‘ನಮ್ಮ ಜನರಲ್ಲಿ ಬಸವಣ್ಣನನ್ನು ಒಪ್ಪದ ಸಣ್ಣ ಮನಸ್ಸು ಇನ್ನೂ ಇದೆ’

ಬಸವ ಮೀಡಿಯಾ
ಬಸವ ಮೀಡಿಯಾ

ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರ ಪ್ರದರ್ಶನ

ಚಿಕ್ಕಮಗಳೂರು:

“ನಮ್ಮ ಜನರಲ್ಲಿ ಇನ್ನೂ ಬಸವಣ್ಣನನ್ನು ಒಪ್ಪಿಕೊಳ್ಳಬೇಕೋ, ಬೇಡವೋ ಎಂಬ ಸಣ್ಣ ಮನಸ್ಸು ಇದೆ. ಇವತ್ತಿಗೂ ವರ್ಣಬೇಧ, ಜಾತಿಪದ್ದತಿ ಜೀವಂತವಾಗಿದೆ,” ಎಂದು ಮಿಸ್ಟರ್ಸ್ ಪ್ರೈಡ್ ಆಫ್ ಕರ್ನಾಟಕ ವಿಜೇತರಾದ ಸಹನಾ ಬಸವರಾಜ ದೊಡ್ಡಮನೆ ಹೇಳಿದರು.

ಶುಕ್ರವಾರ ನಗರದ ದೊಡ್ಡ ಕುರುಬರಹಳ್ಳಿಯ ಬಸವತತ್ವ ಪೀಠದಲ್ಲಿ ಆಯೋಜಿಸಿದ್ದ ನೋಡುವುದನ್ನೇ ನೋಡೋಣ ಸದಭಿರುಚಿಯ ಸಿನಿಮಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮದುವೆಯ ಸಂದರ್ಭದಲ್ಲಿ ಜಾತಿ, ದುಡ್ಡನ್ನು ಬಿಟ್ಟು ಮನಸ್ಸುಗಳನ್ನು ಹುಡುಕುವ ಕೆಲಸವನ್ನು ಮಾಡಿ. ಕನಿಷ್ಠ ತಮ್ಮ ತಮ್ಮ ಜಾತಿಯಲ್ಲೇ ಪಂಗಡಗಳನ್ನು ಹುಡುಕುವುದನ್ನು ಬಿಡಿ ಎಂದು ಸಲಹೆ ನೀಡಿದರು.

ಸದಭಿರುಚಿಯ ಸಿನಿಮಾಗಳನ್ನು ಹುಡುಕಿ ಹುಡುಕಿ ನೋಡುವುದು ಇವತ್ತಿನ ಸವಾಲು. ಕೆಟ್ಟ ಪುಸ್ತಕ ಬಂದಾಗ ತಲೆ ಕೇಡಿಸಿಕೊಳ್ಳಬೇಕಾಗಿಲ್ಲ. ಆದರೆ, ಕೆಟ್ಟ ಸಿನಿಮಾ ಬಂದಾಗ ಚಿಂತಿಸಬೇಕಾದ ಕಾಲ ಇದು. ಹೀಗಾಗಿ ಮಕ್ಕಳಲ್ಲಿ ಒಳ್ಳೆಯ ಸಿನಿಮಾಗಳನ್ನು ನೋಡುವ ಅಭ್ಯಾಸ ಬೆಳಸಬೇಕು ಎಂದರು.

ಸಾನಿಧ್ಯವಹಿಸಿ ಮಾತನಾಡಿದ ಬಸವತತ್ವ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಬಸವ ಮರುಳಸಿದ್ಧ ಸ್ವಾಮೀಜಿ
ದೇಶದ ಭವಿಷ್ಯ ರೂಪಿಸುವ ಯುವ ಜನತೆಯನ್ನು ಪ್ರಭಾವಿಸುವ ಪ್ರಬಲ ಮಾಧ್ಯಮ ಸಿನಿಮಾ. ಇಂತಹ ಮಾಧ್ಯಮ ಕೆಟ್ಟು ಹೋದರೆ ಇಡೀ ಪೀಳಿಗೆಯೇ ಕೆಟ್ಟು ಹೋಗುತ್ತದೆ. ಒಂದು ಪೀಳಿಗೆ ಕೆಟ್ಟರೆ, ಮುಂದಿನ ಪೀಳಿಗೆ ಸರಿಯಾಗಲು ಹೇಗೆ ಸಾಧ್ಯ ಎಂದು ಅಭಿಪ್ರಾಯಿಸಿದರು.

ಇವತ್ತಿನ ಸಿನಿಮಾ, ಧಾರವಾಹಿಗಳು ಕೆಟ್ಟ ಮೌಲ್ಯಗಳನ್ನು ಬಿತ್ತುತ್ತಿರುವುದು ಆತಂಕಕಾರಿ ವಿಷಯ. ಸಿನಿಮಾಗಳು ಮನುಷ್ಯನನ್ನು ಅಗತ್ಯಕ್ಕಿಂತ ಹೆಚ್ಚಾಗಿ ವೈಭವೀಕರಿಸುತ್ತಿವೆ. ಧಾರವಾಹಿಗಳು ಮನುಷ್ಯನಲ್ಲಿ ಇರುವುದಕ್ಕೇ ಸಾಧ್ಯವಿರದ ಸಣ್ಣತನಗಳನ್ನು ಬಿಂಬಿಸುವ ಮೂಲಕ ಮೌಲ್ಯಗಳು ಅಧಃಪತನಕ್ಕೆ ಇಳಿಯುವಂತೆ ಮಾಡಿವೆ. ಇಂತಹ ಈ ಕಾಲಘಟ್ಟದಲ್ಲಿ ಸಿನಿಮಾದಂತಹ ಪ್ರಬಲ ಮಾಧ್ಯಮಗಳ ಮೂಲಕವೇ ಮತ್ತೆ ಮೌಲ್ಯಗಳನ್ನು ಮರುನಿರ್ಮಾಣ ಮಾಡುವ ಪ್ರಯತ್ನವೇ ಈ ನೋಡುವುದನ್ನೇ ನೋಡೋಣ ಎಂಬ ಸದಭಿರುಚಿಯ ಸಿನಿಮಾಗಳ ಪ್ರದರ್ಶನ ಕಾರ್ಯಕ್ರಮ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ ಮಾತನಾಡಿ, ಸಿನಿಮಾ, ರಾಜಕೀಯ, ಕ್ರೀಡೆ ಇಂದು ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿ ಕೆಲಸ ಮಾಡುತ್ತಿವೆ. ಆಯಾ ಕಾಲಘಟ್ಟದಲ್ಲಿ ಸಿನಿಮಾ ಜನರ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರಿವೆ. ಸಿನಿಮಾವನ್ನು ಕೇವಲ ಮನರಂಜನೆಗೆ ಮಾತ್ರ ನೋಡದೇ ಅದರಲ್ಲಿನ ಉತ್ತಮ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಧೇಶಿಸಿ ಆಲಮಟ್ಟಿಯ ಕೃಷ್ಣ ಜಲಭಾಗ್ಯ ನಿಗಮದ ಮುಖ್ಯ ಅಭಿಯಂತರರಾದ ಬಸವರಾಜ ದೊಡ್ಡಮನೆ, ಪತ್ರಕರ್ತ ಎಸ್.ಕೆ. ವಿಜಯಕುಮಾರ ಮಾತನಾಡಿದರು.

ಹಿರಿಯ ಪತ್ರಕರ್ತ ತಿಪ್ಪೇರುದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಿನಿಮಾ ಆಸಕ್ತರು ಇದ್ದರು. ಕಾರ್ಯಕ್ರಮದ ನಂತರ ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರ ಪ್ರದರ್ಶಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ. ಜೈ ಬಸವ

Leave a Reply

Your email address will not be published. Required fields are marked *