ಗದಗ
ಕನ್ನಡದ ಕುಲಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಬಸವ ಮೀಡಿಯಾ ಆಯ್ಕೆಯಾಗಿದೆ.
ಈ ವರ್ಷದ ಪ್ರಶಸ್ತಿಯನ್ನು ಬಸವತತ್ವದ ಮಹಾನ್ ಸಾಧಕರಾದ ಡಾ. ಎಚ್. ಕೆ. ಕಾಂತಾ, ಕಲಬುರಗಿ, ಡಾ. ಆನಂದ ಪಾಂಡುರಂಗಿ, ಧಾರವಾಡ, (ಮರಣೋತ್ತರ), ಐ. ಆರ್. ಮಠಪತಿ, ಬೆಳಗಾವಿ, ಚಂದ್ರಶೇಖರ ಸೋಮಶೆಟ್ಟ, ಬೀದರ, ಅವರ ಜೊತೆ ಹಂಚಿಕೊಳ್ಳುವ ಗೌರವ ಬಸವ ಮೀಡಿಯಾಗೆ ಲಭ್ಯವಾಗಿದೆ.
ಅಕ್ಟೊಬರ್ 22ರಂದು ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳವರ ಎಂಟನೆಯ ಪುಣ್ಯಸ್ಮರಣೆಯ ಅಂಗವಾಗಿ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ತೋಂಟದಾರ್ಯ ಮಠದ ಪೀಠಾಧ್ಯಕ್ಷ ಡಾ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ವಿಜಯ ಮಹಾಂತೇಶ್ವರ ಮಠದ ಪೀಠಾಧ್ಯಕ್ಷ ಡಾ ಗುರು ಮಹಾಂತ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
“ಸಿದ್ಧಲಿಂಗ ಮಹಾಸ್ವಾಮಿಗಳ ಶಿಷ್ಯರು ಹಾಗೂ ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರು ಪೂಜ್ಯರ ಹೆಸರಿನಲ್ಲಿ ಪ್ರತಿ ವರ್ಷ ಐದು ಲಕ್ಷ ರೂಪಾಯಿಗಳ ಗೌರವ ಧನದೊಂದಿಗೆ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.
ಈ ವರ್ಷ 5 ಲಕ್ಷ ರೂ ಮೊತ್ತದಲ್ಲಿ ಪೂಜ್ಯರು ಪಾಲಿಸಿಕೊಂಡು ಬಂದಿದ್ದ ತತ್ವಗಳ ಪಾಲನೆ ಮಾಡಿದ 5
ಜನ ಸಾಧಕರಿಗೆ ತಲಾ ಒಂದು ಲಕ್ಷ ರೂಪಾಯಿಗಳ ಗೌರವಧನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ತೀರ್ಮಾನಿಸಲಾಗಿದೆ,” ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್. ಎಸ್. ಪಟ್ಟಣಶೆಟ್ಟರ ಹೇಳಿದರು.
ಈಗ ಮುದ್ರಣವಾಗಿರುವ ಕಾರ್ಯಕ್ರಮದ ಅಹ್ವಾನ ಪತ್ರಿಕೆಯಲ್ಲಿ 2026ರ ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯವಿದೆ.
ಬಸವ ಮೀಡಿಯಾ, ಬೆಂಗಳೂರು
ಡಿಜಿಟಲ್, ಮುದ್ರಣ, ವಿಡಿಯೋ, ಆನಿಮೇಶನ್, ಆಡಿಯೋ, ಕಲೆ, ಸಂಗೀತ, ಮುಂತಾದ ಮಾಧ್ಯಮಗಳ ಮೂಲಕ ಬಸವಾದಿ ಶಿವಶರಣರ ತತ್ವಗಳನ್ನು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರಸಾರ ಮಾಡುವಲ್ಲಿ ಬಸವ ಮೀಡಿಯಾ ಶ್ರಮಿಸುತ್ತಿದೆ.
ಭಾರತ ಸಂವಿಧಾನದ ಆಶಯಗಳು ಸಾಕಾರಗುವಂತೆ, ಹಿಂದುಳಿದ-ಶೋಷಿತ ಸಮುದಾಯಗಳ ಉನ್ನತಿಗೆ, ಬಹುತ್ವ, ಸಮಾನ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಕೂಡ ಬಸವ ಮೀಡಿಯಾ ಸಕ್ರೀಯವಾಗಿದೆ.
ಡಾ. ಎಚ್. ಕೆ. ಕಾಂತಾ
ಮಾಜಿ ಕಾರ್ಮಿಕ ಸಚಿವರು, ಕಲಬುರ್ಗಿ
ಕಲಬುರ್ಗಿಯ ಎಂ. ಎಸ್. ಕೆ ಮಿಲ್ಲಿನಲ್ಲಿ ಕಾರ್ಮಿಕರಾಗಿ, ಅನೇಕ ಕಾರ್ಮಿಕ ಸಂಘಟನೆಗಳ ಸಂಘಟಕರಾಗಿ, ಕಾರ್ಮಿಕ ಹೋರಾಟಗಳ ನೇತಾರರಾಗಿ ಎರಡು ಬಾರಿ ಶಾಸಕರಾಗಿ, 1986ರಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾಗಿ ಸರಳತೆ, ಪ್ರಾಮಾಣಿಕತೆ, ನಿಷ್ಠೆಯಿಂದ ಸೇವೆ ಮಾಡಿದ ಅಪರೂಪದ ತತ್ವಬದ್ಧ ಕಾರ್ಮಿಕ ಧುರಿಣರು ಶ್ರೀ ಎಸ್. ಕೆ. ಕಾಂತ. ಅಧಿಕಾರದ ಉತ್ತುಂಗಕ್ಕೇರಿದರೂ ಸರಳ ಜೀವನ ಸಾಗಿಸುತ್ತಿರುವ ಅಪರೂಪದ ವ್ಯಕ್ತಿಗಳು ಇವರಾಗಿದ್ದಾರೆ.
ಡಾ. ಆನಂದ ಪಾಂಡುರಂಗಿ
ಖ್ಯಾತ ಮನೋರೋಗ ತಜ್ಞರು, ಧಾರವಾಡ (ಮರಣೋತ್ತರ)
ಕರ್ನಾಟಕದ ಖ್ಯಾತ ಮನೋವೈದ್ಯರಾಗಿ ಹಾದಿ ತಪ್ಪುತ್ತಿರುವ ಮಕ್ಕಳು, ತೊಳಲಾಟದಲ್ಲಿರುವ ಯುವಕರು, ವಿಚ್ಛೇದನಕ್ಕೆ ಅಣಿಯಾದ ನವದಂಪತಿಗಳು, ವೃದ್ಧಾಪ್ಯದಿಂದ ಬಸವಳಿದ ಹಿರಿಯ ಜೀವಗಳು, ವೃತ್ತಿ ನಿರ್ವಹಣೆಯ ಒತ್ತಡದಿಂದ ಬಳಲುತ್ತಿರುವವರು ವಿಶೇಷವಾಗಿ ಈ ಎಲ್ಲಾ ವರ್ಗದಲ್ಲಿರುವ ಬಡವರ ಮೇಲೆ ಅನನ್ಯ ಕಾಳಜಿಯಿಂದ ಅಗತ್ಯವಿರುವ ಮಾರ್ಗದರ್ಶನ, ಸೂಕ್ತ ಔಷಧಿಗಳನ್ನು ನೀಡಿ ಅಸಂಖ್ಯ ಜನರ ಪಾಣ ಮತ್ತು ಅನೇಕ ಕುಟುಂಬಗಳ ಮಾನ ಕಾಪಾಡಿದವರು ಡಾ. ಆನಂದ ಪಾಂಡುರಂಗಿ.
ಅವರಿಗೂ ಶ್ರೀ ತೋಂಟದಾರ್ಯ ಮಠಕ್ಕೂ ಅವಿನಾಭಾವ ಸಂಬಂಧ. ಆ ಸ್ಮರಣೆಯಲ್ಲಿ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿದೆ.
ಐ. ಆರ್. ಮಠಪತಿ
ಅಧ್ಯಕ್ಷರು, ಶರಣ ವಿಚಾರವಾಹಿನಿ, ಹಾರೂಗೇರಿ, ಬೆಳಗಾವಿ
ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಶರಣ ವಿಚಾರ ವಾಹಿನಿಯನ್ನು ಜನ-ಮನಕ್ಕೆ ತಲುಪಿಸುವಲ್ಲಿ ಅಪಾರವಾಗಿ ಶ್ರಮಿಸುತ್ತಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಶರಣ ಸಾಹಿತ್ಯ ಕುರಿತು ಯುವ ಮುನಶ್ವೇತನ ಶಿಬಿರಗಳ ಆಯೋಜನೆಯ ಜೊತೆ ಜೊತೆಯಲ್ಲೇ ನಾಡಿನ ಹಲವಾರು ಊರುಗಳಲ್ಲಿ ಬಸವ ಭೂಮಿಯಾತ್ರೆಯನ್ನು ಹಮ್ಮಿಕೊಂಡ ಶ್ರೇಯಸ್ಸು ಇವರದಾಗಿದೆ.
ಶರಣ ಸಾಹಿತ್ಯದ ಕುರಿತು ಹಲವಾರು ಕೃತಿಗಳು ಇವರಿಂದ ಪ್ರಕಟವಾಗಿವೆ. ವಿಶೇಷವಾಗಿ ವ್ಯಸನ ಮುಕ್ತಿ ಶಿಬಿರಗಳನ್ನು ಹಮ್ಮಿಕೊಳ್ಳುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.
ಚಂದ್ರಶೇಖರ ಸೋಮಶೆಟ್ಟ
ಹಿರಿಯ ಕಲಾವಿದರು, ಬೀದರ
ಅಸಾಧಾರಣ ಕಲಾ ಪ್ರತಿಭೆಯುಳ್ಳ ಇವರು ‘ಕಲೆ ಜೀವನದ ಬೆಳಕು’ ಎಂದು ನಂಬಿದವರು. ಮೂಲತಃ ಜಹಿರಾಬಾದನವರು, ನಾಡೋಜ ಡಾ ಜಿ ಎಸ್ ಖಂಡರಾವ್ ಅವರಂಥ ಅಪ್ರತಿಮ ಕಲಾಗುರುಗಳ ಬಳಿ ತಮ್ಮ ಚಿತ್ರಕಲಾ ಶಿಕ್ಷಣವನ್ನು ಪಡೆದು ಜಲವರ್ಣ ಚಿತ್ರಕಲೆಯಲ್ಲಿ ಅತ್ಯದ್ಭುತ ಪರಿಣಿತಿಯನ್ನು ಸಾಧಿಸಿದ್ದಾರೆ.
ಮೂರುವರೆ ದಶಕಗಳ ಕಾಲ ಬೀದರನಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ತಮ್ಮ ನಿವೃತ್ತಿ ಜೀವನದಿಂದ ಬಂದ ಸಮಸ್ತ ಹಣವನ್ನು ಬಸವಣ್ಣ ಮತ್ತು ಇತರ ಶರಣರ ಕಲ್ಯಾಣಕ್ರಾಂತಿಯ ವಿವಿಧ ಸನ್ನಿವೇಶಗಳನ್ನು ಚಿತ್ರಿಸುವಲ್ಲಿ ವಿನಿಯೋಗಿಸಿ ಬೀದರ ನಗರದಲ್ಲಿ ಅತ್ಯಾಕರ್ಷ ಬಸವೇಶ್ವರ ಕಲಾಗ್ಯಾಲರಿಯನ್ನು ನಿರ್ಮಿಸಿದ ಶ್ರೇಯಸ್ಸು ಇವರದಾಗಿದೆ.
ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು, ಪೂಜ್ಯ ಕೋರಣೇಶ್ವರ ಮಹಾಸ್ವಾಮಿಗಳು, ಪೂಜ್ಯ ಪ್ರಭು ಮಹಾಸ್ವಾಮಿಗಳು ಪೂಜ್ಯ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು, ಪೂಜ್ಯ ಬಸವಾನಂದ ಮಹಾಸ್ವಾಮಿಗಳು, ಪೂಜ್ಯ ಜಗದೇವ ಮಲ್ಲಬೊಮ್ಮಯ್ಯ, ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಪೂಜ್ಯ ಮಹಾಂತ ಮಹಾಸ್ವಾಮಿಗಳು, ಪೂಜ್ಯ ಶರಣಬಸವ ಮಹಾಸ್ವಾಮಿಗಳು, ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿನಾಯಕ ಮಾನ್ವಿ, ಅಧ್ಯಕ್ಷರು, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಡಾ. ಉಮೇಶ ವಿ. ಮುರದ, ಅಧ್ಯಕ್ಷರು ಲಿಂಗಾಯತ ಪ್ರಗತಿಶೀಲ ಸಂಘ ಉಪಸ್ಥಿತರಿರುತ್ತಾರೆ.
ಇದೇ ಸಂದರ್ಭದಲ್ಲಿ ಗದಗ ನಗರದಲ್ಲಿ ನಿರ್ಮಿಸಲಾಗಿರುವ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸುವರ್ಣ ಸೌಧದ ಲೋಕಾರ್ಪಣೆ ಸಮಾರಂಭವೂ ನಡೆಯಲಿದೆ.
