ಬೀದರ:
ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಬಸವೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ವಚನ ವಿಜಯೋತ್ಸವ ಮೆರವಣಿಗೆ ವೈಭವದಿಂದ ನಡೆಯಿತು.
ಶಿವನಗರದ ಬಸವ ಉದ್ಯಾನದಿಂದ ಆರಂಭವಾದ ಮೆರವಣಿಗೆ ಪಾಪನಾಶ ಗೇಟ್, ಪಾಪನಾಶ ದೇಗುಲ ಮಾರ್ಗವಾಗಿ ಹಾಯ್ದು ಬಸವಗಿರಿಯ ಅಕ್ಕ ಅನ್ನಪೂರ್ಣತಾಯಿ ಅವರ ಐಕ್ಯಮಂಟಪಕ್ಕೆ ತಲುಪಿ ಸಮಾರೋಪಗೊಂಡಿತು.

ಎಲ್ಲೆಡೆ ಷಟ್ಸ್ಥಲ ಧ್ವಜಗಳು ರಾರಾಜಿಸಿದವು. ಛತ್ರಿ-ಚಾಮರಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಬಸವ ಮಂತ್ರ ಘೋಷಗಳು ಮೊಳಗಿದವು.

ಡಿಜೆದಲ್ಲಿ ಬಸವೋತ್ಸವ, ವಚನ ವಿಜಯೋತ್ಸವ ಗೀತೆ ಮೊಳಗಿದಾಗ ಭಕ್ತರ ಉತ್ಸಾಹ ಮೇರೆ ಮೀರಿತ್ತು. ಯುವಕರು, ಶರಣ-ಶರಣೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಬಸವ ಉದ್ಯಾನದಲ್ಲಿ ಮೆರವಣಿಗೆ ಸಮಿತಿಯ ಅಧ್ಯಕ್ಷ ರಾಜಕುಮಾರ ಪಾಟೀಲ, ಅಭಿಷೇಕ ಮಠಪತಿ ಹಾಗೂ ಹಣ್ಮು ಪಾಜಿ ಗುರು ಪೂಜೆ ನೆರವೇರಿಸಿದರು.
ಬೆಳಗಾವಿಯ ಶರಣ ವಿಚಾರ ವಾಹಿನಿಯ ಅಯ್ಯಾರ ಮಠಪತಿ ಅವರು ವಚನ ಓದಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಸ್ವತಃ ತಲೆ ಮೇಲೆ ಲಿಂಗಾಯತ ಧರ್ಮ ಗ್ರಂಥದ ಗುರುವಚನದ ಬೃಹತ್ ಪ್ರತಿ ಇಟ್ಟುಕೊಂಡು ಮೆರವಣಿಗೆಯಲ್ಲಿ ಹೊರಟರು. ಅಪಾರ ಶರಣ-ಶರಣೆಯರು ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಶ್ರದ್ಧೆ, ಭಕ್ತಿಯಿಂದ ಹೆಜ್ಜೆ ಹಾಕಿದರು.

12ನೇ ಶತಮಾನದಲ್ಲಿ ಶರಣರು ಉಳವಿ ಕಾಡಿನಲ್ಲಿ ವಚನ ಸಾಹಿತ್ಯ ರಕ್ಷಿಸಲು ಬಹಳಷ್ಟು ಕಷ್ಟಪಟ್ಟಿದ್ದರು. ಬಸವಗಿರಿ ಕಾನನದಲ್ಲಿ ಭಕ್ತರು ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಹೊರಟಾಗ ಆ ದೃಶ್ಯ ನೆನೆಯುತ್ತಾ ಮುಂದಡಿ ಇಟ್ಟರು.
ಸಾಹಿತಿ ರಮೇಶ ಮಠಪತಿ, ಪ್ರಮುಖರಾದ ಮಾಣಿಕಪ್ಪ ಗೋರನಾಳೆ, ಸಿ.ಎಸ್. ಪಾಟೀಲ, ಮಲ್ಲಿಕಾರ್ಜುನ ಔರಾದೆ, ಚನ್ನಬಸಪ್ಪ ಹಂಗರಗಿ, ಜಗನ್ನಾಥ ಚಿಮಕೋಡೆ, ನೀಲಮ್ಮ ರೂಗನ್, ಸಂಗೀತಾ ಆರ್. ಪಾಟೀಲ, ಓಂಕಾರ ಕೌಟೆ, ಪ್ರಕಾಶ ಮಠಪತಿ, ಅಶೋಕ ಎಲಿ, ಬಸವರಾಜ ಶೇರಿಕಾರ, ವಿಶ್ವನಾಥ ಬಿರಾದಾರ ಮತ್ತಿತರರು ಪಾಲ್ಗೊಂಡಿದ್ದರು.

ಪರಮಪೂಜ್ಯ ಅನ್ನಪೂರ್ಣ ತಾಯಿಯವರು ಮಾಡಿದ ಮಹಿಳಾ ಜಾಗೃತಿ ಮತ್ತು ಸಂಘಟನೆ ಸರ್ವಕಾಲಿಕ ಸ್ಮರಣೀಯ. ವಚನ ವಿಜಯೋತ್ಸವ ಸಮಾಜಕ್ಕೆ ಕೊಟ್ಟ ದೊಡ್ಡ ಕೊಡುಗೆ.
ಸಕಲರಿಗೂ ಶರಣು 💐ಧನ್ಯವಾದಗಳು 💐👏🏻👏🏻