ಆಗಸ್ಟ್ 28 ನೂಲಿನ ಚಂದಯ್ಯ ಜಯಂತಿ
ಶಹಾಪುರ
೧೨ನೇ ಶತಮಾನದ ಬಸವೋತ್ತರ ಯುಗದಲ್ಲೂ ಹಾಗೂ ಬಸವಣ್ಣನವರ ಕಲ್ಯಾಣದ ಕ್ರಾಂತಿಯಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ‘ನೂಲಿನ ಚಂದಯ್ಯ’ಶರಣರದು. “ಕಾಯಕವೇ ಕೈಲಾಸ” ಎಂಬ ತತ್ತ್ವವನ್ನು ಬಾಯಲ್ಲಿ ಹೇಳದೇ, ತಮ್ಮ ಇಷ್ಟಲಿಂಗಕ್ಕೇ ಕಾಯಕದ ಮಹತ್ವವನ್ನು ಪ್ರತ್ಯಕ್ಷವಾಗಿ ಮನವರಿಕೆ ಮಾಡಿಕೊಟ್ಟ ಅಪರೂಪದ ಕಾಯಕ ಯೋಗಿ ಇವರು.
ನೂಲು ತೆಗೆದು, ಹಗ್ಗ-ಕಣ್ಣಿಗಳನ್ನು ಹೊಸೆಯುವ ಕಾಯಕ ಮಾಡುತ್ತಿದ್ದ ಚಂದಯ್ಯನವರ ಜಯಂತಿಯ ಈ ಶುಭ ಸಂದರ್ಭದಲ್ಲಿ, ಅವರ ಸತ್ಯಶುದ್ಧ ಕಾಯಕನಿಷ್ಠೆಯ ಘಟನೆಯೊಂದು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ.
ಲಿಂಗ ಪೂಜೆಗಿಂತ ಕಾಯಕವೇ ಶ್ರೇಷ್ಠ
ಒಮ್ಮೆ ಚಂದಯ್ಯನವರು ಕೆರೆಯ ದಂಡೆಯಲ್ಲಿ ನಾರನ್ನು ಹದಗೊಳಿಸಿ, ಕಣ್ಣಿ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾಗ, ಅವರ ಕೊರಳಲ್ಲಿದ್ದ ಇಷ್ಟಲಿಂಗ (ಲಿಂಗಯ್ಯ) ಕೆರೆಯ ನೀರೊಳಗೆ ಜಾರಿ ಬೀಳುತ್ತದೆ. ಚಂದಯ್ಯನವರು ಕೆರೆಯಲ್ಲಿ ಎಷ್ಟು ಹುಡುಕಿದರೂ ಲಿಂಗ ಸಿಗುವುದಿಲ್ಲ. “ಇನ್ನೂ ಹುಡುಕುತ್ತಾ ನಿಂತರೆ ನನ್ನ ನಿತ್ಯದ ಕಾಯಕಕ್ಕೆ ತಡವಾಗುತ್ತದೆ” ಎಂದು ಭಾವಿಸಿದ ಚಂದಯ್ಯ, ಲಿಂಗದ ಹಂಗು ತೊರೆದು ನಾರಿನ ಹೊರೆಯನ್ನು ಹೆಗಲಿಗೇರಿಸಿಕೊಂಡು ಕಾಯಕಕ್ಕೆ ಹೊರಟುಬಿಡುತ್ತಾರೆ.
ಚಂದಯ್ಯನವರ ಕಾಯಕ ನಿಷ್ಠೆ ಮೆಚ್ಚಿ ಲಿಂಗವೇ ಮನುಷ್ಯ ರೂಪ ತಾಳಿ, “ಏ ಚಂದಯ್ಯ, ನನ್ನನ್ನು ಬಿಟ್ಟು ಹೊರಟೆಯಲ್ಲೋ?” ಎಂದು ಕರೆಯುತ್ತದೆ. ಆಗ ಚಂದಯ್ಯ, “ಅಲ್ಲಪ್ಪಾ ಲಿಂಗಯ್ಯ, ನಿನಗೆ ನಾನು ಏನು ಕಡಿಮೆ ಮಾಡಿದ್ದೆ? ಕೆರೆಯ ನೀರೊಳಗೆ ಬೀಳಲು ಕಾರಣವೇನು? ದಿನಾಲೂ ಪೂಜೆ-ಪುನಸ್ಕಾರ ನೆರವೇರಿಸುತ್ತಿದ್ದರೂ ಧಿಮಾಕು ಮಾಡಿ ನೀರಿಗೆ ಬಿದ್ದೆಯಲ್ಲ, ಅಲ್ಲೇ ಬಿದ್ದಿರು. ನನಗೆ ಲಿಂಗ ಪೂಜೆಗಿಂತ ಮಾಡುವ ಕಾಯಕವೇ ಬಹಳ ಮುಖ್ಯ” ಎಂದು ಸೆಡ್ಡು ಹೊಡೆಯುತ್ತಾರೆ.
ದೇವರಿಗೂ ತಪ್ಪಲಿಲ್ಲ ಕಾಯಕದ ಷರತ್ತು!
ತನ್ನನ್ನು ಮರಳಿ ಸ್ವೀಕರಿಸುವಂತೆ ಲಿಂಗಯ್ಯ ಬೇಡಿಕೊಂಡರೂ ಚಂದಯ್ಯ ಒಪ್ಪುವುದಿಲ್ಲ. ಕೆರೆಯ ದಂಡೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಮಡಿವಾಳ ಮಾಚಿದೇವರ ಬಳಿ ಲಿಂಗಯ್ಯ ಹೋಗಿ ಮಧ್ಯಸ್ಥಿಕೆಗೆ ವಿನಂತಿಸುತ್ತಾನೆ. ಮಾಚಿದೇವರು ಚಂದಯ್ಯನಲ್ಲಿಗೆ ಬಂದು, “ಏನೋ ತಿಳಿಯದೇ ತಪ್ಪು ಮಾಡಿದ್ದಾನೆ, ಕರೆದುಕೊಂಡು ಹೋಗಪ್ಪ” ಎಂದಾಗ, ಚಂದಯ್ಯನವರು ಪೂಜೆಗಿಂತ ಕಾಯಕ ಹಾಗೂ ಜಂಗಮ ಸೇವೆಯೇ ಶ್ರೇಷ್ಠವೆಂದು ಈ ವಚನದ ಮೂಲಕ ಉತ್ತರಿಸುತ್ತಾರೆ:
“ಎರೆದಡೆ ನೆನೆಯದು, ಮರೆದಡೆ ಬಾಡದು, ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು.”
ಕೊನೆಗೆ ಮಾಚಿದೇವರು, “ಲಿಂಗಯ್ಯ, ನೀನು ಸುಮ್ಮನೆ ಕುಳಿತು ಪೂಜೆ ಪಡೆದರೆ ಸಾಲದು; ಚಂದಯ್ಯ ಹೊಸೆಯುವ ಹಗ್ಗ-ಕಣ್ಣಿಗಳನ್ನು ಮಾರಿ ಕಾಯಕ ಮಾಡಬೇಕು” ಎಂದು ಷರತ್ತು ವಿಧಿಸುತ್ತಾರೆ. ಶರಣರ ಸಿದ್ಧಾಂತದಂತೆ ಭಗವಂತನೂ ಕಾಯಕದಲ್ಲಿ ತೊಡಗಬೇಕಾಗುತ್ತದೆ. ಇದನ್ನು ಚನ್ನಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಬಣ್ಣಿಸಿದ್ದಾರೆ:
“ಗುರುವಾದಡೂ ಕಾಯಕದಿಂದವೇ ಜೀವನ್ಮುಕ್ತಿ. ಲಿಂಗವಾದಡೂ ಕಾಯಕದಿಂದವೇ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು. ಲಿಂಗವಾದಡೂ ಚರಸೇವೆಯ ಮಾಡಬೇಕು. ಜಂಗಮವಾದಡೂ ಚರಸೇವೆಯ ಮಾಡಬೇಕು ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.“
ಅತಿಯಾಸೆ ಸಲ್ಲದು:
ಸತ್ಯಶುದ್ಧ ಕಾಯಕದ ಮಹತ್ವ ಲಿಂಗಯ್ಯನು ಚಂದಯ್ಯನವರ ಮನೆಯ ಮಗನಾಗಿ, ಕಣ್ಣಿಗಳನ್ನು ಮಾರಿ ಕಾಯಕ ಮಾಡಲು ಒಪ್ಪುತ್ತಾನೆ. ಒಂದು ದಿನ ಬಸವಣ್ಣನವರ ಮನೆಗೆ ಹೋಗಿ ಕಣ್ಣಿಗಳನ್ನು ಮಾರಿ, ನಿಗದಿಗಿಂತ ಹೆಚ್ಚಿನ ಹಣ ಪಡೆದು ತರುತ್ತಾನೆ. ಹೆಚ್ಚಿನ ಹಣ ಕಂಡ ಚಂದಯ್ಯನವರು ಕೋಪಗೊಂಡು ಈ ವಚನದ ಮೂಲಕ ಬುದ್ಧಿ ಹೇಳುತ್ತಾರೆ:
“ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚ್ಛಂದವಾಗದಿರಬೇಕು. ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದ್ದಿಲ್ಲದಿರಬೇಕು. ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ ತಾ ಮಾಡುವ ಸೇವೆ ನಷ್ಟವಯ್ಯಾ.
ನಿನ್ನಾಸೆಯ ವೇಷದ ಪಾಶಕ್ಕೆ ನೀನೇ ಹೋಗು.
ನನಗೆ ನಮ್ಮ ಜಂಗಮದ ಪ್ರಸಾದದಾಗೆ ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯಾ.”
“ಕಾಯಕದಿಂದ ಬಂದ ಹಣದಲ್ಲಿ ಅತಿಯಾಸೆ ಇರಬಾರದು, ದುರಾಶೆಯಿಂದ ತಂದ ದ್ರವ್ಯವು ಕಾಯಕದ ನೇಮಕ್ಕೆ ವಿರುದ್ಧ” ಎಂದು ಲಿಂಗಯ್ಯನನ್ನು ಗದರಿಸಿ ಹೊರಹಾಕುತ್ತಾರೆ. ಕೊನೆಗೆ ಮಾಚಿದೇವರು ಸೇರಿದಂತೆ ಇತರ ಶರಣರು ಇಬ್ಬರನ್ನೂ ಅನುಭವ ಮಂಟಪಕ್ಕೆ ಕರೆದುಕೊಂಡು ಹೋಗಿ, ಜಗಜ್ಯೋತಿ ಬಸವಣ್ಣನವರ ಸಮ್ಮುಖದಲ್ಲಿ ರಾಜಿ ಮಾಡಿಸಿ ಕಳುಹಿಸಿಕೊಡುತ್ತಾರೆ.
ಇಂದಿನ ಸಮಾಜಕ್ಕೆ ಚಂದಯ್ಯನವರ ಸಂದೇಶ ಇಂದಿನ ದಿನಗಳಲ್ಲಿ ಧರ್ಮ, ಪೂಜೆ, ಅನುಷ್ಠಾನಗಳ ಹೆಸರಿನಲ್ಲಿ ಕರ್ತವ್ಯವನ್ನು ಕಡೆಗಣಿಸುವವರ ನಡುವೆ, “ಮಾಡುವ ಕೆಲಸವೇ ದೇವರು” ಎಂದು ಸಾರಿದ ನೂಲಿನ ಚಂದಯ್ಯನವರ ಜೀವನ ನಮಗೊಂದು ದಾರಿದೀಪ. ಶ್ರಮಜೀವನದ ಗೌರವ ಮತ್ತು ದುರಾಶೆಯಿಲ್ಲದ ಸತ್ಯಶುದ್ಧ ಸಂಪಾದನೆಯೇ ನಿಜವಾದ ಭಕ್ತಿ ಎಂಬುದನ್ನು ತೋರಿಸಿಕೊಟ್ಟ ಶರಣ ನೂಲಿನ ಚಂದಯ್ಯನವರ ಜಯಂತಿಯಂದು ಅವರ ಕಾಯಕ ತತ್ತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
