ಲಿಂಗಾಯತ ಧರ್ಮದಲ್ಲಿ ಗಾಣಿಗರ ಸ್ಥಾನದ ಬಗ್ಗೆ ಐತಿಹಾಸಿಕ ಸಾಕ್ಷಿಯಿದೆ

ಇಂದು ಲಿಂಗಾಯತ ಕಾಯಕ ಪಂಗಡಗಳನ್ನು ಒಡೆಯುವ ಒಳಸಂಚು ನಡೆಯುತ್ತಿದೆ.

ಲಂಡನ್

೧೨ನೇ ಶತಮಾನದ ಬಸವಾದಿ ಶರಣರ ಕಲ್ಯಾಣ ಕ್ರಾಂತಿ ಎನ್ನುವುದು ಒಂದು ಜಾತಿಯ ಉಗಮವಾಗಿರಲಿಲ್ಲ. ಅದು ಶೋಷಿತ, ಶ್ರಮಜೀವಿ ಕಾಯಕ ವರ್ಗಗಳ ಆತ್ಮಗೌರವದ ಒಕ್ಕೂಟವಾಗಿತ್ತು.

ಬಸವಣ್ಣನವರು ರೂಪಿಸಿದ ಲಿಂಗಾಯತ ಧರ್ಮದ ಮೂಲ ಬೇರು ಕಾಯಕ ಮತ್ತು ದಾಸೋಹ ತತ್ವ. ಆದರೆ ಇಂದು ರಾಜಕೀಯ ಲಾಭಕ್ಕಾಗಿ, ಮೀಸಲಾತಿಯ ವರ್ಗೀಕರಣಗಳನ್ನು ಇಟ್ಟುಕೊಂಡು ಲಿಂಗಾಯತ ಕಾಯಕ ಪಂಗಡಗಳನ್ನು ಒಡೆಯುವ ಬೃಹತ್ ಒಳಸಂಚು ನಡೆಯುತ್ತಿದೆ.

ಈ ಸಂಚಿಗೆ ಸಿಲುಕಿ ಉತ್ತರ ಕರ್ನಾಟಕದ ಭಾಗದಲ್ಲಿ ತಲತಲಾಂತರದಿಂದ ಲಿಂಗಾಯತ ಆಚಾರ-ವಿಚಾರಗಳನ್ನು ರಕ್ತಗತ ಮಾಡಿಕೊಂಡಿರುವ ಗಾಣಿಗ ಸಮುದಾಯವನ್ನು ಬಲಿಯಾಗಿದೆ.

‘ಲಿಂಗಾಯತ ಗಾಣಿಗ’ರಿಗೆ ಕಾನೂನು ಮಾನ್ಯತೆಯಿದೆಯೆಂದು ಕರ್ನಾಟಕ ಹೈ ಕೋರ್ಟ್ ಹೇಳಿದ್ದರೂ, ಗಾಣಿಗರಿಗೂ ಲಿಂಗಾಯತ ಧರ್ಮಕ್ಕೂ ಸಂಬಂಧವಿಲ್ಲ ಎನ್ನುವ ಮನಸ್ಥಿತಿ ಕೆಲವರಲ್ಲಿದೆ. “ನೀವು ಲಿಂಗಾಯತರಲ್ಲ, ಬರೀ 2A ಮೀಸಲಾತಿಗಾಗಿ ಬಂದವರು” ಎಂದು ಕೆಲವರು ಹೇಳುವುದೂ ಕೂಡ ಕೇಳಿದ್ದೇನೆ.

ಇದು ಅತ್ಯಂತ ಜುಗುಪ್ಸಾಕರವಾದ ಬೌದ್ಧಿಕ ದಿವಾಳಿತನ ಹಾಗೂ ಅಜ್ಞಾನದ ಪರಮಾವಧಿ.

ಲಿಂಗಾಯತ ಧರ್ಮದಲ್ಲಿ ಗಾಣಿಗರ ಸ್ಥಾನಮಾನದ ಬಗ್ಗೆ ಇತಿಹಾಸದ ಪುಟಗಳಲ್ಲೇ ಪ್ರಬಲವಾದ ಸಾಕ್ಷಿಯಿದೆ.

ವಿಜಯನಗರದ ಪ್ರೌಢದೇವರಾಯನ ಆಸ್ಥಾನದಲ್ಲಿದ್ದ ಮಹಾಮಾತ್ಯ ಲಕ್ಕಣ್ಣ ದಂಡೇಶನು ೧೪೨೮ ರಲ್ಲೇ ಬರೆದ ಲಿಂಗಾಯತ ಗ್ರಂಥ ‘ಶಿವತತ್ತ್ವ ಚಿಂತಾಮಣಿ’ಯ ೨೦ನೇ ಸಂಧಿಯ, ೪೨ನೇ ಪದ್ಯದಲ್ಲಿ ಗಾಣಿಗ ಮುದ್ದಣ್ಣನ ಚಾರಿತ್ರಿಕ ಅಸ್ತಿತ್ವವನ್ನು ಯಥಾವತ್ತಾಗಿ ಹೀಗೆ ದಾಖಲಿಸಿದ್ದಾನೆ:

‘ನೆಲದೊಳಗೆ ಗಾಣದ ಕಾಯಕದಿ ಶಿವನ ನೆನೆದು
ಚೆಲುವ ತೈಲವ ತಂದು ಶರಣರಂ ಸಲಹಿದ
ಬಳಕೆಯೊಳು ಮುದ್ದಣ್ಣನೆಂಬ ಗಾಣಿಗ ಶರಣ
ನೊಲವಿನಿಂ ಶಿವಲೋಕ ಪಡೆದ ಕಾಣಾ ಧಾತ್ರಿಯೊಳು’

ಇದಕ್ಕಿಂತ ದೊಡ್ಡ ಪ್ರಾಥಮಿಕ ಲಿಖಿತ ಆಧಾರ ಮತ್ತೊಂದು ಬೇಕಿಲ್ಲ. ತನ್ನ ಗಾಣದ ಕಾಯಕವನ್ನು ಮಾಡುತ್ತಲೇ, ಅದರಿಂದ ಬಂದ ಶುದ್ಧವಾದ ತೈಲವನ್ನು ಕಲ್ಯಾಣದ ಶರಣರ ದಾಸೋಹಕ್ಕೆ ಮತ್ತು ಅನುಭವ ಮಂಟಪದ ದೀಪದ ಸೇವೆಗೆ ನೀಡಿ ಶರಣ ಸಂಕುಲವನ್ನು ಸಲಹಿದವನು ಗಾಣಿಗ ಮುದ್ದಣ್ಣ.

ಕಲ್ಯಾಣದ ಮನೆಗಳಲ್ಲಿ ಜ್ಞಾನದ ಜ್ಯೋತಿ ಉರಿಯಲು ಎಣ್ಣೆ ಉಣಿಸಿದ್ದೇ ಗಾಣಿಗ ಸಮಾಜದ ಶರಣರು. ಗಾಣಿಗ ಮುದ್ದಣ್ಣ ಬಸವಣ್ಣನವರ ಅನುಭವ ಮಂಟಪದ ಅವಿಭಾಜ್ಯ ಅಂಗವಾಗಿದ್ದರು.

ವೈಜ್ಞಾನಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನೋಡಿದರೆ, ಲಿಂಗಾಯತ ಧರ್ಮ ಎನ್ನುವುದು ರೆಡ್ಡಿಗಳು, ಪಂಚಮಸಾಲಿಗಳು, ಬಣಜಿಗರು, ಗಾಣಿಗರು, ಅಂಬಿಗರು, ಕುಂಬಾರರು, ದಲಿತರು ಸೇರಿದಂತೆ ನೂರಾರು ಕಾಯಕ ಪಂಗಡಗಳು ಒಟ್ಟಾಗಿ ಕಟ್ಟಿದ ಒಂದು ಪ್ರಜಾಪ್ರಭುತ್ವದ ಮಾದರಿ.

ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಬದುಕಿನ ಆರ್ಥಿಕ ಭದ್ರತೆಗಾಗಿ ಸರ್ಕಾರ ಕೊಡುವ 2A ಪ್ರಮಾಣಪತ್ರವನ್ನು ಇಟ್ಟುಕೂಂಡು ಒಂದು ಸಮುದಾಯದ ಧಾರ್ಮಿಕ ಅಸ್ಮಿತೆಯನ್ನೇ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ.

ಇಂದು ನಡೆಯುತ್ತಿರುವ ರಾಜಕೀಯ ಸಂಚುಗಳು ಲಿಂಗಾಯತರನ್ನು ‘ಹಿಂದೂ ಬಸವಾದಿ ಶರಣರು’ ಎಂಬ ಬ್ರಾಹ್ಮಣಶಾಹಿ ಚೌಕಟ್ಟಿನೊಳಗೆ ತಳ್ಳಿ, ಕಾಯಕ ಪಂಗಡಗಳನ್ನು ಒಡೆದು ಆಳಲು ನೋಡುತ್ತಿವೆ.

ಮೋದಿ ಅಲೆಯಲ್ಲಿ ಕೊಚ್ಚಿಹೋಗಿ ಅಥವಾ ಆರೆಸ್ಸೆಸ್ ಪ್ರೇರಿತ ಹಿಂದುತ್ವದ ಅಜೆಂಡಾಕ್ಕೆ ಬಲಿಯಾಗಿ ಗಾಣಿಗರು ತಮ್ಮ ಶರಣ ಪ್ರಜ್ಞೆಯನ್ನು ಮರೆಯಬಾರದು.

ಗಾಣಿಗ ಸಮಾಜಕ್ಕೆ ತನ್ನದೇ ಆದ ಭವ್ಯ ಲಿಂಗಾಯತ ಇತಿಹಾಸವಿದೆ. ಹಂಗಿಸುವವರಿಗೆ ಇತಿಹಾಸದ ಪಾಠ ಕಲಿಸಿ, ಒಂಟಿತನವನ್ನು ಬದಿಗಿಟ್ಟು, ನಾವೆಲ್ಲರೂ ಬಸವಧರ್ಮದ ಸಮಾನ ವಾರಸುದಾರರು ಎಂದು ಸಾಂಸ್ಥಿಕ ಧೈರ್ಯದಿಂದ ಮುನ್ನಡೆಯಬೇಕಾದ ಕಾಲ ಬಂದಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *