ಕನಕಪುರ ಬಸವತತ್ವ ಪ್ರಚಾರಕ ಎಸ್. ವಿ. ಮಹದೇವಸ್ವಾಮಿ ಪುಣ್ಯಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

‘ವಚನ ಜಗಜ್ಯೋತಿ’ ಕೃತಿ ಬಿಡುಗಡೆ

ಕನಕಪುರ:

“ಶರಣರು ಮೇಲು-ಕೀಳು, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಸಮಾನತೆಯ ಕಲ್ಯಾಣ ನಾಡನ್ನು ಕಟ್ಟಿದರು. ಇಂದು ಅವರು ನೀಡಿರುವ ವಚನಗಳ ಮೂಲಕ ನಾವು ಆ ಕಲ್ಯಾಣ ನಾಡನ್ನು ಮರುನಿರ್ಮಾಣ ಮಾಡಬೇಕಿದೆ ಎಂದು ಬೆಂಗಳೂರಿನ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ನುಡಿದರು.

ಕನಕಪುರ ತಾಲ್ಲೂಕಿನ ಸಾತನೂರು ಬಳಿಯ ದಾಳಿಂಬ ಗ್ರಾಮದ ಬಸವ ಮಂಟಪದಲ್ಲಿ ಆಯೋಜಿಸಲಾಗಿದ್ದ ಶರಣ ಎಸ್. ವಿ. ಮಹದೇವಸ್ವಾಮಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.

ಮಹದೇವಸ್ವಾಮಿಯವರು ದಾಳಿಂಬ ಗ್ರಾಮದ ಬಸವ ಮಂಟಪ ನಿರ್ಮಾಣದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿಯೇ ಆ ಮಂಟಪವನ್ನು ನೋಡಿದ ತಕ್ಷಣ ನಮಗೆ ಮೊದಲು ಮಹದೇವಸ್ವಾಮಿ ಅವರೇ ನೆನಪಾಗುತ್ತಾರೆ” ಎಂದು ಸ್ಮರಿಸಿದರು.

ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಅವರು ಮಾತನಾಡುತ್ತ, ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಪ್ರತಿಯೊಂದು ವಸ್ತುವನ್ನು ಹೇಗೆ ಬಳಸಬೇಕು ಎಂಬುದಕ್ಕೆ ಒಂದು ಕೈಪಿಡಿ ಇರುತ್ತದೆ. ಅದೇ ರೀತಿ ಬೆಲೆಕಟ್ಟಲಾರದಂತಹ ಮಾನವನ ಜೀವನವನ್ನು ಸಮಾಜದ ಹಿತಕ್ಕೆ ಬಳಸಿ ಹೇಗೆ ಸಾರ್ಥಕಪಡಿಸಿಕೊಳ್ಳಬೇಕು ಎಂಬುದಕ್ಕೆ ಶರಣರ ವಚನಗಳೇ ನಮಗೆ ಕೈಪಿಡಿ ಆಗಿವೆ ಎಂದರು.

ಶರಣ ಮಹದೇವಸ್ವಾಮಿಯವರು ಲಿಂಗೈಕ್ಯರಾಗಿದ್ದರೂ, ಇಂದು ಅವರು ಹಾಡಿರುವ ವಚನಗಳು, ಅಭಿನಯಿಸಿದ ನಾಟಕಗಳ ನಟನೆ ಹಾಗೂ ಅವರು ರಚಿಸಿರುವ ಗೀತೆಗಳನ್ನು ನಮಗಾಗಿ ವಿಶೇಷವಾಗಿ ಬಿಟ್ಟು ಹೋಗುವುದರ ಮೂಲಕ ಅವರು ದೈಹಿಕವಾಗಿ ನಮ್ಮಿಂದ ದೂರವಾದರೂ, ಭಾವನಾತ್ಮಕವಾಗಿ ನಮ್ಮೆಲ್ಲರ ಮಧ್ಯೆ ಇಂದಿಗೂ ಜೀವಂತವಾಗಿದ್ದಾರೆ ಎಂದರು.

ಮಂಡ್ಯದ ಕಾಯಕಯೋಗಿ ಫೌಂಡೇಷನ್ ಸಂಸ್ಥಾಪಕ ಶಿವಕುಮಾರ ಅವರು ಮಾತನಾಡಿ, ಮಹದೇವಸ್ವಾಮಿಯವರು ಲಿಂಗೈಕ್ಯರಾಗಿದ್ದರೂ ಅವರ ನೆನಪಿನಲ್ಲಿ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರು, ಮಹದೇವಸ್ವಾಮಿಯವರ ಕುಟುಂಬವರ್ಗದವರ ದಾಸೋಹದೊಂದಿಗೆ ‘ವಚನ ಜಗಜ್ಯೋತಿ’ ಎಂಬ ಕೃತಿಯನ್ನು ಹೊರತಂದಿದ್ದಾರೆ. ಇಂದು ಈ ಕೃತಿಯನ್ನು ಬಿಡುಗಡೆ ಮಾಡುವ ಮೂಲಕ ಮಹದೇವಸ್ವಾಮಿಯವರ ಹೆಸರನ್ನು ಎಲ್ಲಾ ಕಾಲಕ್ಕೂ ಜೀವಂತವಾಗಿರುವಂತೆ ಮಾಡಿದ್ದಾರೆ” ಎಂದು ಶ್ಲಾಘಿಸಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಅವರು ‘ವಚನ ಜಗಜ್ಯೋತಿ’ ಕೃತಿಯ ಪರಿಚಯ ಮಾಡಿ “ಈ ಕೃತಿಯು ಒಟ್ಟು 61 ವಚನಗಳನ್ನು ಒಳಗೊಂಡಿದೆ. ಪ್ರತಿಯೊಬ್ಬ ಮಾನವನೂ ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ದಿನದ ವಿವಿಧ ಅವಧಿಗಳಲ್ಲಿ ಯಾವ ಯಾವ ವಚನಗಳನ್ನು ಸ್ತುತಿಸಬೇಕು ಎಂಬುದನ್ನು ಈ ಪುಸ್ತಕದಲ್ಲಿ ಸಮಗ್ರವಾಗಿ ನೀಡಲಾಗಿದೆ.

ಇದರೊಂದಿಗೆ ಲಿಂಗೈಕ್ಯ ಮಹದೇವಸ್ವಾಮಿಯವರು ಗಾಯನ ಮಾಡುತ್ತಿದ್ದ ಜನಪ್ರಿಯ ವಚನಗಳು, ಗೀತೆಗಳು ಹಾಗೂ ಅವರು ಸ್ವತಃ ರಚಿಸಿದ್ದ ರಚನೆಗಳನ್ನು ಕೂಡ ಈ ಪುಸ್ತಕದಲ್ಲಿ ಅಳವಡಿಸಲಾಗಿದೆ ಎಂದು ಅವರು ವಿವರಿಸಿದರು.

ಮರಳವಾಡಿ ಮಠದ ಪೂಜ್ಯ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಿಡದಿಯ ರಾಮಲಿಂಗ ಪಾಟೀಲ ಮತ್ತು ತಂಡ, ಎಸ್. ಆರ್. ಮಹದೇವ ಮತ್ತು ತಂಡ ಹಾಗೂ ಕಲಾವಿದ ಶಿವು ಅವರು ತಮ್ಮ ಸುಮಧುರ ಗಾಯನದ ಮೂಲಕ ಗಮನ ಸೆಳೆದರು.  ಶೀಲಾ ಮತ್ತು ತಂಡದವರಿಂದ ಆಕರ್ಷಕ ‘ವಚನ ನೃತ್ಯ’ ಪ್ರದರ್ಶನ ನಡೆಯಿತು. ಚನ್ನಪಟ್ಟಣದ ಅಕ್ಕನಬಳಗದ ಸದಸ್ಯರು ಅರ್ಥಪೂರ್ಣವಾದ ‘ಅನುಭವಮಂಟಪ’ ರೂಪಕವನ್ನು ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದರು.

ವೇದಿಕೆಯಲ್ಲಿ ಶಿವಸ್ವಾಮಿ, ಮಲ್ಲಿಕಾರ್ಜುನಪ್ಪ, ರಾಮಲಿಂಗಪ್ಪ ಪಾಟೀಲ, ವಚನ ಗಾಯಕ ಬಿಡದಿ ರೇಣುಕಪ್ಪ, ಎಸ್. ಎಂ. ನಂದೀಶ, ಮಮತ, ಎಸ್. ಎಂ. ಮಹೇಶ್, ಜ್ಯೋತಿ, ಎಸ್. ಎಂ. ಸುಧಾ, ಎಚ್. ವಿ. ರುದ್ರಸ್ವಾಮಿ, ಎಸ್. ಎಂ. ಶೋಭ, ಜಿ. ಆರ್. ಸಂಜಯ, ಅಪರ್ಣ ಶಿವಕುಮಾರ, ಬಸವಪ್ರಿಯ ನಾಗರಾಜು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಚನ್ನಬಸವಣ್ಣ ಅವರು ಎಲ್ಲರನ್ನೂ ಸ್ವಾಗತಿಸಿದರೆ, ಶಿಕ್ಷಕಿ ಆಶಾ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಸುಂದರ ವರದಿ ಪ್ರಕಟಿಸಿರುವ ತಮಗೆ ಶರಣಾರ್ಥಿಗಳು

Leave a Reply

Your email address will not be published. Required fields are marked *