ಅಕ್ಕನಾಗಮ್ಮನವರ ಲಿಂಗೈಕ್ಯ ಶಿಲಾಮಂಟಪವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲು ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ 12ನೇ ಶತಮಾನದ ಶಿವಶರಣೆ ಅಕ್ಕನಾಗಮ್ಮನವರ ಲಿಂಗೈಕ್ಯ ಶಿಲಾಮಂಟಪವನ್ನು ರಾಜ್ಯದ ಸಂರಕ್ಷಿತ ಸ್ಮಾರಕವೆಂದು ಘೋಷಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ.

ಇದಕ್ಕಾಗಿ ಶ್ರೀ ಬಸವೇಶ್ವರ ಪ್ರಚಾರ ಸಮಿತಿಯ ಸದಸ್ಯರು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಕ್ಯಾಬಿನೆಟ್ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬುಧವಾರ ಭೇಟಿ ಮಾಡಿ ತರೀಕರೆ ಹೊರವಲಯದಲ್ಲಿರುವ ಗಾಳಿಹಳ್ಳಿಯ ಸರ್ವೇ ನಂಬರ್ 89/3 ರ 1.02 ಎಕರೆ ಜಾಗವನ್ನು ಸ್ವಾಧೀನ ಪಡೆಯಲು ನೆರವಾಗುವಂತೆ ಕೋರಿದರು.

ಈ ಸ್ಥಳದಲ್ಲಿ ಅಕ್ಕನಾಗಲಾಂಬಿಕೆ ಗದ್ದುಗೆ ಇರುವ ಬಗ್ಗೆ ಸರ್ಕಾರಿ ದಾಖಲೆಯಲ್ಲಿ ಉಲ್ಲೇಖವಿದೆ. ಆದರೆ ಅಕ್ಕನಾಗಲಾಂಬಿಕೆ ಲಿಂಗೈಕ್ಯ ಶಿಲಾ ಮಂಟಪ ಖಾಸಗಿಯವರ ಜಮೀನಿನಲ್ಲಿದ್ದು, ಅವರು ಕೆಲ ವರ್ಷಗಳ ಹಿಂದೆ ನೆಲ ಸಮ ಮಾಡಿ ಅಲ್ಲಿ ಶಿವನ ದೇವಾಲಯ ಕಟ್ಟಲು ಮುಂದಾಗಿದ್ದರು ಎಂದು ಆರೋಪಿಸಿದರು.

ಪುರಾತತ್ವ ಇಲಾಖೆಯ ಅಧಿಕಾರಿಗಳು ಅಕ್ಕನಾಗಮ್ಮನವರ ಲಿಂಗೈಕ್ಯ ಶಿಲಾ ಮಂಟಪವಿರುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಕೈಗೊಂಡು ವರದಿಯನ್ನು ಸಲ್ಲಿಸಿದ್ದಾರೆ.

ಶಿವಶರಣೆ ಅಕ್ಕನಾಗಲಾಂಬಿಕೆ ಲಿಂಗೈಕ್ಯ ಮಂಟಪವು ಸುಮಾರು ಕ್ರಿಸ್ತ ಶಕ 12 ಮತ್ತು 13ನೇ ಶತಮಾನಕ್ಕೆ ಸೇರಿದ ಹೊಯ್ಸಳ ಶೈಲಿಯ ಕಂಬಗಳಿಂದ ಕೂಡಿದ ಮಂಟಪವಾಗಿದೆ ಎಂದು ಅವರ ವರದಿ ದಾಖಲಿಸಿದೆ.

ಮಂಟಪವು ಆರಕ್ಷಿತಾ ಸ್ಮಾರಕ ವಾಗಿದ್ದು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ 1961 ಹಾಗೂ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅಧಿವೇಶನ ನಿಯಮಗಳು 1965 ಪ್ರಕಾರ ಸಂರಕ್ಷಿತ ಸ್ಮಾರಕವನ್ನಾಗಿ ಘೋಷಿಸಬೇಕೆಂದು ಸಮಿತಿಯ ಸದ್ಯಸ್ಯ ಆಗ್ರಹಿಸಿದ್ದಾರೆ.

ಭೂಸ್ವಾಧೀನದ ಬಗ್ಗೆ ಹಾಗೂ ಐಕ್ಯಮಂಟಪದ ಅಭಿವೃದ್ದಿಗೆ ಅನುದಾನ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವದಾಗಿ ಎಂ ಬಿ ಪಾಟೀಲ್ ಭರವಸೆ ನೀಡಿದರು

Share This Article
Leave a comment

Leave a Reply

Your email address will not be published. Required fields are marked *