ಪ್ರಭುಲಿಂಗಲೀಲೆ: ಒಂದು ಸಮಗ್ರ ಚಿಂತನೆ 17
ಏನನೆಂಬೆನು ಬಸವನಾ
ಸುಜ್ಞಾನ ಸಿಂಹಾಸನವ ತನ್ನ
ಮಹಾನುಭಾವದ ಭಣತೆಯಂತೆ ಸಮಸ್ತವಿಧದಿಂದೆ
ತಾನು ನಿರ್ಮಿಸಿ ಬಳಿಕ ತನ್ನ
ಮನೋನುರಾಗದಲಮಳ ಹೃದಯ
ಧ್ಯಾನದಲಿ ನೆರೆ ನೆನೆವುತಿರ್ದನು ಗುರುಗುಹೇಶ್ವರನ
ಬಸವಣ್ಣ ಅನುಭವ ಮಂಟಪ ಸ್ಥಾಪಿಸುವ ಮೂಲಕ ನವ ಸಮಾಜ ವೊಂದನ್ನು ಹುಟ್ಟು ಹಾಕುವ ಆಶಯವನ್ನು ಹೊಂದಿದ್ದ. ಜಂಗಮಪ್ರಾಣಿ ಬಸವಣ್ಣನು ತನ್ನೊಳಗೆ ತಾನು ಸಾಧಿಸಿ ಕಂಡ ಮಹಾನುಭಾವದ ಭಣತೆಯನ್ನೇ ಹೊರಗೆ ಸಮದಂಡಿಯಾಗಿ ಕನಕ ಮರಕತಮುಖ್ಯಮಣಿ ಚಂದ್ರಕಾಂತ ಶಿಲೆ ಮುಂತಾದ ಸಲಕರಣೆಗಳಿಂದ, ಸಕಲರಿಗೂ ಗೋಚರಿಸುವಂತಹ ಶೂನ್ಯ ಸಿಂಹಾಸನವನ್ನು ನಿರ್ಮಿಸಿ, ತನ್ನ ಮನೋನುರಾಗದ ನಿರ್ಮಲ ಹೃದಯ ಧ್ಯಾನದಲ್ಲಿ ಗುರುಗುಹೇಶ್ವರನನ್ನು ಸ್ಮರಿಸುತ್ತಿರುತ್ತಾನೆ.
ಕವಿ ಚಾಮರಸನು ೧. ಬಸವೇಶ್ವರನು ಶೂನ್ಯಸಿಂಹಾಸನವನ್ನು ರಚಿಸಿದ ಗತಿ, ೨. ಪ್ರಭುದೇವರು ಶೂನ್ಯಸಿಂಹಾಸನವನ್ನೇರಿದ ಗತಿ, ೩. ಪ್ರಭುದೇವರು ಆರೋಗಣೆ ಮಾಡಿದ ಗತಿ. ಈ ಮೂರು ಗತಿಗಳಲ್ಲಿ ಬಸವಾದಿ ಭಕ್ತ ಗಣಂಗಳು ಶಿವಯೋಗ ಸಾಧನೆಯನ್ನು ಕೈಕೊಂಡು ಸ್ವಾನುಭಾವಿಗಳಾಗಿ ಸಾಧಿಸಿ ನಿಂತ ನಿಲವನ್ನು ಅಭಿವ್ಯಕ್ತಿಸುತ್ತಾನೆ. ಈ ಮೂರು ಗತಿಗಳು ಗಂಭೀರ ತತ್ವ ಸಿದ್ಧಾಂತ ಗಳನ್ನು ಸ್ವಾನುಭಾವದ ಮೇಲೆ ನಿರ್ಮಿಸಿದ್ದಾನೆ. ಕವಿ ಚಾಮರಸನ ವ್ಯಕ್ತಿತ್ವವನ್ನೂ ಅದರ ಮಹಂತ ನಿಲುವನ್ನೂ ಓದುಗರು ಅನುಭವಿಸಬಹುದು.
ಬಸವಣ್ಣನ ಆಧ್ಯಾತ್ಮಿಕ ಅನುಭವದ ಅಡಿಪಾಯದ ಮೇಲೆ ನಿರ್ಮಿತವಾದ ಭೌತಿಕ ಪೀಠವೇ ಶೂನ್ಯಸಿಂಹಾಸನ. ಈ ಮಹಾಪೀಠವನ್ನು ಕುರಿತು ‘ಶೂನ್ಯಪೀಠ’, ‘ಅಂಬರಾಸನ’, ‘ಮಹದರಿವಿನಂಬರಪೀಠ’, ‘ಸುಜ್ಞಾನ ಸಿಂಹಾಸನ’ ಎಂದು ಮುಂತಾಗಿ ಕರೆಯುತ್ತಾನೆ.
‘ಶೂನ್ಯಸಿಂಹಾಸನ’ಈ ಹೆಸರು ವಿಚಿತ್ರವಾಗಿ ತೋರುತ್ತದೆಯಲ್ಲವೆ? ಹಾಗಾದರೆ ಶೂನ್ಯವೆಂದರೇನು? ಶೂನ್ಯಸಿಂಹಾಸನ ಎಂತಹದು? ಈ ಪ್ರಶ್ನೆಗಳು ಏಳುವುದು ಸಹಜ. ಶೂನ್ಯವೆಂದರೆ ಏನೇನೂ ಇಲ್ಲದ ಅತ್ಯಂತ ಅಭಾವ ಸ್ಥಿತಿಯಲ್ಲ, ಶಿವಾನುಭಾವಿಗಳು ಹೇಳುವಂತೆ, ಸರ್ವವನ್ನು ಒಳಗೊಂಡು ‘ಏನೇನೂ ಇಲ್ಲವಾಗಿ ಇರುವ ಪೂರ್ಣ ನಿಲವೇ ಶೂನ್ಯ’. ಇದೇ ಬಯಲುಲಿಂಗ, ಸ್ಥಲ ಮುಂತಾದ ನಾಮಗಳಿಂದ ನಿರ್ದೇಶಿಸುತ್ತದೆ. ಬಸವಣ್ಣನು ಪರಿಶುದ್ಧವಾದ ‘ನಿಜಸಹಜಭಾವದ’ ಸಿಂಹಾಸನದ ಮೇಲೆ ತನ್ನ ಪರಮಗುರು ಅಲ್ಲಮನನ್ನು ಕುಳ್ಳಿರಿಸಲು ಬಯಸುತ್ತಾನೆ. ತನ್ನ ಅಂತರಂಗದ ಅನುಭಾವವನ್ನು ಅವಲಂಬಿಸಿ ಬಾಹ್ಯದಲ್ಲಿ ಸ್ವಾನುಭಾವವನ್ನು ಅಭಿವ್ಯಕ್ತಗೊಳಿಸುವ ಸಾಧನ ಸಲಕರಣೆಗಳನ್ನು ಒಡ್ಡಿ ಎಲ್ಲರು ಕಾಣುವಂತೆ ಶೂನ್ಯಸಿಂಹಾಸನವನ್ನು ರಚಿಸುತ್ತಾನೆ. ಸ್ವಾನುಭಾವದ ಆಧಾರದ ಮೇಲೆ ಬಸವಣ್ಣ ನಿರ್ಮಿಸಿದ ಶೂನ್ಯಸಿಂಹಾಸನದ ಹೊಳಹನ್ನು ತನ್ನ ಸುಜ್ಞಾನ ಚಕ್ಷುಗಳಿಂದ ಈಕ್ಷಿಸಿದ ಚಾಮರಸನು ತನ್ನ ಕಾವ್ಯದಲ್ಲಿ ಅದರ ವಿವರಗಳನ್ನು ಸಂಕೇತಗಳ ಮೂಲಕ ಬಿಡಿಬಿಡಿಯಾಗಿ ಬಿಡಿಸಿ ತೋರಿಸುತ್ತಾನೆ.
ಜಂಗಮಲಿಂಗ ಪ್ರಭುದೇವನು ಕಲ್ಯಾಣಕ್ಕೆ ಬರಬೇಕೆಂದು ಜಂಗಮಪ್ರಾಣಿ ಬಸವಣ್ಣ ಶೂನ್ಯಸಿಂಹಾಸನವನ್ನು ಸಿದ್ಧಪಡಿಸಿಕೊಂಡು ಒಂದಲ್ಲ, ಎರಡಲ್ಲ ಹನ್ನೆರಡು ಸಂವತ್ಸರಗಳ ದೀರ್ಘಕಾಲ ಕಾಯುತ್ತಾನೆ.
ಅನುಗೊಳಿಸಿದನು ಶೂನ್ಯಸಿಂಹಾ
ಸನವಿದೆಂದದಕಿಟ್ಟು ಹೆಸರನು
ವಿನುತ ಪಶ್ಚಿಮ ಮಾರ್ಗದಲಿ ತಾ ಕಂಡದೆಲ್ಲವನು
ಕನಕ ಮರಕತ ಮುಖ್ಯಮಣಿಗಳ
ಘನತರದ ಕೇವಣದಲಹರಿಯ
ವಿನುಗಿ ಮಿಸುಗುವ ವಿಮಲಪೀಠವ ಬಸವ ನಿರ್ಮಿಸಿದ
ಮಹಾಕವಿ ಚಾಮರಸನು ತನ್ನ ಪ್ರಭುಲಿಂಗಲೀಲೆಯಲ್ಲಿ ಬಸವಣ್ಣನವರು ಕಲ್ಯಾಣ ಪಟ್ಟಣದಲ್ಲಿ ಶೂನ್ಯಸಿಂಹಾಸನವನ್ನು ರಚಿಸಿದ ಸಂಗತಿಯನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿದ್ದಾನೆ. ಯಾವುದೇ ಒಂದು ಧರ್ಮದ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಗುರುತಿಸಲು ಬಹುತೇಕ ಧರ್ಮ ಪ್ರವರ್ತಕರು, ಪ್ರವಾದಿಗಳು ಆ ಧರ್ಮಕ್ಕೆ ಸಾಂಸ್ಥಿಕ ಸ್ವರೂಪವನ್ನು ನೀಡುತ್ತಾರೆ. ಸಾಂಸ್ಥೀಕರಣಗೊಂಡ ಪರಿಣಾಮವೇ ಭಾರತದಲ್ಲಿ ಹುಟ್ಟಿದ ಬಹುತೇಕ ಧರ್ಮಗಳು ಮಠ-ಆಶ್ರಮ-ಬಸದಿಗಳನ್ನು ನಿರ್ಮಿಸುವ ಕಾರ್ಯ ಮಾಡಿದವು. ಈ ಹಿನ್ನೆಲೆಯಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವೂ ಭವಿತವ್ಯದಲ್ಲಿ ಉಳಿಯಬೇಕಾದರೆ, ಅದಕ್ಕೊಂದು ಪೀಠದ ಅವಶ್ಯಕತೆ ಇದೆ ಎಂಬುದನ್ನು ಬಸವಣ್ಣನವರು ಮನಗಂಡು, ಶೂನ್ಯಸಿಂಹಾಸನ ಪೀಠವನ್ನು ರಚಿಸಿದರು. ತಾವೇ ರಚಿಸಿದ ಈ ಪೀಠಕ್ಕೆ ಯೋಗ್ಯ ವ್ಯಕ್ತಿಗಾಗಿ ಶೋಧಿಸತೊಡಗಿದರು. ಆಗಲೇ ಕಲ್ಯಾಣಪಟ್ಟಣದಲ್ಲಿ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರಿದ್ದರು. ಅವರಲ್ಲಿ ಯಾರಾದರೊಬ್ಬರು ಈ ಪೀಠವನ್ನು ಏರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.
ಒಂದು ದಿನ ಆಕಸ್ಮಿಕವಾಗಿ ಅಲ್ಲಮಪ್ರಭು ದೇವರು ಕಲ್ಯಾಣಕ್ಕೆ ಬಂದು ಆ ಶೂನ್ಯಸಿಂಹಾಸನವನ್ನು ನಿರ್ದೇಹಿಯಾದುದರಿಂದ ಸಹಜವಾಗಿ ಏರಿ ಬಿಡುತ್ತಾರೆ. ಇದನ್ನು ಬಸವಣ್ಣನವರು ನೋಡಿ ಬೆಚ್ಚಿ ಬೆರಗಾಗುತ್ತಾರೆ. ಸಹಜವಾಗಿಯೇ ಬಸವಣ್ಣನವರಿಗೆ ಸಿಟ್ಟು ಬರುತ್ತದೆ. ತಾವು ಪ್ರೀತಿಯಿಂದ ಸಿದ್ಧಪಡಿಸಿದ ಶೂನ್ಯಸಿಂಹಾಸನದ ಮೇಲೆ ಯಾರೋ ಗೊತ್ತಿಲ್ಲದ ವ್ಯಕ್ತಿ ತಟ್ಟನೆ ಏರಿ ಕುಳಿತುಕೊಂಡಾಗ ಚನ್ನಬಸವಣ್ಣನವರನ್ನು ಕರೆದು ಬಸವಣ್ಣನವರು ಹೇಳಿದ ವಚನ ಹೀಗಿದೆ :
ಬಡಗವಾಗಿಲ ಪೌಳಿಯ ಭರವಸದಿಂ ಪೊಕ್ಕು,
ಪಶ್ಚಿಮದ್ವಾರದ ಧವಳಾರಮಂ ಪಶ್ಚಿಮದಿ ಪೊಕ್ಕು,
ತ್ರಿವಿಧಗತಿಯ ಶೂನ್ಯಸಿಂಹಾಸನದ ಮೇಲೆ ತರಹರವಾದಡೆ
ನಂಬುವುದೆನ್ನ ಮನವು. ಕೂಡಲಸಂಗಮದೇವರು ಸಾಕ್ಷಿಯಾಗಿ.
ನೀನು ನಮ್ಮ ಕೋಪಿಸಿದಡೆ ಕೋಪಿಸು, ಚೆನ್ನಬಸವಣ್ಣಾ.
ಆದರೆ ಆರೋಗಣೆಗಾಗಿ ಬಂದಿದ್ದ ಜಂಗಮ ಸಮೂಹವೆಲ್ಲವೂ ಸಂತಾಪಗೊಂಡು ಬಸವಾಲಯದಿಂದ ಹಿಂದಿರುಗಿ ಹೋಗಿ ಬಿಡುತ್ತದೆ. ಆಗ ಮಹಾಮನೆಯಲ್ಲಿ ಆ ಜಂಗಮರಿಗೆಲ್ಲ ಸಿದ್ಧಪಡಿಸಿದ ಭಕ್ಷ್ಯಭೋಜ್ಯಗಳೆಲ್ಲವನ್ನು ಏನು ಮಾಡಬೇಕೆಂದು ಚಿಂತಿಸುತ್ತಿರುವಾಗಲೇ ಅಲ್ಲಮಪ್ರಭುದೇವರು ಆ ಎಲ್ಲ ಭಕ್ಷ್ಯಭೋಜ್ಯಗಳನ್ನು ತಾವೊಬ್ಬರೆ ಸೇವಿಸುತ್ತಾರೆ. ಮಹಾಮನೆಯ ದಾಸೋಹದಲ್ಲಿದ್ದ ಅಡುಗೆಯೆಲ್ಲ ಖಾಲಿಯಾದಾಗ ಅಲ್ಲಮರು ಇನ್ನಷ್ಟು ಬೇಕು ಎನ್ನುತ್ತಾರೆ.
ಉಳ್ಳವರು ಹಗೆಹ ತೆಗೆವನ್ನಕ್ಕರ,
ಇಲ್ಲದವರ ಹರಣ ಹೋಯಿತ್ತೆಂಬ ಗಾದೆ ಎನಗಾಯಿತ್ತು.
ಮಾತು ಬಣ್ಣಿಸಲು ಹೊತ್ತು ಹೋಯಿತ್ತಯ್ಯಾ.
ನಿನಗೆ ಅದೆ, ಹರಿನುಡಿಗೆ ಕಡೆಯಿಲ್ಲ.
ಒಬ್ಬರ ನೋಡುವಾಗ, ಅರುವತ್ತು ಮನುಷ್ಯರ
ನೋಡುವ ಹಾಂಗೆ ಆಗುತ್ತಿದೆ.
ಶೂನ್ಯಸಿಂಹಾಸನ ಬವರಿಗೊಡುತ್ತಿದೆ.
ಪ್ರಾಣ ಹೆಡೆತಲೆಯಲ್ಲಿ ಹೋಗುತ್ತಿದೆ.
ಗುಹೇಶ್ವರ ಹಸಿದನು, ಪದಾರ್ಥವ
ನೀಡಯ್ಯಾ ಸಂಗನಬಸವಣ್ಣಾ.
ಅಲ್ಲಮಪ್ರಭುದೇವರು ಶೂನ್ಯಸಿಂಹಾಸನದ ಉಲ್ಲೇಖವನ್ನು ಈ ವಚನದಲ್ಲಿ ಮಾಡುವ ಮೂಲಕ ಅದರ ಐತಿಹಾಸಿಕತೆಗೆ ದಾಖಲೆ ಒದಗಿಸಿದ್ದಾರೆ. ಈಗ ಹೊಟ್ಟೆ ಹಸಿಯುತ್ತಿದೆ, ಪದಾರ್ಥ ನೀಡು ಎಂದು ಮತ್ತೆ ಮತ್ತೆ ಪ್ರಭುದೇವರು ಕೇಳುತ್ತಾರೆ. ಆಗ ಬಸವಣ್ಣನವರು ಏನು ಮಾಡಬೇಕೆಂದು ತೋಚದೆ ನಿಂತಾಗ, ಅಲ್ಲಿಗೆ ಚನ್ನಬಸವಣ್ಣನವರು ಬಂದು ಮಾವನಿಗೆ ಬುದ್ಧಿ ಹೇಳುತ್ತಾರೆ. ‘ನಾನು ನಿತ್ಯ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರಿಗೆ ಆರೋಗಣೆ ಮಾಡುತ್ತಿರುವೆ ಎಂಬ ಅಹಂಕಾರ ನಿನ್ನಲ್ಲಿ ಮೊಳೆದಿರುವುದರಿಂದ ಅಲ್ಲಮರು ನಿನ್ನನ್ನು ಪರೀಕ್ಷಿಸುತ್ತಿದ್ದಾರೆ. ನಿನ್ನ ಅಹಂಕಾರ ತ್ಯಾಗ ಮಾಡಿ, ಅವರಿಗೆ ಅರ್ಪಿಸಿಕೋ’ ಎಂದು ಚನ್ನಬಸವಣ್ಣನವರು ಹೇಳಿದಾಗ, ಬಸವಣ್ಣನವರು ಅಲ್ಲಮರ ಸನ್ನಿಧಿಗೆ ಹೋಗಿ ತಮ್ಮನ್ನೇ ಸಮರ್ಪಿಸಿಕೊಳ್ಳುತ್ತಾರೆ. ಆಗ ಅಲ್ಲಮಪ್ರಭುದೇವರು ಮಹಾತೃಪ್ತಿ ಆಯಿತ್ತೆಂದು ಸಂತೋಷದಿಂದ ಹೇಳುತ್ತಾರೆ. ಹೀಗೆ ಅಲ್ಲಮರು ಸ್ವೀಕರಿಸಿದ ಈ ಭೋಜನದ ಪರಿಣಾಮವಾಗಿ ಕಲ್ಯಾಣಪಟ್ಟಣದಲ್ಲಿದ್ದ ಎಲ್ಲ ಜಂಗಮರಿಗೂ ತೃಪ್ತಿ ಆಗುತ್ತದೆ.
ಬಸವಣ್ಣನವರು ತಾವೊಂದು ಶೂನ್ಯಸಿಂಹಾಸನ ಪೀಠವನ್ನು ರಚನೆ ಮಾಡಿದ್ದೇವೆ. ಅದರ ಅಧ್ಯಕ್ಷರು ತಾವೇ ಆಗಬೇಕೆಂದು ಮತ್ತೊಮ್ಮೆ ಅಲ್ಲಮರಲ್ಲಿ ವಿನಂತಿಸಿಕೊಳ್ಳುತ್ತಾರೆ. ಆಗ ಅಲ್ಲಮಪ್ರಭುದೇವರು ‘ಇಲ್ಲ ನಾನೀಗ ಲೋಕಸಂಚಾರಕ್ಕೆ ಹೊರಟಿರುವೆ. ನಾನು ಬರುವವರೆಗೂ ಚನ್ನಬಸವರಾಜದೇವರಿಂದ ಷಟ್ಸ್ಥಲ ಸಿದ್ಧಾಂತ, ಶಿವಾನುಭವಶಾಸ್ತçವನ್ನು ಅರಿತುಕೊಂಡು ನಿತ್ಯಮುಕ್ತರಾಗಿ’ ಎಂದು ಹೇಳಿ ಹೋಗಿ ಬಿಡುತ್ತಾರೆ. ಹೀಗೆ ಹೋದ ಅಲ್ಲಮರು ಮರಳಿ ಕಲ್ಯಾಣಕ್ಕೆ ಬರುವುದು ೧೨ ವರುಷಗಳ ತರುವಾಯ. ಚೋಳದೇಶದ ಕಂಚಿ ಕಾಳಹಸ್ತಿ, ಚಿದಂಬರ, ತಿರುವಣ್ಣಾಮಲೈ, ಅರುಣಾಚಲ, ಶ್ರೀಶೈಲ ಮೊದಲಾದ ಕಡೆ ಸಂಚರಿಸಿ, ಮರಳಿ ಕಲ್ಯಾಣಕ್ಕೆ ದಯಮಾಡಿಸುತ್ತಾರೆ.
ಇಷ್ಟು ದೀರ್ಘ ವರ್ಷಗಳ ನಂತರ ಮರಳಿ ಬಂದ ಅಲ್ಲಮ ಪ್ರಭುದೇವರು ಶೂನ್ಯಪೀಠ ಏರುವುದನ್ನು ಆಗಲೂ ಈಗಾಗಲೇ ಕಲ್ಯಾಣದಲ್ಲಿದ್ದ ಜಂಗಮ ಸಮೂಹ ಕೆಳವರ್ಗದ ಅಲ್ಲಮ ಶೂನ್ಯಪೀಠ ಆರೋಹಣ ಮಾಡುವುದನ್ನು ವಿರೋಧ ಮಾಡುತ್ತದೆ. ಹೀಗಿದ್ದೂ ಬಸವಣ್ಣನವರು ಅಲ್ಲಮರ ಮೇಲಿನ ನಿಷ್ಠೆಯಿಂದ ಅವರನ್ನೇ ಶೂನ್ಯಪೀಠದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ.
ಪ್ರಭುದೇವರು ಶೂನ್ಯಪೀಠದ ಅಧ್ಯಕ್ಷರಾಗಿ ಕೆಲವು ಕಾಲ ಕಲ್ಯಾಣದಲ್ಲಿದ್ದು, ನಂತರ ಕಲ್ಯಾಣದಲ್ಲಿ ಸಂಭವಿಸಬಹುದಾದ ಆಪತ್ತುಗಳನ್ನು ಗುರುತಿಸಿ, ಶೂನ್ಯಪೀಠದ ಅಧ್ಯಕ್ಷತೆಯನ್ನು ತ್ಯಾಗ ಮಾಡಿ, ಈ ಪೀಠಕ್ಕೆ ಚನ್ನಬಸವಣ್ಣನವರು ನನ್ನ ಉತ್ತರಾಧಿಕಾರಿ ಗಳಾಗಿ ಆಯ್ಕೆ ಆಗಲಿ ಎಂದು ಹಾರೈಸಿ, ಚನ್ನಬಸವಣ್ಣನವರಿಗೆ ಸುವರ್ಣ ಶೂನ್ಯಸಿಂಹಾಸನ, ಪ್ರಣವ ಶಿಖಾಶೈಲ, ಶಿವಾನುಭವ ಪುಸ್ತಕಗಳನ್ನು ಕೊಟ್ಟು ಆಶೀವರ್ದಿಸಿ, ಶ್ರೀಶೈಲದ ಕಡೆ ಪಯಣಿಸುತ್ತಾರೆ.
ಭವಿತವ್ಯದಲ್ಲಿ ಕಲ್ಯಾಣ ಪಟ್ಟಣ ಹಾಳಾಗುವುದನ್ನು ಗುರುತಿಸಿದ ಪ್ರಭುದೇವರು ಎಲ್ಲ ಗಣಂಗಳನ್ನು ಕರೆದು ಹೀಗೆ ಹೇಳುತ್ತಾರೆ:
ಅವಧಿ ಅಳಿಯಿತ್ತು ವ್ಯವಧಾನ ಉಳಿಯಿತ್ತು.
ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ.
ಕಲಿಯುಗದಲ್ಲಿ ಮುಂದೆ ಇರಬಾರದು
ನಿಜ ಶರಣಂಗೆ ನಡೆ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು.
ಉಳುಮೆಯಲ್ಲಿ ನಿಜವನೆಯ್ದು ನಡೆ ಚೆನ್ನಬಸವಣ್ಣಾ.
ಮಹವನೊಡಗೂಡು ಮಡಿವಾಳಯ್ಯ.
ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು
ನಿಜವನೆಯ್ದುವುದು ನಿರ್ವಯಲ ಸಮಾಧಿಯಲ್ಲಿ.
ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ!
ನಡೆಯಿರಿ ಕಾಯವೆರಸಿ ಕೈಲಾಸಕ್ಕೆ ಕಾಯಸಹಿತ ಎಯ್ದುವುದು.
ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು.
ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ.
ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ.
ಚನ್ನಬಸವಣ್ಣನವರು ಕಲ್ಯಾಣಪಟ್ಟಣದಲ್ಲಿ ಅಸ್ತಿತ್ವಕ್ಕೆ ಬಂದ ಶೂನ್ಯಪೀಠದ ಎರಡನೆಯ ಅಧಿಪತಿಗಳಾಗಿ ಆಯ್ಕೆಯಾಗುತ್ತಾರೆ. ಚನ್ನಬಸವಣ್ಣನವರು ಪೀಠದ ಕರ್ಣಧಾರತ್ವವನ್ನು ವಹಿಸಿಕೊಂಡ ತರುವಾಯ ನಿತ್ಯ ೧೨ ಸಾವಿರ ಷಟ್ಸ್ಥಲ ಮುಮುಕ್ಷುಗಳಿಗೆ ಶಿವಾನುಭವ ಶಾಸ್ತ್ರ ಬೋಧನೆಯನ್ನು ಮಾಡುತ್ತಾರೆ. ವಚನ ರಚನೆ ನಿರಂತರವಾಗಿ ನಡೆಯುತ್ತದೆ. ಹೀಗೆ ಶರಣರೆಲ್ಲ ಬರೆದ ವಚನಗಳನ್ನೆಲ್ಲ ಶಾಂತರಸ ಎಂಬ ಗ್ರಂಥಭಂಡಾರಿ ತನ್ನ ವಚನ ಭಂಡಾರಕ್ಕೆ ಸೇರಿಸುತ್ತ ಹೋಗುತ್ತಾರೆ.
ಕಲ್ಯಾಣ ಕ್ರಾಂತಿಯ ತರುವಾಯ ಈ ಶೂನ್ಯಸಿಂಹಾಸನವನ್ನು ಸಿದ್ಧರಾಮೇಶ್ವರರು ಸೊನ್ನಲಾಪುರಕ್ಕೆ ತೆಗೆದುಕೊಂಡು ಹೋದರು. ಮುಂದೆ ಶೂನ್ಯಸಿಂಹಾಸನ ಪರಂಪರೆಯು ‘ಪ್ರಭು ಸಂಪ್ರದಾಯ’ವೆಂದು ಮುಂದುವರಿಯಿತು. ಅದನ್ನೇ ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ‘ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗ’ವೆಂದು ಹೇಳುತ್ತಾನೆ. ಈ ಮಾರ್ಗ ಕ್ರಮಣದಲ್ಲಿ ಕಲ್ಯಾಣದಲ್ಲಿ ನಡೆದ ವಿಪ್ಲವ ಕಾರಣವಾಗಿ ಈ ಶೂನ್ಯಸಿಂಹಾಸನ ಒಂದು ರೀತಿಯಲ್ಲಿ ನೇಪಥ್ಯಕ್ಕೆ ಸೇರುತ್ತದೆ. ಆದರೆ ಈ ಪರಂಪರೆಯನ್ನು ನಿರಂಜನ ವಂಶರತ್ನಾಕರ ಹೀಗೆ ಹೇಳುತ್ತದೆ:
೧. ಅಲ್ಲಮಪ್ರಭು, ೨. ಚನ್ನಬಸವಣ್ಣ, ೩. ಸಿದ್ಧರಾಮೇಶ್ವರ, ೪. ಅನಾದಿ ಗಣನಾಥ, ೫. ಆದಿಗಣೇಶ್ವರ, ೬. ನಿರ್ಮಾಯ ಗಣೇಶ್ವರ, ೭. ನಿರಂಜನಸ್ವಾಮಿ, ೮. ಜ್ಞಾನಾನಂದ ಸ್ವಾಮಿ, ೯. ಆತ್ಮಗಣವರ, ೧೦. ಅಧ್ಯಾತ್ಮ ಗಣನಾಥ, ೧೧. ರುದ್ರಮುನಿಸ್ವಾಮಿ, ೧೨. ಬಸವಪ್ರಭು, ೧೩. ಆದಿಲಿಂಗಸ್ವಾಮಿ, ೧೪. ಚನ್ನವೀರ ಸ್ವಾಮಿ, ೧೫. ಗೋಸಲ ಸಿದ್ಧೇಶ್ವರ, ೧೬. ಶಂಕರಾಚಾರ್ಯ ಸ್ವಾಮಿ, ೧೭. ದಿವ್ಯಲಿಂಗೇಶ್ವರಸ್ವಾಮಿ, ೧೮. ಗೋಸಲ ಚನ್ನಬಸವೇಶ್ವರ, ೧೯. ತೋಂಟದ ಸಿದ್ಧಲಿಂಗೇಶ್ವರ ಹೀಗೆ ಪರಂಪರೆ ಮುಂದುವರೆಯುತ್ತದೆ.
ಇಲ್ಲಿ ಬರುವ ಅನಾದಿ ಗಣನಾಥರಿಂದ ಅಧ್ಯಾತ್ಮ ಗಣನಾಥ ವರೆಗಿನ ಹೆಸರುಗಳು ಬಗ್ಗೆ ಸಂಶೋಧಕರಿಗೆ ಸಂದೇಹವಿದೆ. ಏನೇ ಇರಲಿ, ಕಲ್ಯಾಣ ಕ್ರಾಂತಿಯ ತರುವಾಯ ಶೂನ್ಯಪೀಠ ಒಂದು ನೆಲೆಯಿಲ್ಲದೆ ಅಲ್ಲಲ್ಲಿ ತಿರುಗಾಡಿತು ಎಂಬುದು ಸತ್ಯ. ನಂತರ ೧೯ನೇ ಪೀಠಾಧಿಪತಿಯಾದ ತೋಂಟದ ಸಿದ್ಧಲಿಂಗೇಶ್ವರರು ಈ ಶೂನ್ಯಪೀಠಕ್ಕೊಂದು ಘನತೆ ಗೌರವ ತಂದುಕೊಟ್ಟರು. ಅಂತೆಯೆ ಅವರನ್ನು ದ್ವಿತೀಯ ಅಲ್ಲಮ ಎಂದು ಕರೆದರು. ಏಳು ನೂರೊಂದು ವಿರಕ್ತರ ಪಡೆಯನ್ನೇ ತೋಂಟದ ಸಿದ್ಧಲಿಂಗರು ನಿರ್ಮಾಣ ಮಾಡಿದರು. ತಮ್ಮ ಪ್ರೀತಿಯ ಶಿಷ್ಯ ಬೋಳಬಸವೇಶ್ವರ ದೇವರಿಗೆ ಶೂನ್ಯಪೀಠವನ್ನು ಒಪ್ಪಿಸಿ ನಿರ್ವಿಕಲ್ಪ ಸಮಾಧಿಸ್ಥರಾದರು.
ಬೋಳಬಸವೇಶ್ವರರ ತರುವಾಯ ಶೂನ್ಯಪೀಠಕ್ಕೆ ಗೂಳೂರು ಸಿದ್ಧವೀರಣ್ಣೊಡೆಯರು, ಉದ್ದನಾರ್ಯರು, ಹರಿಹರಸ್ವಾಮಿ, ಭಿಕ್ಷದ ಬಸವಲಿಂಗ ಸ್ವಾಮಿ, ಅರ್ಧನಾರೀಶ್ವರ ಸ್ವಾಮಿ, ಈಸೂರು ನಂದೀಶ್ವರಸ್ವಾಮಿ, ಉಗ್ಗದ ತೋಂಟದಾರ್ಯ, ಸದಾಶಿವದೇಶಿಕ, ಮಹಾಂತಸ್ವಾಮಿ, ತೋಂಟದ ಮಹಾಸ್ವಾಮಿ, ಮೃತ್ಯುಂಜಯ ಸ್ವಾಮಿ, ಸಿದ್ಧೇಶ್ವರ ಸ್ವಾಮಿ, ತೋಂಟದ ಸಿದ್ಧಲಿಂಗ ಸ್ವಾಮಿಗಳು, ತೋಂಟದ ಸಿದ್ಧರಾಮ ಸ್ವಾಮಿಗಳು ಅಧಿಪತಿಗಳಾಗಿ ಬರುತ್ತಾರೆ. ಹೀಗೆ ಗದುಗಿನ ತೋಂಟದಾರ್ಯ ಮಠದಲ್ಲಿ ೧೨ನೇ ಶತಮಾನದ ಬಸವಾದಿ ಶಿವಶರಣರು ಸ್ಥಾಪಿಸಿದ ಶೂನ್ಯಪೀಠವು ಮುಂದುವರೆದು ಬಂದಿದೆ. ಈ ಶೂನ್ಯಪೀಠದ ಪರಂಪರೆಯ ಇತಿಹಾಸವನ್ನು ಕುರಿತು ‘ನಿರಂಜನ ಜಂಗಮ ವಂಶ ದರ್ಪಣ’ ಎಂಬ ಕೃತಿಯಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ. ಹೀಗಾಗಿ ಗದುಗಿನ ತೋಂಟದಾರ್ಯ ಮಠವೇ ೧೨ನೇ ಶತಮಾನದ ಶೂನ್ಯಪೀಠವೆಂದು ಖ್ಯಾತ ವಿದ್ವಾಂಸರಾದ ಡಾ. ಸಿ.ಪಿ.ಕೆ. ಮತ್ತು ಡಾ. ಎಂ. ಎಂ. ಕಲಬುರ್ಗಿ ಅವರು ಸಂಪಾದಿಸಿದ ‘ಷಟ್ಸ್ಥಲ ಶಿವಾಯಣ’ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಶೂನ್ಯಪೀಠದ ಇತಿಹಾಸವನ್ನು ಹೇಳುವ ಕೃತಿಗಳೆಂದು ಈಗ ತಿಳಿಯುವ ‘ನಿರಂಜನ ವಂಶರತ್ನಾಕರ’ ೧೯ನೇ ಶತಮಾನದಲ್ಲಿ ಹುಟ್ಟಿದ ಒಂದು ಕೃತ್ರಿಮ ಗ್ರಂಥ. ಈ ಗ್ರಂಥವು ಪೂರ್ವಾಗ್ರಹ ಪೀಡಿತ ವ್ಯಕ್ತಿಯೋರ್ವನಿಂದ ಉಳಿದ ಸಮಯಗಳನ್ನು ಕೀಳಾಗಿ ಕಾಣುವ ದೃಷ್ಟಿಕೋನದಿಂದ ರಚಿತವಾದ ಕೃತಿಯಾಗಿದೆ. ನಿರಂಜನ ವಂಶ ರತ್ನಾಕರ ಕೃತಿಯನ್ನು ಬರೆದವನ ಹೆಸರೇ ಇಲ್ಲದಿರುವುದರಿಂದ, ಅದೊಂದು ಖೊಟ್ಟಿ ಗ್ರಂಥವೆಂದು ಸಿದ್ಧವಾಗುತ್ತದೆ. ಈ ಕೃತಿಯ ಸಾಚಾತನವನ್ನು ಕುರಿತು ಓ.ಎನ್.ಲಿಂಗಣ್ಣಯ್ಯ ಎನ್ನುವರು ‘ಶೂನ್ಯಸಿಂಹಾಸನ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಈ ಸಮಯಭೇದದ ದುಷ್ಪರಿಣಾಮ ಕುರಿತು ಹೇಳುವುದಾದರೆ, ಎಲ್ಲರೂ ತಮ್ಮ ಪೀಠಗಳೇ ಮೂಲ ಎಂಬಂತೆ ಬರೆದುಕೊಂಡವು. ಸಿದ್ಧಪ್ಪಾರಾಧ್ಯ ಎಂಬ ಸಂಸ್ಕೃತ ಪಂಡಿತನೊಬ್ಬ ‘ಶೂನ್ಯಪೀಠದ ಪ್ರಭಾವ’ ಎಂಬ ಕೃತಿಯನ್ನು ರಚಿಸಿದ. ಅದರಲ್ಲಿ ಶೂನ್ಯಪೀಠದ ವಾರಸುದಾರಿಕೆ ಜಾತಿಯಿಂದ ಜಂಗಮ ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರ ಬರುವುದರಿಂದ ಸಿರಿಗೆರೆ ತರಳಬಾಳು ಬೃಹನ್ಮಠ, ಸಿದ್ಧಗಂಗೆ ಮಠದ ಡಾ. ಶಿವಕುಮಾರ ಸ್ವಾಮಿಗಳು, ಸುತ್ತೂರು ಮಠದ ಸ್ವಾಮಿಗಳು ನಿಜವಾದ ಜಂಗಮರಲ್ಲ. ಅವರಿಗೆ ನಮಸ್ಕಾರ ಮಾಡಬೇಡಿ, ಅವರ ಪಾದೋದಕ ತೆಗೆದುಕೊಳ್ಳಬೇಡಿ ಎಂಬ ಭಾವದಲ್ಲಿ ಶೂನ್ಯಪೀಠದ ಪ್ರಭಾವ ಕೃತಿಯಲ್ಲಿ ಚಿತ್ರಿಸಿದ್ದು ನಿಜಕ್ಕೂ ವಿಷಾದದ ಸಂಗತಿ ಎಂದೇ ಹೇಳಬೇಕು. ಏಕೆಂದರೆ ಇಂದು ಈ ಮೂರು ಪೀಠಗಳು ಸಾಮಾಜಿಕ-ಶೈಕ್ಷಣಿಕ-ಧಾರ್ಮಿಕ ಪುನರುತ್ಥಾನ ಕಾರ್ಯದಲ್ಲಿ ಮಾಡಿದ ಸೇವೆ ಅವಿಸ್ಮರಣೀಯ. ಸಿದ್ಧಪ್ಪಾರಾಧ್ಯರಂತಹ ಕುತ್ಸಿತ ಮನಸ್ಸಿನ ಜನರಿಂದ ಈ ಶೂನ್ಯಪೀಠದ ಬಗೆಗೆ ಅಸಂಗತವಾದ ವಿಚಾರಗಳ ಕೃತಿಗಳು ಹುಟ್ಟಿಕೊಂಡವು.
ಚನ್ನಬಸವಣ್ಣನವರಿಂದ ಷಟ್ಸ್ಥಲ ನಿರ್ಣಯ ಪಡೆದ ವಿರಕ್ತಪಡೆ ಈ ಶೂನ್ಯ ಪೀಠದ ಪರಂಪರೆಯನ್ನು ಮುಂದುವರಿಸಿತು. ತೋಂಟದ ಸಿದ್ಧಲಿಂಗ ಯತಿಗಳು ಈ ಪರಂಪರೆಯನ್ನು ಪುನರುಜ್ಜೀವನಗೊಳಿಸಿದರು. ತದನಂತರ ಸಿದ್ಧಲಿಂಗ ಶಿವಯೋಗಿಗಳ ಐದು ಜನ ಶಿಷ್ಯರಲ್ಲಿ ಭಿನ್ನಾಭಿಪ್ರಾಯ ಬಂದು ಈ ಶೂನ್ಯಪೀಠವು ಐದು ಸಮಯ ಭೇದಗಳಲ್ಲಿ ಒಡೆದು ಹೋಯಿತು. ನಿಜವಾದ ನೇರ ವಾರಸುದಾರರಾದ ಗದುಗಿನ ತೋಂಟದಾರ್ಯ ಸಂಸ್ಥಾನಮಠವು ಚೀಲಾಳ ಸಮಯವೆಂದೂ, ಚಿತ್ರದುರ್ಗ ಮುರುಘಾಮಠವು ಮುರುಘಾ ಸಮಯವೆಂದೂ, ಹುಬ್ಬಳ್ಳಿ ಮೂರುಸಾವಿರ ಮಠ ಕುಮಾರ ಸಮಯವೆಂದೂ, ವಂಟಮುರಿ ಸಂಪಾದನೆ ಮಠವು ಸಂಪಾದನೆ ಸಮಯವೆಂದೂ, ಕೆಂಪಿನ ಜಡೆಸಿದ್ಧರಿಂದ ಕೆಂಪಿನ ಸಮಯವೆಂದೂ ಐದು ಭಾಗವಾಗಿ ಒಡೆದು ಹೋದವು. ವಂಟಮುರಿ ಯಲ್ಲಿದ್ದ ಸಂಪಾದನೆ ಸಮಯದ ಮಠವು ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗುವ ಮೂಲಕ ಸಂಪಾದನೆ ಸಮಯದ ಮಠಗಳು ಅಸ್ತಿತ್ವ ಕಳೆದುಕೊಂಡವು. ಕೆಂಪಿನ ಸಮಯದ ಮಠಗಳು ಇಂದು ಅಸ್ತಿತ್ವ ಕಳೆದುಕೊಂಡಿವೆ. ಈಗ ಉಳಿದ ಮೂರು ಪ್ರಮುಖ ಸಮಯದ ಮಠಗಳು ಅಸ್ತಿತ್ವದಲ್ಲಿವೆ.
ಇಂದು ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗದಲ್ಲಿ ಸಾಗಬೇಕಾದ ಶೂನ್ಯಪೀಠ ಪರಂಪರೆಯ ವಿರಕ್ತಮಠಗಳು ತಮ್ಮ ಇತಿಹಾಸವನ್ನು ಅವಲೋಕನ ಮಾಡಿಕೊಂಡು, ವರ್ತಮಾನವನ್ನು ನವೀಕರಣ ಮಾಡಿಕೊಳ್ಳಬೇಕಾದ ಅನಿವರ್ಯತೆ ಇದೆ. ಲಿಂಗಾಯತ ಧರ್ಮವನ್ನು ಉಳಿಸಬೇಕೆಂಬ ಏಕೈಕ ಉದ್ದೇಶದಿಂದ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಸವಣ್ಣನವರು ಶೂನ್ಯಪೀಠವನ್ನು ಸ್ಥಾಪಿಸಿದರು. ಈ ಶೂನ್ಯಪೀಠವನ್ನು ಮೊದಲು ಅಲ್ಲಮರು ಏರಿದಾಗ ಪ್ರಾಯಶಃ ಬಸವಣ್ಣನವರ ಸುತ್ತಮುತ್ತ ಇದ್ದ ಜಂಗಮ ಸಮೂಹ ಅದನ್ನು ಸಹಜವಾಗಿ ವಿರೋಧಿಸಿತು. ಮೂಲತಃ ನಾಥಪಂಥೀಯನಾಗಿದ್ದ ಅಲ್ಲಮಪ್ರಭು ಬಸವಣ್ಣನವರ ಕೈಯಲ್ಲಿ ಸಿಕ್ಕಿ, ಬಸವನ ಕರುಣೆಯ ಕಂದ ನಾನು ಎಂದು ಹೇಳುವ ಪರಿಸ್ಥಿತಿ ಬರುತ್ತದೆ. ಅಲ್ಲಮರು ನಾಥಪಂಥವನ್ನು ಬಿಟ್ಟು, ಬಸವಪಥದಲ್ಲಿ ಸಾಗಿದರು. ಅಲ್ಲಮರು ಏರಿದ ಶೂನ್ಯಪೀಠದ ಪರಂಪರೆ ಅವಿಚ್ಛಿನವಾಗಿ ಮುಂದುವರೆಯಿತು.
ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ಧರಾಮರಿಂದ ಅಸ್ತಿತ್ವಕ್ಕೆ ಬಂದ ಶೂನ್ಯಪೀಠದ ನಿಜವಾದ ವಾರಸುದಾರಿಕೆಯನ್ನು ಹೊಂದಿರುವ ಗದುಗಿನ ತೋಂಟದಾರ್ಯಮಠದ ನೇತೃತ್ವದಲ್ಲಿ ಎಲ್ಲ ವಿರಕ್ತಮಠಗಳು ಸಂಘಟಿತರಾಗಿ ಮುನ್ನಡೆಸಬೇಕಾದ ಅನಿವಾರ್ಯತೆ ಇದು ಬಹಳಷ್ಟಿದೆ. ಈ ನಿಟ್ಟಿನಲ್ಲಿ ವಿರಕ್ತಮಠಗಳು ಆಲೋಚಿಸುವಂತಾಗಲಿ ಎಂದು ಆಶಿಸುವೆ.
