್ವಾಮಿಗಳ ಸಾನಿಧ್ಯದಲ್ಲಿ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ಅತಿಥಿಗಳಾಗಿ ನಾಗರತ್ನಮ್ಮ ಡಾ. ಬಸವಪ್ರಭು ಪಾಟೀಲ, ಸೂಗಪ್ಪ ಚುಕ್ಕಿ, ಅನ್ನಪೂರ್ಣ ಮೇಟಿ, ಸುಮಂಗಲ ಡಾ.ಎಮ್.ಬಿ. ಪಾಟೀಲ, ಲಲಿತಾ ಗುಡಿಮನಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇಲಕಲ್ಲಿನ ಪೂಜ್ಯರು ಮಾತನಾಡುತ್ತಾ, ಅಕ್ಕಮಹಾದೇವಿ ಎಂದರೆ ಸ್ವಾಭಿಮಾನದ ಸಂಕೇತ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಶೂದ್ರ ಎಂದು ಪರಿಗಣಿಸಿದಂತಹ, ಶಿಕ್ಷಣವನ್ನು ನಿರಾಕರಿಸಿದಂತ ಸಂದರ್ಭದಲ್ಲಿ, ಮಹಿಳೆಯ ಮದುವೆಯನ್ನು ಸಹ ಪುರುಷನೇ ನಿರ್ಧಾರ ಮಾಡುವ ಸಂದರ್ಭದಲ್ಲಿ ಸ್ವಾಭಿಮಾನವನ್ನು ಒತ್ತೆಯಿಟ್ಟು ತನ್ನ ಮದುವೆಯನ್ನು ನಿರಾಕರಿಸುವ ಹೋರಾಟ ಮಾಡುವ ಆ ತಾಯಿ ಅರಮನೆಯನ್ನು ತೊರೆದು ಎಲ್ಲರನ್ನ ಧಿಕ್ಕರಿಸಿ ಬಸವಕಲ್ಯಾಣಕ್ಕೆ ಬರುತ್ತಾಳೆ.

ಇಂದು ಯಾವುದಾದರು ಮಹಿಳಾ ಹೋರಾಟಗಾರ್ತಿಯರು ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ ಪ್ರತಿಭಟಿಸುತ್ತಾಳೆಂದರೆ ಅದಕ್ಕೆ ಸ್ಪೂರ್ತಿ, ಹಿನ್ನೆಲೆ ಅಕ್ಕಮಹಾದೇವಿ ತಾಯಿ.
ನೋಡಲು ಹೆಣ್ಣು ರೂಪ ಭಾವಿಸಲು ಗಂಡು ರೂಪ ಎಂಬುದು ಅಕ್ಕನ ವಚನ. ದೈಹಿಕವಾಗಿ ಹೆಣ್ಣಾಗಿದ್ದರು ಆಂತರ್ಯದಲ್ಲಿ ಪ್ರತಿಭಟಿಸುವ, ಶೋಷಣೆಯನ್ನು ನಿರಾಕರಿಸುವ ಶಕ್ತಿ ನನ್ನೊಳಗಿದೆ ಎಂಬುದೇ ಆ ವಚನದ ಸಾರ.
ಅಕ್ಕನ ಕುರಿತು ಚೆನ್ನಬಸವಣ್ಣನ ವಚನ ಆದ್ಯರ 60 ವಚನಕ್ಕೆ ದಣ್ಣಾಯಕರ 20 ವಚನ, ದಣ್ಣಾಯಕರ 20 ವಚನಕ್ಕೆ ಅಜಗಣ್ಣನ 10 ವಚನ, ಅಜಗಣ್ಣನ 10 ವಚನಕ್ಕೆ ಪ್ರಭುದೇವರ 5 ವಚನ, ಪ್ರಭುದೇವರ 5 ವಚನಕ್ಕೆ ಅಕ್ಕಮಹಾದೇವಿಯ ಒಂದು ವಚನ ನಿರ್ವಚನ ಕಾಣಾ ಕೂಡಲ ಚನ್ನಸಂಗಮದೇವ ಅಂದರೆ ಅಕ್ಕಮಹಾದೇವಿಯ ಮಾತು ಫೈನಲ್ ಇದ್ದಂತೆ ಸುಪ್ರೀಂ ಕೋರ್ಟ್ ನಿರ್ಧಾರದಂತೆ ಎಂದರು.

ನೂರು ವರ್ಷದ ಹಿಂದೆ ಮಹಿಳೆಯರಿಗೆ ಶಿಕ್ಷಣ ನಿರಾಕರಿಸಲಾಗಿತ್ತು, ಆಸ್ತಿಯಲ್ಲಿ ಹಕ್ಕಿರಲಿಲ್ಲ, ಗುಡಿ ಒಳಗೆ ಪ್ರವೇಶವಿರಲಿಲ್ಲ, ಅವರನ್ನು ಶೂದ್ರರೆಂದೇ ಪರಿಗಣಿಸಲಾಗಿತ್ತು. ಎರಡನೇಯ ದರ್ಜೆಯ ನಾಗರಿಕರೆಂದು ಸಮಾಜ ತಿಳಿದಿತ್ತು. ಇವುಗಳನ್ನು ಧರ್ಮಶಾಸ್ತ್ರದ ರೀತಿಯಲ್ಲಿ ಮಹಿಳೆಯ ಮೇಲೆ ಹೇರಲಾಗಿತ್ತು. ಮಹಿಳಾ ಶಿಕ್ಷಣವನ್ನ ಧರ್ಮ ವಿರೋಧಿ ಎಂದು ಪರಿಗಣಿಸುತ್ತಿತ್ತು. ಇಂಥ ಸಂದರ್ಭದಲ್ಲಿ ಬಸವಣ್ಣ ಎಲ್ಲವನ್ನು ಧಿಕ್ಕರಿಸಿ ಮಹಿಳೆಯರಿಗೆ ಶಿಕ್ಷಣವನ್ನು ಸಮಾನತೆಯ ಅಧಿಕಾರವನ್ನು ಸ್ವತಂತ್ರ ದುಡಿಮೆಯನ್ನು ಕರುಣಿಸಿದ್ದರು.
ಕಲ್ಯಾಣ ಕ್ರಾಂತಿಯ ನಂತರ ಮತ್ತೆ ಮಹಿಳೆಯರಿಗೆ ಶಿಕ್ಷಣ ಮತ್ತು ಸ್ವಾತಂತ್ರ್ಯದ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ಆದರೆ ಇಂದು ಎಲ್ಲಾ ಮಹಿಳೆಯರು ಶಿಕ್ಷಣವಂತರಾಗಿದ್ದಾರೆ. ಶಿಕ್ಷಣವನ್ನು ಚೆನ್ನಾಗಿ ಪಡೆಯಿರಿ ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ ಆದರೆ ನಿಮಗೆ ಸ್ಪೂರ್ತಿ ನೀಡಿದ ಅಕ್ಕನ ವಚನಗಳನ್ನು, ಆಕೆಯ ಜೀವನ ಚರಿತ್ರೆಯನ್ನು ವಿಶೇಷವಾಗಿ ಅಕ್ಕನ 64 ಪದ್ಯಗಳ ಯೋಗಾಂಗ ತ್ರಿವಿಧಿ ಗ್ರಂಥವನ್ನು, ತಪ್ಪದೇ ಓದಿ ಎಂದು ಮನವಿ ಮಾಡಿದರು.
ರಾಚನಗೌಡ ಕೋಳೂರ ಅಧ್ಯಕ್ಷೀಯ ಮಾತಗಳನ್ನಾಡಿದರು. ರಾಘವೇಂದ್ರ ಆಶಾಪುರ ಅವರು ವಚನ ಗಾಯನ ಮಾಡಿದರು.

ಕಾರ್ಯಕ್ರಮದ ನಂತರ ಜಯಶ್ರೀ ಮಹಾಜನಶೆಟ್ಟಿ ಅವರ ರಚನೆ, ನಿರ್ದೇಶನದ ಕಾಶ್ಮೀರದ ಅರಸ ಮಹದೇವ ಭೂಪಾಲ್ (ಮೋಳಿಗೆ ಮಾರಯ್ಯ)ನವರ ಜೀವನ ಚರಿತ್ರೆ ಆಧಾರಿತ “ರಾಜಪ್ರಭುತ್ವದಿಂದ ಶರಣತ್ವದೆಡೆಗೆ” ರೂಪಕದ ಪ್ರದರ್ಶನ ನಡೆಯಿತು.
ಪ್ರಸಾದ ದಾಸೋಹ ಸೇವೆಯನ್ನು ವಿಶ್ವನಾಥ ಪಟ್ಟಣಶೆಟ್ಟಿ ವಕೀಲರ ತಾಯಿಯವರಾದ ಸುಲೋಚನಮ್ಮ ಪಟ್ಟಣಶೆಟ್ಟಿ, ರಾಯಚೂರು ವಹಿಸಿದ್ದರು. ಮತ್ತು ಬಸವ ಕೇಂದ್ರದ ನಿರಂತರ ದಾಸೋಹಕ್ಕೆ ಶಿವನಗೌಡ ಮಾಲಿಪಾಟೀಲರು ತಂದೆ ತಾಯಿ ಸರೋಜಮ್ಮ ಬಸನಗೌಡ ಹೆಸರಿನಲ್ಲಿ ಒಂದು ಲಕ್ಷ ರೂ. ದೇಣಿಗೆ ಚೆಕ್ ನೀಡಿದರು.
ತಾಯಮ್ಮ ಎಲ್ಲನಗೌಡ ಸ್ವಾಗತಿಸಿದರು. ಡಾ. ಶಿವಕುಮಾರ ಮಾಟೂರು ನಿರೂಪಿಸಿದರು. ಚಿನ್ಮಯಿ ಮೃತ್ಯುಂಜಯ ಶರಣು ಸಮರ್ಪಣೆ ಸಲ್ಲಿಸಿದರು.
