ವಚನ ಕಲಾವಿದರಿಗೆ ಎರಡೂವರೆ ಲಕ್ಷದ ನೆರವಿನ ಚೆಕ್ ವಿತರಣೆ
ಬೆಂಗಳೂರು
ವಚನ ಕ್ರಾಂತಿಯನ್ನು ನಡೆಸಿದ ಜಗಜ್ಜ್ಯೋತಿ ಬಸವಣ್ಣನವರ ಹೆಸರು ಹೇಳುವ ಮಠಗಳು ವಚನದ ಜೊತೆ ನಿಲ್ಲಬೇಕು ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.
ಯಶವಂತಪುರದ ಆನ್ ಲೈನ್ ಇನ್ಸ್ಟ್ರುಮೆಂಟ್ಸ್ ಇಂಡಿಯಾದ ಕಛೇರಿಯಲ್ಲಿ ವಚನ ಕಲಾವಿದರಿಗೆ ಎರಡೂವರೆ ಲಕ್ಷದ ನೆರವಿನ ಚೆಕ್ ವಿತರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಳಗದ ಗೌರವಾಧ್ಯಕ್ಷ ಡಾ. ಮಹೇಶ ಬೆಲ್ಲದ ಅವರು ವಚನಜ್ಯೋತಿ ಕಾರ್ಯಕ್ರಮಗಳಲ್ಲಿ ಯಾವುದೇ ಸಂಭಾವನೆ ನಿರೀಕ್ಷೆ ಇಟ್ಟುಕೊಳ್ಳದೆ ಸೇವೆ ಸಲ್ಲಿಸುತ್ತಿರುವ ಗಾಯಕರು ಮತ್ತು ವಾದ್ಯಗಾರರಿಗೆ ಆರ್ಥಿಕ ನೆರವನ್ನು ನೀಡುತ್ತಿರುವುದು ಗುಣಾತ್ಮಕ ಬೆಳವಣಿಗೆ ಎಂದು ಶ್ಲಾಘಿಸಿ ಗೌರವಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು.

ವಚನಗಳ ಬಗ್ಗೆ ಕೇವಲ ಮಾತನಾಡುವುದಲ್ಲ, ವಚನಗಳನ್ನು ಎಲ್ಲೆಡೆ ಪಸರಿಸುವ ವಚನ ಗಾಯಕರ ಸಂಕಷ್ಟಗಳಿಗೆ ಜೊತೆಯಾಗಿ ನಿಲ್ಲುವುದು ಮಠಗಳ ಆದ್ಯ ಕರ್ತವ್ಯವಾಗಬೇಕು. ಆದರೆ ಬಹಳಷ್ಟು ಮಠಗಳು ವೇದಿಕೆಯಲ್ಲಿ ಮಾತ್ರ ವಚನದ ಜೊತೆಯಾಗಿರುವುದೇ ಇಂದಿನ ದುರ್ದೆಸೆಗೆ ಕಾರಣ ಎಂದು ವಿಷಾದಿಸಿದರು.
ಕರೋನ ಸಂಕಷ್ಟದಲ್ಲಿ ಕಲಾವಿದರು ಪಟ್ಟ ಬವಣೆಗೆ ಎಷ್ಟು ಮಠಗಳು ಸ್ಪಂದಿಸಿದವು ಎಂದು ಪಿನಾಕಪಾಣಿ ಪ್ರಶ್ನಿಸಿದರು.
ಹಣ ಮತ್ತು ಅಧಿಕಾರದ ಬಲವಿಲ್ಲದೆ ಕಳೆದ 28 ವರ್ಷಗಳಿಂದ ರಾಜಧಾನಿ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ವಚನ ಸಂಸ್ಕೃತಿಯನ್ನು ಎಡೆಬಿಡದೆ ಪಸರಿಸುತ್ತಾ, ಮಕ್ಕಳಲ್ಲಿ ವಚನ ಬಿತ್ತನೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ವಚನಜ್ಯೋತಿ ಬಳಗ ಕಲಾವಿದರ ಸಂಕಷ್ಟದಲ್ಲಿ ಸದಾ ಜೊತೆಯಾಗಿರುವುದನ್ನು ನೆನಪಿಸಿದರು.

ಕಲಾವಿದ ಶಿವಕುಮಾರಾರಾಧ್ಯ ಹೃದಯಾಘಾತಕ್ಕೆ ಒಳಗಾದಾಗ, ತಬಲ ಕಲಾವಿದ ರಾಘವೇಂದ್ರ ಜೋಷಿ ಅಪಘಾತಕ್ಕೆ ತುತ್ತಾದಾಗ ಬಳಗದ ವತಿಯಿಂದ ಆರ್ಥಿಕ ನೆರವು ನೀಡಿದ್ದಲ್ಲದೇ, ಇತರರಿಂದಲೂ ಕೊಡಿಸಿದ ತೃಪ್ತಿ ಬಳಗದ್ದು ಎಂದ ಪಿನಾಕಪಾಣಿ, ಕರೋನ ಸಂಕಷ್ಟದಲ್ಲಿ ಬಳಗದ ಕೋಶಾಧ್ಯಕ್ಷರಾದ ಸಿದ್ದೇಶ ನಾಗೇಂದ್ರರಿಂದ ಹತ್ತಾರು ಕಲಾವಿದರಿಗೆ ನೆರವು ನೀಡಿದ ತೃಪ್ತಿ ತಮ್ಮದು ಎಂದು ನುಡಿದರು.
ವಚನಜ್ಯೋತಿ ಬಳಗವು ತನ್ನ ವೇದಿಕೆಯಲ್ಲಿ ವಚನಗಳಲ್ಲದೆ, ಬೇರೆ ಯಾವುದಕ್ಕೂ ಅವಕಾಶ ನೀಡಿಲ್ಲ ಎಂದು ತಿಳಿಸಿದ ಪಿನಾಕಪಾಣಿ, ಮಕ್ಕಳ ವಚನ ಮೇಳದ ಹೆಸರಿನಲ್ಲಿ ಸಹಸ್ರಾರು ವಿದ್ಯಾರ್ಥಿಗಳು ವಚನ ಸಂಸ್ಕೃತಿಯ ಹನ್ನೆರಡು ಪ್ರಕಾರಗಳಲ್ಲಿ ಭಾಗಿಯಾಗಿ ಮಹಾತ್ಮ ಬಸವಣ್ಣ ಮತ್ತು ಇತರ ವಚನಕಾರರನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ತಮಗೆ ತೃಪ್ತಿ ತಂದಿದೆ ಎಂದು ವಿವರಿಸಿದರು.

ವಚನಜ್ಯೋತಿ ಬಳಗದಂತೆ ನಾಡಿನ ಉದ್ದಗಲಕ್ಕೂ ಇರುವ ಮಠಗಳು, ಪ್ರತಿಷ್ಠಿತ ಸಂಸ್ಥೆಗಳಾದ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಬಳಗಗಳು ವಚನವನ್ನೇ ಉಸಿರಾಗಿಸಿಕೊಂಡಿರುವ ಕಲಾವಿದರ ಸಂಕಷ್ಟಗಳಿಗೆ ನೆರವಾಗಬೇಕೆಂದು ಪ್ರಾರ್ಥಿಸಿದರು.
ಬಳಗದ ಗೌರವಾಧ್ಯಕ್ಷ ಡಾ. ಮಹೇಶ ಬೆಲ್ಲದ ಅವರು ಮಾತನಾಡಿ, ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ವಚನ ಸಂಸ್ಕೃತಿಯನ್ನು ಮನೆ – ಮನಕ್ಕೆ ಹರಡುತ್ತಿರುವ ವಚನಜ್ಯೋತಿ ಬಳಗದ ಗೌರವಾಧ್ಯಕ್ಷರಾಗಿರುವುದು ತಮಗೆ ಸಂತೋಷ ನೀಡಿದ್ದು ಬಳಗದ ಜೊತೆಯಿರುವ ಕಲಾವಿದರಿಗೆ ಅಲ್ಪ ನೆರವು ನೀಡುವ ಅವಕಾಶ ತಮ್ಮದಾಗಿದೆ ಎಂದು ನುಡಿದರು.
ತುಂಬಿದ ಸಭೆಯಲ್ಲಿ ಶಾಲು ಹೊದಿಸಿಕೊಂಡು ಸನ್ಮಾನಿತರಾಗುವ ಕಲಾವಿದರು ಬದುಕನ್ನು ಸಾಗಿಸಲು ಕಡು ಕಷ್ಟಪಡುತ್ತಿರುವ ವಿಪರ್ಯಾಸ ನಮ್ಮಲ್ಲಿದೆ. ಸಂಸ್ಕೃತಿಯ ಪ್ರಸರಕರಾದ ಕಲಾವಿದರನ್ನು ಗುರುತಿಸಿ ಅವರ ಸಂಕಷ್ಟಗಳಲ್ಲಿ ಜೊತೆಯಾಗಿ ನಿಂತು ಕರೆದೊಯ್ಯುವ ವಚನಜ್ಯೋತಿ ಬಳಗದ ಮಾರ್ಗ ಅನುಕರಣೀಯವಾಗಿದ್ದು, ಹಾಗಾಗಿ ತಾವೂ ಸಹ ಇಂದು ವಚನ ಕಲಾವಿದರಿಗೆ ಕೈಲಾದ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಗಾಯಕರುಗಳಾದ ದೇವೇಂದ್ರಕುಮಾರ ಪತ್ತಾರ, ರವೀಂದ್ರ ಸೊರಗಾವಿ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಸರಸ್ವತಿ ಹೆಗಡೆ, ಸಿದ್ದರಾಮ ಕೇಸಾಪುರ, ಅಮರೇಶ ಗವಾಯಿ, ಈರಯ್ಯ ಚಿಕ್ಕಮಠ, ಚೇತನಾ ಮುಧೋಳ, ವಾದ್ಯಗಾರರಾದ ಗುರುರಾಜ ಆಚಾರ್ಯ, ಪುಣ್ಯೇಶ, ಮಹೇಂದ್ರ ಅವರುಗಳಿಗೆ ನೆರವಿನ ಚೆಕ್ಕುಗಳನ್ನು ಅನಿತಾ ಮಹೇಶ ಬೆಲ್ಲದ ನೀಡಿದರು.
ಬಳಗದ ಗೌರವಾಧ್ಯಕ್ಷ ಮಹೇಶ್ ಬೆಲ್ಲದ, ಉಪಾಧ್ಯಕ್ಷ ರುದ್ರಪ್ಪ ದೇಸಾಯಿ, ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಮುಖ್ಯ ಕಾರ್ಯನಿರ್ವಾಹಕ ರಾಜಾ ಗುರುಪ್ರಸಾದ, ಮಕ್ಕಳ ವಚನ ಮೇಳ ಪ್ರಧಾನ ಸಂಚಾಲಕಿ ರತ್ನಾ ದೇಸಾಯಿ ಕಲಾವಿದರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಕವಯತ್ರಿ ಕೆ.ಆರ್. ಸೌಮ್ಯ, ಆಶಯ ಬಿಲ್ವ, ಮಾನಸಾ ಮೇಟಿ, ವೈಷ್ಣವಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

🙏🙏👆