ಭಾಲ್ಕಿ:
ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ತಮ್ಮ ಇಡೀ ಬದುಕನ್ನು ಬಸವತತ್ವ ಪ್ರಚಾರ, ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದು ಹಂದಿಗುಂದ ಸಿದ್ದೇಶ್ವರ ಮಠದ ಪೂಜ್ಯ ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಹಿರೇಮಠ ಸಂಸ್ಥಾನ ಮತ್ತು ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಮೃತ ಜಲ ಅರವಟ್ಟಿಗೆಯ ಚಾಲನೆ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಡಾ. ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ವಿಚಾರಧಾರೆ ಮೈಗೂಡಿಸಿಕೊಂಡು ಕರ್ನಾಟಕ ಸೇರಿ, ಅಂತರ ರಾಜ್ಯಗಳಲ್ಲಿ ಬಸವತತ್ವ ಪ್ರಚಾರಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಜತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಅಂತಹ ಪೂಜ್ಯರು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿ ಎಂದರು. ಅಮೃತ ಮಹೋತ್ಸವ ನಿಮಿತ್ತ ಈಗಾಗಲೇ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ.
ಇಂತಹ ಸಂದರ್ಭದಲ್ಲಿ ಭಕ್ತರಿಗೆ ನೀರಿನ ದಾಹ ತಣಿಸಲು ಚನ್ನಬಸವಾಶ್ರಮ ಪರಿಸರದಲ್ಲಿ ಅಮೃತ ಜಲ ಹೆಸರಿನಲ್ಲಿ ನೀರಿನ ಅರವಟ್ಟಿಗೆ ತೆರೆದಿರುವುದು ಸೂಕ್ತವೆನಿಸಿದೆ ಎಂದು ತಿಳಿಸಿದರು.

ಪ್ರಭುಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ ಕೋಸಂಬೆ, ದಾಸೋಹ ಸಮಿತಿ ಅಧ್ಯಕ್ಷರು, ಪುರಸಭೆ ಮಾಜಿ ಅಧ್ಯಕ್ಷರು ಆಗಿರುವ ಚಂದ್ರಕಾಂತ ಪಾಟೀಲ, ವಾಲಿಬಾಲ್ ಪಂದ್ಯಾವಳಿ ಸಮಿತಿ ಅಧ್ಯಕ್ಷ ವಿಲಾಸ ಬಕ್ಕಾ, ಪ್ರಮುಖರಾದ ಸತ್ಯವಾನ ವೈರಾಗ್ಯ, ಶರಣಪ್ಪ ಬಿರಾದಾರ, ಸಿದ್ದಯ್ಯ ಕವಡಿಮಠ, ವಿಶ್ವನಾಥಪ್ಪ ಬಿರಾದಾರ, ಬಾಬುರಾವ ಹುಣಜೆ, ಚಂದ್ರಕಾಂತ ಹೈಬತಪುರೆ, ರಮೇಶ ಪಟ್ನೆ, ಶಿವಕುಮಾರ ಕಮಠಾಣೆ, ಶಾಂತಯ್ಯ ಸ್ವಾಮಿ, ಮಲ್ಲಮ್ಮ ನಾಗನಕೇರೆ, ಮಲ್ಲಮ್ಮ ಆರ್. ಪಾಟೀಲ್ ಸೇರಿದಂತೆ ಹಲವರು ಇದ್ದರು.
