‘ಮನುವಾದದ ವಿರುದ್ಧ ಹೋರಾಟವೇ ವಚನ ಚಳವಳಿಯ ಪ್ರಮುಖ ಆಶಯವಾಗಿತ್ತು’

‘ಮನುಷ್ಯತ್ವದೆಡೆಗೆ ಸಮುದಾಯ ಸೌಹಾರ್ದ ನಡಿಗೆ’

ಧಾರವಾಡ:

ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ-50” ಕಾರ್ಯಕ್ರಮದ ರಾಜ್ಯಮಟ್ಟದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು.

‘ಶರಣರ ನಿಜ ದರ್ಶನ’ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ರಂಜಾನ್ ದರ್ಗಾ ಅವರು, “ಜಾತಿ-ಭೇದ, ಬಡವ-ಬಲ್ಲಿದ ಎಂಬ ಯಾವುದೇ ತಾರತಮ್ಯವಿಲ್ಲದ ಜಾಗದಲ್ಲಿ ನಿಜವಾದ ಸಮುದಾಯ ನಿರ್ಮಾಣವಾಗುತ್ತದೆ. ಇಂತಹ ಸಮುದಾಯ ಪ್ರಜ್ಞೆಯನ್ನು ಮೊಟ್ಟಮೊದಲ ಬಾರಿಗೆ ಹುಟ್ಟುಹಾಕಿದವರು ಬಸವಣ್ಣನವರು.

ಜಾತಿ, ಕೋಮು ಮತ್ತು ಮನುವಾದದ ವಿರುದ್ಧದ ಸೈದ್ಧಾಂತಿಕ ಹೋರಾಟವೇ ವಚನ ಚಳವಳಿಯ ಪ್ರಮುಖ ಆಶಯ. ವೈದಿಕತೆಯ ಅಸಮಾನತೆಯ ಚೌಕಟ್ಟಿಗೆ ಅವಕಾಶ ನೀಡದೆ ಸಮಾನತೆ ಮತ್ತು ಮಾನವೀಯತೆಯನ್ನು ಪ್ರತಿಪಾದಿಸಿದ ಕಾರಣದಿಂದಲೇ ಬಸವಣ್ಣನವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ”ಎಂದರು.

ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ ಅವರು, “ವ್ಯವಸ್ಥೆಯನ್ನು ಪ್ರಶ್ನಿಸುವುದೇ ವಚನ ಸಾಹಿತ್ಯದ ಮುಖ್ಯ ಗುಣ. ವಚನ ಸಾಹಿತ್ಯವನ್ನು ಗೌಣಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ವಚನಗಳು ಅಸಮಾನತೆ ಮತ್ತು ಮನುವಾದಿ ಪ್ರಶ್ನೆಗಳಿಗೆ ಪರ್ಯಾಯವಾದ ವೈಚಾರಿಕ ಉತ್ತರಗಳನ್ನು ನೀಡುತ್ತವೆ”ಎಂದು ತಿಳಿಸಿದರು.

ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ವಚನ ಸಾಹಿತ್ಯವು ಯಾವುದೇ ಒಂದು ವರ್ಗ, ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಜನರನ್ನು ಒಳಗೊಳ್ಳುವ ಮಾನವೀಯ ಸಾಹಿತ್ಯವಾಗಿದೆ.  ಕಾಯಕವೇ ಪೂಜೆ, ಪ್ರಾಮಾಣಿಕವಾಗಿ ಬೆವರು ಸುರಿಸಿ ದುಡಿಯುವುದೇ ಪೂಜೆ. ತನ್ನ ಅರಿವೇ ತನಗೆ ಗುರುವಾಗಬೇಕು ಎಂಬುದು ಶರಣರ ಮೂಲ ತತ್ವ.

ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ, ಮಧ್ಯವರ್ತಿತನ ಮತ್ತು ಅರ್ಥಹೀನ ಆಚರಣೆಗಳಿಗೆ ಪ್ರಶ್ನೆ ಹಾಕಿ, ಮನುಷ್ಯನ ಅರಿವು, ಕಾಯಕ, ನೈತಿಕತೆ ಮತ್ತು ಸಮಾನತೆಯನ್ನು ಬದುಕಿನ ಕೇಂದ್ರದಲ್ಲಿರಿಸಿತು ಎಂದು ಬಾಳಿ ಹೇಳಿದರು.

ಗೋಷ್ಠಿಯನ್ನು ಉದ್ಘಾಟಿಸಿದ ಪೂಜ್ಯ ಕೋರ್ಣೇಶ್ವರ ಸ್ವಾಮಿಗಳು, ಲಿಂಗಾಯತ ವಿಚಾರಧಾರೆ ಹಾಗೂ ಶರಣರ ತತ್ವಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳ ಬಗ್ಗೆ ಸಮಾಜ ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.

ಶರಣರ ವಚನಗಳು ಕೇವಲ ಓದಿ ಮರೆಯುವ ಸಾಹಿತ್ಯವಲ್ಲ; ಅವು ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿರುವ ಜೀವಂತ ವಿಚಾರಧಾರೆ. ಇತಿಹಾಸವನ್ನು ತಿರುಚುವುದು, ಮಹನೀಯರ ತೇಜೋವಧೆ ಮಾಡುವುದು, ಮಹಾಪುರುಷರ ಮೂಲ ವಿಚಾರಧಾರೆಗೆ ಕಲಬೆರಕೆ ಮಾಡುವುದು ಹಾಗೂ ಅವರ ಸಂದೇಶಗಳನ್ನು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ವ್ಯಾಖ್ಯಾನಿಸುವ ಕುತಂತ್ರಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ಮುಂಜಾನೆ ಸರಕಾರಿ ಆರ್ಟ್ ಗ್ಯಾಲರಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದವರೆಗೆ ‘ಮನುಷ್ಯತ್ವದೆಡೆಗೆ ಸಮುದಾಯ ಸೌಹಾರ್ದ ನಡಿಗೆ’ ಪಾದಯಾತ್ರೆ ನಡೆಯಿತು. ಸಾಹಿತಿ ಡಾ. ಗಣೇಶ ಎನ್. ದೇವಿ ಯಾತ್ರೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬಸವರಾಜ ಕೋರಿಮಠ, ಡಾ. ಲಿಂಗರಾಜ ಅಂಗಡಿ, ಸವಿತಾ ನಡಕಟ್ಟಿ, ಎಂ.ವಿ. ಗೊಂಗಡಶೆಟ್ಟಿ, ಸಿದ್ದರಾಮಪ್ಪ ನಡಕಟ್ಟಿ, ದಾಕ್ಷಾಯಿಣಿ ಕೋಳಿವಾಡ, ಬಿ.ಐ. ಈಳಿಗೇರ, ಮಹೇಶ ಪತ್ತಾರ, ಕುಮಾರಣ್ಣ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಪ್ರೊ. ಶಶಿಧರ ತೋಡಕರ ಸ್ವಾಗತಿಸಿದರು. ರವೀಂದ್ರನಾಥ ಶಿರವಾರ ಕಾರ್ಯಕ್ರಮವನ್ನು ನಿರೂಪಿಸಿದರು. ಬೀದಿ ನಾಟಕಗಳ ಪ್ರದರ್ಶನ ಕೂಡ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ. ಬಹಳ ಅರ್ಥಪೂರ್ಣ ಹಾಗೂ ಮಹತ್ವದ ವಿಷಯಗಳ ಕುರಿತು ವಿವರಣೆ ನೀಡಿದ್ದಾರೆ.ಜೈ ಬಸವ

Leave a Reply

Your email address will not be published. Required fields are marked *