ಭಾಲ್ಕಿ:
ಬಸವಾದಿ ಶರಣರ ಕ್ರಾಂತಿ ಭೂಮಿಯಾದ ಬಸವಕಲ್ಯಾಣದ ಅನುಭವಮಂಟಪಕ್ಕೆ ನಾಡಿನ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಭೇಟಿ ನೀಡಿದರು.
ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಮೊಟ್ಟಮೊದಲ ಪ್ರಜಾಸಂಸತ್ತು ನೀಡಿದರು. ಅನುಭವಮಂಟಪದ ಮೂಲಕ ಬಸವಣ್ಣನವರು ಕಾಯಕ, ದಾಸೋಹ ಮೌಲ್ಯಗಳನ್ನು ನೀಡಿದರು. ನಮ್ಮ ವಿರಕ್ತಮಠಗಳಿಗೆ ವೇದಿಕೆಯಾಗಿ ಅನುಭವ ಮಂಟಪದ ಶೂನ್ಯಪೀಠವನ್ನು ಸ್ಥಾಪಿಸಿದರು. ಕಲ್ಯಾಣ ಕ್ರಾಂತಿಯ ನಂತರ ಯಡಿಯೂರ ಸಿದ್ಧಲಿಂಗೇಶ್ವರರು ಅನುಭವ ಮಂಟಪ ಪರಂಪರೆ ಜಂಗಮಗೊಳಿಸಿದರು.

ಕಲ್ಯಾಣ ನೆಲದಲ್ಲಿ ಅನುಭವ ಮಂಟಪಕ್ಕೆ ಮರುಜೀವ ನೀಡಿದವರು ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು. ಅವರು ಸ್ವತಃ ಕಲ್ಲು ಮಣ್ಣು ಹೊತ್ತು ಅನುಭವ ಮಂಟಪ ಕಟ್ಟಿದರು. ಅವರ ಕರಕಮಲ ಸಂಜಾತರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಮತ್ತು ಬಸವಕಲ್ಯಾಣ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಪೂಜ್ಯರು ಅಭಿಮಾನದ ಮಾತುಗಳನ್ನು ನುಡಿದರು.
ಭಾಲ್ಕಿಯ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ಎಲ್ಲ ಪೂಜ್ಯರಿಗೆ ಸ್ವಾಗತ ಕೋರಿ, ಒಳಬಳ್ಳಾರಿಯ ಪೂಜ್ಯರು ಅನುಭವ ಮಂಟಪಕ್ಕೆ ನೂರಾರು ಭಕ್ತಾದಿಗಳನ್ನು ಕರೆದುಕೊಂಡು ಬಂದಿರುವುದು ನಮಗೆ ಸಾಸಿವೆ ಸಾಗರ ಹರಿದಷ್ಟು ಖುಷಿ ತಂದುಕೊಟ್ಟಿದೆ. ಪೂಜ್ಯರು ತ್ರಿಕಾಲ ಲಿಂಗಪೂಜೆ ನಿಷ್ಠೆ, ಬಸವತತ್ವ ನಿಷ್ಠಾವಂತರು ಆಗಿದ್ದಾರೆ. ಅವರ ಬಸವಭಕ್ತಿ ಯುವ ಮಠಾಧೀಶರಿಗೆ ಮಾದರಿಯಾದದ್ದು.
ಇಳಿವಯಸ್ಸಿನಲ್ಲಿ ಪೂಜ್ಯರು ಕಲ್ಯಾಣಕ್ಕೆ ಆಗಮಿಸಿರುವುದು ನಮಗೆ ನಿಜಕ್ಕೂ ಆನಂದವಾಗಿದೆ. ಅವರ ಕೃಪಾಶೀರ್ವಾದ ನಮ್ಮ ಶ್ರೀಮಠದ ಮೇಲೆ ಇರಲೆಂದು ಪ್ರಾರ್ಥಿಸುತ್ತೇವೆ ಎಂದು ನುಡಿದರು.

ಪಂಚಮಸಿದ್ಧಲಿಂಗ ಸ್ವಾಮಿಗಳು ನೇರಡಗಂ, ಶಿವಲಿಂಗ ಮಹಾಸ್ವಾಮಿಗಳು ಖೇಳಗಿ, ಬಸವಲಿಂಗ ಮಹಾಸ್ವಾಮಿಗಳು ಒಳಬಳ್ಳಾರಿ, ಮಹಾಂತಲಿಂಗ ಶಿವಾಚಾರ್ಯರು ಕರೆಗುಡ್ಡ, ತೋಂಟದಾರ್ಯ ಸ್ವಾಮಿಗಳು ಅಡವಿ ಅಮರೇಶ್ವರ, ಚನ್ನಬಸವ ಮಹಾಸ್ವಾಮಿಗಳು ಮಂಠಾಳ, ನಿರಂಜನ ಸ್ವಾಮಿಗಳು ಮೈಸೂರು, ಸಿದ್ಧಲಿಂಗ ಸ್ವಾಮಿಗಳು ರಾಯಚೂರು, ಶಶಿಕುಮಾರ ಸ್ವಾಮಿಗಳು ಕಲಬುರಗಿ, ಘನಲಿಂಗದೇವರು ಹುಬ್ಬಳ್ಳಿ, ನಿರುಪಾದ ದೇವರು ಕಲಬುರಗಿ, ಶಿವಾನಂದ ಸ್ವಾಮಿಗಳು ಬಸವಕಲ್ಯಾಣ, ಬಸವದೇವರು ಮುಂತಾದ ಪೂಜ್ಯರು ಮಾತ್ತು ಶಶಿಧರ ಕೋಸಂಬೆ ಅವರು ಉಪಸ್ಥಿತರಿದ್ದರು.
