ವಿಜಯಪುರ:
ವಿಶ್ವಗುರು, ಜಗಜ್ಯೋತಿ ಬಸವೇಶ್ವರ ಅವರ 893ನೇ ಬಸವ ಜಯಂತಿ ಉತ್ಸವ–2026 ಅನ್ನು ಏಪ್ರಿಲ್ 19 ಮತ್ತು 20ರಂದು ಎರಡು ದಿನಗಳ ಕಾಲ ವಿಜಯಪುರದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ.
ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಮಹೋತ್ಸವಕ್ಕೆ ಸಾವಿರಾರು ಬಸವಭಕ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ವಿ.ಸಿ. ನಾಗಠಾಣ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಈ ಬಾರಿಯ ಉತ್ಸವವನ್ನು ವಿಶೇಷವಾಗಿ ರೂಪಿಸಲಾಗಿದೆ ಎಂದರು.
ಉತ್ಸವದ ಮುಖ್ಯ ಕಾರ್ಯಕ್ರಮಗಳು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಸೇರಿದಂತೆ ಹಲವು ಜನಪ್ರತಿನಿಧಿಗಳು, ಗಣ್ಯರು, ಬಸವಪರ ಸಂಘಟನೆಗಳ ಪ್ರಮುಖರು, ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ಏಪ್ರಿಲ್ 19ರ ಕಾರ್ಯಕ್ರಮಗಳು
ಬೆಳಿಗ್ಗೆ 9.30ರಿಂದ 11ರವರೆಗೆ ಮಕ್ಕಳಿಂದ ವಚನ ಕಂಠಪಾಠ ಸ್ಪರ್ಧೆ ಹಾಗೂ ಮಕ್ಕಳ ಕವಿಗೋಷ್ಠಿ ನಡೆಯಲಿದೆ.
ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಯುವಜನರಿಗಾಗಿ ಯುವ ಕವಿಗೋಷ್ಠಿ ಆಯೋಜಿಸಲಾಗಿದೆ.
ಮಧ್ಯಾಹ್ನ 3ಕ್ಕೆ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬಸವಣ್ಣನವರ ತತ್ವ, ಸಮಾಜ ಪರಿವರ್ತನೆ ಮತ್ತು ಅವರ ಸಂದೇಶಗಳ ಕುರಿತು ಗಣ್ಯರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿವೆ.
ಸಂಜೆ 6ರಿಂದ ರಾತ್ರಿ 9.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಚನ ಗಾಯನ, ನೃತ್ಯ, ಜಾನಪದ ಕಲಾಪ್ರದರ್ಶನ ಹಾಗೂ ವಿಶೇಷ ನಾಟಕ ಪ್ರದರ್ಶನ ನಡೆಯಲಿವೆ.
ಏಪ್ರಿಲ್ 20ರ ಕಾರ್ಯಕ್ರಮಗಳು
ಬೆಳಿಗ್ಗೆ 7ಕ್ಕೆ ಬಸವನಬಾಗೇವಾಡಿಯಿಂದ ಮ್ಯಾರಥಾನ್ ಮೂಲಕ ತರಲಾಗುವ ಬಸವ ಜ್ಯೋತಿಗೆ ವಿಜಯಪುರದಲ್ಲಿ ಭವ್ಯ ಸ್ವಾಗತ ಕೋರಲಾಗುತ್ತದೆ. ಬಳಿಕ ಬಸವ ಪುತ್ಥಳಿಗೆ ಪೂಜೆ ನೆರವೇರಿಸಲಾಗುತ್ತದೆ.
ಬೆಳಿಗ್ಗೆ 9ರಿಂದ 10ರವರೆಗೆ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನಡೆಯಲಿದೆ.
ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಹಾಗೂ ಜಿಲ್ಲೆಯ ಹಿರಿಯ ಸಾಹಿತಿಗಳಿಂದ ‘ಕಲ್ಯಾಣದ ಕ್ರಾಂತಿ’ ಬಹುಭಾಷಾ ಕವಿಗೋಷ್ಠಿ ಜರುಗಲಿದೆ.
ಭವ್ಯ ಮೆರವಣಿಗೆ
ಮಧ್ಯಾಹ್ನ 3ರಿಂದ 5ರವರೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಲಿದೆ. ಜಾನಪದ ವಾದ್ಯಮೇಳ, ವಚನಕಟ್ಟು, ವಚನ ಪ್ಲೇಕಾರ್ಡ್ಗಳು ಹಾಗೂ ಶರಣ-ಶರಣೆಯರ ವೇಷಭೂಷಣ , ಭಾವಚಿತ್ರಗಳೊಂದಿಗೆ ಮೆರವಣಿಗೆ ನಗರದೆಲ್ಲೆಡೆ ಸಂಚರಿಸಲಿದೆ.
ಮುಖ್ಯ ಸಮಾರೋಪ ಕಾರ್ಯಕ್ರಮ
ಸಂಜೆ 5ರಿಂದ 6.30ರವರೆಗೆ ಜಿಲ್ಲಾಡಳಿತ ಮತ್ತು ಬಸವ ಜಯಂತಿ ಉತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.30ರಿಂದ ರಾತ್ರಿ 9.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನ ಹಾಗೂ ಬಹುಭಾಷಾ ವಚನ ವಾಚನ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರಿಗೆ ಆಹ್ವಾನ
ಬಸವ ಜಯಂತಿ ಉತ್ಸವದಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಭಾಗವಹಿಸಿ ಬಸವಣ್ಣನವರ ತತ್ವಗಳನ್ನು ಅರಿತುಕೊಳ್ಳಬೇಕು ಎಂದು ಉತ್ಸವ ಸಮಿತಿ ಮನವಿ ಮಾಡಿದೆ.
ವಿಜಯಪುರ ನಗರದಲ್ಲಿ ಎರಡು ದಿನಗಳ ಕಾಲ ಭಕ್ತಿ, ಸಂಸ್ಕೃತಿ ಮತ್ತು ಬಸವ ತತ್ವಗಳ ಸಂಭ್ರಮ ಮನೆ ಮಾಡಲಿದ್ದು, ಉತ್ಸವಕ್ಕೆ ಬೇಕಾದ ಸಿದ್ಧತೆಗಳು ಸಾಗಿವೆ.
ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿಯ ಬಸನಗೌಡ ಹರನಾಳ, ಘನಶ್ಯಾಮ ತೋಸನಿವಾಲ, ಡಾ. ರವಿಕುಮಾರ ಬಿರಾದಾರ, ಪ್ರಭುಗೌಡ ಪಾಟೀಲ, ಶಶಿಕಲಾ ಕೋಟಗಿ, ಎಸ್. ಹೆಚ್. ನಾಡಗೌಡ, ಶಕುಂತಲಾ ಮೋಸಲಗಿ, ಜಂಬುನಾಥ ಕಂಚಾಣಿ, ಸಂಗೀತಾ ಪೂಜಾರಿ ಉಪಸ್ಥಿತರಿದ್ದರು.
