ಗಜೇಂದ್ರಗಡ:
ಮೇ 31ರಂದು ಗದಗ ನಗರದಲ್ಲಿ ನಡೆಸಲು ಉದ್ಧೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಕಾಡಸಿದ್ಧೇಶ್ವರ ಮಠದ ಕನ್ನೇರಿ ಸ್ವಾಮೀಜಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸುವ ಮೂಲಕ ಶಾಂತಿ ಕಾಪಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ಪಟ್ಟಣದ ತಹಶಿಲ್ದಾರರ ಮೂಲಕ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
೧೨ ನೇ ಶತಮಾನದ ವಚನಕಾರರು ಸನತನವಾದಿ ಸಿದ್ಧಾಂತವನ್ನು ಧಿಕ್ಕರಿಸಿದರು. ಸನಾತನಕ್ಕೆ ವಿರುದ್ಧವಾಗಿ ಸಮಾಜದ ಎಲ್ಲಾ ಸ್ತರದ ಜನರನ್ನು ಲಿಂಗ ಜಾತಿ ಹಾಗೂ ಬಡವ ಬಲ್ಲಿದನೆಂಬ ವ್ಯತ್ಯಾಸಗಳಿಲ್ಲದೆ ಒಂದೆಡೆ ಸೇರಿಸಿ ಅನುಭಾವ ಮಂಟಪವನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಾನತೆಗಳನ್ನು ತರಲು ಪ್ರಯತ್ನಿಸಿದರು.

ಸನಾತನ ಮನುವಾದಿಗಳು ಸಮಾಜದಲ್ಲಿ ಮನುಷ್ಯ ಮನುಷ್ಯರನ್ನು ಹುಟ್ಟಿನ ಆಧಾರದಲ್ಲಿ ಶೋಷಿಸುವ, ಮೌಢ್ಯಾಚರಣೆಗಳ ವಿರುದ್ಧವಾಗಿ ಕಟ್ಟಿ ಬೆಳೆಸಿದ ಲಿಂಗಾಯತ ಧರ್ಮವನ್ನು ಇಂದು ಈ ಹಿಂದುತ್ವವಾದಿ ಶಕ್ತಿಗಳು ಶರಣ ಚಳುವಳಿಯ ಆಶಯಗಳನ್ನು ದಿಕ್ಕು ತಪ್ಪಿಸಲು ಹೊರಟಿರುವರು. ಇದಕ್ಕೆ ನಮ್ಮ ಸಂಘಟನೆಯ ತೀವ್ರ ತಾತ್ವಿಕ ವಿರೋಧವಿದೆ.
ಈ ಹಿಂದೂ ಬೃಹತ್ ಸಮಾವೇಶದ ಸಮಿತಿಯಲ್ಲಿ ಇರುವವರು ಎಲ್ಲರೂ ಬಿಜೆಪಿ ಪಕ್ಷದ ಸದಸ್ಯರೇ ಹಾಗೂ ಇದರ ಮುಂಚೂಣಿಯಲ್ಲಿರುವರು ಸಂಘ ಪರಿವಾರದ ಮುಖಂಡರು. ಇದು ಒಂದು ಕೋಮುವಾದಿ ಪಕ್ಷದ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಲಿಂಗಾಯತ ಮತ್ತು ಶರಣ ಪರಂಪರೆ ಅಳಿಸಿಹಾಕುವ ಆರೆಸ್ಸೆನ ಅಜೆಂಡಾ ಇದಾಗಿದೆ.
ಬಸವಾದಿ ಶರಣರ ಹಿಂದೂ ಬೃಹತ್ ಸಮಾವೇಶ ಇದು ಗದಗ ನಗರಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ಹಿಂದೂ ಸಮಾವೇಶ ಇದರ ಉದ್ಧೇಶ ಆರ್ ಎಸ್ಎಸ್ ಹಾಗೂ ಸಂಘ ಪರಿವಾರ ಇದರ ಪ್ರಮುಖ ಪ್ರಚಾರಕರಲ್ಲಿ ಒಬ್ಬರಾದ ಕನ್ಹೇರಿ ಸ್ವಾಮೀಜಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ.
ಅವರು ಕೇವಲ ಹಿಂದೂ ಸಮಾವೇಶ ಮಾಡಿದ್ದರೆ ನಮ್ಮ ತಕರಾರು ಇರುತ್ತಿರಲಿಲ್ಲ. ಅವರು ಹಿಂದೂ ಸಮಾವೇಶದ ಹೆಸರಿನಲ್ಲಿ ಬಸವಾದಿ ಶರಣರನ್ನು ಯಾವ ಬಸವಾದಿ ಶರಣರು ಇವರ ಅಸಮಾನತೆಯ ವೈದಿಕ (ಈಗಿನ ಹಿಂದುತ್ವ) ಪರಂಪರೆಯನ್ನು, ಜಾತಿ ವ್ಯವಸ್ಥೆಯನ್ನು ಮೇಲು, ಕೀಳು, ಸ್ತ್ರೀ ಅಸಮಾನತೆಯನ್ನು ಕಠೋರವಾಗಿ ವಿರೋಧಿಸಿದ್ದರು. ಅವರ ಹೆಸರಿನಲ್ಲಿ ಹಿಂದೂ ಸಮಾವೇಶವನ್ನು ಮಾಡುತ್ತಿದ್ದಾರೆ.
ಕನ್ನೇರಿ ಸ್ವಾಮೀಜಿಯವರು ಈಗ ಇಡೀ ವಚನ ಚಳುವಳಿಯನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಸವಾದಿ ಶರಣರ ಹೆಸರಿನಲ್ಲಿ ಸುಳ್ಳು ಸುಳ್ಳು ಇತಿಹಾಸವನ್ನು ಜನರ ತಲೆಗೆ ತುಂಬಲು ಹೊರಟಿದ್ದಾರೆ. ಅಶ್ಲೀಲ, ಕೆಟ್ಟ ಶಬ್ದಗಳಿಂದ ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ಇರುವ, ಅದಕ್ಕಾಗಿ ಹೋರಾಡುತ್ತಿರುವ, ಕೆಲಸ ಮಾಡುವ ಲಿಂಗಾಯತ ಮಠಾಧೀಶರಿಗೆ, ಸಂಘಟಕರಿಗೆ ಹೀಯಾಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಹಿಂದುತ್ವ ಸಿದ್ಧಾಂತದ ಜಾತಿ ವ್ಯವಸ್ಥೆ, ತಾರತಮ್ಯ, ಮೇಲು ಕೀಳು ಇವೆಲ್ಲ ಸ್ವಾಭಾವಿಕ, ಇಲ್ಲಿ ಎಲ್ಲರನ್ನು ಸಮನಾಗಿ ಕಾಣಲು ಬರುವುದಿಲ್ಲ. ನಮ್ಮ ಐದು ಬೆರಳುಗಳು ಸಮವಾಗಿ ನೋಡಲು ಬರುತ್ತಾ. ಜಾತಿ ವ್ಯವಸ್ಥೆಯು ಹಾಗೆ ಎಂದು ದಲಿತರನ್ನು ಹೀಯಾಳಿಸಿಕೊಂಡು ಬರುತ್ತಿರುವ ಶ್ರೀಗಳನ್ನು ಜಿಲ್ಲೆಯಲ್ಲಿ ನಿರ್ಭಂಧ ಹೇರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಶರಣ ಸಾಹಿತ್ಯ ಪರಿಷತ್ತು ತಾಲೂಕ ಘಟಕಗಳು, ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಗುರುಲಿಂಗಯ್ಯ ಓದಸುಮಠ, ಕೆ.ಎಸ್. ಸಾಲಿಮಠ, ಬಸವರಾಜ ಕೊಟಗಿ, ಎಂ.ಎಸ್. ಹಡಪದ, ಬಸವರಾಜ ಚೋಳಿನ, ಎಂ.ಬಿ. ಸೋಂಪುರ, ಸುರೇಶ ಚೋಳಿನ, ರವಿ ಗಡೇದವರ, ಬಾಲು ರಾಠೋಡ, ಬಸವರಾಜ ಹೊಸಮನಿ, ಪೀರು ರಾಠೋಡ, ಚನ್ನಪ್ಪ ಗುಗಲೋತ್ತರ, ಮಹಾಂತೇಶ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.
ರೋಣ:

ದಲಿತ ಸಂಘರ್ಷ ಸಮಿತಿ ಭೀಮವಾದ ತಂಡದ ವತಿಯಿಂದ ಇದೇ 31ರಂದು ಗದಗನಲ್ಲಿ ನಡೆಯುವ ಬಸವಾದಿ ಶರಣರ ಹೆಸರಿನಲ್ಲಿ ನಡೆಯುವ ಹಿಂದೂ ಸಮಾವೇಶಕ್ಕೆ ಬರುವ ಜಾತಿವಾದಿ, ಸನಾತನವಾದಿ ಕನ್ನೇರಿ ಸ್ವಾಮಿಯನ್ನು ಗದಗ ಜಿಲ್ಲೆಗೆ ಪ್ರವೇಶಿಸಲು ನಿರ್ಬಂಧಿಸಬೇಕು ಎಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕರಾದ ಸಂಜಯ ದೊಡ್ಡಮನಿ, ಮತ್ತಿತರರು ನೇತೃತ್ವ ವಹಿಸಿದ್ದರು.
