ಚಾಮರಾಜನಗರ ಗ್ರಾಮದಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಚಾಮರಾಜನಗರ:

ಮನುಷ್ಯನ ಅಂತರಂಗ ಮತ್ತು ಬಹಿರಂಗದ ನಡೆ, ನುಡಿ ಒಂದಾದಾಗ ಮಾತ್ರ ನಾವು ಭಗವಂತನ ಒಲುಮೆಗೆ ಪಾತ್ರರಾಗಲು ಸಾಧ್ಯ ಎಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಅರಳಿ ನಾಗರಾಜ ಗಂಗಾವತಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಚಾಮರಾಜನಗರ ಜಿಲ್ಲೆ ಕಾಗಲವಾಡಿಯ ತಾಯಮ್ಮ ವಿಜಯದೇವಪ್ಪ ಮತ್ತು ಬೆಂಗಳೂರಿನ ಎಂ.ಬಿ. ಸದಾಶಿವ ಅವರ ದತ್ತಿ ಅಂಗವಾಗಿ ಕಾಗಲವಾಡಿಯ ಶ್ರೀ ಗುರುಮಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 130ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂತರಂಗ ಎಂದರೆ ನಮ್ಮ ಮನಸ್ಸು, ಬಹಿರಂಗ ಎಂದರೆ ನಮ್ಮ ನಡೆ. ಈ ಎರಡೂ ಒಂದಾದಾಗ ವ್ಯಕ್ತಿತ್ವಕ್ಕೆ ವಿಶೇಷ ಮೌಲ್ಯ ದೊರೆಯುತ್ತದೆ. ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಅವರು ಪ್ರಕೃತಿಯಲ್ಲಿಯೇ ದೇವರನ್ನು ಕಂಡರು. ಚೆನ್ನಮಲ್ಲಿಕಾರ್ಜುನನನ್ನು ಕಂಡಿರಾ ಎಂದು ಪ್ರಕೃತಿಯ ಪ್ರತಿಯೊಂದು ಅಂಶವನ್ನೂ ಪ್ರಶ್ನಿಸಿದ ಅವರ ದಿಟ್ಟತನ ನಮಗೆ ಮಾದರಿಯಾಗಿದೆ.

ನಾವು ಬೇರೆಯವರಿಂದ ಅಪೇಕ್ಷಿಸುವ ಸನ್ನಡತೆ, ಗೌರವ ಹಾಗೂ ಉತ್ತಮ ಗುಣಗಳನ್ನು ಮೊದಲು ನಾವು ಇತರರಿಗೆ ನೀಡಬೇಕು. ಆಗ ಅವು ನಮಗೆ ಸಹಜವಾಗಿಯೇ ಮರಳಿ ಬರುತ್ತವೆ. ವಚನ ಸಾಹಿತ್ಯವು ಮನುಷ್ಯನ ವ್ಯಕ್ತಿತ್ವವನ್ನು ಎತ್ತರಕ್ಕೇರಿಸುವ ಶಕ್ತಿಯನ್ನು ಹೊಂದಿದೆ ಎಂದು ನಾಗರಾಜ ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಸಮುದ್ರದ ದಂಡೆಯಲ್ಲಿರುವ ದೀಪಸ್ತಂಭವು ದಾರಿ ತಪ್ಪಿದ ನಾವಿಕರಿಗೆ ಬೆಳಕಿನ ಮೂಲಕ ಸರಿಯಾದ ದಿಕ್ಕನ್ನು ತೋರಿಸುವಂತೆ, ಬದುಕಿನ ಪಯಣದಲ್ಲಿ ದಾರಿ ತಪ್ಪುವ ಮನುಷ್ಯರಿಗೆ ವಚನ ಸಾಹಿತ್ಯವು ಜ್ಞಾನದ ಬೆಳಕನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ಯುವ ದಾರಿದೀಪವಾಗಿವೆ.

ನಾವು ಇತರರೊಂದಿಗೆ ಮಾತನಾಡುವಾಗ ನಮ್ಮ ನುಡಿ ಪರಶಿವನೂ ತಲೆದೂಗುವಷ್ಟು ಸಾತ್ವಿಕ, ಸತ್ಯಸಂಧ ಹಾಗೂ ಮೌಲ್ಯಯುತವಾಗಿರಬೇಕು.

ಬಸವಣ್ಣನವರು ತಮ್ಮ ಅನುಭಾವದ ನೆಲೆಯಲ್ಲಿ ರಚಿಸಿದ ವಚನಗಳು ಇಂದಿಗೂ ವಿಶ್ವಮಾನವತೆಗೆ ದಾರಿದೀಪವಾಗಿವೆ. ಕಳಬೇಡ, ಕೊಲಬೇಡ ಎಂಬ ಸಪ್ತಸೂತ್ರದ ವಚನದ ಸಂದೇಶವೂ ಸಂಸತ್ತಿನಲ್ಲಿ ದಾಖಲಾಗಿರುವುದು ವಚನ ಸಾಹಿತ್ಯದ ಮಹತ್ವಕ್ಕೆ ಸಾಕ್ಷಿಯಾಗಿದೆ. ಬಸವಣ್ಣನವರ ಈ ಜೀವನಮೌಲ್ಯಗಳು ಇಡೀ ವಿಶ್ವಕ್ಕೆ ಆದರ್ಶವಾಗಿ, ಸನ್ಮಾರ್ಗದ ಬದುಕಿಗೆ ಪ್ರೇರಣೆಯಾಗಿವೆ ಎಂದರು.

ಕಾರ್ಯಕ್ರಮದ ದತ್ತಿ ದಾಸೋಹಿಗಳಾದ ಕಾಗಲವಾಡಿ ಶಿವಸ್ವಾಮಿ ಮಾತನಾಡಿ, ಪ್ರತಿಯೊಂದು ವಚನವೂ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಶಾಲೆಯ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಪ್ರತಿದಿನ ವಚನ ವಾಚನ ಮಾಡಿಸುವ ಮೂಲಕ ಮಕ್ಕಳಿಗೆ ಅದರಲ್ಲಿರುವ ಮೌಲ್ಯಗಳನ್ನು ಪರಿಚಯಿಸಿದರೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳು ಸುಸಂಸ್ಕೃತ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ನಂತರ ಕಾರ್ಯಕ್ರಮದಲ್ಲಿ ವಚನ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ವಚನ ಪುಸ್ತಕ ಹಾಗೂ ವಚನ ದೀವಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಘ್ನೇಶ್ವರ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಸದಸ್ಯ ನಂದೀಶ, ಎಸ್.ಬಿ.ಡಿ.ಸಿ ಸಮಿತಿ ಅಧ್ಯಕ್ಷ ಕೆ.ಬಿ. ಸ್ವಾಮಿ, ಶ್ರೀ ಗುರುಮಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂಪತಕುಮಾರ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರಿಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *