ಆನಲೈನ್ ಬೆಟ್ಟಿಂಗ್ ಬಿಟ್ಟು ಯುವಕರು ಕಾಯಕ ತತ್ವ ಪಾಲಿಸಬೇಕು: ಸಾಗರ ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಂಚೋಳಿಯಲ್ಲಿ ಬಸವ ಜಯಂತೋತ್ಸವ

ಚಿಂಚೋಳಿ :

ಇಂದಿನ ಆಧುನಿಕ ಸಮಾಜದಲ್ಲಿ ಯುವಕರು ಸಾಮಾಜಿಕ ಜಾಲತಾಣ, ಆನಲೈನ್ ಗೇಮ್, ಬೆಟ್ಟಿಂಗ್ ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜೀವನದ ತಮ್ಮ ಅಮೂಲ್ಯವಾದ ಯೌವ್ವನ ಹಾಗೂ ಸಮಯವನ್ನು ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ ಎಂದು ಸಂಸದ ಸಾಗರ ಖಂಡ್ರೆ ಎಂದು ಹೇಳಿದರು.

ಇವೆಲ್ಲವನ್ನೂ ಬದಿಗೊತ್ತಿ ಬಸವಣ್ಣನವರು ಪ್ರತಿಪಾದಿಸಿದ ” ಕಾಯಕವೇ ಕೈಲಾಸ ” ತತ್ವವನ್ನು ಅಳವಡಿಸಿಕೊಳ್ಳಬೇಕು. ಮನುಷ್ಯನ ಜೀವನ ಕಾಯಕದಿಂದ ಸಾರ್ಥಕವಾಗುವುದು. ಜನ ಮೆಚ್ಚುವುದು ಕಾಯಕ ಹೊರತು ಇನ್ನಿತರ ಯಾವುದಕ್ಕೂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಚನ್ನ ಕಲ್ಯಾಣ ಮಂಟಪದಲ್ಲಿ ಜಯಂತೋತ್ಸವದ ಅಧ್ಯಕ್ಷ ವಿರೇಶ ಯಂಪಳ್ಳಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 893 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡುತ್ತ, ಬಸವಣ್ಣನನ್ನು ಕೇವಲ ಜಯಂತಿಗೆ ಮಾತ್ರ ಸೀಮಿತಗೊಳಿಸದೇ ವರ್ಷಪೂರ್ತಿ ಅವರ ಆದರ್ಶಗಳನ್ನು ಪಾಲಿಸಬೇಕೆಂದರು.

ಬಳಿಕ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ನಡೆ-ನುಡಿ, ಆಚಾರ-ವಿಚಾರ ಒಂದಾದವನೇ ಶರಣ. ನಾವು ಆಡುವ ಮಾತುಗಳಿಗೂ ಆಚರಣೆಗಳಿಗೂ ಸಂಬಂಧವಿಲ್ಲದಂತೀರಬಾರದು, ಶಿವಾಚಾರ್ಯರು ಹಾಗೂ ವಿರಕ್ತರು ಒಂದಾಗಿ ಸಾಗಿದಾಗ ಮಾತ್ರ ವೀರಶೈವ ಲಿಂಗಾಯತ ಸಮಾಜ ಬಲಿಷ್ಠಗೊಳ್ಳುತ್ತದೆ ಎಂದರು.

ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ್ದರು. ಅದರಂತೆಯೇ ನಾವುಗಳು ಕೂಡ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಬೇಕು.

ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ, ಬಸವಣ್ಣನವರ ವಚನಗಳು ಸಾಮಾಜಿಕ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಈಗಲೂ ವಚನದ ಅರಿವು ನಮಗೆ ಬೇಕಾಗಿದೆ ಎಂದರು.

ಚಿಂಚೋಳಿಯ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ, ಲಿಂಗಾಯತ ಸಮಾಜವು ಅತಿದೊಡ್ಡ ಸಮಾಜವಾಗಿದೆ. ಈ ಹಿಂದಿನಿಂದಲೂ ಸಾಮಾಜಿಕ ನ್ಯಾಯ ನೀಡುತ್ತಾ ಬಂದಿದೆ. ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ ಅವರು ಇಡೀ ವಿಶ್ವಕ್ಕೆ ಗುರುವಾದವರು ಎಂದರು.

ಕಾರ್ಯಕ್ರಮದಲ್ಲಿ ನರನಾಳ ಸುಕ್ಷೇತ್ರದ ಶಿವಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಉಳಿದಂತೆ ಹಾರಾಕೂಡ ಶ್ರೀಗಳು ಸಾನಿಧ್ಯವನ್ನು ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದಲ್ಲಿ ವಿವಿಧ ಕಲಾ ಹಾಗೂ ನೃತ್ಯ ತಂಡಗಳಿಂದ ಬಸವಣ್ಣನವರ ಮೂರ್ತಿಯ ಮೆರವಣಿಗೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಬಸವಾಭಿಮಾನಿಗಳು, ವಿವಿಧ ಸಮಾಜದ ಮುಖಂಡರುಗಳು, ಯುವಕರು, ಮಕ್ಕಳು ಸೇರಿದಂತೆ ಇನ್ನಿತರರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *