ಮುರುಘಾ ಮಠದಲ್ಲಿ ಪುಟ್ಟರಾಜ, ಪಂಚಾಕ್ಷರಿ ಗವಾಯಿಗಳ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭಾವ ಶ್ರಾವಣ : ಶರಣರ ಚಿಂತನ ಮಾಲಿಕೆ

ಚಿತ್ರದುರ್ಗ:

ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಕರುನಾಡು ಕಂಡ ಧೀಮಂತ ಸಂಗೀತ ವಿದ್ವಾಂಸರು ಮತ್ತು ಶಿವಯೋಗಿಗಳು. ಸಂಗೀತ, ಸಾಹಿತ್ಯ ಹಾಗೂ ಆಧ್ಯಾತ್ಮ ಕ್ಷೇತ್ರದಲ್ಲಿ ಅವರು ತೋರಿದ ಸಾಧನೆ ಅಪ್ರತಿಮವಾದುದು.

ಗವಾಯಿಗಳು ಅಂಧತ್ವವನ್ನು ಒಂದು ಶಾಪವೆಂದು ಗ್ರಹಿಸದೆ, ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಬಹುದೆಂಬುದನ್ನು ಅಲ್ಲಗಳೆದು ಬಹುಮುಖಿ ಸಾಧನೆಗೈದವರು.

ಸಂಗೀತದ ಸಕಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ, ನವರಸಗಳನ್ನು ಮೇಳೈಸಿ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ಸಾಧಕರಾಗಿದ್ದಾರೆಂದು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಅನುಷಾ ಹೇಳಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಜೀವನ ಸಾಧನೆ ಹಾಗೂ ವ್ಯಕ್ತಿತ್ವ ಕುರಿತು ವಿಷಯಾವಲೋಕನ ಮಾಡುತ್ತಿದ್ದರು.

ಪುಟ್ಟರಾಜ ಗವಾಯಿಗಳು ಹಾವೇರಿ ಜಿಲ್ಲೆ ದೇವಗಿರಿಯ ರೇವಯ್ಯ ಮತ್ತು ಸಿದ್ದಮ್ಮ ದಂಪತಿಗಳ ಪುತ್ರರಾಗಿ ಮಾರ್ಚ್ ೩, ೧೯೧೪ರಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಪುಟ್ಟಯ್ಯ. ೬ ತಿಂಗಳ ಮಗುವಾಗಿದ್ದಾಗಲೇ ದೃಷ್ಟಿಯನ್ನು ಕಳೆದುಕೊಂಡರು. ೩ ವರ್ಷವಿದ್ದಾಗ ತಂದೆ ತಾಯಿ ಅಸುನೀಗಿದರು. ನಂತರ ಸೋದರ ಮಾವ ಚಂದ್ರಶೇಖರಯ್ಯ ೮ ವರ್ಷದವರೆಗೆ ಸಂಗೀತಾಭ್ಯಾಸವನ್ನು ನೀಡಿ ಸಲುಹಿದರು. ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಹಾಕಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮುಂಡರಗಿ ರಾಘವೇಂದ್ರಾಚಾರ್ ಬಳಿ ಮತ್ತು ಹಿಂದೂಸ್ತಾನಿ ಸಂಗೀತವನ್ನು ಪಂಚಾಕ್ಷರಿ ಗವಾಯಿಗಳಲ್ಲಿ ಅಭ್ಯಾಸ ನಡೆಸಿ, ಪಾಂಡಿತ್ಯವನ್ನು ಗಳಿಸಿ ಉಭಯ ಗಾಯನ ವಿಶಾರದ ಬಿರುದನ್ನು ಪಡೆಯುತ್ತಾರೆ.

ಸಂಗೀತದ ಜತೆಗೆ ಸಂಸ್ಕೃತ, ಹಿಂದಿ, ಕನ್ನಡ, ಛಂದಸ್ಸು, ಕೀರ್ತನೆಗಳನ್ನು ಬ್ರೇಲ್ ಲಿಪಿಯ ಮೂಲಕ ಕಲಿತರು. ಸಾರಂಗಿ, ಪಿಟೀಲು, ವೀಣೆ, ಮೆಂಡೋಲಿಯನ್, ಸರೋದ್, ತಬಲಾ, ಹಾರ್ಮೋನಿಯಂ, ಸಂತೂರ್, ಸಿತಾರ್ ಮತ್ತಿತರ ೧೨ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರಗನ್ನು ಹೆಚ್ಚಿಸುತ್ತಿದ್ದರು ಮತ್ತು ನವರಸಗಳನ್ನು ಮೇಳೈಸಿ ಪ್ರವಚನ ನೀಡುತ್ತ ಕೇಳುಗರನ್ನು ಬೆರಗುಗೊಳಿಸುತ್ತಾ ಸಕಲ ವಾದ್ಯ ಕಂಠೀರವ ಅಭಿದಾನಕ್ಕೆ ಪಾತ್ರರಾಗಿದ್ದರು.

೧೯೬೯ರಲ್ಲಿ ಪಂಚಾಕ್ಷರಿವಾಣಿ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಆಧ್ಯಾತ್ಮ, ಧರ್ಮ, ಇತಿಹಾಸ ಮತ್ತು ಶರಣರ ಕುರಿತಾಗಿ ೮೦ ಕೃತಿಗಳನ್ನು ರಚಿಸಿದ್ದಾರೆಂದರು.

ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಬಂದ ಪುಟ್ಟಯ್ಯನವರು, ಶ್ರೀ ಪಂಚಾಕ್ಷರಿ ಗುರುಗಳ ಆಶೀರ್ವಾದದಿಂದ ೧೯೪೪ರಲ್ಲಿ ನವಲಗುಂದದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಯಾಗಿ ನೇಮಕವಾಗಿ ಸಾಕಷ್ಟು ಸಾಮಾಜಿಕ ಕೈಂಕರ್ಯಗಳನ್ನು ಮಾಡಿದ್ದಾರೆ. ಅವರೆಂದೂ ವೈಯುಕ್ತಿಕ ಕೀರ್ತಿ ಬಯಸಿದವರಲ್ಲ. ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ್ದೆಲ್ಲವನ್ನು ಧಾರೆ ಎರೆದು, ಸ್ವತಂತ್ರವಾಗಿ ಬದುಕಲು ಆತ್ಮವಿಶ್ವಾಸ ತುಂಬಿದ್ದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ, ಪ್ರವಚನ, ಪುರಾಣ ಕಲೆಯನ್ನು ಕಲಿಸಿ ಅಂಧರ ಬಾಳಿಗೆ ಬೆಳಕಾದ ಪುಣ್ಯಚೇತನರು. ಕರ್ನಾಟಕ ಸೇರಿ ಹೊರರಾಜ್ಯಗಳಲ್ಲಿ ಸಂಚರಿಸಿ ಕನ್ನಡದ ಕೀರ್ತಿಯನ್ನು ಸಂಗೀತದ ಮೂಲಕ ಪಸರಿಸಿದ್ದಾರೆ.

ಕರ್ನಾಟಕ ವಿವಿಯ ಗೌರವ ಡಾಕ್ಟರೇಟ್, ತ್ರಿಭಾಷಾ ಕವಿರತ್ನ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕಾಳಿದಾಸ ಸಮ್ಮಾನ್ ಮತ್ತು ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರು ೧೭-೦೯-೨೦೧೦ರಂದು ಲಿಂಗೈಕ್ಯರಾದರು ಎಂದರು.

ಹಾಗೆಯೇ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕುರಿತು ಮಾತನಾಡುತ್ತ, ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕಾಡಶೆಟ್ಟಿಯಲ್ಲಿ ೨-೨-೧೮೯೨ರಲ್ಲಿ ಗುರುಪಾದಯ್ಯ ಮತ್ತು ನೀಲಮ್ಮ ದಂಪತಿ ಪುತ್ರರಾಗಿ ಜನಿಸಿದರು. ಇವರು ಮೈಸೂರಿನ ಗೌರಿಶಂಕರಸ್ವಾಮಿ ಅವರಿಂದ ಕರ್ನಾಟಕ ಸಂಗೀತವನ್ನು, ಉಸ್ತಾದ್ ಅಬ್ದುಲ್ ವಾಹಿದ್‌ಖಾನ್ ಮತ್ತು ನೀಲಕಂಠ ಬುವಾ ಬಳಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಸಿಸುತ್ತಾರೆ. ನಂತರ ಅಂಧ ಅನಾಥ ಮಕ್ಕಳಿಗೆ ಸಂಗೀತ ತರಬೇತಿ ನೀಡಲು ಆರಂಭಿಸಿದರು.

ಮುಂದೆ ಗದುಗಿನ ಬಸರೀಗಿಡದ ವೀರಪ್ಪನವರು ದಾನ ನೀಡಿದ ಜಾಗದಲ್ಲಿ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿ ಹಲವಾರು ಶಿಷ್ಯರನ್ನು ಬೆಳೆಸುತ್ತಾರೆ. ಗಾನವಿಶಾರದ, ಗಾನಕಲಾನಿಧಿ, ಸಂಗೀತ ಸಾಗರ, ಸಂಗೀತ ಸಾಮ್ರಾಟ್, ಉಭಯ ಗಾನಾಚರ‍್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶ್ರೀಗಳು ೧೯೪೪ ಜೂನ್ ೧೧ರಂದು ಲಿಂಗೈಕ್ಯರಾದರು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಸಾವಿರಾರು ಬದುಕುಗಳಿಗೆ ಕಣ್ಣಿಲ್ಲದ ವ್ಯಕ್ತಿ ಕಣ್ಣಾಗುತ್ತಾರೆಂದರೆ ಅವಿಸ್ಮರಣೀಯವಾದುದು. ಪುಟ್ಟರಾಜ ಗವಾಯಿಗಳು ಕಣ್ಣಿಲ್ಲದಿದ್ದರೂ ಒಂದು ಸಂಸ್ಥೆಯನ್ನು ಸುದೀರ್ಘ ಕಾಲ ಮುನ್ನಡೆಸಿದರು ಎಂದರೆ ಅದ್ಭುತ ಸಾಧನೆಯಲ್ಲವೆ. ೯೦ರ ದಶಕದಲ್ಲಿ ಯಾರ ಮನೆಗೂ ಹೋದರೂ ಪಂಚಾಕ್ಷರಿ ಗವಾಯಿಗಳ ಗಾಯನ ಕೇಳುತ್ತಿತ್ತು.

ಉತ್ತರ ಕರ್ನಾಟಕದಲ್ಲಿ ಗವಾಯಿಗಳೆಂದರೆ ಎಲ್ಲಿಲ್ಲದ ಭಕ್ತಿ. ಅಲ್ಲಿ ಇಂದಿಗೂ ಯಾವುದೇ ಕಾರ್ಯ ನಡೆದರೂ ತುಲಾಭಾರ ನಡೆಯುತ್ತದೆ. ಅದರಿಂದಲೇ ಸಂಸ್ಥೆ ನಡೆಯುತ್ತಿರುವುದು. ಅದರಂತೆ ಜಯದೇವ ಜಗದ್ಗುರುಗಳೂ ಸಹ ತನಗಾಗಿ ಬದುಕಿದವರಲ್ಲ. ಬಡವರಿಗಾಗಿ ಬಡಮಕ್ಕಳಿಗೋಸ್ಕರ ದುಡಿದಂತವರಾಗಿದ್ದಾರೆಂದು ಸ್ಮರಿಸಿದರು.

ಬಸವಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ಇವರಿಬ್ಬರು ಎರಡು ಕಣ್ಣುಗಳಿದ್ದಂತೆ. ಅವರು ಸಾಧಕರಾಗಲು ಕಾರಣ ತಮ್ಮ ಜೊತೆಯಲ್ಲಿ ನೂರಾರು ವಿಕಲಚೇತನ ಮಕ್ಕಳನ್ನು ಸಾಕಿ ವಿದ್ಯೆ ಕಲಿಸಿದವರು. ಪುಟ್ಟರಾಜ ಗವಾಯಿಗಳು ಮೊದಲಿಗೆ ವಚನವನ್ನು ಗಾಯನ ರೂಪದಲ್ಲಿ ಹೇಳಿದವರಾಗಿದ್ದಾರೆಂದು ನುಡಿದರು.

ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ತೋಟಪ್ಪ ಉತ್ತಂಗಿ ಅವರ ನಿರ್ದೇಶನದಲ್ಲಿ ನೂರಾರು ಮಹಿಳಾ ಪುರುಷ ಕಲಾವಿದರು ಈರ್ವ ಗವಾಯಿಗಳಿಂದ ಸಾಧನಾ ಪರವಾದ ಗೀತೆಗಳನ್ನು ಹಾಡಿ ನೆರೆದವರಿಗೆ ಭಕ್ತಿ ಭಾವಪರವಶರನ್ನಾಗಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ ವೇದಿಕೆಯಲ್ಲಿದ್ದರು. ವಿವಿಧ ಸಂಘಟನೆ ಸಮಾಜಗಳ ಪದಾಧಿಕಾರಿಗಳಾದ ಎಸ್. ವೀರೇಶ, ಸಿದ್ದಾಪುರದ ಮಲ್ಲಿಕಾರ್ಜುನಪ್ಪ, ಗಾಯತ್ರಿ ಶಿವರಾಂ, ಶಾರದಮ್ಮ ರುದ್ರಪ್ಪ, ಬೆಂಗಳೂರು ಆಕಾಶವಾಣಿಯ ಸಂಪತಕುಮಾರ, ಲೋಕೇಶ, ನಂದೀಶ, ಬಸವರಾಜ ಕಟ್ಟಿ, ಜ್ಞಾನಮೂರ್ತಿ ಟಿ.ಪಿ. ಮತ್ತಿತರರು ಭಾಗವಹಿಸಿದ್ದರು.

ಎಸ್.ಜೆ.ಎಂ. ಆಂಗ್ಲ ಮಾಧ್ಯಮಿಕ ಶಾಲೆಯವರ ನಿರ್ವಹಣೆಯಲ್ಲಿ ನಡೆದ ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವಿದ್ಯಾ ಸ್ವಾಗತಿಸಿದರು. ಮಾಲಾ ನಾಗರಾಜ ನಿರೂಪಿಸಿದರು. ಹೇಮಂತ್ ನಾಗರಾಜ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *