ಸಂವಿಧಾನ ಇಲ್ಲದಿದ್ದರೆ ಸಮಾನತೆ ಇಲ್ಲ: ಡಾ. ಸಿದ್ದರಾಮ ಮಹಾಸ್ವಾಮಿಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಭಾರತದ ಸಂವಿಧಾನವು ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನು ಒಳಗೊಂಡ ಒಂದು ಅಪರೂಪದ ಶಾಸನ ಗ್ರಂಥ. ಭಾರತದ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ 2793ನೇ ಶಿವಾನುಭವದ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದರು.

ಸಮಾನತೆಯ ಹರಿಕಾರ ಡಾ ಬಿ. ಆರ್. ಅಂಬೇಡ್ಕರ್ ಅವರು ಭಾರತೀಯರ ದೇಹಕ್ಕೆ ಅಂಟಿದ ಜಾತಿಯನ್ನು ವಿನಾಶ ಮಾಡಲು ತಮ್ಮ ಬದುಕನ್ನೇ ಮುಡುಪಾಗಿಟ್ಟರು. ಪ್ರತಿಭೆ ಯಾರ ಸ್ವತ್ತು ಅಲ್ಲ, ಪ್ರತಿಭೆಯೊಂದಿಗೆ ಪರಿಶ್ರಮ ಬೆರೆತಾಗ ಜಯ ಎಂಬುವುದು ದಕ್ಕುತ್ತದೆ. ಆದ್ದರಿಂದ ಮನುಷ್ಯನು ಪ್ರತಿಭೆ ಪರಿಶ್ರಮ ಮತ್ತು ಪ್ರಯತ್ನಗಳ ಮೂಲಕ ಹೊಸದನ್ನು ಸೃಷ್ಟಿಸಲು ಸಾಧ್ಯವಿದೆ. ಇದಕ್ಕೆ ಅಂಬೇಡ್ಕರ್ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಶಿರಹಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುಷಾ ಎಚ್. ಸಿ. ಅವರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕು ಸಾಧನೆ ಕುರಿತು ಮಾತನಾಡುತ್ತಾ, ಬುದ್ಧ, ಬಸವ, ಅಂಬೇಡ್ಕರ್ ಅವರು ಕಾಲಾತೀತ, ಧರ್ಮಾತೀತ ಮತ್ತು ತತ್ವಾತೀತರು. ಅವರನ್ನು ಕೇವಲ ಒಂದು ವರ್ಗಕ್ಕೆ ಅಂಟಿಸುವುದು ತರವಲ್ಲ ಎಂದರು.

ಅಂಬೇಡ್ಕರ್ ಅವರಿಗೆ ಬುದ್ಧನ ವಿಚಾರಧಾರೆಗಳು ಸ್ಪಷ್ಟವಾಗಿ ಗೊತ್ತಿದ್ದವು. ಆದರೆ ಕನ್ನಡದ ಶರಣರ, ಅವರ ವಚನಗಳ ಅರಿವು ಅಂಬೇಡ್ಕರ್ ಅವರಿಗೆ ಇರಲಿಲ್ಲ. ಆದರೂ ವಚನಗಳ ಸಾರಸಂಗ್ರಹವೇ ಸಂವಿಧಾನದಲ್ಲಿದೆ ಎಂದು ಹೇಳಿದರು.

ಗೌರವ ಸನ್ಮಾನ ಸ್ವೀಕರಿಸಿದ ಪ್ರೊ. ಕೆ.ಎಚ್. ಬೇಲೂರು ಸನ್ಮಾನಪರ ನುಡಿಯಲ್ಲಿ, ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬುದ್ಧ, ಬಸವಣ್ಣನವರ ಸಿದ್ಧಾಂತಗಳೆಲ್ಲವನ್ನು ಗದುಗಿನ ಜಗದ್ಗುರು ತೋಂಟದಾರ್ಯ ಮಠ ಹಾಗೂ ಮಠದ ಶ್ರೀಗಳು ನಿಜಾಚರಣೆಯಲ್ಲಿ ತರುತ್ತಿರುವುದು ನಿಜಕ್ಕೂ ನನ್ನಂತಹ ಅನೇಕ ವ್ಯಕ್ತಿಗಳಿಗೆ ಅದ್ಭುತವಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯನ್ನು ನೀಡಿದಂತಾಗಿದೆ ಎಂದು ಹೇಳಿದರು.

2025- 26ನೆಯ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ, ವಿಜ್ಞಾನ ವಿಭಾಗದ ಸಮೃದ್ಧಿ ಸಿದ್ಲಿಂಗ, ಕಲಾ ವಿಭಾಗದ ಹುಲಿಗೆಮ್ಮ, ವಾಣಿಜ್ಯ ವಿಭಾಗದ ಪದ್ಮಪ್ರಿಯ ಶೆಟ್ಟರ ಹಾಗೂ ಗೀತಾ ಹೂಗಾರ ಅವರನ್ನು ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಸ್ವಾಗತಿಸಿದರು. ದಾಸೋಹ ಸೇವೆಯನ್ನು ಕೈಗೊಂಡ ಸುಜಾತ ಯಶೋಧರ ಪತ್ತಾರ ಹಾಗೂ ಯಶೋದರ ಪತ್ತಾರ ಅವರು ಶ್ರೀ ಯಡಿಯೂರು ಸಿದ್ದಲಿಂಗೇಶ್ವರ, ಬಸವೇಶ್ವರ ಹಾಗೂ ಸಿದ್ಧಲಿಂಗರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಧರ್ಮಗ್ರಂಥ ಪಠಣವನ್ನು ಕುಮಾರಿ ಭಾಗ್ಯಶ್ರೀ ಪತ್ತಾರ ವಚನ ಚಿಂತನವನ್ನು ಕುಮಾರಿ ಕಾವೇರಿ ಬಡಿಗೇರ ಮಾಡಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೆರವೇರಿಸಿದರು. ಸೂಪರವಾಣಿ ಪತ್ರಿಕೆ ಪ್ರಕಟಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಹಾಗೂ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಭಾವಚಿತ್ರದ ಕ್ಯಾಲಂಡರ್ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮ ನಿರೂಪಣೆಯನ್ನು ಶಿವಾನುಭವ ಸಮಿತಿಯ ಚೇರ್ಮನ್ನರಾದ ಡಾ. ರಮೇಶ ಕಲ್ಲನಗೌಡರ ಮಾಡಿದರು. ಶಿವಾನುಭವದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಸದಸ್ಯರು, ಪದಾಧಿಕಾರಿಗಳು, ಶ್ರೀಮಠದ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *