ಬೆಳಗಾವಿ
ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ವಚನ ವಿಶ್ಲೇಷಣೆ ಕಾರ್ಯಕ್ರಮ ಮತ್ತು ಉಚಿತ ಬೇಸಿಗೆ ತರಬೇತಿ ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತರಬೇತಿ ಕಾರ್ಯಕ್ರಮದ ಮುಖ್ಯ ಸಂಘಟಕ ಪ್ರಸಾದ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡಮಕ್ಕಳ ವಿದ್ಯಾರ್ಜನೆಗೆ ಶಿಬಿರದಲ್ಲಿ ನನ್ನ ಕೈಲಾದ ಸಹಾಯ ಮಾಡಿರುವೆ. ಮುಂಬರುವ ದಿನಗಳಲ್ಲಿ ಸಮಾಜದ ಮತ್ತು ಸಂಘಟನೆಯ ಸಹಕಾರ ಪಡೆದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಬೇಸಿಗೆ ತರಗತಿಗಳಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಂದ ವಚನ ಪಠಣ, ವಚನ ವಿಶ್ಲೇಷಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಶಂಕರ ಗುಡಸ, ಸದಾಶಿವ ದೇವರಮನಿ ಸೇರಿದಂತೆ ಇತರರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರೀಕರಣ ಆಗುತ್ತಾ ಸಾಗಿದೆ. ಅಂತಹ ಈ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ವಿಶೇಷವಾಗಿ ಪ್ರಸಾದ ಹಿರೇಮಠ ಅಂತಹ ದಾನಿಗಳ ಸಹಕಾರದಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಮಾಡುವ ಅವಕಾಶ ಸಿಕ್ಕಿದ್ದು ಸಂಘಟನೆಯ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಕಾರ್ಯಗಳು ನಿರಂತರವಾಗಿ ನಮ್ಮ ಸಂಘಟನೆಯ ವತಿಯಿಂದ ನಡೆದು ಬರುತ್ತಿವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ವಿದ್ಯಾರ್ಥಿನಿ ಲಾವಣ್ಯ ಅಂಗಡಿ ತರಬೇತಿ ಶಿಬಿರ ಕುರಿತು ಮಾತನಾಡಿ, ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿ ನಮ್ಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮಂತಹ ಬಡಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿದ ಸರ್ವತಂಡಕ್ಕೂ ಧನ್ಯವಾದಗಳು ಸಲ್ಲಿಸಿದರು.

ಮುಂಬರುವ ದಿನಗಳಲ್ಲಿ ಶಿಬಿರದ ಲಾಭವನ್ನು ಇತರ ವಿದ್ಯಾರ್ಥಿಗಳು ಪಡೆಯಲಿ ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುರೇಶ ನರಗುಂದ, ಶಶಿಕಾಂತ ಪಟ್ಟಣ, ವಿಜಯಲಕ್ಷ್ಮಿ ಯರಜರವಿಮಠ, ಆನಂದ ಕರ್ಕಿ, ಬಸವರಾಜ ಬಿಜ್ಜರಗಿ, ಅಕ್ಕಮಹಾದೇವಿ ತೆಗ್ಗಿ, ಲಕ್ಷ್ಮಣ ಕುಂಬಾರ, ಮಹಾದೇವ ಕೆಂಪಿಗೌಡರ, ಬಸವರಾಜ ಮತ್ತಿಕೊಪ್ಪ , ಗುರುಸಿದ್ದಪ್ಪ ರೇವಣ್ಣವರ, ಬಸವರಾಜ ಜಾಬಗೌಡರ, ಲಕ್ಷ್ಮಣ ಕುಂಬಾರ, ಶಿವಾನಂದ ತಲ್ಲೂರ, ಎಂ.ವೈ. ಮೆಣಸಿನಕಾಯಿ ಸೇರಿದಂತೆ, ಮಕ್ಕಳ ಪಾಲಕರು ಪೋಷಕರು ಮತ್ತು ಶಿಕ್ಷಕ ವರ್ಗ ಮತ್ತು ಶರಣ ಶರಣೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು. ಮಹಾದೇವಿ ಅರಳಿ ವಚನ ಪ್ರಾಥನೆ ನಡೆಸಿಕೊಟ್ಟರು. ಅನ್ನಪೂರ್ಣ ಹಿರೇಮಠ ನಿರೂಪಿಸಿದರು. ಶಶಿಭೂಷಣ ಪಾಟೀಲ ವಂದಿಸಿದರು
