ಭಾಲ್ಕಿ ಮಠದಲ್ಲಿ ವ್ಯಸನ ಮುಕ್ತ ದಿನಾಚರಣೆ
ಭಾಲ್ಕಿ:
ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಮಹಾಂತ ಶಿವಯೋಗಿಗಳ ಜನ್ಮದಿನದ ನಿಮಿತ್ತ ಶನಿವಾರ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಜರುಗಿತು.
ಇಳಕಲ್ನ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳ ಅವರ ಭಾವಚಿತ್ರಕ್ಕೆ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಪುಷ್ಪನಮನ ಸಲ್ಲಿಸಿದರು.
ಅನುಭಾವ ನೀಡಿದ ಶಿವಬಸವ ಸ್ವಾಮೀಜಿ, ಡಾ. ಮಹಾಂತ ಶಿವಯೋಗಿ ಅವರು ಜೀವನದುದ್ದಕ್ಕೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸುಂದರ ಮತ್ತು ಸದೃಢ ಸಮಾಜ ನಿರ್ಮಾಣದಲ್ಲಿ ಮಠ ಮಾನ್ಯಗಳ ಕೊಡುಗೆ ದೊಡ್ಡದಿದೆ. ಧಾರ್ಮಿಕ, ಕೃಷಿ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮಠಗಳು ವಿಶಿಷ್ಟ ಸೇವೆ ಸಲ್ಲಿಸುತ್ತಿವೆ.
ಅದರಲ್ಲಿ ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಜನಪರ ಮತ್ತು ಜೀವಪರ ಸೇವೆ ಮಾದರಿಯಾಗಿದೆ ಎಂದರು.

ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳು ಅಪ್ಪಟ ಬಸವತತ್ವ ಅನುಯಾಯಿ ಆಗಿದ್ದರು. ಜೀವನದುದ್ದಕ್ಕೂ ನಡೆ ನುಡಿಯಲ್ಲಿ ಬಸವಾದಿ ಶರಣರ ವಿಚಾರಧಾರೆ ಮೈಗೂಡಿಸಿಕೊಂಡು ಬಸವತತ್ವದ ದಂಡನಾಯಕರೆಂದೇ ಗುರುತಿಸಿಕೊಂಡಿದ್ದರು.
ಜತೆಗೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೋಳಿಗೆ ಹಿಡಿದ ಅಪರೂಪದ ಶಿವಯೋಗಿಗಳು ಅವರಾಗಿದ್ದರು.
ರಾಜ್ಯ, ದೇಶ ಸೇರಿ ವಿದೇಶಗಳಲ್ಲೂ ಕೂಡ ಸಂಚರಿಸಿ ಪರಮ ಪೂಜ್ಯರು ಜೋಳಿಗೆ ಹಿಡಿದು ಜನರ ಬಳಿಯಲ್ಲಿ ದುಶ್ಚಟ, ದುರ್ಗುಣಗಳನ್ನು ಭಿಕ್ಷೆ ಬೇಡಿ ಜನರಲ್ಲಿನ ವ್ಯಸನಗಳನ್ನು ಬಿಡಿಸುವ ಕೆಲಸ ಮಾಡಿದ್ದರು.
ಅಂತಹ ಅಪರೂಪದ ಸೇವೆಯನ್ನು ಗುರುತಿಸಿ ಪರಮ ಪೂಜ್ಯ ಡಾ. ಮಹಾಂತ ಶಿವಯೋಗಿಗಳ ಜನ್ಮದಿನ ಆಗಸ್ಟ ೧ರಂದು ರಾಜ್ಯ ಸರಕಾರ ವ್ಯಸನಮುಕ್ತ ದಿನಾಚರಣೆಯನ್ನಾಗಿ ರಾಜ್ಯದಾದ್ಯಂತ ಆಚರಿಸುತ್ತಿರುವುದು ಅಭಿಮಾನದ ಸಂಗತಿ.
ಇಂದಿನ ಯುವ ಪೀಳಿಗೆ ಪೂಜ್ಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಪೂಜ್ಯ ಶಂಕರಲಿಂಗ ಸ್ವಾಮೀಜಿ, ಸಿದ್ಧಬಸವ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ಸಾಹಿತಿ ರಾಜು ಜುಬರೆ, ದೀಪಕ ಠಮಕೆ ಸೇರಿದಂತೆ ಹಲವರು ಇದ್ದರು.
ಮುಖ್ಯಗುರು ಬಾಬು ಬೆಲ್ದಾಳ ನಿರೂಪಿಸಿ, ಶರಣು ಸಮರ್ಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
