ಎಲ್ಲೆಡೆ ಬಸವ ಪುತ್ಥಳಿಗಳು ಉದ್ಘಾಟನೆಯಾಗುತ್ತಿವೆ. ಜೊತೆಗೆ ಬಸವತತ್ವದಂತೆ ನಡೆಯಬೇಕು: ಸಾಣೇಹಳ್ಳಿ ಸ್ವಾಮೀಜಿ
ಹೊನ್ನಾಳಿ:
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರು. ಅಲ್ಲಿಯವರೆಗೆ ಯಾರಿಗೂ ಬಸವೇಶ್ವರರು ಹೆಚ್ಚು ಅರ್ಥವಾಗಿರಲಿಲ್ಲ ಎಂದು ಸಾಣೇಹಳ್ಳಿ ತರಳಬಾಳುಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಕುಂದೂರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬಸವ ಸೇವಾ ಸಮಿತಿ ಪದಾಧಿಕಾರಿಗಳು ನಿರ್ಮಿಸಿದ ಬಸವೇಶ್ವರ ಪುತ್ಥಳಿಯನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡುತ್ತಿದ್ದರು.

ಪ್ರಸ್ತುತ ನಾಡಿನ ಎಲ್ಲಾ ಭಾಗಗಳಲ್ಲೂ ಬಸವೇಶ್ವರ ಪುತ್ಥಳಿಗಳು ಉದ್ಘಾಟನೆಯಾಗುತ್ತಿವೆ. ಕೇವಲ ಪುತ್ಥಳಿ ನಿರ್ಮಾಣ ಮಾಡಿದರೆ ಸಾಲದು, ಅವರು ನೀಡಿದ ತತ್ವ ಸಿದ್ಧಾಂತ ಅರಿತು ಅದರಂತೆ ಪ್ರಾಮಾಣಿಕವಾಗಿ ನಡೆಯುವುದು ಮುಖ್ಯವಾಗುತ್ತದೆ.
ಬಸವಣ್ಣ ಕೇವಲ ಪೂಜಾರ್ಹ ವ್ಯಕ್ತಿಯಲ್ಲ. ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆ ಹೊಂದಿದವರು. ನಡೆ-ನುಡಿ ಸಿದ್ಧಾಂತವನ್ನು ಮೈಗೂಡಿಸಿಕೊಂಡವರಾಗಿದ್ದರು ಎಂದು ವಿವರಿಸಿದರು.
ಶಾಸಕರಾದವರು ಗಂಭೀರವಾಗಿದ್ದು ಜನಮುಖಿ ಕಾರ್ಯ ಮಾಡದಿದ್ದರೆ ಶಾಸಕತ್ವಕ್ಕೆ ಮಾನ್ಯತೆ ಇರುವುದಿಲ್ಲ. ಬಸವಣ್ಣನವರು ಸಹ ಕಲ್ಯಾಣದ ಬಿಜ್ಜಳನ ರಾಜ್ಯದಲ್ಲಿ ಪ್ರಧಾನಮಂತ್ರಿಯಾಗಿ, ಅಹಂಕಾರ ತೋರದೆ ವಿವೇಕದಿಂದ ಆಡಳಿತವನ್ನು ನಡೆಸಿ ಹೃದಯವಂತಿಕೆ ಬೆಳಸಿಕೊಂಡವರು.
ಪ್ರಸ್ತುತ ಭ್ರಷ್ಟಾಚಾರ ಮಿತಿಮೀರುತ್ತಿದೆ ಯಾರಿಂದ ತಡೆಯಲು ಸಾಧ್ಯ ಎಂದು ಪ್ರಶ್ನಿಸಿ ಕಾಶ್ಮೀರದ ರಾಜ ಮೋಳಿಗೆ ಮಾರಯ್ಯ ಶರಣರ ವಿಚಾರಗಳಿಗೆ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಡಿಯುವ ಕಾಯಕ ಮಾಡುತ್ತ, ಕನ್ನಡ ಕಲಿತು 800 ವಚನಗಳನ್ನು ರಚನೆ ಮಾಡಿರುವುದು ವಿಶಿಷ್ಟವೆನಿಸುತ್ತದೆ ಎಂದು ತಿಳಿಸಿದರು.
ಈ ನಾಡಿನಲ್ಲಿ ದೇವಾಲಯದ ಸಂಸ್ಕೃತಿ ಹೆಚ್ಚಾಗಿ ದೇವರ ಹೆಸರಲ್ಲಿ ಶೋಷಣೆ ಆಗುತ್ತಿದೆ. ಭಾರತದ ಶ್ರೀಮಂತ ದೇವಾಲಯ ತಿರುಪತಿ ಆಗಿದೆ. ಅಯೋಧ್ಯೆಯ ರಾಮಮಂದಿರದ ಹುಂಡಿ ಹಣವನ್ನು ಲೂಟಿ ಮಾಡಿದರು ಅವರಿಗೆ ದೇವರ ಭಯವಿಲ್ಲವೇ?
ಕಲ್ಲು ಮಣ್ಣುಗಟ್ಟಿಯಲ್ಲಿ ದೇವರಿಲ್ಲ, ಮಾನವನಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಮಾತ್ರ ಅವನೇ ದೇವರಾಗುತ್ತಾನೆ. ಬಸವಣ್ಣನವರು ಬರಿ ಬೋಧನೆ ಮಾಡಲಿಲ್ಲ ಆದರ್ಶ ಬದುಕು ನಡೆಸಲು ಸ್ಪೂರ್ತಿ ಆಗಿದ್ದಾರೆ ಎಂದರು.
ಉತ್ತರ ಕರ್ನಾಟಕದಲ್ಲಿ ಕುದುರೆ ಮೇಲೆ ಕುಳಿತ ಬಸವೇಶ್ವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಆದರೆ ಓಲೆಗರಿಯಲ್ಲಿ ವಚನ ಬರೆಯುತ್ತಿರುವ ಅಥವಾ ಇಷ್ಟಲಿಂಗ ಪೂಜಿಸುವ ಬಸವೇಶ್ವರರ ಪುತ್ಥಳಿಯನ್ನು ನಿರ್ಮಿಸಬೇಕೆಂದು ಶ್ರೀಗಳು ಸಲಹೆ ನೀಡಿದರು.
ಹೊನ್ನಾಳಿ ತಾಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಶರಣ ಗದ್ಗೇಶ ಅವರು ಅಧ್ಯಕ್ಷತೆ ವಹಿಸಿದ್ದರು. ಸುಮತಿ ಉಪನ್ಯಾಸ ನೀಡಿದರು.

ಶಾಸಕರಾದ ಡಿ.ಜಿ. ಶಾಂತನಗೌಡ, ಶಾಮನೂರು ಸಮರ್ಥ, ನ್ಯಾಮತಿ ತಾಲೂಕು ಸಾಧು ಸಮಾಜದ ಅಧ್ಯಕ್ಷ ಶಿವಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಕೆ. ಗುರುಮೂರ್ತಿ, ದೊಡ್ಡೇರಿ ವಿಶ್ವನಾಥ, ಬಸವೇಶ್ವರ ಪ್ರತಿಮೆಯ ದಾಸೋಹಿ ನಂದಕುಮಾರ, ಅರಕೆರೆ ಹನುಮಂತಪ್ಪ, ಆಂಜನೇಯ, ಷಣ್ಮುಖಪ್ಪ ಸುರೇಶ, ಬೀರಪ್ಪ, ಜಿ.ಬಿ. ವಿನಯಕುಮಾರ, ಅವರಗೆರೆ ರುದ್ರಮನಿ, ಜಗದೀಶ ಬಣಕಾರ, ಹೆಚ್. ಬಸವರಾಜಪ್ಪ, ಶಿಕ್ಷಕರಾದ ರುದ್ರೇಶ್, ಎಂ.ಬಿ. ನಾಗರಾಜ, ಚಿದಾನಂದಪ್ಪ ಹಾಗೂ ಸಾವಿರಾರು ಶರಣರು ಭಾಗವಹಿಸಿದ್ದರು.
ಆರಂಭದಲ್ಲಿ ಮಲೆಬೆನ್ನೂರಿನ ಅಕ್ಕನ ಬಳಗ, ರಾಷ್ಟ್ರೀಯ ಬಸವದಳದ ಶರಣೆಯರು ಮತ್ತು ಗೌತಮಿ ವಚನ ಗೀತೆಗಳನ್ನು ಹಾಡಿದರು.
ಭಕ್ತಿಭಾವದಿಂದ ಕಾರ್ಯಕ್ರಮ ನೆರವೇರಿತು.
