ಬಸವತತ್ವದ ತುತ್ತು ಉಣ್ಣಿಸಿದ ಅಕ್ಕ: ಬೆಲ್ದಾಳ ಶರಣರ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಬಸವತತ್ವಕ್ಕೆ ಈಗ ಅಧಿಕ ವಿಘ್ನಗಳು ಬಂದಿವೆ’

ಬೀದರ:

ಅಕ್ಕ ಅನ್ನಪೂರ್ಣತಾಯಿ ಬೀದರ ಅನ್ನು ಜಗತ್ತಿಗೆ ಪರಿಚಯಿಸಿದ್ದರು ಎಂದು ಬಸವಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳೆ ಹೇಳಿದರು.

ಇಲ್ಲಿಯ ಬಸವಗಿರಿಯಲ್ಲಿ ಬಸವೋತ್ಸವದಲ್ಲಿ ಶನಿವಾರ ನಡೆದ ಅಕ್ಕ ಅನ್ನಪೂರ್ಣತಾಯಿ ಅವರ ಸ್ಮರಣೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಗಿರಿ, ವಚನ ವಿಜಯೋತ್ಸವ, ಪ್ರಭುದೇವ ಸ್ವಾಮೀಜಿ ಅಕ್ಕ ಅನ್ನಪೂರ್ಣತಾಯಿ ಅವರ ಕೊಡುಗೆ ಎಂದು ಬಣ್ಣಿಸಿದರು.

ಅಕ್ಕ ಬಸವತತ್ವದ ತುತ್ತು ಉಣ್ಣಿಸಿದ್ದರು. ಅಕ್ಕನವರ ಮಾತುಗಳಿಂದ ವಚನ ತತ್ವಾನುಭವ ಗ್ರಂಥ ಹುಟ್ಟಿಕೊಂಡಿತು. ಬಸವತತ್ವಕ್ಕೆ ಈಗ ವಿಘ್ನಗಳು ಅಧಿಕ ಇವೆ ಎಂದು ತಿಳಿಸಿದರು.

ಅಕ್ಕನವರ ಧ್ವನಿಯನ್ನು ಈಗ ಪ್ರಭುದೇವರಲ್ಲಿ ಕೇಳಬಹುದು. ಅಕ್ಕನ ಸ್ಮರಣೋತ್ಸವವನ್ನು ಬಸವೋತ್ಸವ ಆಗಿ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಅಕ್ಕನವರು ಒಂದು ಚೈತನ್ಯ ಶಕ್ತಿ. ಅವರ ಸಂಪರ್ಕಕ್ಕೆ ಬಂದವರಲ್ಲಿ ಮಿಂಚಿನ ಸಂಚಾರವಾಗುತ್ತಿತ್ತು. ಬಸವಣ್ಣನವರ ತತ್ವ ಸಾರಿದ್ದ ಅವರು ಸೂರ್ಯ- ಚಂದ್ರ ಇದ್ದಂತೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಅಕ್ಕ ಅಪಾರ ಜ್ಞಾನಿ. ಅರಿವಿನ ಆಗರ. ದಿನದ 24 ಗಂಟೆ ದುಡಿಯುತ್ತಿದ್ದರು. ಅವರ ಕಾರ್ಯಕ್ರಮ ನೋಡಿ ಜನ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದರು. ಅವರು ಬೀದರನಲ್ಲಿ ಬಸವತತ್ವದ ಮಹಾ ಮನೆ ಬಹಳ ವ್ಯವಸ್ಥಿತವಾಗಿ ಕಟ್ಟಿದ್ದರು ಎಂದು ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರೂಗನ್ ಮಾತನಾಡಿ, ಅಕ್ಕನವರ ಮಾತುಗಳು ತಾಯಿಯ ಮಾತಿನಂತೆ ಇರುತ್ತಿದ್ದವು. ಅವರಂಥ ಗುರು ಸಿಕ್ಕದ್ದು ನಮ್ಮ ಪುಣ್ಯ. ಅಕ್ಕ ಹೋದ ಮೇಲೆ ಬೀದರ ಭಣ ಭಣ ಎನಿಸುತ್ತಿದೆ ಎಂದು ಹೇಳಿದರು.

ಶಾಂತಾ ಜಯರಾಜ ಖಂಡ್ರೆ ಮಾತನಾಡಿ, ಅಕ್ಕ ಎಲ್ಲರಿಗೂ ಬಸವಣ್ಣವರನ್ನು ತೋರಿಸಿಕೊಟ್ಟಿದ್ದರು. ಭಕ್ತರಿಗಾಗಿ ಬದುಕು ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಅಕ್ಕ ಅವರದ್ದು ಮೇರು ವ್ಯಕ್ತಿತ್ವ. ತಾಯಿ ಇಲ್ಲದವರಿಗೆ ತಾಯಿಯಾಗಿದ್ದರು. ನೊಂದವರಿಗೆ, ಬೆಂದವರಿಗೆ ತಂದೆ-ತಾಯಿಯಾಗಿ ಪ್ರೀತಿ ಹಂಚಿದ್ದರು ಎಂದು ಹೇಳಿದರು.

ಎಲ್ಲ ಭಾಷೆಯಲ್ಲಿ ಪ್ರವಚನ ಮಾಡಲು 100 ವರ್ಷ ಆಯಸ್ಸು ತೆಗೆದುಕೊಂಡು ಮತ್ತೆ ಬರುತ್ತೇನೆ ಎಂದು ಹೇಳುತ್ತಿದ್ದರು. ಮುಂದಿನ ವರ್ಷದವರೆಗೆ ಅಕ್ಕನವರ ಎಲ್ಲ ಗ್ರಂಥಗಳನ್ನು ಹೊರ ತರೋಣ ಎಂದರು.

ಅಕ್ಕ ಅನ್ನಪೂರ್ಣತಾಯಿ ಅವರ ಕುರಿತ ರೂಪಕ ಎಲ್ಲರ ಗಮನ ಸೆಳೆಯಿತು.

ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ಬೆಲ್ದಾಳ ಸಿದ್ಧರಾಮ ಶರಣರು ಹಾಗೂ ಬಸವ ಜಯಂತಿಯನ್ನು ಯಶಸ್ವಿಯಾಗಿ ಸಂಘಟಿಸಿದ 2026ನೇ ಸಾಲಿನ ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಡಾ. ರಜನೀಶ ವಾಲಿ ಅವರನ್ನು ಸನ್ಮಾನಿಸಲಾಯಿತು.

ಬಸವಕಲ್ಯಾಣದ ಬಸವ ಮಹಾ ಮನೆಯ ಜಗದ್ಗುರು ಸಿದ್ಧರಾಮ ಸ್ವಾಮೀಜಿ, ಕೊಪ್ಪಳದ ಯಳವಂತ ಶರಣರು ಸಾನಿಧ್ಯ ವಹಿಸಿದ್ದರು. ಭಾರತೀಯ ಬಸವ ಬಳಗದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಡಾ. ರಜನೀಶ್ ವಾಲಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಗೋರ್ಟಾ(ಬಿ)ದ ಸೋಮನಾಥಪ್ಪ ರಾಜೇಶ್ವರೆ, ಕೊಪ್ಪಳದ ಅರ್ಚನಾ ಗವೀಶ ಸಸಿಮಠ, ಹುಬ್ಬಳ್ಳಿಯ ಪ್ರಭಾ ಏರೆಸೀಮೆ, ಸಾಹಿತಿ ರಮೇಶ ಮಠಪತಿ ಇದ್ದರು.

ಸಂಧ್ಯಾರಾಣಿ ಮುತ್ತಂಗೆ ನಿರೂಪಿಸಿದರು. ಡಾ. ಸಂತೋಷ್ ಹಂಗರಗಿ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಬಸವತತ್ವ ವ್ಯಾಪಕವಾಗಿ ಜನಮಾನಸದಲ್ಲಿ ಉಳಿಸಿದ ಅಕ್ಕನವರು 🙏🙏🙏🙏🙏

Leave a Reply

Your email address will not be published. Required fields are marked *