ಚಿತ್ರದುರ್ಗ :
ವ್ಯಕ್ತಿಯ ಜೀವನ ಚರಿತ್ರೆಯನ್ನು ಕೇವಲ ಮೂರು ಸಾಲಿನಲ್ಲಿ ದಾಖಲಿಸಬಹುದು. ಹುಟ್ಟಿದರು, ಒಂದಷ್ಟು ದಿನ ಉಸಿರಾಡಿದರು, ನಂತರ ಸತ್ತರು. ಆದರೆ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನದ ಯಶೋಗಾಥೆಯನ್ನು ಮೂರು ಸಾಲಿನಲ್ಲಿ ಸೆರೆಹಿಡಿಯಲು ಸಾಧ್ಯವೇ?
ಕೆಲವರು ಸನ್ನಿವೇಶದ ಬಲದಿಂದ ದೊಡ್ಡವರಾದರೆ, ಕೆಲವರು ತಾವು ಕುಳಿತ ಪೀಠದಿಂದ, ಕೆಲವರು ಕೂಡಿಟ್ಟ ಹಣಬಲದಿಂದ, ಮತ್ತೆ ಕೆಲವರು ದೇಹದ ಆಕಾರದ ಬಲದಿಂದ ದೊಡ್ಡವರೆನಿಸಿಕೊಳ್ಳುತ್ತಾರೆ.
ಆದರೆ ಹೇಮರಡ್ಡಿ ಮಲ್ಲಮ್ಮನಂತಹ ಶಿವಶರಣೆ ಜೀವನ ಚಿಂತನ-ಮಂಥನ, ಸಾಧನೆ, ಯೋಗ, ಜ್ಞಾನ, ಅನುಭವಿಸಿದ ಕಷ್ಟಗಳ ಮೂಲಕ ಮೇರುಸದೃಶ ವ್ಯಕ್ತಿತ್ವದ ಬಲದಿಂದ, ಸಾಮಾನ್ಯ ವ್ಯಕ್ತಿಯಾಗಿದ್ದು ಅಸಮಾನ್ಯ ರೀತಿಯ ಜೀವನ ಸಾಧನೆಯ ಬಲದಿಂದ ದೊಡ್ಡವರಾಗಿದ್ದಾರೆಂದು ವಿಶ್ರಾಂತ ಉಪನ್ಯಾಸಕರು ಕವಿ, ಸಾಹಿತಿಯೂ ಆಗಿರುವ ಸಿ.ಬಿ. ಶೈಲಾ ಜಯಕುಮಾರ ಹೇಳಿದರು.

ಅವರು ಇಲ್ಲಿನ ಬಸವ ಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಶ್ರೀ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಈಚೆಗೆ ಏರ್ಪಡಿಸಿದ್ದ ಮಹಾಸಾದ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಶರಣೋತ್ಸವ ಸಮಾರಂಭದಲ್ಲಿ ಭಾಗವಹಿಸಿ ವಿಷಯಾವಲೋಕನ ಮಾಡುತ್ತಿದ್ದರು.
೧೨ನೇ ಶತಮಾನದ ಅಕ್ಕನ ನಂತರ ಅಷ್ಟೇ ಬಹುಮುಖ್ಯವಾಗಿ ಕೇಳಿ ಬರುವ ಹೆಸರು ಅಂದರೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರದು. ಕೇವಲ ಒಬ್ಬ ಮಹಿಳೆಯಾಗಿ ಮಾತ್ರವಲ್ಲದೇ ಕೌಟುಂಬಿಕ ಅಡೆತಡೆಗಳನ್ನು ಮೀರಿ ಭಗವಂತನನ್ನು ಹೇಗೆ ಒಲಿಸಿಕೊಳ್ಳಬಹುದೆಂಬ ಜೀವಂತ ಸಾಕ್ಷಿಯಾಗಿ ಹೇಮರಡ್ಡಿ ಮಲ್ಲಮ್ಮ ನಮಗೆ ಕಾಣಿಸಿಕೊಳ್ಳುತ್ತಾರೆ ಎಂದರು.
ಗದುಗಿನ ಪುಟ್ಟರಾಜ ಗವಾಯಿಗಳು, ಶಿಶುನಾಳ ಶರೀಫರು, ನಾಟಕಗಳಲ್ಲಿ ಇನ್ನುಳಿದಂತೆ ಜಾನಪದರು ಮಲ್ಲಮ್ಮನ ಜೀವನ ಚರಿತ್ರೆಯನ್ನು ತಮಗೆ ಕಂಡ ಸಾಕ್ಷಾಧಾರಗಳ ಮೂಲಕ ಸೆರೆಹಿಡಿದಿದ್ದಾರೆ. ಹೆಣ್ಣು ಕೆಲವರು ಅಂದುಕೊಂಡಂತೆ ಕೇವಲ ದೇಹವಲ್ಲ. ಬದಲಿಗೆ ಹಿಮಾಲಯದೆತ್ತರದ ಮನಸ್ಸು ಎಂದೂ ಸಹ ಅಂದುಕೊಳ್ಳಬೇಕಿದೆ. ಹಾಗೆ ಅಂದುಕೊಂಡಿರುವುದುಂಟು.
ರಾಮಾಪುರದ ಗೌರಮ್ಮ ನಾಗಿರೆಡ್ಡಿ ಅವರ ಸುಪುತ್ರಿ ಹೇಮರಡ್ಡಿ ಮಲ್ಲಮ್ಮ ಸಿದ್ಧಾಪುರದ ಸೊಸೆ. ಆಟವಾಡುವ ವಯಸ್ಸಿನಲ್ಲೇ ಶ್ರೀಶೈಲ ಮಲ್ಲಿಕಾರ್ಜುನನ ಆರಾಧಿಸಿ ಮಗು ಮತ್ತು ಗಂಡನನ್ನು ಮಹಾದೇವನೆಂದೆನ್ನಿಸಿ ಅತ್ತೆ ನಗೆಣ್ಣೆಯರ ಕಾಟ ಸಹಿಸಿಕೊಂಡು ಮತಿಗೇಡಿ ಮೈದುನನನ್ನು ಮಹಾಯೋಗಿ ವೇಮನನ ಮಾಡಿ ಮಹಾತಾಯಿಯಾಗಿ ಬೆಳಗಿದರು ಎಂದು ಜಾನಪದರಲ್ಲಿ ಬರುವ ಸಂಗತಿಗಳನ್ನು ತಿಳಿಸಿದರು.
ಮಲ್ಲಮ್ಮನನ್ನು ಪರಿಪರಿಯಾಗಿ ಕಾಡುವ, ಹಿಂಸೆ ಕೊಡುವ, ಅವಮಾನ ಮಾಡುವ ಇಚ್ಛೆಯಿಂದ ಅತ್ತೆ ಒಮ್ಮೆ ಮನೆಗೆ ಬಂದ ಬಂಧುಗಳ ಎದುರಿನಲ್ಲಿ ಗೊಡ್ಡು ದನದ ಆಕಳ ಹಾಲನ್ನು ಕರೆದು ತಾ ಎಂದು ಆದೇಶಿಸುತ್ತಾಳೆ. ಏನೂ ಅರಿಯದ ಮಲ್ಲಮ್ಮ ಆಕಳ ಕೆಚ್ಚಲಿಗೆ ಕೈ ಹಾಕಿ ಹಾಲು ಕರೆದ ಭಾವುಕ ಸನ್ನಿವೇಶ ಎಂತಹುದು ಎನ್ನುವುದು ಅರಿವಾಗುತ್ತದೆ. ಹೀಗೆ ತಾನು ನಂಬಿದ ದೈವ ಕರುಣೆ ತೋರಿ ಕಾಪಾಡುವ ಪರಿ ಎಂತಹ ಪವಾಡ ಎನ್ನಬೇಕು. ಮತ್ತೊಮ್ಮೆ ಮಳೆ ಬಾರದೆ ಬೆಳೆ ಒಣಗಿ ನಿಂತು ಕಂಗಾಲಾದ ಸಂದರ್ಭ. ಆಗ ಮತ್ತೆ ಮಲ್ಲಮ್ಮನಿಗೆ ಅತ್ತೆ ಹೊಲಕ್ಕೆ ಹೋಗಿ ಬೇಳೆಕಾಳುಗಳನ್ನು ಬಿಡಿಸಿ ತರಲು ಹೇಳುತ್ತಾಳೆ. ಮಲ್ಲಮ್ಮ ತನ್ನ ಭಕ್ತಿಯಿಂದ ಹೋಗಿ ಕಾಳುಗಳನ್ನು ಹೆಕ್ಕಿ ತಂದಾಗ ಮತ್ತೊಮ್ಮೆ ಎಲ್ಲರಿಗೂ ಪರಮಾಶ್ಚರ್ಯ. ಹೀಗೆ ಅನೇಕ ಪ್ರಸಂಗಗಳಲ್ಲಿ ಕೌಟುಂಬಿಕವಾಗಿ ಸವಾಲುಗಳನ್ನು ಎದುರಿಸಿದ ಮಲ್ಲಮ್ಮ ಗಟ್ಟಿಗಿತ್ತಿಯಾಗಿ ಬೆಳೆದು ನಿಲ್ಲುತ್ತಾಳೆ.
ಭಕ್ತಿ, ಜ್ಞಾನ, ವೈರಾಗ್ಯದ ಕಣಿಯಾಗಿ ಕಂಗೊಳಿಸಿ ತನ್ನ ಆರಾಧ್ಯ ದೈವ ಮಲ್ಲಿಕಾರ್ಜುನನಲ್ಲಿ ದೇವರನ್ನು ಕಂಡುಕೊಳ್ಳುತ್ತ, ತಪ್ಪು ಮಾಡಿದವರನ್ನು ಕ್ಷಮಿಸುತ್ತ ಲೋಕೋದ್ಧಾರದ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಲೋಕದ ಜನ ಮೆಚ್ಚುವಂತೆ ನಡೆದುಕೊಂಡ ರೀತಿ ಅನುಪಮವಾದುದೆಂದು ಸ್ಮರಿಸಿದರು.

ಶರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿದ್ದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಇಡೀ ಮಾನವ ಕುಲಕ್ಕೆ ಆದರ್ಶ ವ್ಯಕ್ತಿತ್ವದವರಾಗಿದ್ದು, ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಬಲವಾಗಿ ನಂಬಿದಂತಹ ಮಹಾಸಾದ್ವಿ. ಈ ಶರಣೆಯನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ ಇಡೀ ಮಾನವ ಸಂಕುಲಕ್ಕೆ ಸನ್ಮಾರ್ಗ ತೋರಿದ ಮಹಾದೇವಿ ಎಂದು ಭಾವಿಸಬೇಕಿದೆ. ಈಕೆಯ ಸರಳತೆ, ಸೌಜನ್ಯ, ವಿನಯ, ತಾಳ್ಮೆ ಬಹು ಎತ್ತರಕ್ಕೆ ಕೊಂಡೊಯ್ದು ಇದರಿಂದ ದೊಡ್ಡ ಶಕ್ತಿಯಾಗಿ ರೂಪುಗೊಂಡ ವ್ಯಕ್ತಿತ್ವ ಎಂದು ಬಣ್ಣಿಸಿದರು.
ಸಮಾರಂಭದ ಸಮ್ಮುಖ ವಹಿಸಿದ್ದ ಕೋಡಿಹಳ್ಳಿಯ ಶ್ರೀ ಬಸವ ಭೃಂಗೇಶ್ವರ ಶ್ರೀ ಹಾಗೂ ಶಿರಸಂಗಿಯ ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ಮಲ್ಲಮ್ಮನ ಆದರ್ಶಗಳನ್ನು ಕೇವಲ ಭಾಷಣಕ್ಕೆ ಮಾತ್ರ ಬಳಸಿಕೊಳ್ಳದೆ ನಡೆಯಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಿವಿಧ ಮಠಗಳ ಶ್ರೀಗಳಾದ ಉಳವಿಯ ಶ್ರೀ ಬಸವಲಿಂಗಮೂರ್ತಿ ಶರಣರು, ತಿಪ್ಪೇರುದ್ರ ಸ್ವಾಮೀಜಿ, ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಶ್ರೀಗಳು, ಪೂರ್ಣಾನಂದ ಶ್ರೀ, ಸೇರಿದಂತೆ ಹಲವಾರು ಮಠ-ಪೀಠಗಳ ಸ್ವಾಮಿಗಳು ಉಪಸ್ಥಿತರಿದ್ದರು.

ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಡಾ. ಪಾಲಾಕ್ಷಯ್ಯ, ಗೌರವಾಧ್ಯಕ್ಷ ಚಿದಾನಂದಪ್ಪ, ಕಾರ್ಯದರ್ಶಿ ಡಿ.ಬಿ. ಶಿವಾನಂದಪ್ಪ, ಗಂಗಾಧರಪ್ಪ, ರಾಜಣ್ಣ, ಗೋವಿಂದಪ್ಪ, ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಬಸವರಾಜ ಕಟ್ಟಿ, ತಿಪ್ಪೇಸ್ವಾಮಿ, ನಾಗರಾಜ ಸಂಗಮ್, ಕೊಟ್ರೇಶಪ್ಪ, ಆನಂದ, ಬಸವಾಭಿಮಾನಿಗಳಾದ ರಾಜಣ್ಣ, ನಾಗರಾಜು, ಕೆ.ಸಿ. ಬಸವರಾಜಪ್ಪ, ಕವಿ ಗಂಗಾಧರಪ್ಪ, ಜಯಕುಮಾರ, ರಾಜಶೇಖರ, ಸುಮಾ ರಾಜಶೇಖರ ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲ ಸಿಬ್ಬಂದಿ ಉಪಸ್ಥಿತರಿದ್ದರು.
ಎಸ್.ಜೆ.ಎಂ. ಕ್ರೆಡಿಟ್ ಕೋ ಆಪ್ ಸೊಸೈಟಿ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಕಲಾವಿದ ಉಮೇಶ ಪತ್ತಾರ ವಚನ ಪ್ರಾರ್ಥನೆ ಹಾಡಿದರು. ಪ್ರಜ್ವಲ ಸ್ವಾಗತಿಸಿದರು. ಕಿರಣ ಕಾರ್ಯಕ್ರಮ ನಿರೂಪಿಸಿ ಕಡೆಯಲ್ಲಿ ಶರಣು ಸಮರ್ಪಣೆ ಮಾಡಿದರು.
