ಬಸವ ಸಂಘಟನೆಗಳು ರಾಜಕಾರಣಿಗಳ ಮೇಲೆ ಒತ್ತಡ ತರುವುದು ಹೇಗೆ?
ತಾವರಗೇರಾ
ಲಿಂಗಾಯತರು ಸಕಲ ಜೀವಕ್ಕೆ ಲೇಸನ್ನು ಬಯಸುವವರು. ಇಂದು ರಾಜ್ಯದಲ್ಲಿ ನಡೆಯುತ್ತಿರುವ ಪರಿಸರ ಚಳುವಳಿಯಲ್ಲಿ ಬಸವ ಸಂಘಟನೆಗಳು ಭಾಗವಹಿಸಬೇಕು, ಎಂದು ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
“ಕೊಪ್ಪಳದಲ್ಲಿ ಬಲ್ಡೋಟಾ ವಿರೋಧಿ ಚಳುವಳಿಗೆ ಬಸವ ಸಂಘಟನೆಗಳ ಪರೋಕ್ಷ ಬೆಂಬಲವಿದೆ. ಆದರೆ ಪ್ರತಿಭಟನೆಗೆ ನೆರವಾಗಿ ಬರ್ರಿ,” ಎಂದು ಕರೆ ನೀಡಿದರು.
ತಾವರೆಗೇರದಲ್ಲಿ ಇತ್ತೀಚೆಗೆ ನಡೆದ ಕೊಪ್ಪಳ ಜಿಲ್ಲೆಯ ಬಸವಶಕ್ತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ‘ಬಸವ ಸಂಘಟನೆಗಳು ರಾಜಕಾರಣಿಗಳ ಮೇಲೆ ಒತ್ತಡ ತರುವುದು ಹೇಗೆ’ ವಿಷಯದ ಮೇಲೆ ತಮ್ಮ ಅನುಭವ ಹಂಚಿಕೊಂಡರು.
ಸಮಾಜದಲ್ಲಿ ಚಳುವಳಿಯಿಲ್ಲದೆ ಯಾವುದೇ ಬದಲಾವಣೆಯಾಗುವುದಿಲ್ಲ. ಲಿಂಗಾಯತ ಧರ್ಮದ ಮಾನ್ಯತೆಗೆ ಯಾವ ಸರಕಾರದ ಆದೇಶಕ್ಕೂ ಕಾಯದೆ ತಾವೇ ಸ್ವತಂತ್ರರೆಂದು ಘೋಷಿಸಿಕೊಂಡು ಲಿಂಗಾಯತರು ಮುಂದುವರೆಯಬೇಕು.
ಲಿಂಗಾಯತರು ಒಳ ಪಂಗಡಗಳನ್ನು ಜೊತೆಗೂಡಿಸುವುದರ ಜೊತೆಗೆ ದಲಿತ, ಹಿಂದುಳಿದ ವರ್ಗಗಳು ಸೇರಿದಂತೆ ಸರ್ವಜನಾಂಗಗಳನ್ನೂ ಸೇರಿಸಿಕೊಂಡು ನಡೆಯಬೇಕು. ಅವರಲ್ಲೆಲ್ಲಾ ಲಿಂಗಾಯತ ಧರ್ಮಕ್ಕೆ ಬೆಂಬಲವಿದೆ. ಶರಣತತ್ವ ಎಲ್ಲರು ನಡೆಯುವ ಮಾರ್ಗವಾಗಬೇಕು, ಎಂದು ತಿಳಿಸಿದರು.

ಕೊಪ್ಪಳದ ಪರಿಸರ ಚಳುವಳಿಯ ಬಗ್ಗೆ ಮಾತಾನಾಡುತ್ತಾ ಇಲ್ಲಿಯವರೆಗೆ ಒಂದು ಕಾರ್ಖಾನೆಯ ಒಂದು ಕೊಳವೆಯಿಂದ ಶೇಕಡಾ 40ರಷ್ಟು ಕೊಪ್ಪಳ ಜಿಲ್ಲೆಯ ಪರಿಸರ ನಾಶವಾಗಿದೆ.
ಈಗ ಬಲ್ಡೋಟಾ ಕಾರ್ಖಾನೆ 57,000 ರೂಪಾಯಿ ಕೋಟಿ ವೆಚ್ಚದಲ್ಲಿ ವಿಸ್ತರಣೆಯಾಗಿ 27 ಹೊಸ ಕೊಳವೆಗಳು ಬಂದರೆ ಕೊಪ್ಪಳ ಜಿಲ್ಲೆ ಸಂಪೂರ್ಣವಾಗಿ ವಿನಾಶವಾಗಲಿದೆ.
ವಿಸ್ತರಣೆ ನಿಲುಗಡೆ ಪತ್ರ ಕಳಿಸುವಂತೆ ಸರಕಾರದ ಮೇಲೆ ಒತ್ತಡ ತರಲಾಗುತ್ತಿದೆ. ಜಿಲ್ಲಾ, ತಾಲೂಕು, ಹಳ್ಳಿಗಳ ಮಟ್ಟದಲ್ಲಿ ಹತ್ತಾರು ಸಾವಿರ ಜನ ಸೇರಿಸಿ ಸಭೆಗಳನ್ನು ನಡೆಸಲಾಗುತ್ತಿದೆ, ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ, ಎಂದು ಹೇಳಿದರು.
ಹಿಂದೆ ಪೂಜ್ಯ ತೋಂಟದ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪೋಸ್ಕೊ, ಕಪ್ಪತಗುಡ್ಡ ಚಳುವಳಿಗಳನ್ನು ಸ್ಮರಿಸಿಕೊಂಡರು.
ಗವಿಸಿದ್ದೇಶ್ವರ ಸ್ವಾಮೀಜಿ ಚಳುವಳಿಗೆ ಬೆಂಬಲ ನೀಡಿದ್ದರೂ ಗವಿಸಿದ್ದೇಶ್ವರನ ಆದೇಶವಾದ ಮೇಲೆ ಪೂರ್ಣವಾಗಿ ಹೋರಾಟಕ್ಕೆ ಬರುವುದಾಗಿ ಹೇಳಿದ್ದಾರೆ. ಅವರಿಗೆ ಗವಿಸಿದ್ದೇಶ್ವರನ ಬೇಗ ಆದೇಶ ನೀಡಲಿ, ಎಂದು ಹೇಳಿದರು.

ಬೆಟ್ಟದೂರು ಅವರ ನಂತರ ಇದೇ ವಿಷಯದ ಮೇಲೆ ಹೊಸಪೇಟೆಯ ಟಿ ಎಚ್ ಬಸವರಾಜ ಮಾತನಾಡಿದರು.
ಕೊಪ್ಪಳದಲ್ಲಿ ನಡೆಯುತ್ತಿರುವ ಬಲ್ಡೋಟಾ ವಿರೋಧ ಪ್ರತಿಭಟನೆಗೆ ಪ್ರತಿ ದಿನ ಒಂದೊಂದು ಬಸವ ಸಂಘಟನೆ ತಮ್ಮ ಬ್ಯಾನರ್ ಹಿಡಿದುಕೊಂಡು ಹೋಗಿ ಭಾಗವಹಿಸಬೇಕೆಂದು ಕರೆ ನೀಡಿದರು.
