ಬೆಳಗಾವಿ
ಪುಸ್ತಕದ ಹೆಸರು: ಉಳ್ಳವರ ಶಿವಾಲಯ ದೇಹ ದೇಗುಲ (ಬಸವಣ್ಣನವರ ಒಂದು ವಚನ ಕುರಿತು)
ಲೇಖಕರು : ಡಾ. ಮೃತ್ಯುಂಜಯ ರುಮಾಲೆ
ಪ್ರಕಾಶಕರು: ಪ್ರಣವ ಪ್ರಕಾಶನ, ಹೊಸಪೇಟೆ, ೨೦೨೬
ಲೇಖಕರ ಸಂಪರ್ಕವಾಣಿ : ೮೬೧೮೨೮೮೨೯೯, ೯೪೪೮೨೨೮೩೬೮
ಬಸವಣ್ಣನವರ “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ? ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ…” ಎಂಬ ವಚನವು ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ, ಅನೇಕ ಆಯಾಮಗಳಲ್ಲಿ ವ್ಯಾಖ್ಯಾನಿಸಲ್ಪಟ್ಟ ಅಪೂರ್ವ ಚಿಂತನೆಯಾಗಿದೆ. ಹನ್ನೆರಡನೆಯ ಶತಮಾನದ ಸಾಮಾಜಿಕ-ಧಾರ್ಮಿಕ ಪರಿಸರದಲ್ಲಿ ಹುಟ್ಟಿದ ಈ ವಚನವು ಇಂದು ಒಂಬತ್ತು ನೂರು ವರ್ಷಗಳ ನಂತರವೂ ತನ್ನ ಚೈತನ್ಯವನ್ನು ಕಳೆದುಕೊಳ್ಳದೆ ಸಮಕಾಲೀನ ಸಮಾಜದ ಅನೇಕ ಪ್ರಶ್ನೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ಕಾಲಘಟ್ಟದಲ್ಲಿ ನೂರಾರು ವಿದ್ವಾಂಸರು, ಸಾಹಿತಿಗಳು, ಚಿಂತಕರು, ಧರ್ಮಶಾಸ್ತ್ರಜ್ಞರು ಮತ್ತು ಸಮಾಜವಿಜ್ಞಾನಿಗಳು ಈ ವಚನವನ್ನು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆಗಳಲ್ಲಿ ವಿಶ್ಲೇಷಿಸಿರುವುದು ಅದರ ಬಹುಮುಖ ಚಿಂತನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಬಸವಣ್ಣನವರ ಷಟ್ಸ್ಥಲ ಕಟ್ಟಿನಲ್ಲಿ ಬರುವ ಈ ಸುಪ್ರಸಿದ್ಧ ವಚನ ಕುರಿತು ಆಧುನಿಕ ಕಾಲಘಟ್ಟದಲ್ಲಿ ಅದ್ಭುತವೆನ್ನುವ ಚರ್ಚೆ-ವಿಶ್ಲೇಷಣೆ-ಸಂವಾದ ಏರ್ಪಟ್ಟಿರುವುದು ನಿಜಕ್ಕೂ ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ. ವಚನಗಳನ್ನು ನವೋದಯ ಕಾಲಘಟ್ಟದಲ್ಲಿ ಧಾರ್ಮಿಕ ಪಠ್ಯಗಳಂತೆ ಪರಿಭಾವಿಸಿ ಡಾ. ಹಳಕಟ್ಟಿ, ರಂಗನಾಥ ದಿವಾಕರ, ಎಂ. ಆರ್. ಶ್ರೀ ಅವರು ಧರ್ಮದ ಶಾಸ್ತ್ರದ ಚೌಕಟ್ಟಿನಲ್ಲಿ ಅಧ್ಯಯನ ಮಾಡುವ ಪರಂಪರೆಗೆ ನಾಂದಿ ಹಾಡಿದರು. ತದನಂತರ ಬಂದ ಪ್ರಗತಿಶೀಲ ಸಾಹಿತ್ಯ ಘಟ್ಟದಲ್ಲಿ ವಚನಗಳ ಚಿಂತನೆ ಅಷ್ಟಾಗಿ ನಡೆದಂತೆ ಕಾಣುವುದುಲ್ಲ, ೧೯೬೦ರ ದಶಕದಲ್ಲಿ ವಿಶ್ವವಿದ್ಯಾಲಯಗಳ ಕೆಲವು ಇಂಗ್ಲಿಷ್ ಪ್ರಾಧ್ಯಾಪಕರ ಪ್ರೇರಣೆಯಿಂದ ನವ್ಯಕಾಲ ಘಟ್ಟ ಪ್ರಾರಂಭವಾಯಿತು. ಆಗ ವಚನಗಳನ್ನು ಒಂದು ಸಾಹಿತ್ಯ ಪ್ರಕಾರವಾಗಿ ಗುರುತಿಸುವ ಪ್ರಕ್ರಿಯೆ ವೇಗವಾಗಿ ನಡೆಯಿತು. ವಚನಗಳನ್ನು ಸಾಹಿತ್ಯಿಕ ರೂಪವಾಗಿ ಪರಿಗಣಿಸಿ, ಅವುಗಳಲ್ಲಿರುವ ಮೌಲ್ಯಚಿಂತನೆಯನ್ನು ನವ್ಯದ ಲಯದಲ್ಲಿಯೇ ಮಾಡಿದ ಪರಿಣಾಮ ಇಂದು ಅಧ್ಯಾತ್ಮಿಕವಾಗಿ ವಚನಗಳನ್ನು ಅನುಸಂಧಾನ ಮಾಡುವ ಜಿಜ್ಞಾಸುಗಳಿಗೆ ಈ ನವ್ಯಕಾಲಘಟ್ಟದ ವಚನಚಿಂತನಾ ಫಲಿತಗಳು ನಿರಾಶೆಯನ್ನುಂಟು ಮಾಡಬಹುದಾಗಿದೆ.
ಆಧುನಿಕ ವಿದ್ವಾಂಸರು ಈ ವಚನವನ್ನು ವಿವಿಧ ನೆಲೆಗಳಲ್ಲಿ ವಿಶ್ಲೇಷಿಸಿರುವುದನ್ನು ಗಮನಿಸಿದರೆ- ಧಾರ್ಮಿಕ ಅಧ್ಯಯನಕಾರರಿಗೆ ಇದು ಬಾಹ್ಯ ಆಚರಣೆಯಿಂದ ಅಂತರಂಗದ ಶಿವಾನುಭವದತ್ತ ಸಾಗುವ ತತ್ವವಾಗಿದೆ. ಆಧ್ಯಾತ್ಮಿಕ ಚಿಂತಕರಿಗೆ ಇದು ದೇಹ ಮತ್ತು ಆತ್ಮದ ಸಂಬಂಧವನ್ನು ವಿವರಿಸುವ ಅನುಭವದರ್ಶನವಾಗಿದೆ. ಸಮಾಜಶಾಸ್ತ್ರಜ್ಞರಿಗೆ ಇದು ವರ್ಗ ಮತ್ತು ಜಾತಿ ಅಸಮಾನತೆಯನ್ನು ಪ್ರಶ್ನಿಸುವ ಸಾಮಾಜಿಕ ಚಿಂತನೆಯಾಗಿದೆ. ದಲಿತ-ಬಂಡಾಯ ಚಿಂತಕರಿಗೆ ಇದು ಜನ್ಮಾಧಾರಿತ ಮೇಲು-ಕೀಳು ವ್ಯವಸ್ಥೆಯ ವಿರುದ್ಧದ ಮಾನವೀಯ ಪ್ರತಿರೋಧದ ಧ್ವನಿಯಾಗಿ ಕಾಣುತ್ತದೆ. ನವೋದಯ ಮತ್ತು ನವ್ಯ ಸಾಹಿತ್ಯದ ವಿಮರ್ಶಕರಿಗೆ ಇದು ಆಧುನಿಕ ಮನುಷ್ಯನ ಅಂತರಂಗದ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಪಠ್ಯವಾಗಿ ಕಾಣುತ್ತದೆ. ಹೀಗೆ ಒಂದೇ ವಚನವು ವಿಭಿನ್ನ ಕಾಲಘಟ್ಟಗಳ ವಿಭಿನ್ನ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಹೊಂದಿದೆ.
ಈ ಹಿನ್ನೆಲೆಯಲ್ಲಿ ಡಾ. ಮೃತ್ಯುಂಜಯ ರುಮಾಲೆ ಅವರು ಬಸವಣ್ಣನವರ ‘ಉಳ್ಳವರು….’ ಒಂದು ವಚನವನ್ನು ಕೇಂದ್ರಭೂಮಿಕೆಯನ್ನಾಗಿ ಇಟ್ಟುಕೊಂಡು, ಸ್ಥಾವರ-ಜಂಗಮ, ದೇಹ-ದೇಗುಲ ಪದಗಳ ಮೀಮಾಂಸೆಯನ್ನು ಅತ್ಯಂತ ಸುದೀರ್ಘವಾಗಿ ಮಾಡಿದ ಪರಿಣಾಮವೇ ಪ್ರಸ್ತುತ ‘ಉಳ್ಳವರ ಶಿವಾಲಯ ದೇಹ ದೇಗುಲ’ಕೃತಿ.
೫೩೦ ಪುಟಗಳ ಸುದೀರ್ಘವಾದ ಈ ಕೃತಿಯಲ್ಲಿ ‘ಪ್ರಸ್ತುತ ವಚನವನ್ನು ಹೇಗೆ ಓದಬೇಕು; ಹೇಗೆ ನೋಡಬೇಕು; ಹೇಗೆ ಗ್ರಹಿಸಬೇಕು; ಹೇಗೆ ಅರ್ಥೈಸಿಕೊಳ್ಳಬೇಕು ಮತ್ತು ಅರ್ಥೈಸಬೇಕು? ಈ ವಚನದ ನೆಲೆ ಪಾರಮಾರ್ಥಿಕವೇ, ಆಚಿಂತ್ಯದ ದರ್ಶನಾಕಾಂಕ್ಷೆಯೇ, ತನ್ನ ಒಳಗನ್ನು ಅರಿಯುವ ಅರಿವೇ, ಅನುಭಾವಿಕ ಅನುಭವದ್ದೇ, ಸಾಮಾಜಿಕ ಅಥವಾ ಸಾಂಸ್ಕೃತಿಕದ್ದೇ?’ (ಪು. ೮) ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಾ. ಮೃತ್ಯುಂಜಯ ರುಮಾಲೆ ಅವರು ಮಾಡಿದ ಪ್ರಯತ್ನ ಅತ್ಯಂತ ಮನೋಜ್ಞವಾಗಿದೆ.
ಒಟ್ಟು ಎಂಟು ಅಧ್ಯಾಯಗಳಲ್ಲಿ ಈ ಕೃತಿ ಕವಲೊಡೆದಿದೆ. ೧. ಉಳ್ಳವರು : ಪ್ರವೇಶ-ಪ್ರಸ್ತಾವಿಕ, ೨. ದೇವಾಲಯ : ಪರಂಪರೆಯ ಒಂದು ಭಾಗವಾಗಿ, ೩. ಉಳ್ಳವರು: ಪಠ್ಯ-ಪಾಠಾಂತರ, ೪. ಉಳ್ಳವರು : ಹನ್ನೆರಡನೆಯ ಶತಮಾನದ ಪರಿಸರದಲ್ಲಿ, ೫. ಅಲ್ಲಮ-ಚೆನ್ನಬಸವರ ದೃಷ್ಟಿಯಲ್ಲಿ, ೬. ಸಿದ್ಧರಾಮ ಮತ್ತು ಇತರ ಶರಣರ ವಿಚಾರ, ೭. ಬಸವೋತ್ತರ ಕಾಲದಲ್ಲಿ, ೮. ಉಳ್ಳವರು : ಆಧುನಿಕ ಅನುಸಂಧಾನ. ಹೀಗೆ ಎಂಟು ಅಧ್ಯಾಯಗಳಲ್ಲಿ ಇಡೀ ವಚನದ ವಸ್ತುನಿಷ್ಠವಾದ ವಿಶ್ಲೇಷಣಾತ್ಮಕ ಚಿಂತನಾಧಾರೆ ಓತಪ್ರೋತವಾಗಿ ಸಾಗಿದೆ.
ಪ್ರಸ್ತುತ ವಚನಾನುಸಂಧಾನದ ಕುರಿತು ಡಾ. ರುಮಾಲೆ ಅವರು ಹೇಳುವ ಮಾತುಗಳು ಹೀಗಿವೆ: “ಒಂದು ಖಚಿತ ಕಾಲಘಟ್ಟದ ಸೃಷ್ಟಿಶೀಲ ಪ್ರಕ್ರಿಯೆಯ ಚಿಂತನಾರ್ಹ ಪಠ್ಯವೊಂದು ಕಾಲಾನುಕಾಲದ ಸಾಂಸ್ಕೃತಿಕ, ಸಾಮಾಜಿಕ ಶಿಸ್ತುಗಳ ಪ್ರಭಾವದಲ್ಲಿ ಗಮನಿಸಲ್ಪಡುತ್ತಿರುವುದು ಆ ಪಠ್ಯದ ಆಂತರ್ಯದಲ್ಲಿರುವ ವಿಚಾರದ ಶಕ್ತಿಯನ್ನಂತೂ ಅದು ತೋರಿಸುತ್ತದೆ. ಸ್ವೀಕಾರ-ಅಸ್ವೀಕಾರ, ಸಮ್ಮತ-ಅಸಮ್ಮತ ಅಂಶಗಳು ನಂತರದವುಗಳು. ಆದರೆ ಜಾಗೃತ ಕಾಲಘಟ್ಟದ ಯುಗಪ್ರವರ್ತನ ಚಿಂತನೆ ಹೇಗೆ ‘ನಿಚ್ಚಂ ಪೊಸತು’ ಎಂಬಂತೆ ಕಂಡು ಬರುತ್ತಿದೆ ಎಂಬುದು ವಿಶೇಷ. ಇದು ಕನ್ನಡದ ಚಿಂತನಾ ಪರಂಪರೆಯ ವೈಶಿಷ್ಟ್ಯವೂ ಆಗಿದೆ.” (ಶಿವಾಲಯ ಪ್ರವೇಶಿಸುವ ಮುನ್ನ ಲೇಖಕರ ಮಾತು : ಪು. ೭)
ಪ್ರಾಸ್ತಾವಿಕ ಪ್ರವೇಶಿಕೆಯ ಮೊದಲ ಅಧ್ಯಾಯದಲ್ಲಿ ‘ಸ್ಥಾವರ-ಜಂಗಮ- ಎಂದರೇನು? ಎಂಬುದರ ಕುರಿತು ತುಂಬ ಅರ್ಥಪೂರ್ಣವಾದ ಮೌಲಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ‘ದೇವಾಲಯ : ಪರಂಪರೆಯ ಒಂದು ಭಾಗವಾಗಿ’ ಎಂಬ ಎರಡನೆಯ ಅಧ್ಯಾಯವು ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯ ಒಂದು ಪರಂಪರೆಯ ಭಾಗವಾಗಿ ಬೆಳೆದು ಬಂದ ಗತಕಥನವನ್ನು ವಚನಗಳ ಪರಿಕಲ್ಪನೆಯ ಮೂಲಕವೇ ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ವಿಶೇಷವಾಗಿದೆ.
‘ಉಳ್ಳವರು : ಪಠ್ಯ-ಪಾಠಾಂತರ’ ಮೂರನೆಯ ಅಧ್ಯಾಯದಲ್ಲಿ ಬಸವಣ್ಣನವರ ವಚನಗಳನ್ನು ಇಲ್ಲಿಯವರೆಗೆ ಹತ್ತಾರು ಜನ ವಿದ್ವಾಂಸರು ಸಂಪಾದಿಸಿ ಪ್ರಕಟಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ೧೮೮೬ರಲ್ಲಿ ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯ ಮರಿಶಂಕರ ದ್ಯಾವರ ಸಂಪಾದನೆ ಮೊದಲುಮಾಡಿಕೊಂಡು, ಡಾ. ಹಳಕಟ್ಟಿ, ಡಾ. ಆರ್. ಸಿ. ಹಿರೇಮಠ, ಡಾ. ಎಲ್.ಬಸವರಾಜು, ಪ್ರೊ. ಶಿ.ಶಿ.ಬಸವನಾಳ ಮೊದಲಾದವರ ಪಠ್ಯಗಳಲ್ಲಿ ಈ ಒಂದು ಚಿಕ್ಕ ವಚನ ಹೇಗೆಲ್ಲ ಪಾಠಾಂತರದೋಷಕ್ಕೆ ಒಳಗಾಗಿದೆ ಎಂಬುದರತ್ತ ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತಾರೆ.
‘ಉಳ್ಳವರು : ಹನ್ನೆರಡನೆಯ ಶತಮಾನದ ಪರಿಸರದಲ್ಲಿ’ ಎಂಬ ನಾಲ್ಕನೆಯ ಅಧ್ಯಾಯದಲ್ಲಿ ಉಳ್ಳವರು ಮತ್ತು ಬಡವರ ನಡುವಿನ ತಾತ್ವಿಕ ವ್ಯತ್ಯಾಸಗಳನ್ನು ಗುರುತಿಸುವುದರ ಜೊತೆಗೆ ಬಸವಣ್ಣನವರು ಯಾವ ಸಂದರ್ಭದಲ್ಲಿ ಈ ವಚನವನ್ನು ಬಳಕೆ ಮಾಡಿದರು ಎಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ. ಬಸವಣ್ಣನವರ ವಚನಗಳನ್ನು ಷಟ್ಸ್ಥಲ ಕ್ರಮದಲ್ಲಿ ಜೋಡಿಸಿದ ವಚನಗಳ ಸಾವಿರಾರು ಕಟ್ಟುಗಳು ಇಂದು ಕನ್ನಡ ನಾಡಿನಲ್ಲಿ ದೊರೆಯುತ್ತವೆ. ಭಕ್ತಸ್ಥಲದಿಂದ ಐಕ್ಯಸ್ಥಲದವರೆಗೆ ೯೫೯ ವಚನಗಳನ್ನು ಜೋಡಿಸಿದ ಕ್ರಮವಿನ್ಯಾಸವೂ ಅತ್ಯಂತ ಚಿಂತನಾರ್ಹವಾಗಿದೆ. ‘ಉಳ್ಳವರು…’ ವಚನವು ಬಸವಣ್ಣನವರ ಷಟ್ಸ್ಥಲ ಕ್ರಮದಲ್ಲಿಯ ಪ್ರಾಣಲಿಂಗಿ ಸ್ಥಲದಲ್ಲಿ ಬರುವ ವಚನವಾಗಿದೆ. ಹೀಗಾಗಿ ಭಕ್ತನಾದವನು ಪ್ರಾಣವೇ ಲಿಂಗವಾಗುವ ಪ್ರಕ್ರಿಯೆ ಸಂದರ್ಭದಲ್ಲಿ ಬಳಸಬೇಕಾದ ವಚನವಿದಾಗಿರುವುದರಿಂದ ಈ ವಚನವನ್ನು ಆನುಭಾವಿಕ ನೆಲೆಯಲ್ಲಿಯೇ ಅರ್ಥೈಸಬೇಕಾದುದು ಸುಸಂಗತವೆಂಬುದು ಡಾ. ರುಮಾಲೆ ಅವರ ಪ್ರಮುಖ ವಾದ.
ಕರ್ನಾಟಕವನ್ನು ಒಳಗೊಂಡಂತೆ, ಇಡೀ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ದೇವಾಲಯಗಳ ನಿರ್ಮಾಣ-ನಾಶ-ನಿರಾಕರಣೆ ಪ್ರಕ್ರಿಯೆಗಳು ಸಾಗಿ ಬಂದಿರುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ರಾಜಮಹಾರಾಜರು ಕಟ್ಟಿದ ದೇವಾಲಯಗಳು ಧಾರ್ಮಿಕ ಸಂಘರ್ಷಕ್ಕೆ ಒಳಗಾಗಿ ಧ್ವಂಸಗೊಂಡ ಇತಿಹಾಸವನ್ನು ಇತ್ತೀಚೆಗೆ ಸೀತಾರಾಮ ಗೋಯಲ್ ಅವರು ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಸಂಶೋಧಕರ ಅಧ್ಯಯನದ ಪ್ರಕಾರ ಈ ನಾಡಿನ ದೇವಾಲಯಗಳು ಕೇವಲ ಮುಸ್ಲಿಂ ದೊರೆಗಳಿಂದ ನಾಶವಾಗಿಲ್ಲ, ಮುಸ್ಲಿಂ ದೊರೆಗಳು ಬರುವ ಪೂರ್ವದಲ್ಲಿ ಭಾರತದಲ್ಲಿದ್ದ ಅಸಂಖ್ಯಾತ ಬೌದ್ಧ ವಿಹಾರಗಳನ್ನು, ಚೈತ್ಯಾಲಯಗಳನ್ನು ನಾಶ ಮಾಡಿದವರು ಸ್ಥಳೀಯರೇ ಆಗಿದ್ದಾರೆಂಬುದು ಗಮನಾರ್ಹ ಸಂಗತಿ. ಸಾವಿರಾರು ಶಾಸನಗಳಲ್ಲಿ ಭಾರತದೊಳಗಿನವರೇ ಈ ಬೌದ್ಧ-ಜೈನ ಧರ್ಮದ ಅವಶೇಷಗಳನ್ನು ಹೇಗೆಲ್ಲ ನಾಶ ಮಾಡಿದರೆಂಬುದನ್ನು ನೋಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ೧೨ನೇ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಸಾವಿರಾರು ದೇವಾಲಯಗಳಿದ್ದವು. ದೇವಾಲಯ ಸಂಸ್ಕೃತಿ ಪ್ರಾಯಶಃ ಅದು ಉಳ್ಳವರ ಸಂಸ್ಕೃತಿಯಾಗಿತ್ತು. ಹೀಗಾಗಿ ಬಸವಣ್ಣನವರು (ಆಧುನಿಕ ಕಾಲದ ನಾರಾಯಣ ಗುರುಗಳಂತೆ) ಉಳ್ಳವರಲ್ಲದ ಎಲ್ಲ ಬಡ-ದಮನತ ಸಮುದಾಯದ ಜನಕ್ಕೆ ಈ ದೇವಾಲಯಗಳಿಗೆ ನೀವು ಹೋಗುವ ಬದಲಾಗಿ, ನಿಮ್ಮ ದೇಹವನ್ನೇ ದೇವಾಲಯವಾಗಿ ಮಾಡಿಕೊಂಡು ಆತ್ಮಾನುಸಂಧಾನ ಮಾಡಿ ಎಂದು ಹೇಳುವ ಸಂದರ್ಭದಲ್ಲಿ ಈ ವಚನವನ್ನು ಬರೆದಿರುವ ಸಾಧ್ಯತೆ ಇದೆ.
‘ಅಲ್ಲಮ-ಚೆನ್ನಬಸವರ ದೃಷ್ಟಿ’ ಎಂಬ ಐದನೆಯ ಅಧ್ಯಾಯದಲ್ಲಿ ಈ ಇಬ್ಬರು ಮಹಾಶರಣರ ದೃಷ್ಟಿಯಲ್ಲಿ ದೇವಾಲಯ ಅಥವಾ ಸ್ಥಾವರ-ಜಂಗಮದ ಪರಿಕಲ್ಪನೆ ಏನಾಗಿತ್ತು? ಎಂಬುದನ್ನು ಕುರಿತು ಡಾ. ರುಮಾಲೆ ಅವರು ಸುದೀರ್ಘವಾಗಿ ಚರ್ಚಿಸಿ- “ಎರಡು ಹಂತದಲ್ಲಿ ಈ ವರೆಗೆ ಗಮನಿಸಿದ ವಚನಗಳಲ್ಲಿ ‘ಸ್ಥಾವರ-ಜಂಗಮ’ಗಳ ಮತ್ತು ‘ದೇಹವು ದೇಗುಲ’ವಾಗಬೇಕು ಎಂಬುವುಗಳು ಪ್ರತ್ಯೇಕ ಗತಿಯಲ್ಲಿ ಕಾಣಿಸಿಕೊಂಡಿವೆ” (ಪು. ೭೩) ಎಂದು ಹೇಳುತ್ತಾರೆ.
‘ಸಿದ್ಧರಾಮ ಮತ್ತು ಇತರ ಶರಣರ ವಿಚಾರ’ ಎಂಬ ಆರನೆಯ ಅಧ್ಯಾಯದಲ್ಲಿಯೂ ಸ್ಥಾವರ-ಜಂಗಮ, ದೇಹ-ದೇಗುಲ ತತ್ವದ ಮೀಮಾಂಸೆಯನ್ನು ಆಯಾ ಶರಣರ ವಚನಗಳ ಉಲ್ಲೇಖದೊಂದಿಗೆ ಗುರುತಿಸಿದ್ದಾರೆ. “೧೨ನೇ ಶತಮಾನದ ಶಿವಶರಣರ ವಚನಗಳು ‘ಉಳ್ಳವರ ಶಿವಾಲಯ ಮತ್ತು ದೇಹ ದೇಗುಲ’ ಎಂಬ ಮಾಡುವ ಮತ್ತು ಆಗುವ ಎರಡು ಆನುಭಾವಿಕ ಕ್ರಿಯೆಗಳನ್ನು ಸ್ವರೂಪ, ವಿನ್ಯಾಸ ಮತ್ತು ಆಕಾರಗಳಲ್ಲಿ ವಚನಗಳು ಭಿನ್ನವೆನಿಸಿದರೂ ಆಶಯ ಮಾತ್ರ ಒಂದೇ ಕೇಂದ್ರದಲ್ಲಿ ನಿಲ್ಲುತ್ತವೆ ಎಂಬುದನ್ನು ಗಮನಿಸಬಹುದು” (ಪು. ೭೭) ಮಹಾಮಂತ್ರಿಯಾಗಿದ್ದ ಬಸವಣ್ಣನವರು ನಾನು ಬಡವನಯ್ಯ ಎಂದು ಹೇಳುವುದು ವ್ಯವಹಾರಿಕ ಅರ್ಥದಲ್ಲಿ ಅಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರೆ ಇಡೀ ವಚನದ ಆನುಭಾವಿಕ ಹಿನ್ನೆಲೆ ಅರ್ಥವಾಗುತ್ತದೆ.
‘ಬಸವೋತ್ತರ ಕಾಲದಲ್ಲಿ’ ಎಂಬ ಏಳನೆಯ ಅಧ್ಯಾಯದಲ್ಲಿ ಬಸವೋತ್ತರ ಯುಗದ ಪ್ರಮುಖ ವಚನಕಾರರಾದ ಕಾಡಸಿದ್ಧೇಶ್ವರ, ತೋಂಟದ ಸಿದ್ಧಲಿಂಗೇಶ್ವರ, ಹೇಮಗಲ್ಲ ಹಂಪ, ಷಣ್ಮುಖ ಶಿವಯೋಗಿ ಮೊದಲಾದವರ ವಚನಗಳಲ್ಲಿ ಅಡಕವಾಗಿರುವ ಸ್ಥಾವರ-ಜಂಗಮ, ಉಳ್ಳವರು-ದೇಹವೇ ದೇಗುಲ ತಾತ್ವಿಕ ವಿಚಾರಗಳನ್ನು ತಿಳಿಸಿದ್ದಾರೆ.
‘ಉಳ್ಳವರು : ಆಧುನಿಕ ಅನುಸಂಧಾನ’ ಎಂಬ ಎಂಟನೆಯ ಅಧ್ಯಾಯ ಕೃತಿಯ ಮೂಲ ವಸ್ತುವಾಗಿದೆ. ಆಧುನಿಕ ಕಾಲಘಟ್ಟದ ಕನ್ನಡದ ಬಹುಶ್ರುತ ವಿದ್ವಾಂಸರು ಈ ವಚನವನ್ನು ಕುರಿತು ಮಾಡಿದ ಅನುಸಂಧಾನದ ವಿವರಗಳನ್ನು ದಾಖಲಿಸುವುದರ ಜೊತೆಗೆ, ಅವುಗಳಿಗೆ ಸೂಕ್ತವಾದ ವಿಮರ್ಶಾತ್ಮಕವಾದ ಟಿಪ್ಪಣಿಯನ್ನು ಲೇಖಕರು ಬರೆದಿರುವುದು ಕೃತಿಯ ಮೌಲಿಕತೆಗೆ ಸಾಕ್ಷಿಯಾಗಿದೆ.
೧೯೮೧ರಿಂದ ೨೦೨೫ರವರೆಗೆ ಕನ್ನಡದ ಅನೇಕ ಲೇಖಕರು ಈ ವಚನವನ್ನು ಆಯಾ ಆಯಾ ಸಂದರ್ಭದಲ್ಲಿ ತಾವು ಪರಿಭಾವಿಸಿದಂತೆ ವ್ಯಾಖ್ಯಾನಿಸಿದ್ದು-ವಿಶ್ಲೇಷಿಸಿದ್ದು ಕಂಡು ಬರುತ್ತದೆ. ಡಾ. ಎಂ. ಚಿದಾನಂದಮೂರ್ತಿಯವರು ನಾಲ್ಕೈದು ಬೇರೆ ಬೇರೆ ಗ್ರಂಥಗಳಲ್ಲಿ ಈ ವಚನವನ್ನು ಕುರಿತು ಬೇರೆ ಬೇರೆ ಆಯಾಮಗಳಲ್ಲಿಯೇ ಚಿಂತನೆ ಮಾಡಿದ್ದಾರೆ. ಡಾ. ತಿಪ್ಪೇರುದ್ರಸ್ವಾಮಿ, ಡಾ. ಎಂ. ಎಂ.ಕಲಬುರ್ಗಿ ಮೊದಲಾದ ಕೆಲವು ವಿದ್ವಾಂಸರು ಕೂಡ ಮೂರು ನಾಲ್ಕು ಸಂದರ್ಭದಲ್ಲಿ ಈ ವಚನದ ಸಾಲುಗಳನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಡಾ. ತಿಪ್ಪೇರುದ್ರಸ್ವಾಮಿ ಅವರು ‘ಶರಣರ ಅನುಭಾವ ಸಾಹಿತ್ಯ’, ‘ಕರ್ಣಾಟಕ ಶರಣ ಕಥಾಮೃತ’ ಕೃತಿಗಳಲ್ಲಿ ನೀಡಿದ ವಿಶ್ಲೇಷಣೆ ಕುರಿತು ಡಾ. ರುಮಾಲೆ ಅವರು “ಇಲ್ಲಿಯೂ ಮೂರು ಪ್ರತಿಕ್ರಿಯೆಗಳು ವಚನದ ಆಶಯದ ಹೊರಗೇ ಇವೆ!” (ಪು. ೧೧೧) ಎಂದು ಹೇಳುತ್ತಾರೆ.
ಡಾ. ಎಂ. ಎಂ. ಕಲಬುರ್ಗಿ ಅವರು ತಮ್ಮ ಶಾಸನಗಳಲ್ಲಿ ಶಿವಶರಣರು ಕೃತಿಯಲ್ಲಿ ಈ ವಚನದ ಸಾಲುಗಳನ್ನು ಹೇಳುತ್ತ ಈ ವಚನದ ಸಾಲುಗಳನ್ನು ‘ನಂಬಿ ದೇವಾಲಯ ನಿರ್ಮಾಣ ಕಾರ್ಯವನ್ನು ಬಿಟ್ಟುಕೊಟ್ಟರು. ಹೀಗಾಗಿ ಈ ಎರಡು ಸಂದರ್ಭಗಳಲ್ಲಿ ಹುಟ್ಟಬೇಕಾದ ಧಾರ್ಮಿಕ ಶಾಸನಗಳ ಬರವಣಿಗೆ ವೀರಶೈವರ ಮಟ್ಟಿಗೆ ನಿಂತೇ ಹೋಯಿತು” (ಪು. ೧೭೪) ಎಂಬ ಅಭಿಪ್ರಾಯಕ್ಕೆ ಡಾ. ರುಮಾಲೆ ಅವರು ಟಿಪ್ಪಣಿ ಬರೆಯುತ್ತ “ವೀರಶೈವ ಶಾಸನಗಳ ಸಂಖ್ಯೆ ಕಡಿಮೆಯಾಗುವುದಕ್ಕೂ ಪ್ರಸ್ತುತ ವಚನದ ಆಶಯಕ್ಕೂ ಬಹುಶಃ ಸಂಬಂಧವಿಲ್ಲ. ಯಾವುದೇ ಧರ್ಮ ತನ್ನ ವಿಚಾರಗಳನ್ನು ಸಾಮಾಜಿಕವಾಗಿ ಮತ್ತು ಸಾಹಿತ್ಯ ಕೃತಿಗಳ ಮೂಲಕ ಅಭಿವ್ಯಕ್ತಿಸುತ್ತದೆಯೇ ವಿನಾಃ ಬಹುಶಃ ಶಾಸನಗಳ ಮೂಲಕ ಅಲ್ಲ” ಎಂದು ಹೇಳಿರುವುದು ಡಾ. ರುಮಾಲೆ ಅವರ ವಿಮರ್ಶಾತ್ಮಕ ನಿಲುವಿಗೆ ನಿದರ್ಶನವಾಗಿದೆ.
ಎ.ಕೆ.ರಾಮಾನುಜನ್ ಅವರು ‘ಸ್ಪಿಕಿಂಗ್ ಆಫ್ ಶಿವ’ ಕೃತಿಯ ಮೂಲಕ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ವಚನ ಸಾಹಿತ್ಯದ ಅನುಸಂಧಾನಕ್ಕೆ ಕಾರಣರಾದವರು. ಅವರು ‘ಉಳ್ಳವರು….’ ವಚನವನ್ನೇ ಕೇಂದ್ರಭೂಮಿಕೆಯನ್ನಾಗಿ ಇಟ್ಟುಕೊಂಡು ವಿಸ್ತಾರವಾದ ಪ್ರಸ್ತಾವನೆಯನ್ನು ಬರೆದಿದ್ದಾರೆ. ಈ ಕುರಿತು ಡಾ. ರುಮಾಲೆ ಅವರು ನೀಡಿರುವ ಟಿಪ್ಪಣಿ ರೂಪದ ವಿಶ್ಲೇಷಣೆ ನಿಜಕ್ಕೂ ಗಮನಾರ್ಹವಾಗಿದೆ.
ಡಾ. ಜಿ. ಎಸ್. ಶಿವರುದ್ರಪ್ಪ, ಯು. ಆರ್. ಅನಂತಮೂರ್ತಿ, ಸಾ.ಶಿ.ಮರುಳಯ್ಯ, ಸಿ.ಪಿ.ಕೆ, ಬಸವರಾಜ ಕಲ್ಗುಡಿ, ಎಚ್. ದೇವೀರಪ್ಪ, ಕೆ.ಕೃಷ್ಣಮೂರ್ತಿ, ಪಿ.ಬಿ.ದೇಸಾಯಿ, ಕೀರ್ತಿನಾಥ ಕುರ್ತಕೋಟಿ, ದ.ರಾ.ಬೇಂದ್ರೆ, ಶಂಕರ ಮೊಕಾಶಿ ಪುಣೇಕರ್, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿ.ವಿ.ಪ್ರಭುಸ್ವಾಮಿಮಠ, ಗಿರಡ್ಡಿ ಗೋವಿಂದರಾಜು, ಡಿ.ಆರ್.ನಾಗರಾಜ, ಚೆನ್ನವೀರ ಕಣವಿ, ಜಾನ್ ಪೀಟರ್ ಶೌಟನ್, ನಿಂಗಪ್ಪ ಮುದೇನೂರು ಮೊದಲಾದ ವಿದ್ವಾಂಸರ ವಿಚಾರಗಳನ್ನು ಪ್ರಾರಂಭದಲ್ಲಿ ನೀಡಿ, ಅವುಗಳಿಗೆ ಸೂಕ್ತವೆನ್ನಿಸುವ ಟಿಪ್ಪಣಿಗಳನ್ನು ಡಾ. ರುಮಾಲೆ ಅವರು ಬರೆದಿದ್ದಾರೆ. ಡಾ. ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯಕ್ಕೆ ಟಿಪ್ಪಣಿ ಬರೆಯುತ್ತ – “ದೇವಾಲಯ ನಿರಾಕರಣೆ ‘ಭಕ್ತಿಯ ಖಾಸಗೀಕರಣ’ ಎಂದು ಕರೆಯುತ್ತಿರುವುದು ಇದು ಇಂಥ ಪಲ್ಲಟಾವಸ್ಥೆಯನ್ನು ಪಡೆಯುತ್ತಿರುವುದರೊಂದಿಗೆ ಮತ್ತೊಂದು ಬಗೆಯ ‘ಭಕ್ತಿಯ ಕೇಂದ್ರೀಕರಣ’ವನ್ನು ಮಾಡಿದಂತಾಗಿದೆ ಎಂಬುದು ಅತಿರೇಕದ ಗ್ರಹಿಕೆಯಾಗಿದೆ” (ಪು. ೨೯೮) ಎಂಬ ಸ್ಪಷ್ಟವಾದ ಅಭಿಪ್ರಾಯವನ್ನು ಡಾ. ರುಮಾಲೆಯವರು ವ್ಯಕ್ತಪಡಿಸಿದ್ದಾರೆ.
ಜಂಗಮ ಎಂಬ ಶಬ್ದಕ್ಕೆ ಶಬ್ದಕೋಶದ ಪ್ರಕಾರ ಎಂಟು ಅರ್ಥಗಳಿವೆ. ವಚನಕಾರರು ಯಾವ ಸಂದರ್ಭದಲ್ಲಿ ಯಾವ ಅರ್ಥವನ್ನು ಮನಸ್ಸಿನಲ್ಲಿಟ್ಟುಕೊಂಡು ವಚನಗಳನ್ನು ಬರೆದಿದ್ದಾರೆ ಎಂದು ಗುರುತಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಆದರೆ ಆಧುನಿಕ ವಿದ್ವಾಂಸರು ‘ಜಂಗಮ’ ಎಂಬುದಕ್ಕೆ ‘ಸಮಾಜ’ ಎಂಬ ಅರ್ಥವನ್ನೂ ನೀಡಿದ್ದಾರೆ. ಈ ಕುರಿತು ಕೆಲವು ಮಹತ್ವದ ವಿಚಾರಗಳು ಈ ಕೃತಿಯಲ್ಲಿವೆ.
ಆಧುನಿಕ ಕಾಲಘಟ್ಟದ ಅನೇಕ ವಿದ್ವಾಂಸರು ಮಾರ್ಕ್ಸ ವಿಚಾರಧಾರೆಯಿಂದ ಪ್ರೇರಿತರಾಗಿರುವುದರಿಂದ, ಅವರೆಲ್ಲ ಈ ವಚನದ ಆಶಯವನ್ನು ಬಸವಣ್ಣನವರು ಗುಡಿ ಸಂಸ್ಕೃತಿಯನ್ನು ನಿರಾಕರಿಸಿದರು ಎಂಬ ಭಾವದಲ್ಲಿಯೇ ಬರೆದಿದ್ದಾರೆ. ಇವರೆಲ್ಲರ ಚಿಂತನೆಗಳಿಗೆ ಟಿಪ್ಪಣಿ ಬರೆದ ಡಾ. ರುಮಾಲೆ ಅವರು ಅವರ ವಾದಗಳನ್ನು ನಿರಾಕರಿಸುವುದರ ಜೊತೆಗೆ, ಈ ವಚನವು ಹೇಗೆ ಆನುಭಾವಿಕ ಸ್ತರದಲ್ಲಿ ಮೂಡಿ ಬಂದಿದೆ, ಮತ್ತು ಅದರ ನಿಜವಾದ ಅರ್ಥವ್ಯಾಪ್ತಿಯನ್ನು ಏನು ಎಂಬುದನ್ನು ತುಂಬ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
ಬಸವಣ್ಣನವರ ಒಂದು ವಚನವನ್ನು ಇಷ್ಟು ವ್ಯಾಪಕವಾಗಿ ವಿಸ್ತೃತವಾದ ಪರಿಪ್ರಮಾಣದಲ್ಲಿ ವಿಶ್ಲೇಷಣೆ ಅನುಸಂಧಾನ ಮಾಡಿರುವುದು ನಿಜಕ್ಕೂ ಆಶ್ರ್ಯಕರ ಸಂಗತಿ. ವಚನಗಳ ನಿಜವಾದ ಅಂತಃಸತ್ವವೇನು? ಎಂಬುದನ್ನು ಅರಿಯಲು ಇಂತಹ ಅಧ್ಯಯನಗಳು ತುಂಬ ಸಹಕಾರಿಯಾಗುತ್ತದೆ. ಹೀಗಾಗಿ ಡಾ. ರುಮಾಲೆ ಅವರ ಈ ಪ್ರಯತ್ನ ಅತ್ಯಂತ ಮಹತ್ವದ್ದಾಗಿದೆ. ಡಾ. ರುಮಾಲೆ ಅವರ ವಿಚಾರಗಳನ್ನು ಒಪ್ಪುವುದು ಬಿಡುವುದು ನಂತರದ ವಿಷಯ. ಆದರೆ ಅವರು ಮೂಲ ಪಠ್ಯವನ್ನು ನೀಡಿ, ಅದರ ನಿಜವಾದ ಆಂತರ್ಯವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದ್ದಾರೆಂಬುದನ್ನು ಮನಗಾಣಬಹುದು.
ಬಸವಣ್ಣನವರು ಯಾವುದೇ ಕ್ಲಿಷ್ಟವಾದ ತಾತ್ವ್ವಿಕ ಪರಿಭಾಷೆಯ ಮೂಲಕ ತಮ್ಮ ವಿಚಾರವನ್ನು ಮಂಡಿಸುವುದಿಲ್ಲ. ಸಾಮಾನ್ಯ ಮನುಷ್ಯನ ದಿನನಿತ್ಯದ ಅನುಭವಕ್ಕೆ ಹತ್ತಿರವಾದ “ಶಿವಾಲಯ”, “ಕಾಲು”, “ದೇಹ”, “ಶಿರ” ಮೊದಲಾದ ಪರಿಚಿತ ರೂಪಕಗಳ ಮೂಲಕ ಅವರು ಅತ್ಯಂತ ಗಹನವಾದ ತತ್ವವನ್ನು ಪ್ರತಿಪಾದಿಸುತ್ತಾರೆ. ಹೊರಗಡೆ ನಿರ್ಮಿಸುವ ದೇವಾಲಯಕ್ಕಿಂತ ಮನುಷ್ಯನ ದೇಹವೇ ದೇವಾಲಯ; ಹೊರಗಿನ ಕಲ್ಲಿನ ವಿಗ್ರಹಕ್ಕಿಂತ ಜೀವಂತ ಮನುಷ್ಯನ ಅಂತರಂಗವೇ ಶಿವನ ಸನ್ನಿಧಿ ಎಂಬ ಪರಿಕಲ್ಪನೆಯನ್ನು ಅವರು ಮುಂದಿಡುತ್ತಾರೆ. ಹೀಗಾಗಿ ಈ ವಚನವು ಕೇವಲ ದೇವಾಲಯ ನಿರ್ಮಾಣದ ಕುರಿತಾದ ಹೇಳಿಕೆಯಲ್ಲ; ಅದು ದೇವರು, ದೇಹ, ಆತ್ಮ, ಸಮಾಜ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಪುನರ್ನಿರ್ವಚಿಸುವ ಮಹತ್ವದ ತತ್ವಚಿಂತನೆಯಾಗಿದೆ.
“ದೇಹವೇ ದೇಗುಲ” ಎಂಬ ಮಾತು ವಚನದ ಕೇಂದ್ರತತ್ವ. ದೇಹವನ್ನು ನಿರಾಕರಿಸಿ ಆತ್ಮವನ್ನು ಹುಡುಕುವ ಪರಂಪರೆಯ ಬದಲು, ದೇಹದೊಳಗೇ ಆತ್ಮಾನುಭವವನ್ನು ಕಾಣುವ ದೃಷ್ಟಿ ಇಲ್ಲಿ ವ್ಯಕ್ತವಾಗುತ್ತದೆ. ದೇಹವು ಮಣ್ಣಿನ ಪಾತ್ರೆಯಲ್ಲ; ಅದು ಶಿವಚೈತನ್ಯದ ಮಂದಿರ. ಆದ್ದರಿಂದ ದೇಹದ ಗೌರವ, ಶ್ರಮದ ಗೌರವ, ಬದುಕಿನ ಗೌರವ ಮತ್ತು ಮಾನವೀಯ ಘನತೆಯ ಗೌರವ ಎಲ್ಲವೂ ಒಂದೇ ತತ್ವದ ವಿಭಿನ್ನ ರೂಪಗಳಾಗುತ್ತವೆ. ಮನುಷ್ಯನನ್ನು ಹೀನವಾಗಿ ನೋಡುವುದು, ಅವನ ದೇಹವನ್ನು ಜಾತಿಯ ಆಧಾರದ ಮೇಲೆ ಅಳೆಯುವುದು ಅಥವಾ ಅವನ ಕಾಯಕವನ್ನು ಕೀಳಾಗಿ ಪರಿಗಣಿಸುವುದು ಈ ತತ್ವದ ಮೂಲಭಾವನೆಗೆ ವಿರುದ್ಧವಾಗುತ್ತದೆ.
ಇಲ್ಲಿಯೇ ಈ ವಚನದ ಸಮಕಾಲೀನ ಪ್ರಸ್ತುತತೆ ಅತ್ಯಂತ ಸ್ಪಷ್ಟವಾಗುತ್ತದೆ. ಇಂದಿನ ಸಮಾಜವು ವೈಜ್ಞಾನಿಕವಾಗಿ ಮತ್ತು ತಂತ್ರಜ್ಞಾನದಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿದ್ದರೂ, ಮನುಷ್ಯನನ್ನು ಜಾತಿ, ವರ್ಗ, ಆರ್ಥಿಕ ಸ್ಥಿತಿ, ವೃತ್ತಿ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ಅಳೆಯುವ ಮನೋಭಾವ ಸಂಪೂರ್ಣವಾಗಿ ಮಾಯವಾಗಿಲ್ಲ. ಒಂದು ಕಡೆ ಭವ್ಯವಾದ ದೇವಾಲಯಗಳು ನಿರ್ಮಾಣವಾಗುತ್ತಿವೆ; ಮತ್ತೊಂದೆಡೆ ಹಸಿವು, ಬಡತನ, ಅಸಮಾನತೆ, ಅನ್ಯಾಯ ಮತ್ತು ಸಾಮಾಜಿಕ ಬಹಿಷ್ಕಾರ ಇನ್ನೂ ಮನುಷ್ಯನ ಬದುಕನ್ನು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ “ದೇಹವೇ ದೇಗುಲ” ಎಂಬ ಬಸವಣ್ಣನವರ ಸಂದೇಶವು ದೇವಾಲಯದ ಮಹತ್ವವನ್ನು ನಿರಾಕರಿಸುವುದಕ್ಕಿಂತ ಮನುಷ್ಯನ ಮಹತ್ವವನ್ನು ಮರೆಯಬಾರದು ಎಂದು ಎಚ್ಚರಿಸುತ್ತದೆ.
ಒಂದು ವಚನ ತನ್ನ ಕಾಲದ ಸಮಸ್ಯೆಗೆ ಮಾತ್ರ ಉತ್ತರ ನೀಡಿದರೆ ಅದು ಐತಿಹಾಸಿಕ ದಾಖಲೆ ಆಗಬಹುದು; ಆದರೆ ಹಲವು ಶತಮಾನಗಳ ನಂತರವೂ ಹೊಸ ಪ್ರಶ್ನೆಗಳನ್ನು ಹುಟ್ಟಿಸಿ, ಹೊಸ ಉತ್ತರಗಳನ್ನು ಹುಡುಕಲು ಪ್ರೇರೇಪಿಸಿದರೆ ಅದು ಶಾಶ್ವತ ಸಾಹಿತ್ಯವಾಗುತ್ತದೆ. ಬಸವಣ್ಣನವರ ಈ ವಚನವೂ ಅಂತಹ ಶಾಶ್ವತ ಕೃತಿಗಳ ಸಾಲಿಗೆ ಸೇರುತ್ತದೆ. ಅದರ ಅರ್ಥ ಕಾಲದೊಂದಿಗೆ ಮುಗಿದುಹೋಗುವುದಿಲ್ಲ; ಬದಲಾಗಿ ಕಾಲ ಬದಲಾಗುತ್ತಿದ್ದಂತೆ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತದೆ.
ಒಟ್ಟಾರೆ, ಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು…’ ಎಂಬ ಒಂದು ವಚನವನ್ನು ಆಧುನಿಕ ಕಾಲಘಟ್ಟದಲ್ಲಿ ನೂರಾರು ಜನ ವಿದ್ವಾಂಸರು ಧಾರ್ಮಿಕ-ಆಧ್ಯಾತ್ಮಿಕ-ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಪರಿಪ್ರಮಾಣದಲ್ಲಿ ಉದಾಹರಣೆಗಳು ಇಲ್ಲ. ನವೋದಯ-ನವ್ಯ-ದಲಿತ ಬಂಡಾಯ ಎಲ್ಲ ಸಾಹಿತ್ಯಿಕ ನೆಲೆಯಲ್ಲಿ ಈ ವಚನವು ಬಹುಚರ್ಚಿತವಾಗಿರುವುದು ಅದರ ಬಹುಮುಖ ಆಯಾಮಕ್ಕೆ ಸಾಕ್ಷಿಯಾಗಿದೆ. ಇಂತಹ ಅಮೂಲ್ಯ ಚಿಂತನೆಗಳನ್ನು ವರ್ತಮಾನದ ಪರಿಪ್ರೇಕ್ಷö್ಯದಲ್ಲಿಟ್ಟು ನೋಡುವ ಒಂದು ಅಭೂತಪೂರ್ವ ಚಿಂತನಾಕ್ರಮವನ್ನು ಡಾ. ಮೃತ್ಯುಂಜಯ ರುಮಾಲೆ ಅವರು ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ.
ಡಾ. ರುಮಾಲೆ ಅವರು ಈ ವಚನಾನುಸಂಧಾನದ ಕ್ರಿಯೆಯನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಕಳೆದ ವರ್ಷ ಅವರ ಬದುಕಿನ ಒಂದು ಭಾಗವಾಗಿದ್ದ ಶ್ರೀಮತಿ ವಿದ್ಯಾ ಮೆಡಂ ಅವರ ಆಕಸ್ಮಿಕ ಅಗಲುವಿಕೆಯಿಂದ ಡಾ. ರುಮಾಲೆ ಗುರುಗಳು ಅಕ್ಷರಶಃ ವಿಷಾದಯೋಗದ ಅವಸ್ಥೆಯಲ್ಲಿದ್ದರು. ಆ ನೋವಿನಿಂದ ಹೊರಬರಲು ಈ ಕೃತಿಯನ್ನು ಪೂರ್ಣಗೊಳಿಸಿ, ಕೃತಿಯನ್ನು ಅವರಿಗೆ ಅರ್ಪಣೆ ಮಾಡಿರುವುದು ಔಚಿತ್ಯಪೂರ್ಣವಾದುದು.
ಬಸವಣ್ಣನವರ ವಚನಗಳನ್ನು ಹಲವು ಆಯಾಮಗಳಲ್ಲಿ ಅಧ್ಯಯನ ಮಾಡಬೇಕೆನ್ನುವ ಅಧ್ಯಯನಾಸಕ್ತರಿಗೆ ಇದೊಂದು ಮಾದರಿ ಆಕರ ಕೈಪಿಡಿಯಾಗಿದೆ. ಮುಖ್ಯವಾಗಿ ಲಿಂಗಾಯತ ಧರ್ಮಾನುಯಾಯಿಗಳು ಇಂತಹ ಕೃತಿಗಳನ್ನು ಅವಶ್ಯವಾಗಿ ಓದಲೇಬೇಕು.
ಕೃತಿಯನ್ನು ರಚಿಸಿದ ಡಾ. ರುಮಾಲೆ ಅವರಿಗೆ ವಂದನೆ-ಅಭಿವಂದನೆಗಳು.
