1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು
ಬೆಂಗಳೂರು
ಈ ಬರಹದಲ್ಲಿ ಒಂದೇ ಒಂದು ಸಾಲನ್ನೂ ನಾನು ಊಹೆಯಿಂದ ಬರೆದಿಲ್ಲ. ಇಲ್ಲಿ ಬರುವ ಪ್ರತಿಯೊಂದು ಸಂಗತಿಗೂ ಆಧಾರವಿದೆ. ಆ ಮೂಲಗಳ ಪಟ್ಟಿಯನ್ನು ಕೊನೆಯಲ್ಲಿ ಕೊಟ್ಟಿದ್ದೇನೆ.
ಎಲ್ಲಿ ನನಗೆ ಆಧಾರ ದೊರೆಯಲಿಲ್ಲವೋ ಅಲ್ಲಿ ದೊರೆಯಲಿಲ್ಲ ಎಂದೇ ಬರೆದಿದ್ದೇನೆ. ಅವುಗಳನ್ನೂ ಕೊನೆಯಲ್ಲಿ ಪ್ರತ್ಯೇಕವಾಗಿ ದಾಖಲಿಸಿದ್ದೇನೆ.
ಆರಂಭದಲ್ಲೇ ಎರಡು ಮಾತುಗಳನ್ನು ಸ್ಪಷ್ಟಪಡಿಸುತ್ತೇನೆ.
ಮೊದಲನೆಯದು, ಇದು ಯಾವ ಸಂಸ್ಥೆಯ ವಿರುದ್ಧದ ಬರಹವೂ ಅಲ್ಲ. ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರ ಮುಚ್ಚಬೇಕೆಂದು ನಾನೆಂದೂ ಹೇಳಿಲ್ಲ, ಹೇಳುವುದೂ ಇಲ್ಲ. ಅವು ಕಟ್ಟಿದ ಶಾಲೆ, ಕಾಲೇಜು ಮತ್ತು ಪ್ರಸಾದ ನಿಲಯಗಳಲ್ಲಿ ಓದಿ ಬಂದವರಲ್ಲಿ ನಾನೂ ಒಬ್ಬನು.
ಎರಡನೆಯದು, ಇದು ಹಿರಿಯರನ್ನು ಹಳಿಯುವ ಬರಹವೂ ಅಲ್ಲ. ಈ ಲೇಖನದುದ್ದಕ್ಕೂ ಬರುವ ಹೆಸರುಗಳ ಮಹನೀಯರು ನನಗೆ ಪೂಜ್ಯರು. ಅವರ ಉದ್ದೇಶವನ್ನು ನಾನು ಒಂದು ಕ್ಷಣವೂ ಸಂಶಯಿಸಿಲ್ಲ.
ಮೊದಲು, ಆ ಕಾಲದ ಸಂಕಟವನ್ನು ಒಪ್ಪಿಕೊಳ್ಳೋಣ. ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತರನ್ನು ಶೂದ್ರರ ಪಟ್ಟಿಯಲ್ಲಿ ಪರಿಗಣಿಸಲಾಗುತ್ತಿತ್ತು.
ಇದು ಕೇವಲ ಕಾಗದದ ಮೇಲಿನ ವಿಷಯವಾಗಿರಲಿಲ್ಲ. ಸರ್ಕಾರಿ ನೌಕರಿ, ಶಿಕ್ಷಣದ ಅವಕಾಶ, ಸಾಮಾಜಿಕ ಸ್ಥಾನಮಾನ — ಇವೆಲ್ಲವೂ ಆ ವರ್ಗೀಕರಣದ ಮೇಲೆ ನಿಂತಿದ್ದವು.
೧೮೮೦ರ ಸುಮಾರಿಗೆ ಮೈಸೂರಿನ ಲಿಂಗಾಯತರು ತಾವೂ ಬ್ರಾಹ್ಮಣರೆಂದು ವಾದಿಸತೊಡಗಿದಾಗ ಬ್ರಾಹ್ಮಣರು ಅದನ್ನು ಒಪ್ಪಲಿಲ್ಲ. ಅಂದಿನ ಶುಭೋದಯ ಪತ್ರಿಕೆ ‘ಕ್ಷೌರಿಕರು, ಮಾದಿಗರು ಮತ್ತು ಸಮಗಾರರು ಲಿಂಗಾಯತರಾಗಿರುವಾಗ ನೀವೆಂಥ ಬ್ರಾಹ್ಮಣರು,’ ಎಂದು ಹಂಗಿಸುತ್ತಿತ್ತು.
ಅಂದಿನ ಶುಭೋದಯ ಪತ್ರಿಕೆ ‘ಕ್ಷೌರಿಕರು, ಮಾದಿಗರು ಮತ್ತು ಸಮಗಾರರು ಲಿಂಗಾಯತರಾಗಿರುವಾಗ ನೀವೆಂಥ ಬ್ರಾಹ್ಮಣರು,’ ಎಂದು ಹಂಗಿಸುತ್ತಿತ್ತು.
ಈ ಒಂದು ವಾಕ್ಯದಲ್ಲಿ ಆ ಇಡೀ ಕಾಲಘಟ್ಟದ ದುರಂತ ಅಡಗಿದೆ.
ನಮ್ಮ ಧರ್ಮದ ಅತ್ಯಂತ ದೊಡ್ಡ ಹೆಗ್ಗಳಿಕೆಯನ್ನೇ ನಮ್ಮ ವಿರುದ್ಧ ಆಯುಧವಾಗಿ ಬಳಸಲಾಗುತ್ತಿತ್ತು. ಎಲ್ಲ ಜಾತಿಯವರನ್ನೂ ಒಳಗೆ ತೆಗೆದುಕೊಂಡಿದ್ದೇ ನಮ್ಮ ಕೀಳರಿಮೆಗೆ ಕಾರಣವಾಗುತ್ತಿತ್ತು.
ಆದ್ದರಿಂದ ಅಂದಿನ ಮುಖಂಡರು ಏನನ್ನಾದರೂ ಮಾಡಬೇಕಿತ್ತು. ಸುಮ್ಮನೆ ಕುಳಿತುಕೊಳ್ಳುವ ಆಯ್ಕೆ ಅವರಿಗಿರಲಿಲ್ಲ. ಇಲ್ಲಿಂದಲೇ ನನ್ನ ಪ್ರಶ್ನೆ ಆರಂಭವಾಗುತ್ತದೆ. ಏನನ್ನಾದರೂ ಮಾಡಬೇಕಿತ್ತು, ಒಪ್ಪಿದೆ. ಆದರೆ ಏನನ್ನು ಮಾಡಿದರು?
“ನೀವು ಶೂದ್ರರು” ಎಂಬ ಮಾತಿಗೆ ಎರಡು ಬಗೆಯ ಉತ್ತರ ಸಾಧ್ಯವಿತ್ತು.
ಮೊದಲ ಉತ್ತರ: “ಇಲ್ಲ, ನಾವು ಶೂದ್ರರಲ್ಲ. ನಾವು ಬ್ರಾಹ್ಮಣರು. ವೇದ ಆಗಮಗಳನ್ನು ನಾವೂ ಒಪ್ಪುತ್ತೇವೆ. ಗುಡಿಯಲ್ಲಿ ಪೂಜೆ ಮಾಡುವ ಅಧಿಕಾರ ನಮಗೂ ಇದೆ.”
ಎರಡನೆಯ ಉತ್ತರ: “ನಿಮ್ಮ ಈ ಏಣಿಯನ್ನೇ ನಾವು ಒಪ್ಪುವುದಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವಿಂಗಡಣೆಯನ್ನೇ ಎಂಟುನೂರು ವರ್ಷಗಳ ಹಿಂದೆ ನಮ್ಮ ಧರ್ಮಗುರುಗಳು ನಿರಾಕರಿಸಿದ್ದಾರೆ. ನಿಮ್ಮ ಏಣಿಯೂ ಬೇಡ ಅದರ ಮೆಟ್ಟಿಲೂ ಬೇಡ. ನಮಗೆ ಬೇಕಿರುವುದು ಶಿಕ್ಷಣ, ಆರ್ಥಿಕ ಬಲ ಮತ್ತು ರಾಜಕೀಯ ಪ್ರಾತಿನಿಧ್ಯ.”
ನಾ ತಿಳಿದ ಹಾಗೆ ಈ ಎರಡನೆಯ ಆಯ್ಕೆ ಬರಿಯ ಕಲ್ಪನೆಯಾಗಿರಲಿಲ್ಲ. ಅದೇ ಕಾಲದಲ್ಲಿ, ಅದೇ ನೆಲದಲ್ಲಿ, ಅದನ್ನು ಆರಿಸಿಕೊಂಡವರೂ ಇದ್ದರು.
ಎರಡನೆಯ ಆಯ್ಕೆಯನ್ನು ಅಪ್ಪಿ ಒಪ್ಪಿದವರು: 1880ರ ದಶಕದಲ್ಲಿ ಗಿಲಗಂಚಿ ಗುರುಸಿದ್ದಪ್ಪನವರು ಲಿಂಗಾಯತ ನಿಧಿಯನ್ನು ಸ್ಥಾಪಿಸಿದರು. ಆಗ ವಿದೇಶಕ್ಕೆ ಓದಲು ಹೋಗುತ್ತಿದ್ದವರು ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರು ಮತ್ತು ಬಂಗಾಳಿ ಬ್ರಾಹ್ಮಣರು ಮಾತ್ರ. ನಮ್ಮ ಹುಡುಗರೂ ಹೋಗಬೇಕೆಂಬುದು ಅವರ ಆಶಯವಾಗಿತ್ತು. ಆ ನಿಧಿಯಿಂದ ಬಾರ್ಸಿಯ ಚಂದ್ರಶೇಖರ ಹೊಸಹಳ್ಳಿ ಎಂಬವರನ್ನು ಹೊರದೇಶಕ್ಕೆ ಕಳುಹಿಸಲಾಯಿತು.
ಅರಟಾಳ ರುದ್ರಗೌಡರು ಪ್ರಸಾದ ನಿಲಯಗಳನ್ನು ಕಟ್ಟಿದರು. ಕೆ.ಎಲ್.ಇ. ಸಂಸ್ಥೆ ಹುಟ್ಟಿತು.
ಸರ್ ಸಿದ್ದಪ್ಪ ಕಂಬಳಿಯವರು ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಆ ಚಳವಳಿಯಲ್ಲಿ ವಿಜಯಪುರ ಜಿಲ್ಲೆಯ ಉಸ್ತುವಾರಿಯನ್ನು ಹೊತ್ತಿದ್ದವರು ಫ.ಗು. ಹಳಕಟ್ಟಿಯವರು. ಹೌದು, ಹಳಕಟ್ಟಿಯವರ ಕೆಲಸ ವಚನ ಸಂಶೋಧನೆ ಮಾತ್ರವಾಗಿರಲಿಲ್ಲ, ಅವರು ಬ್ರಾಹ್ಮಣೇತರ ಚಳವಳಿಯ ಸಂಘಟಕರೂ ಆಗಿದ್ದರು.
ಕೊಲ್ಲಾಪುರದ ಶಾಹು ಮಹಾರಾಜರು ಈ ಗುಂಪಿಗೆ ಬೆಂಬಲ ನೀಡಿದರು. ಲಿಂಗಾಯತ ಹುಡುಗರ ಪ್ರಸಾದ ನಿಲಯಕ್ಕೆ ಕಟ್ಟಡವನ್ನು ಕೊಟ್ಟರು; ವರ್ಷಕ್ಕೆ ಐದು ಸಾವಿರ ರೂಪಾಯಿ ಅನುದಾನವನ್ನು ನೀಡಿದರು.
ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದ್ದ ಪಲ್ಲಕ್ಕಿ ಮೆರವಣಿಗೆಯ ಗೌರವವನ್ನು ಚಿತ್ರದುರ್ಗದ ಜಯದೇವ ಜಗದ್ಗುರುಗಳಿಗೆ ಕೊಡಿಸಿದರು.
ಇವರು ಯಾರೂ ಬ್ರಾಹ್ಮಣರೆಂದು ಕರೆಸಿಕೊಳ್ಳಲು ಹೋಗಲಿಲ್ಲ. ಬ್ರಾಹ್ಮಣ್ಯದ ಆಚೆಗೆ ಒಂದು ಬಲಿಷ್ಠ ಸಮಾಜವನ್ನು ಕಟ್ಟಲು ಹೊರಟಿದ್ದರು. ಇದು ನನ್ನ ವ್ಯಾಖ್ಯಾನವಲ್ಲ. ಬ್ರಾಹ್ಮಣೇತರ ಚಳವಳಿ ಎಂಬ ಹೆಸರೇ ಅದನ್ನು ಹೇಳುತ್ತದೆ.
ಈಗ ಇನ್ನೊಂದು ಆಯ್ಕೆಗೆ ಬರೋಣ. ಇಲ್ಲಿ ದಾಖಲೆಗಳು ಸ್ಪಷ್ಟವಾಗಿವೆ; ಮತ್ತು ಅವುಗಳನ್ನು ಬರೆದವರೇನು ನಮ್ಮ ಪರವಾಗಿದ್ದವರಲ್ಲ. ಉದಾಹರಣೆಗೆ ಬ್ರಿಟಿಷ್ ಅಧಿಕಾರಿ ಎಡ್ಗರ್ ಥರ್ಸ್ಟನ್.
೧೮೯೧ರ ಜನಗಣತಿಯ ಸಂದರ್ಭದಲ್ಲಿ ಲಿಂಗಾಯತರಿಂದ ಅನೇಕ ಮನವಿಗಳು ಸಲ್ಲಿಕೆಯಾದವು. ನಮ್ಮನ್ನು ವೀರಶೈವ ಬ್ರಾಹ್ಮಣರೆಂದು ದಾಖಲಿಸಬೇಕೆಂಬುದು ಆ ಮನವಿಗಳ ತಿರುಳಾಗಿತ್ತು.
ಮೈಸೂರಿನ ಗಣತಿ ವರದಿಯಲ್ಲಿ ಇನ್ನೊಂದು ಸಂಗತಿಯೂ ದಾಖಲಾಗಿದೆ. ಲಿಂಗಾಯತ ಮುಖಂಡರು ಮಹಾರಾಜರನ್ನೇ ಭೇಟಿಯಾಗಿ, ವೀರಶೈವ ಬ್ರಾಹ್ಮಣರೆಂದು ನೋಂದಾಯಿಸುವಂತೆ ಆದೇಶವನ್ನು ಕೊಡಿಸಬೇಕೆಂದು ಬೇಡಿಕೊಂಡರು.
ಲಿಂಗಾಯತ ಮುಖಂಡರು ಮಹಾರಾಜರನ್ನೇ ಭೇಟಿಯಾಗಿ, ವೀರಶೈವ ಬ್ರಾಹ್ಮಣರೆಂದು ನೋಂದಾಯಿಸುವಂತೆ ಆದೇಶವನ್ನು ಕೊಡಿಸಬೇಕೆಂದು ಬೇಡಿಕೊಂಡರು.
ಅದರಂತೆ ಸರ್ಕಾರ ‘ಲಿಂಗಾಯತರನ್ನು ಶೂದ್ರರೆಂದು ವರ್ಗೀಕರಿಸಬಾರದು; ಅವರು ಬಯಸಿದರೆ ತಮ್ಮನ್ನು ವೀರಶೈವ ಬ್ರಾಹ್ಮಣರೆಂದು ಕರೆದುಕೊಳ್ಳಲು ಸ್ವತಂತ್ರರು,’ ಎಂದು ಆದೇಶ ಹೊರಡಿಸಿತು.
ಇಲ್ಲಿಯವರೆಗೆ ಒಂದು ಸಮಾಜ ತನ್ನ ಗೌರವಕ್ಕಾಗಿ ಹೋರಾಡಿತು ಎಂದು ಹೇಳಬಹುದು.
ಆದರೆ ೧೯೦೧ರ ಗಣತಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಲಾಯಿತು. ಗಣತಿ ಅಧಿಕಾರಿಗಳಿಗೆ ಒಂದು ಸಂಪೂರ್ಣ ಯೋಜನೆಯನ್ನೇ ಸಿದ್ಧಪಡಿಸಿ ಕೊಡಲಾಯಿತು.
ಆ ಯೋಜನೆಯಲ್ಲಿ ಲಿಂಗಾಯತರ ಎಲ್ಲ ಒಳಪಂಗಡಗಳನ್ನೂ ನಾಲ್ಕು ಗುಂಪುಗಳಲ್ಲಿ ಹಂಚಲಾಗಿತ್ತು: ಬ್ರಾಹ್ಮಣ. ಕ್ಷತ್ರಿಯ. ವೈಶ್ಯ. ಶೂದ್ರ.
ಈ ಸಾಲನ್ನು ದಯವಿಟ್ಟು ಮೂರ ನಾಲ್ಕು ಬಾರಿ ಓದಿ. ಮನನ ಆಗುವವರೆಗೂ ಓದಿ.
ಶೂದ್ರ ಎಂಬ ಪಟ್ಟದಿಂದ ತಪ್ಪಿಸಿಕೊಳ್ಳಲು ಹೊರಟ ಸಮಾಜವು, ತನ್ನದೇ ಜನರನ್ನು ನಾಲ್ಕು ವರ್ಣಗಳಲ್ಲಿ ಹಂಚುವ ಪಟ್ಟಿಯನ್ನು ತಾನೇ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಅಂದರೆ ವರ್ಣ ವ್ಯವಸ್ಥೆ ಎಂಬ ಆ ಏಣಿಯನ್ನು ನಾವು ನಿರಾಕರಿಸಲಿಲ್ಲ; ಅದನ್ನು ನಮ್ಮ ಮನೆಯೊಳಗೆ ತಂದಿಟ್ಟುಕೊಂಡೆವು.
ಥರ್ಸ್ಟನ್ ಇದನ್ನು ಕಂಡು ಬರೆದ ಮಾತು ಇಂದಿಗೂ ಚುಚ್ಚುತ್ತದೆ.
“ಬಸವಣ್ಣನವರು ಸಾಧಿಸಿದ್ದರಲ್ಲಿ ಬಹಳಷ್ಟು ಈಗ ರದ್ದಾಗಿಹೋಗಿದೆ; ಲಿಂಗಾಯತನು ಕ್ರಮೇಣ ತನ್ನ ಸಂಪ್ರದಾಯಸ್ಥ ಹಿಂದೂ ಸಹೋದರನಂತೆಯೇ ಆಗುತ್ತಾ ಸಾಗಿದ್ದಾನೆ,” ಎಂದು ಅವರು ಬರೆದಿದ್ದಾರೆ.
ಆ ಮಾತನ್ನು ಬರೆದವರು ಒಬ್ಬ ಪರಕೀಯ ಅಧಿಕಾರಿ. ಒಂದು ಶತಮಾನದ ನಂತರ ನಾವು ಅದೇ ವಿಚಾರವನ್ನು ಪ್ರಸ್ತಾಪಿಸಿದರೆ, ಅದು ಯಾರಿಗಾದರೂ ಮುಜುಗರ ಪಡಿಸುತ್ತದೆಯೇ?
ನಾಳೆ ಭಾಗ 2: ‘ವೀರಶೈವರು ಹಿಂದೂಗಳು, ಜಾತಿ ಜಂಗಮರೇ ಸ್ವಾಮಿಗಳಾಗಲಿ’

ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏🙏
ಇಂತಹ ವಿಚಾರಗಳು ಇನ್ನಷ್ಟೂ ಬೆಳಕಿಗೆ ಬರಲಿ
ಶರಣು ಶರಣಾರ್ಥಿಗಳು🙏🙏
ಒಳ್ಳೆಯ ಮಾಹಿತಿ ನೀಡಿದರು
Igo ನಮ್ಮ ಕುಲವನ್ನೇ ಕೆಡಿಸಿದೆ ಅದನ್ನು ಬಿಟ್ಟು ಒಂದಾದ ಲಿಂಗಾಯತ ಧರ್ಮ ಎತ್ತಿ ಹಿಡಿಯೋಣ. ನಮ್ಮ ಮಾರ್ಗ ಬಸವ ಮಾರ್ಗ ಮಾಡಿ ನಡೆಯೋಣ. 👏🏻ಶರಣು 👏🏻
ನಿಜಕ್ಕೂ ವೀರಶೈವ ಬ್ರಾಹ್ಮಣಾ., ಲಿಂಗಾಯತ ಧರ್ಮ, ಲಿಂಗಾಯತ, ಹಿಂದೂ ಧರ್ಮ….ಎಲ್ಲಾ ಕಾಲಘಟ್ಟದ ಅಳಿವು ಉಳುವಿನ ಹೋರಾಟ ನಮ್ಮನ್ನು ಎಚ್ಚರಿಸಿದೆ… ಇಂತಹ ಮೂಲ ವಿಚಾರಗಳು ಇನ್ನಷ್ಟು. ಹೊರಬಂದು…. ಒಂದೇ ಧರ್ಮ, ಪಂಗಡ, ಜಾತಿ,ಆಡಿಯಲ್ಲಿ ಒಗ್ಗೂಡುವಂತಾಗಲಿ… ಲಿಂಗಾಯತ, ವೀರಶೈವ, ಬಸವ…..ಧರ್ಮ,ಮತ್ತೆ ಮತ್ತೆ ಗೊಂದಾಳಗಳ ಗೂಡಾಗದಿರಲಿ…
ಶರಣು ಗೆಳೆಯ,
ನಿಮ್ಮ ಲೇಖನವೆಂದರೆ, ಆಯುದದಷ್ಟೆ ಮೊನಚು. ನಿಖರವಾಗಿ ವಿಶ್ಲೇಷಿಸುವ ನಿಮ್ಮ ಚಾಕುಚಕ್ಯತೆ ಮೆಚ್ಚಲೆ ಬೇಕಾದದ್ದು. ನಿಮ್ಮ ಲೇಖನಿ ಸರಣ ಮುಂದುವರಿಯಲಿ. ಬೇಸ್ಟ ಆಫ್ ಬಸವ ಮೀಡಿಯಾ ವಾರ್ಷೀಕ ಪತ್ರಿಕೆಯಲ್ಲಿ ಇವೆಲ್ಲವು ಮೂಡಿ ಬರಲಿ.