‘ತಾಯಿ, ಅಕ್ಕನಿಗಿಲ್ಲದ ಜನಿವಾರ ನನಗೇಕೆಂದು ಪ್ರಶ್ನಿಸಿದ್ದ ಬಸವಣ್ಣ’

ಸಾಣೇಹಳ್ಳಿ:

ಇಲ್ಲಿನ ಶ್ರೀಮಠದಲ್ಲಿ ಸೋಮವಾರ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ನಡೆಯಿತು.

ಸಾನ್ನಿಧ್ಯ ವಹಿಸಿ ಮಾತಮಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, “ಜಗತ್ತಿನಲ್ಲಿರುವ ಅಸಂಖ್ಯಾತ ಜೀವರಾಶಿಗಳಿಗೂ ಮಾನವನಿಗೂ ಇರುವ ಮುಖ್ಯ ವ್ಯತ್ಯಾಸ ‘ಅರಿವು’. ಮನುಷ್ಯನಿಗೆ ಮಾತ್ರ ಇರುವ ಈ ಅರಿವಿನ ಪರಿಧಿಯಿಂದಾಗಿಯೇ ಆತ ಜಗತ್ತಿನ ಕಿರೀಟದಂತೆ ಕಂಗೊಳಿಸುವನು.

ವ್ಯಕ್ತಿಯು ಜಗತ್ತಿನ ಕಿರೀಟವಾಗಬೇಕಾದರೆ ತನ್ನಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ದ್ವೇಷ ಹಾಗೂ ಅಸೂಯೆಯಂತಹ ಅವಗುಣಗಳನ್ನು ಕಳೆದುಕೊಳ್ಳಬೇಕು. ಮನುಷ್ಯ ಇವುಗಳಿಂದ ಹೊರಬರಲು ಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಮನುಷ್ಯ ಶಿವನಾಗದೆ ಶವವಾಗುವನು.

ಕಾಡಿನ ಮೃಗಗಳಾದರೂ ಹೊಟ್ಟೆ ತುಂಬಿದ ಮೇಲೆ ಮತ್ತೊಂದು ಪ್ರಾಣಿಯ ಬೇಟೆಯಾಡುವುದಿಲ್ಲ. ಆದರೆ ಮಾನವನಲ್ಲಿ ಹೊಟ್ಟೆ ತುಂಬಿದ್ದರೂ ದ್ವೇಷ, ಅಸೂಯೆ ಸದಾ ಕಾಡುತ್ತಿರುತ್ತದೆ. ಆದುದರಿಂದ ಆತ ಕಾಡುಪ್ರಾಣಿಗಿಂತ ಕಡೆಯಾಗದೆ ಆದರ್ಶದ ಬದುಕು ಸಾಗಿಸಬೇಕು. ಆಸ್ತಿ, ಒಡವೆ, ಅಧಿಕಾರಗಳಿಗಿಂತ ಶಿವಜ್ಞಾನವೇ ಮುಖ್ಯ.

ಜಗತ್ತಿನ ಶ್ರೇಷ್ಠ ಅನುಭಾವಿ ಬಸವಣ್ಣನವರು ಎಂದಿಗೂ ತಮ್ಮನ್ನು ದೊಡ್ಡವರೆಂದು ಭಾವಿಸದೆ ಕಿರಿಯರಲ್ಲಿ ಕಿರಿಯನಾಗಲು ಇಷ್ಟಪಟ್ಟರು. ಬಾಲ್ಯದಲ್ಲೇ ತಮಗೆ ಜನಿವಾರ ಹಾಕಲು ಬಂದಾಗ, “ಇದೇ ಜನಿವಾರ ನಮ್ಮ ತಾಯಿ ಹಾಗೂ ಅಕ್ಕನಿಗೆ ಏಕೆ ಇಲ್ಲ?” ಎಂದು ಪ್ರಶ್ನಿಸಿದ್ದರು. ಈ ರೀತಿ ಬಾಲ್ಯದಿಂದಲೇ ಮಕ್ಕಳಲ್ಲಿ ಪ್ರಶ್ನಿಸುವ ಗುಣ ಬೆಳೆಸಬೇಕು. ಮಗು ಪ್ರಶ್ನಿಸಿದಾಗ ಹೆದರಿಸಿ ಸುಮ್ಮನಿರಿಸಬಾರದು. ಪ್ರಶ್ನಿಸುವ ಮೂಲಕ ಸತ್ಯವನ್ನು ಒಪ್ಪುವ ಮತ್ತು ತಪ್ಪು ವಿಚಾರಗಳನ್ನು ನಿರಾಕರಿಸುವ ಮನೋಭಾವ ಬೆಳೆಯಬೇಕು.

ಅನುಭವ ಮಂಟಪದಲ್ಲಿ ವಯಸ್ಸಿನ ಭೇದವಿಲ್ಲದೆ ಪ್ರಶ್ನಿಸುವ ಸ್ವಾತಂತ್ರ್ಯವಿತ್ತು. ಅಲ್ಲಿ ಜ್ಞಾನ ಮತ್ತು ಅನುಭಾವದ ಮೂಲಕವೇ ಹಿರಿತನಕ್ಕೆ ಗೌರವ ಸಿಗುತ್ತಿತ್ತು ಎಂದರು.

ತಾಯಿ ಗರ್ಭಿಣಿಯಾಗಿದ್ದಾಗ ೭ ತಿಂಗಳಿಗೆ ತವರು ಮನೆಗೆ ಕಳುಹಿಸುವ ಮುನ್ನ ಜಂಗಮರು ತಾಯಿಗೆ ಸಂಸ್ಕಾರ ನೀಡಿ, ಮಗು ಲಿಂಗದ ಮಗುವಾಗಿ ಬೆಳೆಯಲಿ ಎಂದು ಉಪದೇಶಿಸಿ ತಾಯಿಯ ಕೈಗೆ ಲಿಂಗವನ್ನು ನೀಡುತ್ತಾರೆ.

“ನಾವು ಹೊರಗಿನ ಗುಡಿ-ಗುಂಡಾರಗಳಿಗೆ ಅಲೆಯುವ ಜನವಾಗಬಾರದು.

 ಚೈತನ್ಯವಿಲ್ಲದ ಜಡ ವಿಗ್ರಹಗಳನ್ನು ಪೂಜಿಸುವ ಬದಲು, ನಮ್ಮ ಒಳಗಿರುವ ಚೈತನ್ಯವನ್ನು ಗುರುತಿಸಬೇಕು. ಹೊರಗಿನ ಯಾವುದೇ ದೇವರು ನಮಗೆ ಶಾಪವನ್ನಾಗಲಿ, ವರವನ್ನಾಗಲಿ ಕೊಡುವುದಿಲ್ಲ. ರಸ್ತೆಯಲ್ಲಿ ಹೋಗುವಾಗ ನಿಯಮ ಪಾಲಿಸು, ಯಾರಿಗೂ ಕೇಡು ಮಾಡಬೇಡ ಎಂದು ನಮ್ಮ ವಿವೇಕ ನಮಗೆ ಎಚ್ಚರಿಸುತ್ತದಲ್ಲವೇ? ಆ ಎಚ್ಚರಿಕೆಯೇ ದೇವರು” ಎಂದರು.

ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಗುರುಗಳು, ಲಾಂಛನಗಳು ಹಾಗೂ ಧರ್ಮಗ್ರಂಥಗಳು ಇರುತ್ತವೆ. ಅದರಂತೆ, ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ತತ್ವ ಸಿದ್ಧಾಂತಗಳನ್ನು ನೀಡಿದ ಬಸವಣ್ಣನವರೇ ಲಿಂಗಾಯತ ಧರ್ಮದ ಧರ್ಮಗುರುಗಳು. ಈ ಧರ್ಮದ ಪರಮೋಚ್ಚ ಸಂಕೇತ ‘ಇಷ್ಟಲಿಂಗ’ವಾಗಿದ್ದು, ಇದನ್ನು ಹೊರತುಪಡಿಸಿ ಬೇರೆ ಯಾವುದೇ ಆರಾಧನೆಗೆ ಇಲ್ಲಿ ಅವಕಾಶವಿಲ್ಲ. ಶರಣರು ರಚಿಸಿದ ‘ವಚನ ಸಾಹಿತ್ಯ’ವೇ ನಮಗೆ ಪರಮ ಪವಿತ್ರವಾದ ಧರ್ಮಗ್ರಂಥ.

ಕಾಶಿ, ಕೂಡಲಸಂಗಮ, ಬಸವಕಲ್ಯಾಣ ಅಥವಾ ಸಾಣೇಹಳ್ಳಿ ಮಾತ್ರವೇ ಧರ್ಮಕ್ಷೇತ್ರಗಳಲ್ಲ; ನಾವು ಎಲ್ಲಿ ವಾಸಿಸುತ್ತೇವೆಯೋ, ಎಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇವೆಯೋ ಆ ತಾಣವನ್ನೇ ಧರ್ಮಕ್ಷೇತ್ರವನ್ನಾಗಿ ಮಾಡಿಕೊಳ್ಳಬೇಕು.

ಮದುವೆಯ ಸಂದರ್ಭಕ್ಕಾಗಿ ಔಪಚಾರಿಕವಾಗಿ ದೀಕ್ಷೆ ಪಡೆಯುವುದಕ್ಕಿಂತ, ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾವಿರುವ ಮನೆಯನ್ನೇ ಮಹಾಮನೆಯನ್ನಾಗಿ ಹಾಗೂ ಅನುಭವ ಮಂಟಪವನ್ನಾಗಿ ಪರಿವರ್ತಿಸಿಕೊಂಡಾಗ ಮಾತ್ರ ನೆಮ್ಮದಿಯ ಜೀವನ ಸಾಧ್ಯ ಎಂದರು.

ಪೂಜಾ ವ್ಯವಸ್ಥೆಯನ್ನು ಶ್ರೀಮಠದ ವತಿಯಿಂದ ಮಾಡಲಾಗಿತ್ತು. ನಾಗರಾಜ ಹೆಚ್.ಎಸ್. ವಚನಗಳನ್ನು ಹೇಳಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *