‘ಮಹಿಳೆ ದೇವತೆಯಲ್ಲ, ಅಬಲೆಯೂ ಅಲ್ಲ, ಆಕೆಗೆ ಬೇಕಿರುವುದು ಸಮಾನತೆ, ಅವಕಾಶ’

ಅಶೋಕ್ ಜಿ ಲೋಣಿ
ಅಶೋಕ್ ಜಿ ಲೋಣಿ

“ಲಿಂಗ ತಾರತಮ್ಯ ನಿವಾರಿಸಿದ ವಚನಕಾರರು”ಉಪನ್ಯಾಸ

ಕೆಜಿಎಫ್ :

ಇಲ್ಲಿನ ಬೆಮೆಲ್ ನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ಅಂಗವಾಗಿ ಅಕ್ಕನ ಬಳಗದ ವತಿಯಿಂದ ಸೋಮವಾರ ಭಕ್ತಿ, ಜ್ಞಾನ ಮತ್ತು ಸಮಾನತೆಯ ಸಂದೇಶ ಸಾರುವ ವಿಶೇಷ ಕಾರ್ಯಕ್ರಮ ನಡೆಯಿತು.

​ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಭಾಗವಹಿಸಿ “ಲಿಂಗ ತಾರತಮ್ಯ ನಿವಾರಿಸಿದ ವಚನಕಾರರು”ಎಂಬ ವಿಷಯದ ಕುರಿತು ಬೆಂಗಳೂರಿನ ಶರಣ ಚಿಂತಕಿ ಡಾ.ಮುಕ್ತಾ ಬಿ. ಕಾಗಲಿ ಅವರು ಉಪನ್ಯಾಸ ನೀಡಿದರು.

ಅವರು, “12ನೇ ಶತಮಾನದ ಶರಣ ಚಳವಳಿ ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿರದೆ ಸಮಾನತೆ, ಕಾಯಕದ ಘನತೆ ಹಾಗೂ ಮಾನವೀಯತೆಯನ್ನು ಎತ್ತಿಹಿಡಿದ ಮಹತ್ವದ ಸಾಮಾಜಿಕ ಕ್ರಾಂತಿಯಾಗಿತ್ತು.

ಜಗತ್ತಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲೂ ಮಹಿಳೆಯರಿಗೆ ಪದವಿ ಪಡೆಯುವ ಹಕ್ಕು ತಡವಾಗಿ ಸಿಕ್ಕಿತು. ಆದರೆ ಅದಕ್ಕಿಂತ ಎಂಟು ಶತಮಾನಗಳ ಹಿಂದೆಯೇ ಕನ್ನಡ ನೆಲದಲ್ಲಿ ಶರಣೆಯರು ಪ್ರಶ್ನಿಸುವ, ಕಾಯಕ ಮಾಡುವ, ವಚನ ರಚಿಸುವ ಹಾಗೂ ಅನುಭವ ಮಂಟಪದ ತಾತ್ವಿಕ ಚರ್ಚೆಗಳಲ್ಲಿ ಭಾಗವಹಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದರು” ಎಂದು ತಿಳಿಸಿದರು.

​ಮುಂದುವರಿದು ಮಾತನಾಡಿದ ಅವರು, “ಜೇಡರ ದಾಸಿಮಯ್ಯ, ಅಕ್ಕಮಹಾದೇವಿ, ಅಲ್ಲಮಪ್ರಭು, ಗೊಗ್ಗವ್ವೆ ಅವರಂತಹ ವಚನಕಾರರು ಆತ್ಮ ಮತ್ತು ಜ್ಞಾನಕ್ಕೆ ಲಿಂಗಭೇದವಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಸೂತಕ ಹಾಗೂ ಮಹಿಳೆಯನ್ನು ‘ಮಾಯೆ’ ಎಂದು ನೋಡುವ ಸಂಪ್ರದಾಯವನ್ನು ಶರಣರು ಬಲವಾಗಿ ವಿರೋಧಿಸಿದರು.

ಮಹಿಳೆಯನ್ನು ‘ದೇವತೆ’ಎಂದು ವೈಭವೀಕರಿಸುವುದಾಗಲಿ, ‘ಅಬಲೆ’ಎಂದು ಕರುಣೆ ತೋರುವುದಾಗಲಿ ಬೇಡ; ಆಕೆಗೆ ಬೇಕಾಗಿರುವುದು ಸಮಾನತೆ, ಸ್ವಾತಂತ್ರ್ಯ ಮತ್ತು ಅವಕಾಶಗಳು. ಮನೆಯೊಳಗೆ ಮಹಿಳೆ ನಿರ್ವಹಿಸುವ ಜವಾಬ್ದಾರಿಗಳೂ ಆರ್ಥಿಕ ಕಾಯಕದಷ್ಟೇ ಗೌರವಾರ್ಹ. ಬಸವಣ್ಣನವರ ಸಮಾನತೆಯ ತತ್ತ್ವ ಕೇವಲ ಮಾತಾಗದೆ ಬದುಕಿನ ನಡವಳಿಕೆಯಾಗಬೇಕು” ಎಂದು ಕರೆ ನೀಡಿದರು.

​ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಸವ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಎಂ. ಅವರು, ಬಸವ ಸಮಿತಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಅಕ್ಕನ ಬಳಗದ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಕ್ಕನ ಬಳಗದ ಅಧ್ಯಕ್ಷರಾದ ಸಂಗೀತ ನರೇಂದ್ರ ಅವರು ವಹಿಸಿದ್ದರು.

​ಇದೇ ಸಂದರ್ಭದಲ್ಲಿ ಅಕ್ಕನ ಬಳಗವು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಪ್ರಕ್ರಿಯೆಯನ್ನು ಪಲ್ಲವಿ ಮಹಾಶೆಟ್ಟಿ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

​ಸಮಾರಂಭದಲ್ಲಿ ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಅಶೋಕ ಲೋಣಿ, ಪ್ರಧಾನ ಕಾರ್ಯದರ್ಶಿ ಬಾ.ಹಾ. ಶೇಖರಪ್ಪ, ಬಸವ ಸಮಿತಿ ಹಾಗೂ ಅಕ್ಕನ ಬಳಗದ ಪದಾಧಿಕಾರಿಗಳು ಮತ್ತು ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಹೇಮಾ ಶಿವಾನಂದ ಸ್ವಾಗತ ಕೋರಿದರು. ರಾಧಾ ಹೊಸಮನಿ ಸಮಗ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಉಮಾ ಮಂಟೂರ ಶರಣು ಸಲ್ಲಿಸಿದರು.

​ಕಾರ್ಯಕ್ರಮದ ನಂತರ ಶೋಭಾ ಅರಟ್ಟಿ, ಪ್ರಮೀಳಾ ಹರಿಹರನ್ ಹಾಗೂ ಧನಲಕ್ಷ್ಮಿ ಮೇಟಿ ಅವರ ಕುಟುಂಬದ ವತಿಯಿಂದ ಮಹಾಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *