ವಚನ ಸಾಹಿತ್ಯ ವಚನಕಾರರ ಆತ್ಮಪ್ರಜ್ಞೆಯ ಪ್ರತೀಕ : ನಿಷ್ಠಿ ರುದ್ರಪ್ಪ

“ಜಾತಿ ಮುಟ್ಟದ ಜ್ಯೋತಿ” ಕೃತಿ ಲೋಕಾರ್ಪಣೆ

ಹೊಸಪೇಟೆ:

ಕವನಗಳು ನಿಮಿತ್ತ ಮಾತ್ರ ಭಾವನೆಗಳ ರಚನೆಯಾದರೆ, ವಚನಗಳು ವಚನಕಾರರ ಆತ್ಮಪ್ರಜ್ಞೆಯವು ಎಂದು ಅವಿಭಜಿತ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ್ಯ ನಿಷ್ಠಿ ರುದ್ರಪ್ಪ ಹೇಳಿದರು.

ನಗರದಲ್ಲಿ ಈಚೆಗೆ ಸ್ಥಳೀಯ ಕವಿ, ರಂಗಕರ್ಮಿ, ವಚನಕಾರ ಮುದೇನೂರು ಉಮಾಮಹೇಶ್ವರ ಅವರ ಮನೆಯಲ್ಲಿ ಅವರ ರಚನೆಯ ಕೃತಿ “ಜಾತಿ ಮುಟ್ಟದ ಜ್ಯೋತಿ” ಗ್ರಂಥ ಕುರಿತು ಮಾತನಾಡಿದರು.

ಕವನಗಳು ಕವಿಗಳ ವ್ಯಕ್ತಿಗತ ಬದುಕಿನ ಪರಿಸರ, ಸಮಾಜ, ಪ್ರಕೃತಿ ಚಿತ್ರಣಕ್ಕೆ ತಮ್ಮಯ ಭಾವನಾತ್ಮಕ ಸ್ಪಂಧನೆಯೇ ಪ್ರಮುಖವಾಗಿರುತ್ತದೆ. ಆದರೆ ೧೨ನೇ ಶತಮಾನದಲ್ಲಿ ದೇದಿಪ್ಯಮಾನವಾಗಿ ಬೆಳಗಿದ ಅಪಾರಮಯದ ವಚನ ಸಾಹಿತ್ಯವು, ಅಂದಿನ ಕಾಲಘಟ್ಟಕ್ಕೆ ಮಾತ್ರ ಸಲ್ಲದೆ ತನ್ನ ಚಿರಂತನತೆಯನ್ನು ಇಂದಿಗೂ ಮುಂದಿಗೂ ಕೂಡಾ ಕಾಪಿಟ್ಟುಕೊಂಡು ಬಂದಿರುವುದು ವಚನಗಳ ಗಟ್ಟಿ ಜೀವಂತಿಕೆಯ ಲಕ್ಷಣವಾಗಿದೆ.

ಪ್ರಸ್ತುತ ವಚನಕಾರ ಮುದೇನೂರು ಉಮಾಮಹೇಶ್ವರ ಅವರ “ಜಾತಿ ಮುಟ್ಟದ ಜ್ಯೋತಿ” ಕೃತಿ ಮೂಲಕ, ತಮ್ಮ ಅನುಭವಗಳನ್ನು ವಚನ ಪ್ರಕಾರದಲ್ಲಿ ರಚಿಸಿದ್ದು, ಇದು ವಚನ ಸಾಹಿತ್ಯದ ಬಗ್ಗೆ ಅವರಿಗೆ ಇರುವ ಅಭಿಮಾನವನ್ನು ತೋರಿಸುತ್ತದೆ ಎಂದರು.

“ಎಲ್ಲರೂ ಕವಿತೆ ಬರೆಯುತ್ತಾರೆ
ಕವಿತೆ ಎಲ್ಲರನ್ನೂ ಬರೆಯುವುದಿಲ್ಲ
ಕೆಲವರನ್ನು ಓದಿಸುತ್ತದೆ
ಕೆಲವರನ್ನು ಮಾತಾಡಿಸುತ್ತದೆ
ಕೆಲವರನ್ನು ಹಾಡಿಸುತ್ತದೆ
ನುಡಿವಚನಕ್ಕೆ ಸಾಕ್ಷಿಯಾಗಿ ನಮ್ಮ ಚನ್ನವೀರತೇಜ
ಬಾಳುವನು ನಿಜ ಕವಿ ಕಾಣಾ”

ಈ ವಚನದಲ್ಲಿ ಭಾವಜೀವಿಗಳು ರಚಿಸಿ ಹಾಡಿ ಪಾಡುವಿಕೆಯ ಕವಿತೆ ಇದ್ದರೂ, ಕವಿತೆ ನೇರ ನೇರಾ ಎಲ್ಲವನ್ನೂ ಒಳಗೊಂಡಿರದು ಆದರೆ ವಚನ ನುಡಿಗಳಲ್ಲಿ ನುಡಿಕಾರನ ಸಾಕ್ಷಿಬದ್ಧತೆ ಕಾಣದೇ ಇರದು ಎಂದು ಅಭಿಪ್ರಾಯಿಸಿದರು.

ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ವಿವಿ ನಿವೃತ್ತ ಪ್ರವಾಚಕ ಡಾ. ರವೀಂದ್ರನಾಥ ಅವರು ವಚನ ಸಾಹಿತ್ಯವು ಜಾಗತಿಕ ವೈಚಾರಿಕ ಪ್ರಜ್ಞೆ ಪ್ರತೀಕವಾಗಿದ್ದು, ಬಸವಾದಿ ಶರಣರು ಸಾಮಾಜಿಕ ಧಾರ್ಮಿಕ ನೈತಿಕ ಜನ ಬದುಕಿನ ಮಹತ್ತರ ಕ್ರಾಂತಿಕಾರಕ ಬದಲಾವಣೆಯ ಆಶೋತ್ತರವಾಗಿ, ಅದ್ವೀತಿಯ ರೀತಿಯಲ್ಲಿ ಸಹಜ ನುಡಿಗಡಣ ಬಗೆಯಲ್ಲಿ ಆತ್ಮಸಾಕ್ಷಿಯಾಗಿ ರಚಿಸಿದ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಮೇರುತನದ ಹಿರಿಮೆ ತಂದಿದೆ ಎಂದರು.

ವೇದಿಕೆಯಲ್ಲಿನ ಅತಿಥಿಗಳು “ಜಾತಿ ಮುಟ್ಟದ ಜ್ಯೋತಿ” ಪುಸ್ತಕ ಲೋಕಾರ್ಪಣೆ ಮಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮಾತನಾಡಿ, ಮನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸುವ ಮೂಲಕ ನಾಡಿನ ಜನತೆಗೆ ಪುಸ್ತಕ ಪ್ರೀತಿ, ಪುಸ್ತಕ ಓದುವಿಕೆಯ ಪ್ರವೃತ್ತಿ ಬೆಳೆಸುವಿಕೆಯ ಕಾರ್ಯ ಯೋಜನೆಯ ಅನುಷ್ಠಾನವನ್ನು ಇದೀಗ ರಾಜ್ಯಾದಾದ್ಯಂತ ಹಮ್ಮಿಕೊಂಡಿದ್ದು, ಹೊಸಪೇಟೆಯ ಪುಸ್ತಕ ಪ್ರಿಯರ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸಲಾಗಿದೆ ಎಂದರು.

ವೇದಿಕೆಯಲ್ಲಿ ವಿಜಯನಗರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಾವಿನಹಳ್ಳಿ ಬಸವರಾಜ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಡಾ. ಧರ್ಮನಗೌಡ ಉಪಸ್ಥಿತರಿದ್ದರು. ಮತ್ತು ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಮುಖಂಡ ವೀರಸಂಗಯ್ಯ, ರಾಜಶೇಖರ ಪಾಟೀಲ, ಅಕ್ಕಿ ಮಲ್ಲಿಕಾರ್ಜುನ, ಹಿರಿಯ ಸಾಹಿತಿಗಳಾದ ಶಿವಕುಮಾರ ಹುರಕಡ್ಲಿ, ಸೌಭಾಗ್ಯಲಕ್ಷ್ಮಿ, ನೂರಜಹಾನ್, ಶೋಭಾ ಶಂಕರಾನಂದ, ರೇಖಾ ಉದಯ, ಕೆ.ಎಮ್. ಬಸವರಾಜ, ಟಿ. ಯಮನಪ್ಪ, ಚಂದ್ರಶೇಖರಯ್ಯ ರೋಣದಮಠ, ವಿಶಾಲ ಮ್ಯಾಸರ, ಮುದೇನೂರ ಉಮಾಮಹೇಶ್ವರ, ಮುದೇನೂರು ಕೊಟ್ರೇಶಿ, ಸೋಧಾ ವಿರೂಪಾಕ್ಷಗೌಡ ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *