ಗ್ಯಾರಂಟಿ ಯೋಜನೆಗಳಿಗೆ ಬಸವಣ್ಣನವರೇ ಪ್ರೇರಣೆ: ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ದೇವನೂರು ಮಠದಲ್ಲಿ ಗುರುಮಲ್ಲೇಶ್ವರರ ಸ್ಮರಣೆ, ಬಸವ ಮಹಾದ್ವಾರ, ಕಲ್ಯಾಣಿ ಉದ್ಘಾಟನೆ

ನಂಜನಗೂಡು

ಬಸವಾದಿ ಶರಣರು ಜಾತಿ, ಅಂತಸ್ತಿನ ತಾರತಮ್ಯತೆ, ಮೌಡ್ಯಗಳ ವಿರುದ್ಧ ಹೋರಾಟ ಮಾಡಿ ಸಮಾನತೆಯನ್ನು ಸಾರಿದ್ದರು. ದೇಶ ಕಳೆದ 850 ವರ್ಷಗಳಲ್ಲಿ ಅನೇಕ ಬದಲಾವಣೆ ಕಂಡಿದ್ದರೂ ಸಹ ಬಸವಾದಿ ಶರಣರ ಕನಸು ಇನ್ನೂ ನನಸಾಗಿಲ್ಲ, ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ದೇವನೂರಿನ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಏರ್ಪಡಿಸಿದ್ದ ಗುರುಮಲ್ಲೇಶ್ವರ 127ನೇ ಸ್ಮರಣೆ ಬಸವ ಮಹಾದ್ವಾರ ಮತ್ತು ಕಲ್ಯಾಣಿ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರ ಪ್ರೇರಣೆಯಿಂದಾಗಿ ನಾನು ಮುಖ್ಯ ಮಂತ್ರಿ ಆಗಿದ್ದಾಗ ಮೌಡ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದೇನೆ. ಆದರೆ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಸಮಾಜದಲ್ಲಿ ಮೌಡ್ಯವನ್ನು ಗಟ್ಟಿಗೊಳಿಸುತ್ತಿದ್ದಾರೆ.

ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ, ಸಮಾಜದಲ್ಲಿ ಬದಲಾವಣೆ ತರಲು ಜನರಿಗೆ ವೈಜ್ಞಾನಿಕ, ವೈಚಾರಿಕವಾದ ಶಿಕ್ಷಣ ಸಿಗುವಂತದ್ದು ಆಗಬೇಕು ಎಂದರು.

ನಮ್ಮ ಊರಿನಲ್ಲಿ ಅನ್ನಕ್ಕಾಗಿ ಬೇರೆಯವರ ಮನೆ ಮುಂದೆ ಬೇಡುತ್ತಿದ್ದದನ್ನು ನೋಡಿದ್ದೆ, ಆ ಕಾರಣದಿಂದ ಬಸವಣ್ಣನವರ ಪ್ರೇರಣೆಯಿಂದ ಬಡವರು ಹಸಿವಿನಿಂದ ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂಬ ಆಶಯದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ. ನನ್ನ ಗ್ಯಾರಂಟಿ ಯೋಜನೆಗೆ ಬಸವಣ್ಣನವರ ಪ್ರೇರಣೆ ಕಾರಣ.

ಗುರು ಮಲ್ಲೇಶ್ವರರು ಬಸವಣ್ಣನವರಿಂದ ಪ್ರೇರಣೆ ಪಡೆದವರಾಗಿದ್ದರು, ಆದ್ದರಿಂದಲೇ ಪ್ರತಿಯೊಬ್ಬರು ಶ್ರಮಜೀವಿಗಳಾಗಬೇಕು ಎಂದು ಕಾಯಕದ ಮಹತ್ವವನ್ನು ಸಾರಿದ್ದಾರೆ, ನಾವೆಲ್ಲರೂ ಬಸವಾದಿ ಶರಣರ ತತ್ವ ಆದರ್ಶ, ವೈಚಾರಿಕತೆ, ಕಾಯಕ, ದಾಸೋಹಗಳನ್ನು ಅನುಸರಿಸಿದರೆ ಅದೇ ಗುರು ಮಲ್ಲೇಶ್ವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮೊದಲು ಗುರು ಮಲ್ಲೇಶ್ವರರ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನವಾಗಿ ನಿರ್ಮಾಣವಾಗಿರುವ ಬಸವ ಮಹಾದ್ವಾರವನ್ನು ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾ ಸ್ವಾಮೀಜಿ ನೂತನ ಕಲ್ಯಾಣಿ ಉದ್ಘಾಟಿಸಿದರು.

ಸಿದ್ದಗಂಗಾ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಬಸವಾದಿ ಶರಣರ ತತ್ವಗಳು, ಸಾಮಾಜಿಕ ಸಂದೇಶಗಳು ಜಾತಿ ಮತ ಎಲ್ಲೆಮೀರಿ, ಎಲ್ಲರಿಗೂ ಬೆಳಕಾಗಿವೆ ಆದ್ದರಿಂದಲೇ ಬಸವಾದಿ ಶರಣರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ.

ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಮನುಷ್ಯತ್ವವನ್ನು ಮೈಗೂಡಿಸಿಕೊಂಡಿದ್ದ ಗುರು ಮಲ್ಲೇಶ್ವರರು ಬಸವಣ್ಣನವರ ಕಾಯಕ, ದಾಸೋಹದ ಪರಿಕಲ್ಪನೆಯನ್ನು ಜನರಲ್ಲಿ ಮೂಡಿಸಿದವರು.
ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೂ ಕಾಯಕದ ಮಹತ್ವವನ್ನು ಕಲಿಸಿದರು, ಎಂದು ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಗುರು ಮಲ್ಲೇಶ್ವರರು ಹಚ್ಚಿದ ದಾಸೋಹದ ಬೆಂಕಿ ಇನ್ನೂ ಆರಿಲ್ಲ ದಾಸೋಹದ ಜೊತೆಗೆ ಶಿಕ್ಷಣ ದಾಸೋಹ ನಡೆಸಿ ಈ ಭಾಗದ ಜನರಿಗೆ ಶ್ರೀಮಠವು ವರದಾನವಾಗಿದೆ ಎಂದರು.

ದೇವನೂರಿನ ಮಹಾಂತ ಸ್ವಾಮೀಜಿ, ಮರಿಯಾಲ ಮಠದ ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು, ಚಾಮರಾಜನಗರ ವಿರಕ್ತ ಮಠದ ಚನ್ನಬಸವ ಸ್ವಾಮಿಗಳು, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕರಾದ ಗಣೇಶ್ ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಡ ಅಧ್ಯಕ್ಷ ಮರಿಸ್ವಾಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ, ಎಸ್ .ಸಿ. ಬಸವರಾಜು, ಮುಖಂಡರಾದ ಇಂಧನ್ ಬಾಬು, ಮಹದೇವಪ್ಪ, ಶಿವಪ್ಪ ದೇವರು, ಕೆಂಪಣ್ಣ, ಸದಾನಂದ, ಸದಾಶಿವಮೂರ್ತಿ, ಜಿ.ರಾಜೇಶ್ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *