ಬಸವಣ್ಣನವರ ವಚನದಂತೆ ನಡೆಯಲು ಕೇರಳ ಸಿಎಂಗೆ ಸದನದಲ್ಲಿಯೇ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ಕೇರಳ ವಿಧಾನಸಭೆಯಲ್ಲಿ ಸಂಚಲನ ಮೂಡಿಸಿದ ಬಸವಣ್ಣನವರ ಎರಡು ವಚನಗಳು

ತಿರುವನಂತಪುರ

ಮಂಗಳವಾರ ಆರಂಭಗೊಂಡ ಕೇರಳ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಬಸವಣ್ಣನವರ ಎರಡು ವಚನಗಳು ನೂತನ ಶಾಸಕರಲ್ಲಿ ಸಂಚಲನ ಮೂಡಿಸಿದವು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಮುಸ್ಲಿಂ ಲೀಗ್ ಶಾಸಕ ಎ.ಕೆ.ಎಂ ಅಶ್ರಫ್ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ ಮಾತನಾಡಿದರು.

ನೂತನ ಮುಖ್ಯಮಂತ್ರಿ ವಿ ಡಿ ಸತೀಶನ್ ಅವರಿಗೆ ಉತ್ತಮ ಆಡಳಿತ ನೀಡಲು ಮನವಿ ಮಾಡುವಾಗ ಅಶ್ರಫ್ ಬಸವಣ್ಣನವರ ಪ್ರಸಿದ್ಧ ವಚನವನ್ನು ಕನ್ನಡದಲ್ಲಿ ಹೇಳಿ ಅದರ ಅರ್ಥವನ್ನು ಮಲಯಾಳಂನಲ್ಲಿ ವಿವರಿಸಿದರು.

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ

ನೂತನ ಮುಖ್ಯಮಂತ್ರಿಗಳ ನಡೆ-ನುಡಿ ಸತ್ಯವಾಗಿರಬೇಕು, ಅವರು ನುಡಿದಂತೆ ನಡೆಯಬೇಕು ಎಂದು ಅಶ್ರಫ್ ಸಲಹೆ ನೀಡಿದರು.

ಬಸವಣ್ಣನವರ ಈ ತತ್ವಗಳನ್ನು ಆಧಾರವನ್ನಾಗಿ ಮಾಡಿಕೊಂಡು, ಮುಖ್ಯಮಂತ್ರಿಗಳು ವಿಧಾನಸಭೆಯ ನಾಯಕತ್ವ, ಜನಸೇವೆ ಮತ್ತು ಸಾರ್ವಜನಿಕ ಕರ್ತವ್ಯವನ್ನು ನಿಭಾಯಿಸಬೇಕೆಂದು ಹೇಳಿದರು.

ಅದಕ್ಕೂ ಮುಂಚೆ ತಮ್ಮ ಕ್ಷೇತ್ರ ಮಂಜೇಶ್ವರದ ಜನರ ಉದಾರ ಪ್ರಜಾಪ್ರಭುತ್ವದ ಮನೋಭಾವವನ್ನು ಸ್ಮರಿಸಿಕೊಳ್ಳುವಾಗ ಬಸವಣ್ಣನವರ ಮತ್ತೊಂದು ಪ್ರಸಿದ್ಧ ವಚನವನ್ನು ಅಶ್ರಫ್ ಪಠಿಸಿದರು:

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ

ಇದನ್ನೂ ಕೂಡ ಕನ್ನಡದಲ್ಲಿ ಹೇಳಿ ಅಶ್ರಫ್ ಅರ್ಥವನ್ನು ಮಲಯಾಳಂನಲ್ಲಿ ವಿವರಿಸಿದರು. ಎರಡೂ ವಚನಗಳನ್ನು ಕೇಳಿ ಶಾಸಕರು ಎದ್ದು ನಿಂತು ಮೇಜು ತಟ್ಟಿ ಗೌರವದಿಂದ ಸ್ವಾಗತಿಸಿದರು.

ತಮ್ಮ ಭಾಷಣದಲ್ಲಿ ಅಶ್ರಫ್ 12ನೇ ಶತಮಾನದ ತತ್ವಜ್ಞಾನಿ, ಸಮಾಜ ಸುಧಾರಕ, ಲಕ್ಷಾಂತರ ಕನ್ನಡಿಗರ ದಾರಿದೀಪವೆಂದು ಬಸವಣ್ಣರನ್ನು ಇತರ ಶಾಸಕರಿಗೆ ಪರಿಚಯ ಮಾಡಿಕೊಟ್ಟರು. ಬಸವಣ್ಣರು ಪ್ರತಿಪಾದಿಸಿದ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸ್ಮರಿಸಿ ನಮಿಸಿದರು.

ಅಶ್ರಫ್ ಕಳೆದ ವಾರ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಇವರು ಕೇರಳದಲ್ಲಿ ‘ಕನ್ನಡಿಗ ಶಾಸಕ’ನೆಂದೇ ಖ್ಯಾತರಾಗಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
3 Comments
  • ಕೇರಳದಲ್ಲಿ ಕನ್ನಡ ನುಡಿದಿದ್ದಾರೆ ಮತ್ತು ಬಸವಣ್ಣನವರ ವಚನಗಳು ಹೇಳಿದ್ದು ಕೇಳಿ ತುಂಬಾ ಸಂತೋಷ ತಂದಿದೆ ತುಂಬಾ ಧನ್ಯವಾದಗಳು

Leave a Reply

Your email address will not be published. Required fields are marked *